ಉಪ್ಪಿನಂಗಡಿ: ಹೆದ್ದಾರಿ ಕಾಮಗಾರಿಯಿಂದ ಕೃಷಿ ತೋಟಕ್ಕೆ ನೀರು- ಪರಿಹಾರಕ್ಕೆ ಆಗ್ರಹಿಸಿ ಉಪ್ಪಿನಂಗಡಿ ಗ್ರಾ.ಪಂ. ನಿರ್ಣಯ

0

ಉಪ್ಪಿನಂಗಡಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ತೀರಾ ಅವೈಜ್ಞಾನಿಕವಾಗಿ ಮತ್ತು ಕಳಪೆಯಾಗಿ ನಡೆಯುತ್ತಿದೆ. ಹೀಗಾಗಿ ಇಲ್ಲಿನ ಹೆದ್ದಾರಿ ಉದ್ದಕ್ಕೂ ಅವ್ಯವಸ್ಥೆಯ ಆಗರ ಸೃಷ್ಟಿಯಾಗಿದೆ. ಜೊತೆಗೆ ಹತ್ತಾರು ಮಂದಿಯ ಕೃಷಿ ಭೂಮಿ ಮುಳುಗಡೆಗೂ ಕಾರಣವಾಗಿದೆ. ಆದ್ದರಿಂದ ಕೃಷಿಕರಿಗೆ ಉಂಟಾಗಿರುವ ನಷ್ಟವನ್ನು ಭರಿಸಬೇಕು ಮತ್ತು ಪರಿಹಾರ ಒದಗಿಸಿಕೊಡಬೇಕು ಎಂದು ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸರಕಾರ ಮತ್ತು ಜಿಲ್ಲಾಧಿಕಾರಿಯನ್ನು ಕೋರಿ ನಿರ್ಣಯ ಅಂಗೀಕರಿಸಿದೆ.


ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾ ಚಂದ್ರ ಮುಳಿಯ ಅಧ್ಯಕ್ಷತೆಯಲ್ಲಿ ಜು. 27ರಂದು ನಡೆದ ಗ್ರಾ.ಪಂ. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರು ಈ ಹಿಂದೆ ಮಳೆಗಾಲದಲ್ಲಿ ಉಪ್ಪಿನಂಗಡಿ ಪೇಟೆ, ಗಾಂಧಿ ಪಾರ್ಕ್, ರಾಮನಗರ ಪ್ರದೇಶದ ಮೋರಿಯಲ್ಲಿ ಹರಿದು ಬರುವ ನೀರು ನಟ್ಟಿಬೈಲುನಲ್ಲಿ ತೋಡುಗೆ ಸೇರಿಕೊಂಡು ನದಿಗೆ ಸೇರುತ್ತಿತ್ತು. ಆದರೆ ಹೆದ್ದಾರಿ ಕಾಮಗಾರಿ ನಡೆಸುವವರು ತೋಡಿನ ಮೇಲೆ ಮಣ್ಣು ಹಾಕಿ ಮುಚ್ಚಿದ್ದು, ಇಲ್ಲಿ ಈದೀಗ ತೋಡು ಮಾಯವಾಗಿದೆ. ಹೀಗಾಗಿ ಈ ಎಲ್ಲಾ ನೀರು ಕೃತಕ ನೆರೆಯಾಗಿ ನಟ್ಟಿಬೈಲುನಲ್ಲಿ ಕೃಷಿ ಭೂಮಿಯೊಳಗೆ ನುಗ್ಗಿದ್ದು, ಕೃಷಿ ಭೂಮಿ ಸಂಪೂರ್ಣ ಮುಳುಗಡೆಯಾಗಿದೆ. ಇದರಿಂದ ನಟ್ಟಿಬೈಲ್‌ನಲ್ಲಿ ಹರೀಶ್ ನಾಯಕ್, ರಾಘವ ನಾಯಕ್, ಉಮೇಶ್ ಗೌಡ, ಗಣೇಶ್ ಭಟ್, ಸದಾಶಿವ ನಾಯಕ್, ಗೋಪಾಲ, ನಳಿನಾಕ್ಷಿ ರೈ, ಮೀನಾಕ್ಷಿ ಮೊದಲಾದವರ ಅಡಿಕೆ ಕೃಷಿ ನಾಶವಾಗಿ ಸಂಪೂರ್ಣ ನಷ್ಟ ಅನುಭವಿಸುವಂತಾಗಿದೆ. ಇದರಿಂದ ಇವರಿಗೆ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದ್ದು, ಆದ ಕಾರಣ ಇವರಿಗೆ ಆಗುತ್ತಿರುವ ನಷ್ಟವನ್ನು ಭರಿಸುವ ಸಲುವಾಗಿ ಪರಿಹಾರ ನೀಡುವಂತೆ ಸರಕಾರ ಮತ್ತು ಜಿಲ್ಲಾಧಿಕಾರಿಯವರನ್ನು ಕೋರಿ ನಿರ್ಣಯ ಅಂಗೀಕರಿಸಬೇಕು ಎಂಬ ಆಗ್ರಹ ಸದಸ್ಯರಿಂದ ಕೇಳಿ ಬಂತು. ಅದರಂತೆ ನಿರ್ಣಯ ಅಂಗೀಕರಿಸಲಾಯಿತು.


ಅವೈಜ್ಞಾನಿಕ, ಕಳಪೆ ಕಾಮಗಾರಿ:
ಕಾಮಗಾರಿ ನಡೆಯುತ್ತಿರುವಾಗಲೇ ಇಲ್ಲಿನ ನಟ್ಟಿಬೈಲ್ ಎಂಬಲ್ಲಿ ಬೃಹತ್ ತಡೆಗೋಡೆ ಮುಗುಚಿ ಬಿದ್ದಿದೆ. ಹಳೆಗೇಟು ಬಳಿ ನದಿಗೆ ಅಡ್ಡವಾಗಿ ನಿರ್ಮಿಸಿದ ತಡೆಗೋಡೆ
ವಾಲಿಕೊಂಡಿದ್ದು ಅವೈಜ್ಞಾನಿಕವಾಗಿದೆ. ಇನ್ನೂ ಕೆಲವೆಡೆ ತಡೆಗೋಡೆ ಬಿರುಕು ಬಿಟ್ಟಿದ್ದು ಕಾಮಗಾರಿ ತೀರಾ ಕಳಪೆಯಾಗಿರುವಂತೆ ತೋಚುತ್ತಿದೆ. ಹೀಗಾಗಿ ಒಟ್ಟು ಕಾಮಗಾರಿಯಿಂದಾಗಿ ಉಪ್ಪಿನಂಗಡಿಯಲ್ಲಿ ಆವ್ಯವಸ್ಥೆಯ ಆಗರ ಸೃಷ್ಟಿಯಾಗಿದ್ದು, ಈ ಬಗ್ಗೆಯೂ ಸರಕಾರದ ಗಮನ ಸೆಳೆಯುವ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.


ಮಠ ಹಿರ್ತಡ್ಕದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಧರೆ ಕುಸಿದಿದ್ದು, ಇದರಿಂದ ನೂತನವಾಗಿ ನಿರ್ಮಾಣವಾದ ಶೌಚಾಲಯ ಕುಸಿಯುವ ಹಂತದಲ್ಲಿದೆ. ಇದು ನಡೆದು ವಾರಗಳಾಗುತ್ತಾ ಬಂದರೂ ಇದಕ್ಕೆ ಯಾವುದೇ ಪರಿಹಾರ ಕಲ್ಪಿಸುವ ಕೆಲಸವಾಗಿಲ್ಲ. ಅಧಿಕಾರಿಗಳು ಬಂದು ನೋಡಿ ಪೋಟೋ ತೆಗೆದುಕೊಂಡು ಹೋಗಿದ್ದಾರೆ. ಪ್ರಾಕೃತಿಕ ವಿಕೋಪಗಳು ಸಂಭವಿಸಿದ ಸಂದರ್ಭ ಅಧಿಕಾರಿಗಳು ಅದು ನಮ್ಮ ಇಲಾಖೆಗೆ ಬರುತ್ತಿಲ್ಲ ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿದರೆ ನಾವು ಯಾರನ್ನು ಕೇಳುವುದು. ಸರಕಾರಿ ಶಾಲೆಯೊಂದಕ್ಕೆ ಸ್ಪಂದನೆ ಕೊಡುವವರು ಇಲ್ಲದಿದ್ದಾಗ ಇನ್ನು ಸಾಮಾನ್ಯರ ಅವಸ್ಥೆ ಹೇಗಿರಬಹುದು. ಇಲ್ಲಿ ಶೌಚಾಲಯವೂ ಕುಸಿಯುವ ಹಂತದಲ್ಲಿದ್ದು, ಮಕ್ಕಳಿಗೆ ಏನಾದರೂ ತೊಂದರೆಯಾದರೆ ಯಾರು ಹೊಣೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಕೂಡಲೇ ಇದಕ್ಕೆ ಪರಿಹಾರ ಕಲ್ಪಿಸಲು ಆಗ್ರಹಿಸಿದರು.


ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ನಾವು ಅಲ್ಲಿಗೆ ಭೇಟಿ ನೀಡಿ ವೀಕ್ಷಿಸಬಹುದಷ್ಟೇ. ಆದರೆ ಯಾವುದೇ ಅನುದಾನ ನೀಡಲು ನಮ್ಮಿಂದ ಸಾಧ್ಯವಿಲ್ಲ. ಯಾಕೆಂದರೆ ಇದಕ್ಕೆ ಗ್ರಾ.ಪಂ.ನಲ್ಲಿ ಯಾವುದೇ ಅನುದಾನವಿಲ್ಲ. ಕೆಲವರಿಗೆ ಈ ವಿಷಯ ಗೊತ್ತಿಲ್ಲದೆ ಸದಸ್ಯರನ್ನೇ ಕೆಲವರು ದೂರುವುದು ಇದೆ. ಆದ್ದರಿಂದ ಪ್ರಾಕೃತಿಕ ವಿಕೋಪದಲ್ಲಿ ಏನಾದರೂ ಮನೆಗಳಿಗೆ ಅನಾಹುತಗಳಾದರೆ ಒಂದು ಐದು ಸಾವಿರದಷ್ಟಾದರೂ, ನೀಡಲು ಗ್ರಾ.ಪಂ.ನಲ್ಲಿ ಫಂಡ್ ಒಂದನ್ನು ಇಡಬೇಕು ಎಂಬ ಆಗ್ರಹ ಸದಸ್ಯರಿಂದ ವ್ಯಕ್ತವಾಯಿತು.


ಮರಿಕೆ ಕಾಲನಿಯಲ್ಲಿ ಖಾಸಗಿ ವ್ಯಕ್ತಿಯೋರ್ವರ ತೆಂಗಿನಮರವೊಂದು ಸತ್ತು ಹೋಗಿದ್ದು, 4 ವರ್ಷದಿಂದ ಇದು ಅಪಾಯಕಾರಿ ಸ್ಥಿತಿಯಲ್ಲಿ ರಸ್ತೆಯತ್ತ ವಾಲಿಕೊಂಡಿದೆ. ಅದರ ತೆರವು ಕಾರ್ಯ ಇನ್ನೂ ನಡೆದಿಲ್ಲ. ಆದ್ದರಿಂದ ಈ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಬರೆಯಲು ನಿರ್ಧರಿಸಲಾಯಿತು.


ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಿನಾಯಕ ಪೈ, ಸದಸ್ಯರಾದ ಯು.ಟಿ. ತೌಸೀಫ್, ಸುರೇಶ್ ಅತ್ರಮಜಲು, ಲೋಕೇಶ್ ಬೆತ್ತೋಡಿ, ಧನಂಜಯ ಕುಮಾರ್, ಇಬ್ರಾಹೀಂ ಮೈಸಿದಿ, ಅಬ್ದುಲ್ ರಶೀದ್, ಸಣ್ಣಣ್ಣ, ವಿದ್ಯಾಲಕ್ಷ್ಮೀ ಪ್ರಭು ಮಾತನಾಡಿದರು. ಸದಸ್ಯರಾದ ಲಲಿತ, ಉಷಾ ನಾಯ್ಕ್, ರುಕ್ಮಿಣಿ, ಶೋಭಾ, ಜಯಂತಿ, ವನಿತಾ, ನೆಬಿಸಾ, ಸೌದ
ಉಪಸ್ಥಿತರಿದ್ದರು.ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಸ್ವಾಗತಿಸಿ, ಕಾರ್ಯದರ್ಶಿ ದಿನೇಶ್ ವಂದಿಸಿದರು.

LEAVE A REPLY

Please enter your comment!
Please enter your name here