ಜವಾಬ್ದಾರಿ ನಿಭಾಯಿಸಲಾಗದ ಸದಸ್ಯರು ರಾಜೀನಾಮೆ ನೀಡಲಿ-ಗ್ರಾಮಸ್ಥನ ಹೇಳಿಕೆಗೆ ಆಕ್ಷೇಪ:ಸದಸ್ಯರು,ಗ್ರಾಮಸ್ಥರ ಮಧ್ಯೆ ಚಕಮಕಿ
ಪ್ಲಾಟಿಂಗ್ ಸಮಸ್ಯೆ ಸರಿಪಡಿಸಿ
ಕೊಯಿಲ ಪ್ರಾ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರನ್ನು ನೇಮಿಸಿ
ಶಿಕ್ಷಕರ ವರ್ಗಾವಣೆಯಿಂದ ಆಲಂಕಾರು ಸರಕಾರಿ ಶಾಲೆಗೆ ಸಮಸ್ಯೆಯಾಗಿದೆ
ಆಲಂಕಾರು:ಆಲಂಕಾರು ಗ್ರಾ.ಪಂ.ಗ್ರಾಮ ಸಭೆಯು ಗ್ರಾ.ಪಂ.ಅಧ್ಯಕ್ಷ ಸದಾನಂದ ಆಚಾರ್ಯರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಭವನದಲ್ಲಿ ನಡೆಯಿತು.ಪುತ್ತೂರು ತಾಲ್ಲೂಕು ಅರೋಗ್ಯಾಧಿಕಾರಿ ಡಾ.ದೀಪಕ್ ರೈಯವರು ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದ್ದರು.
ಪಂಚಾಯತ್‌ನ ಕಾಮಗಾರಿ ನಡೆಯುವಾಗ ಗ್ರಾಮ ಪಂಚಾಯತ್ ಸದಸ್ಯರು ಕೆಲಸ ನಡೆಯುವ ಸ್ಥಳದಲ್ಲಿ ಉಪಸ್ಥಿತರಿರುವಂತೆ ಗ್ರಾಮಸ್ಥ ಸುಂದರ ಬೈರಕಂಡ ತಿಳಿಸಿದರಲ್ಲದೆ,ತಮ್ಮ ಜವಾಬ್ದಾರಿಯನ್ನು ನಿಭಾಯಿಸಲು ಸಾಧ್ಯವಾಗದೇ ಇರುವ ಸದಸ್ಯರು ರಾಜೀನಾಮೆ ನೀಡಬೇಕೆಂದು ಹೇಳಿದ ವಿಚಾರದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಹಾಗು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು.ಈ ಸಂದರ್ಭದಲ್ಲಿ ಗ್ರಾಮಸ್ಥ ಹರೀಶ್ ಗೌಡ ಏಂತಡ್ಕರವರು ಅಬೂಬಕ್ಕರ್ ನೆಕ್ಕರೆ,ಇನ್ನಿತರರನ್ನು ತರಾಟೆ ತೆಗೆದುಕೊಂಡು,ಕೇವಲ ನಿಮ್ಮ ವಾರ್ಡ್‌ನ ಸಮಸ್ಯೆಯ ಬಗ್ಗೆ ಮಾತಾಡಿ ಸಮಯ ವ್ಯರ್ಥ ಮಾಡುತ್ತೀರಿ.ನಮ್ಮ ವಾಡ್೯ನ ಸಮಸ್ಯೆಯ ಬಗ್ಗೆಯೂ ಮಾತನಾಡಲು ಇದೆ ಎಂದು ತಿಳಿಸಿದಾಗ ಹರೀಶ್ ಗೌಡ ಏಂತಡ್ಕ ಹಾಗು ಆಬೂಬಕ್ಕರ್ ನೆಕ್ಕರೆ ಮಧ್ಯೆ ಮಾತಿನ ಚಕಮಕಿ ನಡೆಯಿತು.ಈ ಸಂದರ್ಭದಲ್ಲಿ ಪರಸ್ಪರ ವಾಗ್ವಾದ ನಡೆದು ವಿಕೋಪಕ್ಕೆ ತಿರುಗುವ ಸಂದರ್ಭದಲ್ಲಿ ಕಡಬ ಆರಕ್ಷಕ ಠಾಣೆಯ ಎ.ಎಸ್.ಐ ಸುರೇಶ್ ಹಾಗು ಕಾನ್‌ಸ್ಟೇಬಲ್ ಚಂದನ್‌ರವರು ಗ್ರಾಮಸಭೆಯ ಒಳಗೆ ಪ್ರವೇಶಿಸಿದಾಗ ಪರಿಸ್ಥಿತಿ ಶಾಂತವಾಯಿತು.
