ಕೌಟುಂಬಿಕ ಸಮಸ್ಯೆ 118 ಪ್ರಕರಣಗಳಲ್ಲಿ
ಶೇ.99 ರಾಜಿ ಇತ್ಯರ್ಥ
ಬ್ಯಾಂಕ್ನಿಂದ ಸ್ತ್ರೀಶಕ್ತಿ ಗುಂಪಿಗೆ ನಷ್ಟ
ವರದಕ್ಷಿಣೆ ಪ್ರಕ್ರಿಯೆ ಕಡಿಮೆ ಆದರೂ ಸದ್ದಿಲ್ಲದೆ ನಡೆಯುತ್ತಿದೆ
ಮಾದಕ ವಸ್ತು ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯ
ಸ್ವಸಹಾಯ ಸಂಘಗಳು ಲೋಕೋಸ್ ಆಪ್ಗೆ ನೋಂದಾಯಿಸಿ
ಬಾಲ್ಯವಿವಾಹದ ವಯಸ್ಸಿನ ದೃಢೀಕರಣಕ್ಕೆ ಮೆಡಿಕಲ್ ಒಪಿನಿಯನ್
ಮಾತೃವಂದನಾ ಯೋಜನೆಗೆ ಅರ್ಜಿ ಸ್ವೀಕಾರ
ಪುತ್ತೂರು:ಕೌಟುಂಬಿಕ ಸಮಸ್ಯೆಗಳಿಗೆ ಸಂಬಂಧಿಸಿದ 118 ಪ್ರಕರಣಗಳ ಪೈಕಿ 108 ಪ್ರಕರಣವನ್ನು ರಾಜಿ ಇತ್ಯರ್ಥ ಮಾಡಿ ಎರಡೂ ಕಡೆಯವರಿಗೂ ನ್ಯಾಯ ದೊರಕಿಸಿಕೊಡಿಸುವ ಮೂಲಕ ಶೇ.99 ಸಾಧನೆಯನ್ನು ಶಿಶು ಅಭಿವೃದ್ಧಿ ಇಲಾಖೆ ಮಾಡಿದೆ.
ಜು.24ರಂದು ಪುತ್ತೂರು ತಾ.ಪಂ ಸಭಾಂಗಣದಲ್ಲಿ ನಡೆದ 12 ವಿವಿಧ ವಿಚಾರಗಳನ್ನೊಳಗೊಂಡ ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಈ ಮಾಹಿತಿ ಲಭಿಸಿದೆ.ತಹಸೀಲ್ದಾರ್ ಶಿವಶಂಕರ್ ಅವರು ಅಧ್ಯಕ್ಷತೆ ವಹಿಸಿದ್ದರು.ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣಾ ಸಮಿತಿ ಕುರಿತ ವಿಚಾರಕ್ಕೆ ಸಂಬಂಧಿಸಿ ಸಿಡಿಪಿಒ ಶ್ರೀಲತಾ ಅವರು ಮಾತನಾಡಿ ಜಿಲ್ಲೆಯಲ್ಲೇ ಕೌಟುಂಬಿಕ ಸಮಸ್ಯೆಗಳಿಗೆ ಸಂಬಂಧಿಸಿ ತಾಲೂಕಲ್ಲಿ 118 ಪ್ರಕರಣಗಳಿತ್ತು.ಅದರಲ್ಲಿ 108 ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥ ಮಾಡಿದ್ದೇವೆ.ಉಳಿದವು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿವೆ.ಕೆಲವೊಂದು ವಿಚಾರದಲ್ಲಿ ವೈಯುಕ್ತಿವಾಗಿ ಹೀಗೆಯೇ ಮಾಡಬೇಕೆಂದು ಸಲಹೆ ನೀಡಿದಾಗ, ನಾನು ಯಾರೊಬ್ಬರ ಪರ ನಿಲ್ಲದೆ ಎರಡೂ ಕಡೆಯವರಿಗೂ ನ್ಯಾಯ ಕೊಡಿಸುವ ವ್ಯವಸ್ಥೆ ಮಾಡಿದ್ದೇನೆ.ಆದರೂ, ನ್ಯಾಯ ಸಿಗಬಹುದೇ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸಿರುವುದನ್ನು ನಾನು ಗಮನಿಸಿದ್ದೇನೆ.ಅದಕ್ಕೆ ತಲೆಕೆಡಿಸಿಕೊಳ್ಳದೆ ನಾವು ನ್ಯಾಯದ ಪರವಾಗಿ ಕೆಲಸ ಮಾಡಿದ್ದೇವೆ.ಮಕ್ಕಳ ಶಿಕ್ಷಣ, ಹಿರಿಯ ನಾಗರಿಕರ ವಿಚಾರದಲ್ಲಾಗಲೀ ಆದಷ್ಟು ನ್ಯಾಯಾಲಯಕ್ಕೆ ಹೋಗದ ರೀತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸದ್ದೇವೆ ಎಂದರು.
