ಪುತ್ತೂರು: ಮಣಿಪುರ ರಾಜ್ಯದಲ್ಲಿ ಎರಡು ಜನಾಂಗಗಳ ಮಧ್ಯೆ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ಪುತ್ತೂರು ಬ್ಲಾಕ್ ಕಾಂಗ್ರೆಸ್‌ನಿಂದ ಜು.29ರಂದು ಸಂಜೆ ಬಸ್ ನಿಲ್ದಾಣದ ಬಳಿಯ ಗಾಂಧೀಕಟ್ಟೆಯ ಬಳಿ ಮೊಂಬತ್ತಿ ಉರಿಸಿ, ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ಮಾತನಾಡಿ, ಮಣಿಪುರದ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮೆರುಗಿಗೆ ಕುಂದುಂಟಾಗಿದೆ. ಹಿರಿಯರ ದೂರದರ್ಶಿತದ ಚಿಂತನೆಗಳ ಮಣ್ಣು ಪಾಲಾಗಿದೆ. ಚುನಾವಣೆಯಲ್ಲಿ ಗೆಲ್ಲುವುದೇ ಪ್ರಜಾಪ್ರಭುತ್ವವಲ್ಲ. ಎಲ್ಲರ ಪ್ರಾಣ, ಮಾನ ರಕ್ಷಣೆ ಪ್ರಧಾನಿಯ ಕರ್ತವ್ಯ. ರಷ್ಯಾ-ಉಕ್ರೇನ್ ಯುದ್ದ ನಿಲ್ಲಿಸಲಾಗುವ ಪ್ರಧಾನಿಗೆ ಮಣಿಪುರದ ಗಲಭೆ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಅವಿಶ್ವಾಸ ನಿರ್ಣಯ ಮಂಡನೆಯೇ ಪ್ರಧಾನಿ ಮೋದಿಗೆ ಮೊದಲ ಹಿನ್ನಡೆಯಾಗಿದೆ. ಅಲ್ಪ ಸಂಖ್ಯಾತರು, ದಲಿತರಿಗೆ ದೇಶದಲ್ಲಿ ರಕ್ಷಣೆಯಿಲ್ಲ. ಬದುಕಬೇಕಾದರೆ ಮುಂದಿನ ಚುನಾವಣೆಯಲ್ಲಿ ಬದಲಾವಣೆ ಪರ್ವವಾಗಬೇಕು. ಮೋದಿಯನ್ನು ಪ್ರಧಾನ ಮಂತ್ರಿ ಸ್ಥಾನದಿಂದ ಇಳಿಸಿ ಬದುಕಲು ಅವಕಾಶ ನೀಡಬೇಕು. ದೇಶ ಉಳಿಯಬೇಕಾದರೆ ಮೋದಿ ಅಧಿಕಾರದಿಂದ ಇಳಿಯಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ರೈ ಮಾತನಾಡಿ, ಮಾತೆಯ ಸ್ವರೂಪವನ್ನು ಕಂಡಿರುವ ಭಾರತದಲ್ಲಿ ಮಾತೆಗೆ ನೋವಾದರೆ ಸ್ಪಂಧಿಸಬೇಕು. ಸ್ಪಂಧಿಸದಿದ್ದರೆ ಆತ ದೇಶದ ಸುಪುತ್ರರಾಗಲು ಸಾಧ್ಯವಿಲ್ಲ. ಅಂತವರು ದೇಶ ಪ್ರೇಮಿಗಳಾಗಲು ಸಾಧ್ಯವಿಲ್ಲ. ಕಳೆದ ಮೂರು ತಿಂಗಳುಗಳಿಂದ ಮಣಿಪುರದಲ್ಲಿ ಎರಡು ಜನಾಂಗಗಳ ಮಧ್ಯೆ ಹಿಂಸಾಚಾರಗಳು ನಡೆಯುತ್ತಿದೆ. ಅಲ್ಲಿ ಅತ್ಯಾಚಾರ ಕೊಲೆ, ಹಿಂಸಾಚಾರಗಳು ನಡೆಯುತ್ತಿದೆ. ಮಹಿಳೆಯರನ್ನು ಬೆತ್ತಲೆ ಮಾಡಿದ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ನಡೆಸಲಾಗಿದೆ. ಇದು ಯಾವ ಉಗ್ರಗಾಮಿಗಳಿಗೂ ಕಡಿಮೆ ಇಲ್ಲದ ಕೃತ್ಯವಾಗಿದೆ. ಪ್ರಚಾರದಿಂದ ಅಲ್ಲಿನ ಮಾಹಿತಿಗಳು ದೊರೆಯುತ್ತಿದೆ. ಪ್ರಚಾರ ಇಲ್ಲದೇ ಎಷ್ಟು ನಡೆದಿರಬಹುದು. ಇದಕ್ಕಾಗಿ ಪ್ರತಿಭಟನೆ ಅನಿವಾರ್ಯ. ಸರಕಾರ ಎಚ್ಚೆತ್ತುಕೊಂಡು ಪರಿಹಾರ ನೀಡಿ ಜನರನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ ಮಾತನಾಡಿ, ಮಣಿಪುರದಲ್ಲಿ ಜನಾಂಗೀಯ ದ್ವೇಷದಲ್ಲಿ ಗಲಭೆಗಳು ನಡೆಯುತ್ತಿದೆ. ಇದನ್ನು ತಡೆಯದ ಹುನ್ನಾರದ ವಿರುದ್ದ ಹೋರಾಟ ನಡೆಯುತ್ತಿದೆ. ಸಂತ್ರಸ್ಥರನ್ನು ವಿಚಾರಿಸಲು ಹೋದಾಗ ರಾಹುಲ್ ಗಾಂಧಿಯನ್ನು ತಡೆದು ಹಿಂದಕ್ಕೆ ಕಳುಹಿಸಲಾಗಿದೆ. ಗೋದ್ರಾ ಮಾದರಿಯಲ್ಲಿಯೇ ಮಣಿಪುರದಲ್ಲಿಯೂ ನಡೆಯುತ್ತಿದೆ. ಜನಾಂಗೀಯ ಗಲಭೆಯನ್ನು ತಡೆಯಲಾಗದ ಅಲ್ಲಿನ ಮುಖ್ಯಮಂತ್ರಿ ಬೀರೇಸ್ ಸಿಂಗ್ ನಾ ಲಾಯಕ್ ಮುಖ್ಯ ಮಂತ್ರಿಯಾಗಿದ್ದಾರೆ. ಉಡುಪಿಯ ವಿಚಾರದಲ್ಲಿ ಗುಲ್ಲೆಬ್ಬಿಸುವ ಮಹಿಳಾ ಆಯೋಗ, ಮಾನವ ಹಕ್ಕು ಮಣಿಪುರಕ್ಕೆ ಹೋಗುವುದಿಲ್ಲ. ಈ ಕೃತ್ಯವನ್ನು ನಾಗರಿಕ ಸಮಾಜ ಒಪ್ಪುವುದಿಲ್ಲ. ಸುಮ್ಮನಿರುವ ಪ್ರಧಾನಿಗೆ ದೇವರು ಬುದ್ದಿ ಕಲಿಸಲಿದ್ದಾರೆ. ಆರ್‌ಎಸ್‌ಎಸ್ ದೇಶಕ್ಕೆ ಕ್ಯಾನ್ಸರ್ ಅದನ್ನು ಓಡಿಸಬೇಕು ಎಂದರು.
ಜಿ.ಪಂ ಮಾಜಿ ಸದಸ್ಯ ಎಂ.ಎಸ್ ಮಹಮ್ಮದ್ ಮಾತನಾಡಿ, ಮಣಿಪುರದಲ್ಲಿ ನಡೆದ ಘಟನೆಗಳು ದೇಶದ ನಾಗರಿಕರ ತಲೆ ತಗ್ಗಿಸುವಂತೆ ಮಾಡಿದೆ. ಇದು ಮುಂದೆ ಎಲ್ಲಾ ರಾಜ್ಯಗಳಿಗೂ ವ್ಯಾಪಿಸಲಿದೆ. ಇದಕ್ಕೆ ಕಾರಣ ಪ್ರಧಾನಿ ಮೋದಿಯಾಗಿದ್ದು, ಮೋದಿ ಹಟಾವೋ, ಬೇಟಿ ಬಚಾವೋ, ದೇಶ್ ಬಚಾವೋ ಆಂದೋಲನ ನಡೆಯಬೇಕು. ಎಲ್ಲಾ ವಿಚಾರಗಳಲ್ಲಿ ಧ್ವನಿ ಎತ್ತುವ ಸ್ಮೃತಿ ಇರಾನಿಯ ನಾಲಿಗೆ ಎಲ್ಲಿ ಹೋಗಿದೆ? ಉಡುಪಿ ಘಟನೆಯ ಬಗ್ಗೆ ಮಾತನಾಡುವ ಶೋಭಾ ಕರಂದ್ಲಾಜೆ ಹೆಂಗಸಾ? ನಪುಮ್ಸಕಿಯಾ? ಮದುವೆಯಾಗಿ ಪತ್ನಿಯನ್ನು ಬಿಟ್ಟಿರುವ ಮೋದಿಯವರಿಗೆ ಮಹಿಳೆಯರ ಬಗ್ಗೆ ಕಾಳಜಿ ಬರಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರೀಸ್ ಮಸ್ಕರೇನಸ್ ಮಾತನಾಡಿ, ಮಣಿಪುರದಲ್ಲಿ ಸರಕಾರದ ಕುಮ್ಮಕ್ಕಿನಿಂದು ಜನಾಂಗೀಯ ಕಲಹಗಳು ನಡೆಯುತ್ತಿದೆ. ಇದರಲ್ಲಿ ಮುಖ್ಯಮಂತ್ರಿ ಹಾಗೂ ಸರಕಾರ, ಆರ್‌ಎಸ್‌ಎಸ್‌ನ ಕೈವಾಡವಿದೆ. ಗಲಭೆ ನಿಯಂತ್ರಿಸಲಾಗದೆ ವಿಫಲತೆ ಒಪ್ಪಿಕೊಂಡು ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಣಿಪುರ ಮುಖ್ಯಮಂತ್ರಿ ಬೀರೇನ್ ಸಿಂಗ್ ರಾಜಿನಾಮೆ ನೀಡಿ ಅಧಿಕಾರದಿಂದ ಕೆಲಗಿಳಿಯಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಮಾತನಾಡಿ, ಮಣಿಪುರದ ಗಲಭೆಯನ್ನು ಪರಿಶೀಲಿಸಲು ತೆರಳಿದ ಪ್ರತಿಪಕ್ಷಗಳನ್ನು ತಡೆದು ಪೊಲೀಸರು ದಬ್ಬಾಳಿಕೆಯಿಂದ ತಡೆದಿದ್ದಾರೆ. ನಾವೆಲ್ಲಾ ಏಕತೆಯಿಂದ ಇಂತಹ ದಬ್ಬಾಳಿಕೆಗೆ ತಾತ್ವಿಕ ಅಂತ್ಯ ಹಾಡಬೇಕು ಎಂದರು.
ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಮಾತನಾಡಿ, ಜನರ ನೋವಿಗೆ ಸ್ಪಂಧಿಸಬೇಕಾದ ಪ್ರದಾನಿ ಮೌನವಾಗಿರುವುದು ದೇಶದ ಜನತೆ ತಲೆತಗ್ಗಿಸುವಂತಾಗಿದೆ. ಬಿಜೆಪಿ ನಾಯಕರು ತುಟಿಬಿಚ್ಚುವುದಿಲ್ಲ. ಕರ್ನಾಟಕದಲ್ಲಿ ಬಿಜೆಪಿಯವರನ್ನು ಟಾರ್ಚ್ ಹಾಕಿ ಹುಡುಕುವಂತ ಪರಿಸ್ಥಿತಿ ಕರ್ನಾಟಕದಲ್ಲಿ ಬಂದಿದ್ದು, ಮುಂದೆ ದೇಶದಲ್ಲಿಯೂ ಬಿಜೆಪಿಗೆ ಇದೇ ಪರಿಸ್ಥಿತಿ ಬರಲಿದೆ ಎಂದರು.
ಸೇವಾದಳದ ಜಿಲ್ಲಾಧ್ಯಕ್ಷ ಜೋಕಿಂ ಡಿ’ಸೋಜ, ಜಿಲ್ಲಾ ಕಿಸಾನ್ ಘಟಕದ ರವೀಂದ್ರ ರೈ ನೆಕ್ಕಿಲು, ಬ್ಲಾಕ್ ಕಾಂಗ್ರೆಸ್ ಎಸ್ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರೋಷನ್ ರೈ ಬನ್ನೂರು, ಉಪಾಧ್ಯಕ್ಷ ಮಹಾಬಲ ರೈ ವಳತ್ತಡ್ಕ, ಪಕ್ಷದ ಪ್ರಮುಖರಾದ ದಿನೇಶ್ ಪಿ.ವಿ., , ಜಾನ್ ಕೆನ್ಯೂಟ್, ವಲೇರಿಯನ್ ಡಯಾಸ್, ವಿಕ್ಟರ್ ಪಾಯಸ್, ಪುರುಷೋತ್ತಮ ಪ್ರಭು, ಶರೀಫ್ ಕೊಯಿಲ, ಎಡ್ವರ್ಡ್, ವಿಠಲ ನಾಯಕ್, ಯಾಕೂಬ್ ಮುಲಾರ್, ಚಂದ್ರಹಾಸ ರೈ, ಅಶೋಕ ಸಂಪ್ಯ, ಸೀತಾ ಭಟ್, ಸಾಹಿರಾ ಝುಬೈರ್, ಇಸ್ಮಾಯಿಲ್ ಬೊಳುವಾರು, ವಿಶಾಲಾಕ್ಷಿ ಬನ್ನೂರು, ಚಂದ್ರಹಾಸ ಬೋಲೋಡಿ ಸೇರಿದಂತೆ ಹಲವು ಮಂದಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸಾಮಾಜಿಕ ಜಾಲತಾಣದ ಮುಖ್ಯಸ್ಥ ಸಿದ್ದೀಕ್ ಸುಲ್ತಾನ್ ಸ್ವಾಗತಿಸಿ, ನಗರ ಸಭಾ ಸದಸ್ಯ ಮಹಮ್ಮದ್ ರಿಯಾಝ್ ಪರ್ಲಡ್ಕ ವಂದಿಸಿದರು.