ಇಲಾಖಾಧಿಕಾರಿಗಳು ಬಂದ ಬಳಿಕವೇ ಸಭೆ ನಡೆಯಲಿ:
ಎಲ್ಲಾ ಇಲಾಖಾಧಿಕಾರಿಗಳು ಬಾರದೇ ಗ್ರಾಮಸಭೆ ಪ್ರಾರಂಭ ಮಾಡುವುದು ಬೇಡವೆಂದು ಗ್ರಾಮಸ್ಥರಾದ ಕೇಶವ ದೇವಾಡಿಗ ನಗ್ರಿ,ಅಬೂಬಕ್ಕರ್ ನೆಕ್ಕರೆ,ಪುರಂದರ ಗೌಡ ನಗ್ರಿ,ಸೋಮಪ್ಪ ನೆಕ್ಕರೆಯವರು ಆಗ್ರಹಿಸಿದರು.ಆರು ತಿಂಗಳಿಕೊಮ್ಮೆ ನಡೆಯುವ ಗ್ರಾಮ ಸಭೆಗೆ ಇಲಾಖಾಧಿಕಾರಿಗಳು ಬಾರದೇ ಇದ್ದರೆ ನಾವು ನಮ್ಮ ಸಮಸ್ಯೆಯನ್ನು ಯಾರ ಬಳಿ ಕೇಳುವುದೆಂದು ಏರುಧ್ವನಿಯಲ್ಲಿ ಅವರು ಪ್ರಶ್ನಿಸಿದರು.ಮಾರ್ಗದರ್ಶಿ ಅಧಿಕಾರಿ ಡಾ.ದೀಪಕ್ ರೈಯವರು ಸಂಬಂಧಪಟ್ಟ ಇಲಾಖೆಯವರನ್ನು ಮೊಬೈಲ್ ಮೂಲಕ ಸಂಪರ್ಕಿಸಿದರು.ಇಲಾಖಾಧಿಕಾರಿಗಳು ಗ್ರಾಮ ಸಭೆಗೆ ಬರುತ್ತಾರೆ ಎಂದು ಅವರು ಭರವಸೆ ನೀಡಿದ ನಂತರ ಗ್ರಾಮ ಸಭೆಯು ಪ್ರಾರಂಭಗೊಂಡಿತು.
ಪ್ಲಾಟಿಂಗ್ ಸಮಸ್ಯೆ ಸರಿಪಡಿಸಿ:
ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಪ್ರೇಮಲತಾರವರು ಸಾಮಾಜಿಕ ಭದ್ರತೆಯ ತಿಂಗಳ ವೇತನ,ಮಳೆಗಾಲದ ಪ್ರಕೃತಿ ವಿಕೋಪ ನಿರ್ವಹಣೆಯ ಕುರಿತು ಮಾಹಿತಿ ನೀಡುತ್ತಿರುವ ಸಂದರ್ಭದಲ್ಲಿ ಗ್ರಾಮಸ್ಥರಾದ ಕೇಶವ ದೇವಾಡಿಗರವರು, ಪ್ಲಾಟಿಂಗ್ ಸಮಸ್ಯೆಯಿಂದಾಗಿ ಜನರು ಹಲವು ತರದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು ಹಾಗು ಇತರರು ಸಹಮತ ವ್ಯಕ್ತಪಡಿಸಿದರು.ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಬರೆಯಲು ನಿರ್ಣಯಿಸಲಾಯಿತು.