ಬ್ಯಾಂಕ್ನಿಂದ ಸ್ತ್ರೀಶಕ್ತಿ ಗುಂಪಿಗೆ ನಷ್ಟ:
ಸ್ತ್ರೀಶಕ್ತಿ ಗುಂಪುಗಳಲ್ಲಿ ಆಗಾಗ ಪದಾಧಿಕಾರಿಗಳ ಬದಲಾವಣೆ ಆಗುತ್ತದೆ.ಆ ಸಂದರ್ಭ ಅವರ ಬ್ಯಾಂಕ್ ಖಾತೆಯಲ್ಲೂ ಹೆಸರು ಬದಲಾವಣೆ ಆದಾಗ ಅದಕ್ಕೆ ಪ್ರತ್ಯೇಕ ಹಣ ಕಟ್ ಆಗುತ್ತಿರುವುದು ದೊಡ್ಡ ಹೊರೆಯಾಗಿದೆ ಎಂದು ಸಿಡಿಪಿಒ ಶ್ರೀಲತಾ ಅವರು ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ತಂದರು.ಉತ್ತರಿಸಿದ ಕೆನರಾ ಬ್ಯಾಂಕ್ನ ಸುಜಾತ ಅವರು ಮೋಡಿಫಿಕೇಶನ್ ವೇಳೆ ಚಾರ್ಜ್ ಕಟ್ ಆಗುವುದು ಸಾಮಾನ್ಯ.ಈ ಕುರಿತು ಬ್ಯಾಂಕ್ನ ಪ್ರಧಾನ ಕಚೇರಿಗೆ ಪತ್ರ ಬರೆಯಿರಿ.ಅವರಿಂದ ನಮಗೆ ಆದೇಶ ಬಂದರೆ ಸರಿ ಮಾಡಬಹುದು ಎಂದರು.ಪಾಣಾಜೆ ಬ್ಯಾಂಕ್ನಲ್ಲಿ ಸ್ತ್ರೀಶಕ್ತಿ ಗುಂಪಿನ ಸಾಲಕ್ಕೆ ರೂ.13 ಸಾವಿರ ಇನ್ಶ್ಯೂರೆನ್ಸ್ ಎಂದು ಕಟ್ ಮಾಡುತ್ತಾರೆ ಎಂದು ಸಿಡಿಪಿಒ ಇಲಾಖೆಯ ಮೇಲ್ವಿಚಾರಕಿ ಜಲಜಾಕ್ಷಿ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಕುರಿತು ಉತ್ತರಿಸಿದ ಕೆನರಾ ಬ್ಯಾಂಕ್ನ ಸುಜಾತ ಅವರು, ಈ ರೀತಿಯ ಸಾಲಕ್ಕೆ ಇನ್ಶ್ಯೂರೆನ್ಸ್ ಕಟ್ ಮಾಡುವ ಹಾಗಿಲ್ಲ.ಹೌಸಿಂಗ್ ಸಾಲಕ್ಕೆ ಮಾತ್ರ ಇನ್ಶ್ಯೂರೆನ್ಸ್ ಇರುತ್ತದೆ ಎಂದರು. ಇಚಿಲಂಪಾಡಿಯಲ್ಲಿ ಕೆನರಾ ಬ್ಯಾಂಕ್ನವರು ಸಾಲದ ಗುರಿ ಸಾಧಿಸಲು ಸ್ತ್ರೀಶಕ್ತಿ ಗುಂಪಿನ ಹೆಸರಿನಲ್ಲಿ ಬ್ಯಾಂಕ್ ಸಾಲ ತೆಗೆದು ಬಳಿಕ ಮರುಪಾವತಿ ಮಾಡುತ್ತಾರೆ.ಆದರೆ ಬಡ್ಡಿ ಮಾತ್ರ ಸ್ತ್ರೀಶಕ್ತಿ ಗುಂಪಿನ ಖಾತೆಯಿಂದ ಕಟ್ ಆಗುತ್ತಿದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.ಈ ಕುರಿತು ಅಧಿಕಾರಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ವರದಕ್ಷಿಣೆ ಪ್ರಕ್ರಿಯೆ ಕಡಿಮೆ ಆದರೂ ಸದ್ದಿಲ್ಲದೆ ನಡೆಯುತ್ತಿದೆ:
ವರದಕ್ಷಿಣೆ ನಿಷೇಧ ಕಾಯ್ದೆ ಕುರಿತು ಸಭೆಯ ಪ್ರಸ್ತಾಪ ಆದಾಗ ಈ ಕುರಿತು ತಳಮಟ್ಟದಲ್ಲೇ ಮಾಹಿತಿ ನೀಡಬೇಕಾಗಿದೆ.ಇಲ್ಲಿ ಕೊಡುವವರು ಕೊಡುತ್ತಾರೆ. ತೆಗೆದು ಕೊಳ್ಳುವವರು ತೆಗೆದು ಕೊಳ್ಳುತ್ತಾರೆ.ಕುಟುಂಬದಲ್ಲಿ ಸಮಸ್ಯೆ ಬಂದಾಗ ಮಾತ್ರ ದೂರು ಬರುತ್ತದೆ.ಆದರೂ ಈಗಿನ ವಿದ್ಯಮಾನದಲ್ಲಿ ವರದಕ್ಷಿಣೆ ಕಡಿಮೆ ಆಗಿದೆ ಎಂದು ಸಿಡಿಪಿಒ ಶ್ರೀಲತಾ ಅವರು ಹೇಳಿದರು.
ಮಾದಕ ವಸ್ತು ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯ:
ಮಾದಕ ವಸ್ತು ಸೇವನೆ ಮತ್ತು ನಿಷೇಧ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಈ ಕುರಿತು ನಮ್ಮ ಇಲಾಖೆಯಿಂದ ಕೌನ್ಸಿಲಿಂಗ್ ಕೊಡುತ್ತಿzವೆ ಎಂದು ಸಿಡಿಪಿಒ ಅವರು ತಿಳಿಸಿದರು.ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಅವರು ಮಾತನಾಡಿ ಬಹುತೇಕ ಮಕ್ಕಳು ಈ ಚಟಕ್ಕೆ ಬಲಿಯಾಗುತ್ತಿದ್ದಾರೆ.ಸುಮ್ಮನೆ ಯಾಕೆ ನಾನೊಮ್ಮೆ ಟ್ರೈ ಮಾಡಬಾರದು ಎಂದು ನೋಡಿ ಮತ್ತೆ ಅದರ ಚಟಕ್ಕೆ ಬಲಿಯಾಗುತ್ತಾರೆ.ಈಗ ಮಾತ್ರೆಗಳ ರೂಪದಲ್ಲೂ ಮಾದಕ ವಸ್ತುಗಳು ಬರುತ್ತಿವೆ.ಈ ನಿಟ್ಟಿನಲ್ಲಿ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಮಾನಸಿಕ ತಜ್ಞರ ಮೂಲಕ ಮಾಹಿತಿ ಕಾರ್ಯಗಾರ ನೀಡುವುದು ಉತ್ತಮ ಎಂದರು.ಸಮನ್ವಯ ಸಮಿತಿ ಸದಸ್ಯೆ ಉಷಾ ಅಂಚನ್ ಅವರು ಮಾತನಾಡಿ ಮಾದಕ ವಸ್ತುಗಳನ್ನು ಯಾರು ಮಾರಾಟ ಮಡುತ್ತಾರೆಯೋ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.ಡಾ.ದೀಪಕ್ ರೈ ಅವರು ಮಾತನಾಡಿ ಯಾರು ಆರಂಭದಲ್ಲಿ ಮಾದಕ ವಸ್ತುವಿಗೆ ಬಲಿಯಾಗುತ್ತಾನೋ ಅವನೇ ಮುಂದೆ ಅದರ ಸರಬರಾಜು ಮತ್ತು ಮಾರಾಟವನ್ನೂ ಮಾಡುವವನಾಗುತ್ತಾನೆ ಎಂದರು.ಸದಸ್ಯೆ ನಯನಾ ರೈ ಅವರು ಮಾತನಾಡಿ ಈ ಕುರಿತು ಮಕ್ಕಳಿಗೆ ನಾವು ಮಾಹಿತಿ ಕಾರ್ಯಗಾರ ಮಾಡುವ ಜೊತೆಗೆ ಪೋಷಕರಿಗೆ ಮಾಹಿತಿ ಕೊಡುವುದು ಉತ್ತಮ ಎಂದರು.ಸಿಡಿಪಿಒ ಶ್ರೀಲತಾ ಅವರು ಮಾತನಾಡಿ ಮನೆಯವರು ಮಗುವಿನ ಮೇಲೆ ನಿಗಾ ವಹಿಸದೇ ಇದ್ದರೆ ಕೊನೆಗೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದರು. ತಹಶೀಲ್ದಾರ್ ಅವರು ಮಾತನಾಡಿ ಮಾದಕ ವಸ್ತು ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರವೂ ಅತೀ ಅಗತ್ಯ ಎಂದರು.
ಸ್ವಸಹಾಯ ಸಂಘಗಳು ಲೋಕೋಸ್ ಆಪ್ಗೆ ನೋಂದಾಯಿಸಿ:
ಗ್ರಾಮೀಣ ಅಭಿವೃದ್ದಿ ಸಚಿವಾಲಯ ರಾಜ್ಯದ ಸಂಜೀವಿನಿ ಸ್ವಸಹಾಯ ಸಂಘಗಳ ಸಮಗ್ರ ಮಾಹಿತಿ ಪಡೆಯಲು ಲೋಕೋಸ್ ಆಪ್ ಅಭಿವೃದ್ಧಿಪಡಿಸಲಾಗಿದೆ.ಸ್ವಸಹಾಯ ಸಂಘದಲ್ಲಿ ಸದಸ್ಯರ ಉಳಿತಾಯ, ಸಾಲ ವಿತರಣೆ, ಮರುಪಾವತಿ ಬಗ್ಗೆ ತಾಲೂಕಿನಿಂದ ಹಿಡಿದು ಕೇಂದ್ರ ಸರಕಾರದ ತನಕ ಲೋಕೋಸ್ ಆಪ್ನಲ್ಲಿ ಮಾಹಿತಿ ದೊರೆಯುತ್ತದೆ.ಇದಕ್ಕೆ ನೋಂದಾವಣೆ ಆಗದಿದ್ದರೆ ಮುಂದೆ ಸವಲತ್ತಿಗೆ ಸಮಸ್ಯೆ ಆಗುತ್ತದೆ.ಈಗಾಗಲೇ ಜು.13ರ ಒಳಗೆ ಎಲ್ಲರೂ ನೋಂದಾವಣೆ ಆಗಬೇಕಾಗಿತ್ತು.ಇನ್ನೂ ಮಾಹಿತಿ ನೀಡಲು ಬಾಕಿ ಇದೆ.ಈ ನಿಟ್ಟಿನಲ್ಲಿ ಎಲ್ಲಾ ಸ್ವಸಹಾಯ ಸಂಘದವರು ಸಹಕಾರ ನೀಡುವಂತೆ ಎನ್ಆರ್ಎಲ್ಎಮ್ನ ನಮಿತಾ ಅವರು ಮಾಹಿತಿ ನೀಡಿದರು.
