




@ ಸಿಶೇ ಕಜೆಮಾರ್



ಪುತ್ತೂರು: ಅಡುಗೆ ಮನೆಯ ವಿನ್ಯಾಸ ಬದಲಾದಂತೆ ಒಲೆಗಳಲ್ಲೂ ಬಹಳಷ್ಟು ಬದಲಾವಣೆ ಕಂಡಿದೆ. ಹಿಂದಿನ ಕಾಲದಲ್ಲಿದ್ದ ಮಣ್ಣಿನ ಒಲೆ(ದಿಕ್ಕೆಲ್), ಸೀಮೆ ಎಣ್ಣೆಯ ಸ್ಟೌವ್‌ಗಳು ಮೂಲೆ ಸೇರುತ್ತಿದ್ದು ಆ ಜಾಗಕ್ಕೆ ಗ್ಯಾಸ್ ಸ್ಟೌವ್, ಅಸ್ತ್ರ ಒಲೆ, ವಿದ್ಯುತ್ ಒಲೆ ಹಾಗೂ ಇತ್ತೀಚೆಗೆ ಸೇರ್ಪಡೆಗೊಂಡ ಸೌದೆ ಒಲೆಗಳು ಬಂದಿದ್ದರೂ ಒಂದು ಕಾಲದಲ್ಲಿ ಅಡುಗೆ ಮನೆಯಲ್ಲಿ ಸದ್ದು ಮಾಡಿದ್ದ ಸಿಗಡಿ ಒಲೆಗಳು ಮಾತ್ರ ಇಂದಿಗೂ ತನ್ನ ಬೇಡಿಕೆಯನ್ನು ಉಳಿಸಿಕೊಂಡು ಬಂದಿದೆ. ಈಗಲೂ ಬಹಳಷ್ಟು ಮನೆ, ಹೊಟೇಲ್‌ಗಳಲ್ಲಿ ಸಿಗಡಿ ಒಲೆಯನ್ನು ಬಳಕೆ ಮಾಡುತ್ತಿದ್ದಾರೆ. ಮರದ ಹುಡಿ ಹಾಗೂ ಸಣ್ಣಪುಟ್ಟ ಕಟ್ಟಿಗೆಗಳನ್ನು ಉಪಯೋಗಿಸಿಕೊಂಡು ಬಹಳ ಸುಲಭದಲ್ಲಿ ಅಡುಗೆ ಮಾಡಬಹುದಾದ ಸಿಗಡಿ ಒಲೆಗಳು ಈಗ ಮತ್ತೆ ಚಾಲ್ತಿಯಲ್ಲಿವೆ. ಗ್ಯಾಸ್ ಬೆಲೆ ಏರಿಕೆ ಹಾಗೂ ಕಟ್ಟಿಗೆಯ ಅಭಾವದ ನಡುವೆ ಮರದ ಹುಡಿ ಹಾಗೂ ಸಣ್ಣಪುಟ್ಟ ಕಟ್ಟಿಗೆ ಇದ್ದರೆ ಸಿಗಡಿ ಒಲೆ ನಾನ್‌ಸ್ಟಾಪ್ ಉರಿಯುತ್ತದೆ.





ಏನಿದು ಸಿಗಡಿ ಒಲೆ
ಸುಮಾರು ಒಂದೂವರೆ ಫೀಟ್ ಎತ್ತರವಿರುವ ಕಬ್ಬಿಣದಿಂದ ತಯಾರಿಸಿದ ವೃತ್ತಾಕಾರದಲ್ಲಿರುವ ಒಲೆ ಇದಾಗಿದೆ. ಇದಕ್ಕೆ ಕೆಳ ಭಾಗದಲ್ಲಿ 2 ಇಂಚಿನ ಒಂದು ತೂತು ಇರುತ್ತದೆ. ಮೇಲ್ಬಾಗದಲ್ಲಿ ಪಾತ್ರೆ ಇಡಲು ಮಡಚಬಹುದಾದ ಮೂರು ಸ್ಟ್ಯಾಂಡ್ ಇರುತ್ತದೆ.ಸಾಧಾರಣ 3 ರಿಂದ 4 ಕೆ.ಜಿ ತೂಕವಿರುವ ಈ ಒಲೆಯನ್ನು ಬಹಳ ಸುಲಭವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಬಹುದಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಸಿಗಡಿ ಒಲೆಯಂತೆ ನಾವು ಮನೆಯಲ್ಲೇ ಸಿಗಡಿ ಒಲೆಯನ್ನು ತಯಾರು ಮಾಡಬಹುದಾಗಿದೆ. ಡಬ್ಬಿಯನ್ನು ಉಪಯೋಗಿಸಿ ನಮಗೆ ಬೇಕಾದ ಎತ್ತರ ಮತ್ತು ಅಗಲದ ಸಿಗಡಿ ಒಲೆಯನ್ನು ತಯಾರು ಮಾಡಬಹುದಾಗಿದೆ.
ಉಪಯೋಗಿಸುವ ಕ್ರಮ ಹೇಗೆ
ಸಿಗಡಿ ಒಲೆಗೆ ಬಹುಮುಖ್ಯವಾಗಿ ಬೇಕಾಗಿರುವುದು ಮರದ ಹುಡಿ ಹಾಗೂ 2 ಇಂಚಿನ ಎರಡು ಪೈಪು ತುಂಡುಗಳು. ಪೈಪು ತುಂಡು ಇಲ್ಲದಿದ್ದರೆ ವೃತ್ತಾಕಾರದ ಮರದ ತುಂಡುಗಳು ಕೂಡ ಆಗುತ್ತದೆ. ಮೊದಲು ಅಡುಗೆ ಮಾಡುವ ಸ್ಥಳದಲ್ಲಿ ಸಿಗಡಿ ಒಲೆಯನ್ನು ಇಟ್ಟು ಕೆಳಗಿನ ತೂತಿನ ಮೂಲಕ ಒಂದು ಪೈಪು ಅಥವಾ ಮರದ ತುಂಡನ್ನು ಇಡಬೇಕು, ಇನ್ನು ಮೇಲ್ಬಾಗದಿಂದ ಇನ್ನೊಂದು ಪೈಪನ್ನು ಅಥವಾ ಮರದ ತುಂಡನ್ನು ಇಟ್ಟು ಸುತ್ತಲೂ ಮರದ ಹುಡಿಯನ್ನು ತುಂಬಿಸಬೇಕು. ಸ್ವಲ್ಪಸ್ವಲ್ಪವೇ ಮರದ ಹುಡಿಯನ್ನು ಒಲೆಗೆ ಹಾಕಿ ಒಂದು ಮರದ ತುಂಡಿನಿಂದ ಚೆನ್ನಾಗಿ ಗುದ್ದಬೇಕು. ಮರದ ಹುಡಿ ಹಾಕುವುದು ಮತ್ತು ಗುದ್ದಿ ಗಟ್ಟಿ ಮಾಡುತ್ತಾ ಬರಬೇಕು. ಕೊನೆಗೆ ಮೇಲಿನ ಹಾಗೂ ಕೆಳಗಿನ ಪೈಪು ತುಂಡುಗಳನ್ನು ಮೆಲ್ಲನೆ ತಿರುಗಿಸಿ ತೆಗೆಯಬೇಕು. ಈಗ ಸಿಗಡಿ ಒಲೆ ಉರಿಸಲು ತಯಾರಾಗಿದೆ.
ಬೆಂಕಿ ಹಾಕುವುದು ಹೇಗೆ
ಇನ್ನೂ ಒಲೆಗೆ ಕೆಳಗಿನ ಭಾಗದಿಂದ ಚಿಕ್ಕ ಮರದ ಕಟ್ಟಿಗೆಯಿಂದ ಬೆಂಕಿ ಇಡಬೇಕು. ಮೊದಲಿಗೆ ಮೆಲ್ಲನೆ ಉರಿಯುತ್ತದೆ. ಚಿಕ್ಕ ಚಿಕ್ಕ ಕಟ್ಟಿಗೆಯನ್ನು ಇಟ್ಟರೆ ಸಾಕಾಗುತ್ತದೆ. ಒಮ್ಮೆ ಮರದ ಹುಡಿಗೆ ಬೆಂಕಿ ಹಿಡಿದರೆ ಸುಮಾರು 4 ಗಂಟೆಗಳ ಕಾಲ ಉರಿಯುತ್ತದೆ. ಅನ್ನ, ಪದಾರ್ಥ, ಬಿಸಿ ನೀರು ಎಲ್ಲವೂ ಇದರಲ್ಲಿ ಆಗುತ್ತದೆ.
ಕಡಿಮೆ ಖರ್ಚು ಹೆಚ್ಚು ಉಳಿತಾಯ
ದಿನದಿಂದ ದಿನಕ್ಕೆ ಏರುತ್ತಿರುವ ಗ್ಯಾಸ್ ಬೆಲೆ, ಕಟ್ಟಿಗೆಯ ಅಭಾವ, ಸೀಮೆ ಎಣ್ಣೆಯ ಕೊರತೆ ಈ ಎಲ್ಲದರ ನಡುವೆ ಗೃಹಿಣಿಯರು ಸಿಗಡಿ ಒಲೆಯತ್ತ ಮನಸ್ಸು ಮಾಡುತ್ತಿರುವುದು ಕಂಡು ಬರುತ್ತಿದೆ. ಗ್ರಾಮೀಣ ಭಾಗದ ಬಹುತೇಕ ಹೊಟೇಲ್‌ಗಳಲ್ಲಿ ಸಿಗಡಿ ಒಲೆಯನ್ನು ಉಪಯೋಗಿಸುತ್ತಿದ್ದಾರೆ. ಆರಂಭದಲ್ಲಿ ಸ್ವಲ್ಪ ಹೊಗೆ ಬಂದರೂ ಕಟ್ಟಿಗೆ ಒಲೆಯಷ್ಟು ಹೊಗೆ ಬರುವುದಿಲ್ಲ 70 ರಿಂದ 100 ರೂಪಾಯಿಗೆ ಒಂದು ಗೋಣಿ ಮರದ ಹುಡಿ ಸಿಗುತ್ತಿದ್ದು ಒಂದು ಗೋಣಿ ಮರದ ಹುಡಿ ಕಡಿಮೆ ಎಂದರೂ 10 ದಿನಗಳಿಗೆ ಸಾಕಾಗುತ್ತದೆ.
ನಾವು ಕಳೆದ 25 ವರ್ಷಗಳಿಂದ ನಮ್ಮ ಹೊಟೇಲ್‌ನಲ್ಲಿ ಸಿಗಡಿ ಒಲೆಯನ್ನು ಬಳಕೆ ಮಾಡುತ್ತಿದ್ದೇವೆ.ಅನ್ನ,ಪದಾರ್ಥ, ಬಿಸಿ ನೀರು ಎಲ್ಲದ್ದಕ್ಕೂ ಆಗುತ್ತದೆ. ಒಮ್ಮೆ ಒಲೆ ಉರಿಸಿದರೆ ಸುಮಾರು 4 ಗಂಟೆ ಉರಿಯುತ್ತದೆ. ಕಡಿಮೆ ಖರ್ಚು ಹೆಚ್ಚು ಉಳಿತಾಯ.
ಸುರೇಶ್ ಉದಯಗಿರಿ, ಹೊಟೇಲ್ ಉದಯಗಿರಿ ಸಂಪ್ಯ