ಕೊಯಿಲ ಪ್ರಾ. ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರನ್ನು ನೇಮಿಸಿ:
ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರನ್ನು ನೇಮಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.ಆರೋಗ್ಯ ಇಲಾಖೆಯ ವತಿಯಿಂದ ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ರವಿಶಂಕರ್ ಭಟ್‌ರವರು, ಮಳೆಗಾಲದಲ್ಲಿ ಜನರು ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು,ಕ್ಷಯ,ಡೆಂಗ್ಯೂ ಜ್ವರದ ಬಗ್ಗೆ ಎಚ್ಚರ ವಹಿಸಬೇಕೆಂದು ತಿಳಿಸಿದರು.ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನದ 24 ಗಂಟೆಯೂ ವೈದ್ಯರು ಜನರ ಸೇವೆಗೆ ಲಭ್ಯವಾಗಬೇಕು ಹಾಗು ಖಾಯಂ ವೈದ್ಯರನ್ನು ನೇಮಿಸುವಂತೆ ಪುರಂದರ ಗೌಡ ನಗ್ರಿ ತಿಳಿಸಿದರು.ಇತರ ಗ್ರಾಮಸ್ಥರು ಸಹಮತ ವ್ಯಕ್ತಪಡಿಸಿದರು.ಈ ಬಗ್ಗೆ ಗ್ರಾಮ ಸಭೆಯಲ್ಲಿ ನಿರ್ಣಯಿಸಲಾಯಿತು.ಇಂಜಿನಿಯರಿಂಗ್ ವಿಭಾಗದಿಂದ ಈಶ್ವರ್‌ರವರು ಮಾಹಿತಿ ನೀಡುತ್ತಿರುವ ಸಂದರ್ಭದಲ್ಲಿ ಆಲಂಕಾರು ಕೊಂಡಾಡಿಕೊಪ್ಪದಲ್ಲಿ ಚರಂಡಿ ರಚನೆ,ನೆಕ್ಕರೆ ಭಾಗದಲ್ಲಿ ಚರಂಡಿ ರಚನೆಯ ಕಾಮಗಾರಿಯ ಚರ್ಚೆ ನಡೆಯಿತು.ಗ್ರಾಮ ಪಂಚಾಯತ್ ಸದಸ್ಯರು ಈ ಬಗ್ಗೆ ಗಮನ ಹರಿಸಬೇಕೆಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.ಆಲಂಕಾರು ಮಿತ್ರಡ್ಕ ನಗ್ರಿ ರಸ್ತೆಯಲ್ಲಿ ಅಂದಾಜು 30 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯ ಕಾಮಗಾರಿ ಕಳಪೆಯಾಗಿದ್ದು ಈ ಬಗ್ಗೆ ನಿರ್ಮಿತಿಯವರಿಗೆ ಬರೆಯುವಂತೆ ಅಬೂಬಕ್ಕರ್ ನೆಕ್ಕರೆ ಆಗ್ರಹಿಸಿದರು.
ಶಿಕ್ಷಕರ ವರ್ಗಾವಣೆಯಿಂದ ಆಲಂಕಾರು ಸರಕಾರಿ ಶಾಲೆಗೆ ಸಮಸ್ಯೆಯಾಗಿದೆ:
ಶಿಕ್ಷಣ ಇಲಾಖೆಯಿಂದ ಸಿ.ಆರ್.ಪಿ ಪ್ರಕಾಶ್‌ರವರು ಮಾಹಿತಿ ನೀಡುತ್ತಿರುವ ಸಂದರ್ಭದಲ್ಲಿ ಅಬೂಬಕ್ಕರ್ ನೆಕ್ಕರೆಯವರು ಶಿಕ್ಷಕರ ವರ್ಗಾವಣೆಯಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ.400 ವಿದ್ಯಾರ್ಥಿಗಳು ಇರುವ ಸರಕಾರಿ ಶಾಲೆಯಲ್ಲಿ ಒಬ್ಬರು ಸರಕಾರಿ ಶಿಕ್ಷಕರು ಮಾತ್ರ ಇದ್ದಾರೆ. ಇದನ್ನು ಸರಿಪಡಿಸಬೇಕು ಇಲ್ಲವಾದರೆ ಶಾಲೆಗೆ ಬೀಗ ತಂದು ಹಾಕುವುದಾಗಿ ಎಚ್ಚರಿಕೆ ನೀಡಿದರು.ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.ಅರ್ಥಿಕ ಇಲಾಖೆಯಿಂದ ಕೆನರಾ ಬ್ಯಾಂಕ್‌ನ ಪ್ರಜ್ವಲ್‌ರವರು ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡುತ್ತಿರುವಾಗ ಬೆಳೆಯುತ್ತಿರುವ ಆಲಂಕಾರಿಗೆ ಇನ್ನೊಂದು ರಾಷ್ತ್ರೀಕೃತ ಬ್ಯಾಂಕ್ ಬೇಕೆಂದು ಗ್ರಾಮಸ್ಥರಾದ ಕಕ್ವೆ ಶಿವಣ್ಣ ಗೌಡ ಒತ್ತಾಯಿಸಿದರು.ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಾಣಿಶ್ರೀ ಗೃಹ ಲಕ್ಷ್ಮೀ ಯೋಜನೆಯ ಬಗ್ಗೆ ಮಾಹಿತಿ ನೀಡುತ್ತಿರುವ ಸಂದರ್ಭದಲ್ಲಿ ಮಹಿಳೆಯರಿಗೆ ಬಸ್ಸು ಉಚಿತ, ಗೃಹ ಲಕ್ಷ್ಮೀ ಯೋಜನೆಯಡಿ 2000 ರೂ. ನೀಡಲಾಗುತ್ತದೆ.ನಮಗೆ ರೂ.1000 ಆದರೂ ನೀಡಿ ಎಂದು ಗ್ರಾಮಸಭೆಯಲ್ಲಿದ್ದ ಗಂಡಸರು ಒತ್ತಾಯಿಸಿ ಹಾಸ್ಯ ಸನ್ನಿವೇಶ ಸೃಷ್ಟಿಯಾದ ಘಟನೆ ನಡೆಯಿತು.ಮೆಸ್ಕಾಂ ಇಲಾಖೆಯಿಂದ ಪ್ರೇಮ್ ಕುಮಾರ್,ಕೃಷಿ ಇಲಾಖೆಯಿಂದ ಸೀಮಾ,ಪಶುವೈದ್ಯ ಇಲಾಖೆಯಿಂದ ಅಜಿತ್‌ರವರು ಇಲಾಖಾ ಮಾಹಿತಿ ನೀಡಿದರು.ದಾಮೋದರ ಗೌಡ ಕಕ್ವೆಯವರು, ಪ್ರಧಾನ ಮಂತ್ರಿ ಹವಾನಿಯಂತ್ರಿತ ಬೆಳೆ ವಿಮೆಯನ್ನು ಅಡಿಕೆಗೆ ಸಮರ್ಪಕವಾಗಿ ಅಳವಡಿಕೆಯಾಗುವಂತೆ, ಸದಾನಂದ ಮಡ್ಯೋಟ್ಟು ಆಲಂಕಾರು ಭಾರತೀ ಶಾಲೆಯಿಂದ ಹಾದು ಹೋಗುವ ರಸ್ತೆಯನ್ನು ಸರಿಪಡಿಸುವಂತೆ,ಅವಿನಾಶ್ ರವರು ವಿದ್ಯುತ್ ಲೈನ್‌ನ ಬಗ್ಗೆ, ನೋಣಯ್ಯ ಏಂತಡ್ಕ ಕೊಂಡಾಡಿಕೊಪ್ಪ ಶಾಲೆಯ ಬಳಿಯಲ್ಲಿರುವ ಸ್ಮಶಾನವನ್ನು ಸರಿಪಡಿಸುವಂತೆ ಮನವಿ ಮಾಡಿದರು.ಆಲಂಕಾರು ಗ್ರಾ.ಪಂನ ಮಾಜಿ ಉಪಾಧ್ಯಕ್ಷ ಇಂದುಶೇಖರ ಶೆಟ್ಟಿ,ಸೋಮಪ್ಪ ನೆಕ್ಕರೆ ಸೇರಿದಂತೆ ಹಲವು ಗ್ರಾಮಸ್ಥರು ವಿವಿಧ ಸಲಹೆ ಸೂಚನೆ ನೀಡಿದರು.ಇದೇ ಸಂದರ್ಭದಲ್ಲಿ ನಿರಾಮಯ ಯೋಜನೆಯಲ್ಲಿ ಐದು ಮಂದಿ ವಿಕಲಚೇತನರಿಗೆ ವಿಮಾ ಪತ್ರವನ್ನು ವಿತರಿಸಲಾಯಿತು.