ಬಾಲ್ಯವಿವಾಹದ ವಯಸ್ಸಿನ ದೃಢೀಕರಣಕ್ಕೆ ಮೆಡಿಕಲ್ ಒಪೀನಿಯನ್:
ಬಾಲ್ಯ ವಿವಾಹ ನಿಷೇಧ ವಿಚಾರಕ್ಕೆ ಸಂಬಂಧಿಸಿ ಸಭೆಯಲ್ಲಿ ಪ್ರಸ್ತಾಪ ಆದಾಗ ಕೆಲವೊಂದು ಪ್ರಕರಣಗಳಲ್ಲಿ ಹುಡುಗಿಯ ತಾಯಿ ತನ್ನ ಮಗಳಿಗೆ 16 ವರ್ಷ ಆಗಿದ್ದರೂ 19 ವರ್ಷ ಆಗಿದೆ ಎಂದು ನಂಬಿಸಿ ಮದುವೆಗೆ ಹುಡುಗನ ಕಡೆಯವರನ್ನು ನಂಬಿಸುತ್ತಾರೆ.ಆದರೆ ಸರಿಯಾದ ಮಾಹಿತಿ ಹುಡುಗನ ಕಡೆಯವರಿಗೆ ಇಲ್ಲದೆ ಮದುವೆಗೆ ಸಿದ್ದರಾಗುತ್ತಾರೆ.ಇಂತಹ ಪ್ರಕರಣಕ್ಕೆ ಸಂಬಂಧಿಸಿ ಮದುವೆ ಆಮಂತ್ರಣ ಪತ್ರ ಮುದ್ರಣ ಆದ ಬಳಿಕವೂ ಒಂದೆರಡು ವಿವಾಹವನ್ನು ನಿಲ್ಲಿಸಿದ್ದೇವೆ ಎಂದು ಮಾಹಿತಿ ನೀಡಿದ ಸಿಡಿಪಿಒ ಅವರು ವಿವಾಹಕ್ಕೆ ಸಂಬಂಧಿಸಿ ಅವರು ಆಧಾರ್ ಕಾರ್ಡ್ ನೀಡುತ್ತಾರೆ.ಆದರೆ ಅದರಲ್ಲಿ ಸರಿಯಾದ ವಯಸ್ಸಿನ ದಾಖಲೆ ಸಿಗುವುದು ಕಷ್ಟ.ಈ ನಿಟ್ಟಿನಲ್ಲಿ ಹುಡುಗಿಯ ಜನನ ಪ್ರಮಾಣ ಪತ್ರ ಅಥವಾ ಶಾಲಾ ದಾಖಲಾತಿ ಪ್ರಮಾಣ ಪತ್ರ ಅಗತ್ಯವಾಗಿ ಬೇಕಾಗುತ್ತದೆ.ಈ ಎಲ್ಲಾ ಪ್ರಮಾಣ ಪತ್ರ ಸಿಗದಿದ್ದಾಗ ನಾವು ಮೆಡಿಕಲ್ ಒಪೀನಿಯನ್ಗೆ ಕೊಡಬೇಕಾಗುತ್ತದೆ ಎಂದರು.ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಅವರು ಮಾತನಾಡಿ ನಾವು ಮೆಡಿಕಲ್ ಒಪೀನಿಯನ್ನಲ್ಲಿ ಒಬ್ಬರಿಗೆ ಇಷ್ಟೇ ವರ್ಷ ಎಂದು ನೂರಕ್ಕೆ ನೂರು ನಿಗದಿಪಡಿಸಲು ಕಷ್ಟ.ಆದರೆ ಸ್ಕ್ಯಾನಿಂಗ್ ಆಧಾರದಲ್ಲಿ ಇಂತಿಷ್ಟು ವರ್ಷದ ಒಳಗೆ ಅಥವಾ ಹೊರಗೆ ಇದ್ದಾರೆ ಎಂದು ಹೇಳಬಹುದು ಎಂದು ಮಾಹಿತಿ ನೀಡಿದರು.
ಮಾತೃವಂದನಾ ಯೋಜನೆಗೆ ಅರ್ಜಿ ಸ್ವೀಕಾರ:
ಮಾತೃವಂದನಾ ಯೋಜನೆಯನ್ನು ಗುರಿ ಮೀರಿ ಸಾಧಿಸಲಾಗಿದೆ.2ನೇ ಮಗು ಹೆಣ್ಣಾದರೆ ಅವರಿಗೆ ಮಾತೃವಂದನಾ ಯೋಜನೆ ಸೌಲಭ್ಯವಿದೆ.ತಾತ್ಕಾಲಿಕವಾಗಿ ಅದನ್ನು ನಿಲ್ಲಿಸಲಾಗಿದೆ.ಆದರೆ ಈ ಕುರಿತು ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಆನ್ಲೈನ್ ಮೂಲಕ ಅಪ್ಲೋಡ್ ಮಾಡುತ್ತಿದ್ದೇವೆ.ಆದೇಶ ಬಂದಾಗ ಅದಕ್ಕೆ ಚಾಲನೆ ನೀಡುತ್ತೇವೆ ಎಂದು ಸಿಡಿಪಿಒ ಮಾಹಿತಿ ನೀಡಿದರು.ಬೇಟಿ ಬಜಾವೋ ಬೇಟಿ ಪಡಾವೋ ಹೆಣ್ಣು ಮಗುವಿನ ಪ್ರೋತ್ಸಾಹ ನೀಡುವ ಯೋಜನೆ ಚಾಲ್ತಿಯಲ್ಲಿದೆ.ಭಾಗ್ಯಲಕ್ಷ್ಮೀ ಯೋಜನೆಗೆ ಸಂಬಂಧಿಸಿ ಮೆಸೇಜ್ ಬಾರದಿದ್ದರೆ ಹೆಲ್ಪ್ ಲೈನ್ಗೆ ಕರೆ ಮಾಡಿ.ಇದಕ್ಕೆ ಡೆಡ್ಲೈನ್ ಕೊಟ್ಟಿಲ್ಲ ಎಂದರು.ಕಡಬದಲ್ಲಿ ಬಂದ್ ಆಗಿರುವ ಶಾಲೆಯೊಂದನ್ನು ಸಂಜೀವಿನಿ ಸಂಘಕ್ಕೆ ನೀಡುವಂತೆ ಸಭೆಯಲ್ಲಿ ಪ್ರಸ್ತಾಪ ಆಯಿತು. ಉತ್ತರಿಸಿದ ಸಿಡಿಪಿಒ ಅವರು ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಯವರಲ್ಲಿ ಮಾತನಾಡುತ್ತೇನೆ ಎಂದರು.ವಿಕಲಚೇತನರ ವಿವಾಹಕ್ಕೆ ಸಂಬಂಧಿಸಿ ಸರಕಾರದಿಂದ ಸಿಗುವ ರೂ.50 ಸಾವಿರ ಯೋಜನೆಯಲ್ಲಿ ಒಂದು ವೇಳೆ ಇಬ್ಬರೂ ವಿಕಲಚೇತನರಾದರೆ ಅವರಿಗೆ ಸೌಲಭ್ಯ ಜಾಸ್ತಿ ಆಗುವ ಸಾಧ್ಯತೆ ಇದೆಯೇ ಎಂದು ಸಮಿತಿ ಸದಸ್ಯೆ ನಯನಾ ರೈ ಪ್ರಶ್ನಿಸಿದರು.ವಿಕಲಚೇತನರೊಬ್ಬರು ವಿವಾಹವಾದರೂ ಇಬ್ಬರು ವಿವಾಹ ಆದರೂ ಸರಕಾರದ ಗೈಡ್ಲೈನ್ ಪ್ರಕಾರ ರೂ.50 ಸಾವಿರ ಮಾತ್ರ ಸೌಲಭ್ಯ ಸಿಗುತ್ತದೆ ಎಂದು ಸಿಡಿಪಿಒ ಶ್ರೀಲತಾ ಅವರು ಮಾಹಿತಿ ನೀಡಿದರು.ವಿಕಲಚೇತನ ಯುಡಿಐಡಿ ಕಾರ್ಡ್ಗೆ ಸಂಬಂಧಿಸಿ ಪುತ್ತೂರು ಕಡಬ ಸೇರಿ 8 ಮಂದಿಗೆ ಮಾತ್ರ ಬಾಕಿ ಆಗಿದೆ ಎಂದು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾರತಿ ಡಿ ಅವರು ಮಾಹಿತಿ ನೀಡಿದರು.ಭಾಗ್ಯಲಕ್ಷ್ಮೀ ಬಾಂಡ್ 2 ಮಗುವಿಗೆ ಬಂದ ಯೋಜನೆ, ಮೂರನೇ ಮಗುವಿಗಿಲ್ಲ.ಅಪ್ಡೇಟ್ ಆದಾಗ ತಿಳಿಸುತ್ತೇವೆ ಎಂದು ಸಿಡಿಪಿಒ ಅವರು ಮಾಹಿತಿ ನೀಡಿದರು.
ಮಕ್ಕಳ ಮಾರಾಟ ಸಾಗಾಣಿಕೆ ವಿರುದ್ಧ ಪ್ರಚಾರ ಆಂದೋಲನ ಸಮಿತಿ ಕುರಿತು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಅವರನ್ನು ಶಾಲೆಗೆ ಸೇರ್ಪಡೆಗೊಳಿಸಬೇಕು.ಇದರ ಜೊತೆಗೆ ಅಲೆಮಾರಿಗಳು ಬಂದು ಪೆನ್, ಬೆಲೂನ್ ಮಾರಾಟದ ನೆಪದಲ್ಲಿ ಭಿಕ್ಷೆ ಬೇಡುವವರಿದ್ದಾರೆ.ಅವರೊಂದಿಗೆ ಇರುವ ಮಕ್ಕಳನ್ನು ಶಾಲೆಗೆ ಸೇರ್ಪಡೆಗೊಳಿಸುವ ಕೆಲಸಕ್ಕೆ ಎಲ್ಲಾ ಇಲಾಖೆಯ ಅಧಿಕಾರಿಗಳ ಸಹಕಾರ ಬೇಕೆಂದು ಸಿಡಿಪಿ ಮನವಿ ಮಾಡಿದರು. ಎ.ಎಸ್.ಐ ಶಿವರಾಮ ಅವರು ಮಾತನಾಡಿ ಜಾಗೃತಿ ಆಂದೋಲನ ನಾವು ಮಾಡಿದ್ದೇವೆ ಎಂದು ತಿಳಿಸಿದರು.ವೇದಿಕೆಯಲ್ಲಿ ತಹಸೀಲ್ದಾರ್ ಶಿವಶಂಕರ್, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ತಾ.ಪಂ ಯೋಜನಾಧಿಕಾರಿ ಸುಕನ್ಯ ಉಪಸ್ಥಿತರಿದ್ದರು.ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾರತಿ ಜೆ ವಿವಿಧ ಸಮನ್ವಯ ಸಮಿತಿ ಸಭೆಯ ಪಾಲನಾ ವರದಿಯನ್ನು ಮಂಡಿಸಿದರು.