ಗ್ರಾಮ ಸಭೆಯ ಮಾರ್ಗದರ್ಶಿ ಅಧಿಕಾರಿ ಡಾ.ದೀಪಕ್ ರೈಯವರು ಮಾತನಾಡಿ ಗ್ರಾಮ ಸಭೆಯ ಮಹತ್ವ ತಿಳಿಸಿದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ.ಅಧ್ಯಕ್ಷ ಸದಾನಂದ ಆಚಾರ್ಯರವರು ಮಾತನಾಡಿ ಈ ಗ್ರಾಮಸಭೆ ನನ್ನ ಅಧ್ಯಕ್ಷ ಅವಧಿಯ ಕೊನೆಯ ಗ್ರಾಮ ಸಭೆ.ಮುಂದಿನ ಗ್ರಾಮಸಭೆಯು ನೂತನ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ತನ್ನ ಅಧಿಕಾರಾವಧಿಯಲ್ಲಿ ಸಹಕರಿಸಿದ ಗ್ರಾಮಸ್ಥರಿಗೆ, ಅಧಿಕಾರಿ ವರ್ಗದವರಿಗೆ ಹಾಗು ಮಾಧ್ಯಮದವರಿಗೆ,ಇನ್ನಿತರರಿಗೆ ಕೃತಜ್ಞತೆ ಸಲ್ಲಿಸಿದರು.ತನ್ನ ಅವಧಿಯಲ್ಲಿ ಗ್ರಾಮ ಪಂಚಾಯತ್‌ಗೆ ಅನೇಕ ಪ್ರಶಸ್ತಗಳು ಬಂದಿರುವುದಾಗಿ ಹೇಳಿದ ಅವರು ಇದಕ್ಕೆ ಸಹಕರಿಸಿದವರಿಗೆ ಅಭಿನಂದನೆ ಸಲ್ಲಿಸಿ ಮುಂದಿನ ಅಧ್ಯಕ್ಷರ ಅವಧಿಯಲ್ಲಿಯೂ ಎಲ್ಲರೂ ಸಹಕಾರ ನೀಡುವಂತೆ ವಿನಂತಿಸಿದರು.
ಗ್ರಾ.ಪಂ ಉಪಾಧ್ಯಕ್ಷೆ ರೂಪಾಶ್ರೀ ಪಟ್ಟೆ, ಗ್ರಾ.ಪಂ.ಸದಸ್ಯರಾದ ಕೃಷ್ಣ ಜಿ ಗಾಣಂತಿ, ರವಿ ಪೂಜಾರಿ,ಚಂದ್ರಶೇಖರ, ಶ್ವೇತಕುಮಾರ್, ವಾರಿಜ,ಸುಶೀಲ,ಸುಮತಿ, ಕಿರಿಯ ಆರೋಗ್ಯ ಸಹಾಯಕಿ ಸರೋಜಿನಿ ಉಪಸ್ಥಿತರಿದ್ದರು.ಗಾ.ಪಂ ಪ್ರಭಾರ ಅಭಿವೃದ್ಧಿ ಅಧಿಕಾರಿ ವಸಂತ ಶೆಟ್ಟಿ ಸ್ವಾಗತಿಸಿ, ಪಂಚಾಯತ್ ಸಿಬ್ಬಂದಿ ಹೇಮಾರವರು ವರದಿ ವಾಚನ ಮಾಡಿ, ಭವ್ಯರವರು ಧನ್ಯವಾದ ಸಮರ್ಪಿ ಸಿದರು.ಗ್ರಾಮ ಸಭೆಯಲ್ಲಿ ಸರಕಾರಿ ಶಾಲಾ ಮುಖ್ಯೋಪಾದ್ಯಾಯರು,ಶಿಕ್ಷಕರು,ಅಂಗನವಾಡಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು