ಕಡಬ ತಾಲೂಕು ರಚನೆಯಾದರೂ ಅಧಿಕಾರಿ ಹುದ್ದೆ ಸೃಷ್ಟಿಯಾಗಿಲ್ಲ

0

ತಾ| ಮಟ್ಟದ ಇಲಾಖೆಗಳ ಕಾರ್ಯಾರಂಭ ಯಾವಾಗ?

ಜನಪ್ರತಿನಿಧಿಗಳ ನಿರ್ಲಕ್ಷ್ಯವೋ? ಅಧಿಕಾರಿಗಳ ನಿರುತ್ಸಾಹವೇ?

ಸುಸಜ್ಜಿತ ತಾಲೂಕು ಆಡಳಿತ ಸೌಧದಲ್ಲಿ ಇಲಾಖಾ ಕಚೇರಿಗಳಿಗಾಗಿ ಕಾಯುತ್ತಿರುವ ಕೊಠಡಿಗಳು!
ಜಮೀನು ಕಾದಿರಿಸಿದ್ದರೂ ಹೋಗಲೊಪ್ಪದ ಇಲಾಖೆಗಳು?
ಅತಿ ಶೀಘ್ರವಾಗಿ ಇಲಾಖೆಗಳು ಕಾರ್ಯನಿರ್ವಹಿಸಲಿ ಎನ್ನುತ್ತಾರೆ ನಾಗರಿಕರು

ವಿಶೇಷ ವರದಿ: ವಿಜಯ ಕುಮಾರ್ ಕಡಬ


ಕಡಬ:ಹಲವಾರು ವರ್ಷಗಳ ಹೋರಾಟದ ಫಲವಾಗಿ ಕೊನೆಗೂ ಕಡಬ ತಾಲೂಕು ಘೋಷಣೆ ಏನೋ ಆಯಿತು.ಬಳಿಕದ ಬೆಳವಣಿಗೆಯಲ್ಲಿ ತಾಲೂಕು ಆಡಳಿತ ಸೌಧ, ತಾಲೂಕು ಪಂಚಾಯತ್ ಕಟ್ಟಡ, ಸಮುದಾಯ ಆರೋಗ್ಯ ಕೇಂದ್ರ ಇವುಗಳಿಗೆ ಸುಸಜ್ಜಿತ ಕಟ್ಟಡ ನಿರ್ಮಾಣವೂ ಆಯಿತು.ಆದರೆ ಕಟ್ಟಡ ನಿರ್ಮಾಣವಾದರೂ ತಾಲೂಕಿನ ಜನತೆ ಮುಖ್ಯವಾದ ಕೆಲಸಗಳಿಗೆ ಇನ್ನೂ ಪುತ್ತೂರು ತಾಲೂಕಿಗೆ ಪ್ರಯಾಣಿಸಬೇಕಾದ ಪರಿಸ್ಥಿತಿ ಮುಂದುವರಿದಿದೆ.ಕಂದಾಯ ಇಲಾಖೆಯಿಂದ ಬಹುತೇಕ ಇಲಾಖೆಗಳಿಗೆ ಜಮೀನು ಕಾದಿರಿಸುವ ಕೆಲಸ ಆಗಿದ್ದರೂ ತಾಲೂಕು ಮಟ್ಟದ ಇಲಾಖೆಗಳು ಮಾತ್ರ ಕಾರ್ಯನಿರ್ವಹಿಸಲು ಮೀನಾ-ಮೇಷ ಎಣಿಸುತ್ತಿರುವುದು ಯಾಕೆ ಎಂದು ಜನರಿಗೆ ಅರ್ಥವಾಗಿಲ್ಲ.ಇದಕ್ಕೆ ಜನಪ್ರತಿನಿಧಿಗಳ ನಿರ್ಲಕ್ಷವೋ?, ಅಧಿಕಾರಿಗಳ ನಿರುತ್ಸಾಹವೋ ಎಂಬುದು ತಿಳಿಯಬೇಕಿದೆ.


ವಿಶೇಷ ಎಂದರೆ ಕಡಬ ತಾಲೂಕಿಗೆ ತಹಸೀಲ್ದಾರ್, ತಾ.ಪಂ.ಇ.ಒ. ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ,ಸರ್ವೆ ಇಲಾಖೆ, ಉಪ ಖಜಾನೆ, ಮೆಸ್ಕಾಂ ಇಲಾಖೆಯ ಹುದ್ದೆಗಳು ಬಿಟ್ಟರೆ ತಾಲೂಕು ಮಟ್ಟದ ಬೇರೆ ಯಾವುದೇ ಅಧಿಕಾರಿಗಳ ಹುದ್ದೆ ಸೃಷ್ಟಿಯಾಗಿಲ್ಲ.ಹುದ್ದೆ ಸೃಷ್ಟಿಯಾಗದೆ, ತಾಲೂಕಿನ ಯಾವುದೇ ಇಲಾಖೆಗಳ ಕಾರ್ಯಾರಂಭಕ್ಕೆ ತೊಡಕಾಗಿದೆ.ಜನ ಸಾಮಾನ್ಯರಿಗೆ ಅನುಕೂಲವಾಗುವಂತೆ ಒಂದೇ ಸೂರಿನಡಿಯಲ್ಲಿ ವಿವಿಧ ಇಲಾಖೆಗಳ ಕಚೇರಿಗಳು ತೆರೆಯಲ್ಪಡಬೇಕು ಎನ್ನುವ ಸರಕಾರದ ಆಶಯದಂತೆ ಕಡಬದಲ್ಲಿ `ತಾಲೂಕು ಆಡಳಿತ ಸೌಧ ‘ ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ ಮಂಜೂರುಗೊಂಡು ತಹಶೀಲ್ದಾರ್ ಕಚೇರಿ ಬಳಿ ಸರ್ವೆ ನಂಬ್ರ 130/1ಎಪಿ2ರಲ್ಲಿ ಇರುವ 1.60 ಎಕರೆ ಜಮೀನಿನಲ್ಲಿ ಕರ್ನಾಟಕ ಗೃಹ ಮಂಡಳಿಯ ಮೂಲಕ ಸುಸಜ್ಜಿತ ನೂತನ ಕಟ್ಟಡ ನಿರ್ಮಾಣಗೊಂಡಿದೆ.ನೂತನ ಸೌಧದಲ್ಲಿ ತಹಶೀಲ್ದಾರರ ಕಚೇರಿ, ಶಾಸಕರ ಕಚೇರಿ, ಸರ್ವೆ ಇಲಾಖೆ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.ಸುಸಜ್ಜಿತ ತಾಲೂಕು ಆಡಳಿತ ಸೌಧ ಎಂಬ ಹೆಸರಿನಲ್ಲಿ ನಿರ್ಮಾಣವಾದ ಕಟ್ಟಡದಲ್ಲಿ ಪ್ರಸ್ತುತ ಕಂದಾಯ ಇಲಾಖೆಗೆ ಸಂಬಂಧಪಟ್ಟ ತಹಸೀಲ್ದಾರ್ ಕಛೇರಿ, ಅಭಿಲೇಖಾಲಯ, ಸರ್ವೆ ಇಲಾಖೆ, ಭೂಮಿ ಕೇಂದ್ರ, ಅಟಲ್‌ಜಿ, ಆಧಾರ್ ಕೇಂದ್ರ ಮೊದಲಾದವುಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಿದರೆ,ಉಳಿದ ಇಲಾಖೆಗಳು ಇನ್ನೂ ತಾಲೂಕು ಮಟ್ಟದ ಇಲಾಖೆಗಳಾಗದೆ ಕಡಬ ಹೋಬಳಿ ಮಟ್ಟದ ಇಲಾಖೆಗಳಾಗಿಯೇ ಕಾರ್ಯನಿರ್ವಹಿಸುತ್ತಿರುವುದರಿಂದ ಜನತೆಗೆ ಸಂಕಟವಾಗಿದೆ.ಜನರ ಅರ್ಧ ಕೆಲಸಗಳು ಕಡಬದಲ್ಲಿ ಆದರೆ, ಉಳಿದರ್ಧ ಕೆಲಸಕ್ಕೆ ಈ ಹಿಂದಿನಂತೆ ಪುತ್ತೂರಿಗೆ ಹೋಗಬೇಕಾಗಿದೆ.ಪೂರ್ಣ ಪ್ರಮಾಣದ ತಾಲೂಕು ಇಲಾಖೆಗಳಾಗದೆ ಇರುವುದರಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆಯಿಂದ ಅವರಿಗೆ ಕಡಬದಲ್ಲಿ ಕಾರ್ಯನಿರ್ವಹಿಸಲು ಸಹಜವಾಗಿಯೇ ಕಷ್ಟವಾಗಿದೆ.


ತಾಲೂಕು ಆಡಳಿತ ಸೌಧದಲ್ಲಿ ರಿಜಿಸ್ಟ್ರಾರ್ ಕಛೇರಿ, ಉಪ ಖಜಾನೆ ಪ್ರಾರಂಭಕ್ಕೆ ಕೊಠಡಿಗಳು ಕಾಯುತ್ತಿದೆ!:
ಕಡಬ ತಾಲೂಕಿನ ಸುಸಜ್ಜಿತ ತಾಲೂಕು ಆಡಳಿತ ಸೌಧದಲ್ಲಿ ಉಪನೋಂದಣಾಧಿಕಾರಿಗಳ(ಸಬ್ ರಿಜಿಸ್ಟ್ರಾರ್)ಕಛೇರಿ ಮತ್ತು ಉಪ ಖಜಾನೆಗೆ ಕೊಠಡಿಗಳನ್ನು ಮೀಸಲಿಟ್ಟಿದ್ದರೂ ಇದುವರೆಗೆ ಸಬ್ ರಿಜಿಸ್ಟ್ರಾರ್ ಕಛೇರಿ ಪ್ರಾರಂಭವಾಗಿಲ್ಲ, ಆಡಳಿತ ಸೌಧದ ಎದುರು ಇರುವ ಎಪಿಎಂಸಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪ ಖಜಾನೆಗೆ ಆಡಳಿತ ಸೌಧದಲ್ಲಿ ಕೊಠಡಿ ಮೀಸಲಿಟ್ಟಿದ್ದರೂ ಅವರು ಇನ್ನೂ ಆಡಳಿತ ಸೌಧಕ್ಕೆ ಸ್ಥಳಾಂತರವಾಗದಿರುವ ಬಗ್ಗೆ ಕಾರಣಗಳು ತಿಳಿದು ಬಂದಿಲ್ಲ.ಜನರಿಗೆ ಬಹುಮುಖ್ಯವಾದ ಸಬ್ ರಿಜಿಸ್ಟ್ರಾರ್ ಕಛೇರಿ ಕೂಡಲೇ ಕಡಬದಲ್ಲಿ ಕಾರ್ಯಾರಂಭ ಮಾಡಬೇಕು ಎನ್ನುವುದು ತಾಲೂಕಿನ ಜನರ ಆಗ್ರಹವಾಗಿದೆ.ಉಭಯ ತಾಲೂಕಿನ ಜನರು ಪುತ್ತೂರು ಸಬ್ ರಿಜಿಸ್ಟ್ರಾರ್ ಕಛೇರಿಗೆ ಹೋಗಬೇಕಾದುದರಿಂದ ಅಲ್ಲಿ ಸಹಜವಾಗಿ ಒತ್ತಡಗಳು ಕಂಡು ಬರುತ್ತಿದೆ.ಬ್ಯಾಂಕಿಂಗ್‌ಗೆ ಸಂಬಂಧಿಸಿದ ಸಣ್ಣ ಕೆಲಸಗಳಿಗೆ ಹೋಗುವ ಜನರೂ ಇಡೀ ದಿನ ಅದಕ್ಕೋಸ್ಕರ ಸಮಯ ವೃರ್ಥ ಮಾಡಬೇಕಾಗಿದೆ.


ವಾರಕ್ಕೆರಡು ದಿನ ಕಾರ್ಯನಿರ್ವಹಿಸುವ ಇಲಾಖೆಗಳು:
ಇತ್ತೀಚಿನ ದಿನಗಳಲ್ಲಿ ಎಲ್ಲ ಕೆಲಸಗಳಿಗೆ ಅಗತ್ಯವಾಗಿರುವ ಆಹಾರ ಇಲಾಖೆ(ಪಡಿತರ) ಮತ್ತು ಜನನ ಮರಣ ನೋಂದಣಿ ಇಲಾಖೆಗಳ ಮುಖ್ಯಸ್ಥರು ವಾರದಲ್ಲಿ ಎರಡು ದಿನ ಕಡಬದಲ್ಲಿ ಸಿಗುತ್ತಾರೆ.ಜನನ ಮರಣ ನೋಂದಣಿ ಅಧಿಕಾರಿ ಮಂಗಳವಾರ ಮತ್ತು ಶುಕ್ರವಾರ ಕಾರ್ಯನಿರ್ವಹಿಸಿದರೆ ಆಹಾರ ಇಲಾಖೆಯ ಅಧಿಕಾರಿಯವರು ವಾರದಲ್ಲಿ ಎರಡು ದಿನ ಕಡಬಕ್ಕೆ ಬಂದು ಇಲ್ಲಿನ ಕಡತಗಳನ್ನು ಪುತ್ತೂರಿಗೆ ಹೊತ್ತೊಯ್ಯುತ್ತಿದ್ದಾರೆ.ಆಹಾರ ಇಲಾಖೆಗೆ ಕಂಪ್ಯೂಟರ್ ಮತ್ತು ಸಿಬ್ಬಂದಿ ವ್ಯವಸ್ಥೆಯಾಗಿ ಪೂರ್ಣ ಪ್ರಮಾಣದಲ್ಲಿ ಕೆಲಸ ನಡೆದರೆ ಇಲ್ಲಿನ ಜನರ ಬಹುದೊಡ್ಡ ಸಮಸ್ಯೆ ನಿವಾರಣೆಯಾಗುತ್ತದೆ.ಕೆಲವು ದಿನಗಳಿಂದ ಸರಕಾರದ ಗ್ಯಾರಂಟಿ ಯೋಜನೆಗಳಿಗೆ ಮುಖ್ಯವಾಗಿ ಆಧಾರ್ ಮತ್ತು ಪಡಿತರ ಚೀಟಿಗೆ ಸಂಬಂಧಿಸಿ ಕೆಲಸ ಕಾರ್ಯಗಳಿದ್ದು ಈ ಬಗ್ಗೆ ಏನು ಮಾಡಬೇಕು, ಎಲ್ಲಿ ಯಾರಲ್ಲಿ ಮಾತನಾಡಬೇಕು ಎನ್ನುವ ಗೊಂದಲದಲ್ಲಿದ್ದು, ಅಲ್ಲಲ್ಲಿ ಸೈಬರ್ ಸೆಂಟರ್‌ಗೆ ಅಲೆದಾಟ ಮಾಡುವ ಪರಿಸ್ಥಿತಿ ದಿನ ನಿತ್ಯ ಕಾಣುತ್ತಿದ್ದೇವೆ.


ಕೆಲವು ತಾಲೂಕು ಇಲಾಖೆಗಳು ಕಾರ್ಯಾರಂಭ ಮಾಡಲೇ ಇಲ್ಲ:
ಮುಖ್ಯವಾಗಿ ಲೋಕೋಪಯೋಗಿ ಇಲಾಖೆ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಅಗ್ನಿಶಾಮಕ ದಳ, ಕೃಷಿ, ತೋಟಗಾರಿಕಾ ಇಲಾಖೆ, ತಾಲೂಕು ಆರೋಗ್ಯಾಧಿಕಾರಿ, ಪೋಲಿಸ್ ವೃತ್ತ ನಿರೀಕ್ಷಕರ ಕಛೇರಿ, ಸಾರಿಗೆ ಇಲಾಖೆ(ಆರ್.ಟಿ.ಒ) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ವಾರ್ತಾ ಇಲಾಖೆ, ಅರಣ್ಯ ಇಲಾಖೆ, ಕೆ.ಎಸ್.ಆರ್.ಟಿ.ಸಿ, ಸಹಕಾರ ಸಂಘಗಳ ನಿಬಂಧಕರು ಸೇರಿದಂತೆ ಇನ್ನೂ ಹಲವಾರು ಇಲಾಖೆಗಳು ಕಡಬದಲ್ಲಿ ಕಾರ್ಯಾರಂಭ ಮಾಡಲೇ ಇಲ್ಲ!
ಈಗಾಗಲೇ ಅಗ್ನಿಶಾಮಕ ದಳಕ್ಕೆ ಕಡಬ ಪಂಜ ರಸ್ತೆಯ ಸ್ಮಶಾನ ಪ್ರದೇಶದಲ್ಲಿ 2.60 ಎಕ್ರೆ ಜಮೀನು ಮೀಸಲಿಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.ಕಡಬ ತಾಲೂಕು ಪಂಚಾಯತ್ ಸಮೀಪ ಪ್ರವಾಸಿ ಮಂದಿರ ನಿರ್ಮಾಣಕ್ಕೆ ಜಾಗ ಮೀಸಲಿಟ್ಟು ಪಹಣಿಯಾಗಿದೆ.ಆದರೆ ಇದಕ್ಕೆ ತಾಲೂಕು ಪಂಚಾಯತ್ ಮತ್ತು ಲೋಕೋಪಯೋಗಿ ಇಲಾಖೆ ಒಪ್ಪದೆ ಇರುವುದರಿಂದ ಕಡಬ ಪಂಜ ರಸ್ತೆಯ ಸ್ಮಶಾನ ಸಮೀಪ ಜಾಗ ಮೀಸಲಿಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.ಗ್ರಂಥಾಲಯ ನಿರ್ಮಾಣಕ್ಕೆ ಈಗಾಗಲೇ ಕಡಬ ಅಡ್ಡಗದ್ದೆ ಬಳಿ 10 ಸೆಂಟ್ಸ್ ಜಾಗ ಮೀಸಲಿಡಲಾಗಿದೆ.


ಕೋರ್ಟ್ ಅತೀ ಜರೂರು ನಿರ್ಮಾಣ ಆಗಬೇಕು:
ನ್ಯಾಯಾಂಗ ಕಚೇರಿ ಕಟ್ಟಡ ನಿರ್ಮಾಣಕ್ಕೆ ಕಡಬ ತಾಲೂಕು ಆಡಳಿತ ಸೌಧದ ಹಿಂಬದಿ ಪ್ರದೇಶದಲ್ಲಿ ಸುಮಾರು 3 ಎಕರೆ ಜಾಗ ಮೀಸಲಿಡಲಾಗಿದ್ದು, ಕೋರ್ಟ್ ಕಛೇರಿ ಅತೀ ಜರೂರು ನಿರ್ಮಾಣವಾಗಬೇಕಿದೆ.ಈಗಾಗಲೇ ಕಡಬ ಭಾಗದ ಜನರು ಪುತ್ತೂರು ಕೋರ್ಟ್‌ಗೆ ಅಲೆದಾಟ ಮಾಡಬೇಕಿದ್ದು ಕಡಬದಲ್ಲಿ ನ್ಯಾಯಾಲಯ ನಿರ್ಮಾಣವಾದರೆ ಇಲ್ಲಿಯ ಜನರ ಶ್ರಮ ಕಡಿಮೆಯಾಗುತ್ತದೆ ಜೊತೆಗೆ ಹಣ, ಸಮಯ ಉಳಿತಾಯವೂ ಆಗುತ್ತದೆ.


ಬಂಟ್ರದಲ್ಲಿ ಮೀಸಲಿಟ್ಟ ಜಾಗಕ್ಕೆ ಹೋಗಲೊಪ್ಪದ ಇಲಾಖೆಗಳು!:
ಪ್ರಸ್ತುತ ಬಂದಿರುವ ಮಾಹಿತಿಯ ಪ್ರಕಾರ ಕಂದಾಯ ಇಲಾಖೆ ಬಂಟ್ರ ಗ್ರಾಮದಲ್ಲಿ ಸುಮಾರು 12 ಎಕರೆಯಷ್ಟು ಪ್ರದೇಶವನ್ನು ಇಲಾಖೆಗಳಿಗೆ ಮೀಸಲಿಡಲು ಯೋಜಿಸಿ ಜಾಗ ಮೀಸಲಿಟ್ಟರೂ ಅಲ್ಲಿ ಇಲಾಖೆಯ ಕಟ್ಟಡ ನಿರ್ಮಾಣಕ್ಕೆ ಯಾವ ಇಲಾಖೆಗಳೂ ಒಪ್ಪಿ ಮುಂದೆ ಬರುತ್ತಿಲ್ಲ, ಎಲ್ಲ ಇಲಾಖೆಗಳು ಕಡಬ ಹೃದಯ ಭಾಗದಲ್ಲಿಯೇ ಜಾಗ ಕೇಳುತ್ತಿರುವುದರಿಂದ ಕಂದಾಯ ಇಲಾಖೆಗೆ ಭೂಮಿ ಕೊಡುವುದೇ ಸಂಕಷ್ಟವಾಗಿದೆ.ಕಡಬ ಪಟ್ಟಣ ಪಂಚಾಯತ್‌ಗೆ ಘನ ತ್ಯಾಜ್ಯ ನಿರ್ವಹಣೆಗೆ ಇನ್ನು 2 ಎಕರೆ ಭೂಮಿಯನ್ನು ಪ್ರಸ್ತುತ ಇರುವ ಘಟಕದ ಸಮೀಪವೇ ಕೊಡಲಾಗಿದೆ.


ಕಂದಾಯ ಇಲಾಖೆ ಮೀಸಲಿಟ್ಟ ಜಾಗಕ್ಕೆ ಹೋಗಲು ಒಪ್ಪದ ಕೆ.ಎಸ್.ಆರ್.ಟಿ.ಸಿ.:
ಬಹು ಮುಖ್ಯವಾಗಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಕಡಬ ಅಂಬೇಡ್ಕರ್ ಭವನದ ಸಮೀಪ ಕಂದಾಯ ಇಲಾಖೆ ಸುಮಾರು 1.70 ಎಕ್ರೆ ಭೂಮಿಯನ್ನು ಮೀಸಲಿಡಲು ಒಪ್ಪಿದ್ದರೂ ಅದಕ್ಕೆ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಒಪ್ಪಿಲ್ಲ, ಕೆ.ಎಸ್.ಆರ್.ಟಿ.ಸಿ.ಯ ಬೇಡಿಕೆಯಂತೆ ಕಡಬ ಕೆರೆಯಲ್ಲಿ ಬಸ್ಸು ತಂಗುದಾಣ ನಿರ್ಮಾಣಕ್ಕೆ ಜಾಗ ಕೇಳಿತ್ತಾದರೂ ಅದು ಕೆರೆ ಆದ ಕಾರಣ ಅದನ್ನು ಜಿಲ್ಲಾಧಿಕಾರಿಯವರು ರಿಜೆಕ್ಟ್ ಮಾಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.ಒಟ್ಟಿನಲ್ಲಿ ಕಡಬದ ಪೇಟೆಯಲ್ಲಿಯೇ ಎಲ್ಲಾ ಇಲಾಖೆಗಳು ಜಾಗದ ಬೇಡಿಕೆ ಇಡುವುದರಿಂದ ಜಾಗ ಲಭ್ಯತೆ ಇಲ್ಲದಿರುವುದರಿಂದ ಇಲಾಖೆಗಳ ಕಾರ್ಯಾರಂಭಕ್ಕೆ ಅದು ತೊಡಕಾಗಿದೆ.


ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರದೆ ಕಡಬ ಆಸ್ಪತ್ರೆಯ ಸಮಸ್ಯೆ ಮುಗಿಯದು!:
ಕಡಬದಲ್ಲಿ ಬಹಳ ಹಿಂದಿನಿಂದಲೂ ಮತ್ತು ಪ್ರತಿನಿತ್ಯ ಜನಸಾಮಾನ್ಯರಿಗೆ ಎದುರಾಗುವ ಸಮಸ್ಯೆ ಎಂದರೆ ಕಡಬ ಸರಕಾರಿ ಆಸ್ಪತ್ರೆ, ಇಲ್ಲಿ ಯಾರನ್ನು ದೂರಿದರೂ ಪ್ರಯೋಜನವಿಲ್ಲ,ಯಾವ ಸೌಲಭ್ಯ ತಂದು ಹಾಕಿದರೂ ಅದು ಜನರಿಗೆ ಪ್ರಯೋಜನವಾಗದಂತಹ ಸ್ಥಿತಿ ನಿರ್ಮಾಣವಾಗಿದೆ.ಕಡಬ ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೇಗೇರಿದ ಬಳಿಕ ಸುಮಾರು 4 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಸುಂದರ ಕಟ್ಟಡವೇನೋ ನಿರ್ಮಾಣವಾಗಿದೆ ಮತ್ತು ಎಕ್ಸ್‌ರೆ, ಆಕ್ಸಿಜನ್ ಘಟಕ, ಲ್ಯಾಬೋರೇಟರಿ ಎಲ್ಲಾ ಸೌಲಭ್ಯಗಳನ್ನು ನೀಡಲಾಗಿದೆ.ಆದರೆ ಚಾಲಕನಿಲ್ಲದ ಗಾಡಿ’ಯಂತಾಗಿದೆ ಕಡಬ ಸಮುದಾಯ ಆಸ್ಪತ್ರೆಯ ಸ್ಥಿತಿ.ವೈದ್ಯರ ಕೊರತೆ, ಲ್ಯಾಬ್ ಟೆಕ್ನಿಷಿಯನ್,ಎಕ್ಸ್‌ರೆ ಟೆಕ್ನಿಷಿಯನ್, ಸಿಬ್ಬಂದಿ ಮೊದಲಾದ ಕೊರತೆಗಳಿಂದ ಜನರಿಗೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ.ಈ ಭಾಗದ ಜನರಿಗೆ ಬಹು ಮುಖ್ಯವಾದ ಡಯಾಲಿಸಿಸ್ ವಿಭಾಗ ಇನ್ನೂ ಪ್ರಾರಂಭಗೊಂಡಿಲ್ಲ.ಈ ಬಗ್ಗೆ ಭರವಸೆಗಳು ಮಾತ್ರ ದೊರೆಯುತ್ತದೆ ಹೊರತು ಕಾರ್ಯಗತ ಆಗಿಲ್ಲ, ಇದಕ್ಕೆಲ್ಲ ಕಾರಣ ಕಡಬ ತಾಲೂಕು ಆದರೂ ಸಮುದಾಯ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿರುವುದು.ಯಾಕೆಂದರೆ ಸರಕಾರದ ಪ್ರಕಾರ ಸಮುದಾಯ ಆಸ್ಪತ್ರೆಗೆ ಇರುವ ಸಿಬ್ಬಂದಿಗಳು ಬಹುತೇಕ ಇದ್ದರೂ ಕಡಬ ತಾಲೂಕು ಆಗಿರುವುದರಿಂದ ಸಾರ್ವಜನಿಕರು ತಾಲೂಕು ಆಸ್ಪತ್ರೆಯ ಎಲ್ಲಾ ವೈದ್ಯಕೀಯ ಸೌಲಭ್ಯಗಳನ್ನು ನಿರೀಕ್ಷಿಸುತ್ತಿದ್ದಾರೆ.ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿ ಸಿಬ್ಬಂದಿ, ವೈದ್ಯರುಗಳ ಕೊರತೆ ನೀಗಿಸಿದರೆ ಮಾತ್ರ ಕಡಬ ಸರಕಾರಿ ಆಸ್ಪತ್ರೆಯ ಸಮಸ್ಯೆ ಮುಗಿಯಬಹುದು.ಇಲ್ಲದಿದ್ದರೆ ಅದೇ ರಾಗ ಅದೇ ಹಾಡು ಎಂಬಂತಾಗಬಹುದು ಎನ್ನುತ್ತಾರೆ ನಾಗರಿಕರು.


ಕಡಬದಲ್ಲಿ ಪೊಲೀಸ್ ವೃತ್ತ ನಿರಿಕ್ಷಕರ ಕಛೇರಿ ನಿರ್ಮಾಣವಾಗಬೇಕು:
ಕಡಬದಲ್ಲಿ ಪೊಲೀಸ್ ವೃತ್ತ ನಿರಿಕ್ಷಕರ ಕಛೇರಿ ನಿರ್ಮಾಣ, ನೆಲ್ಯಾಡಿ ಹೊರಠಾಣೆ ಪೂರ್ಣ ಪ್ರಮಾಣದ ಠಾಣೆಯಾಗಬೇಕು, ಸವಣೂರಿನಲ್ಲಿ ಹೊರ ಠಾಣೆಯಾಗಬೇಕು ಎಂಬ ಬೇಡಿಕೆ ಸಾರ್ವಜನಿಕ ವಲಯದಿಂದ ವ್ಯಕ್ತವಾಗುತ್ತಿದೆ.ಸವಣೂರು ಕಡಬ ತಾಲೂಕಿನಲ್ಲಿದ್ದರೂ ಪೊಲೀಸ್ ಠಾಣೆ ಮಾತ್ರ ಸುಳ್ಯ ತಾಲೂಕಿನ ವ್ಯಾಪ್ತಿಗೆ ಬರುತ್ತದೆ.ನೆಲ್ಯಾಡಿ ಕಡಬ ತಾಲೂಕು ಆಗಿದ್ದರೂ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಠಾಣೆಯ ಸುಪರ್ದಿಗೆ ಬರುತ್ತದೆ.ಈ ರೀತಿಯಾಗಿರುವುದರಿಂದ ಜನ ಸಾಮಾನ್ಯರಿಗೆ ವಿವಿಧ ಸಮಸ್ಯೆಗಳಿಗೆ ತಾಲೂಕಿನಿಂದ ಇನ್ನೊಂದು ತಾಲೂಕಿಗೆ ಅಲೆದಾಟ ಅನಿವಾರ್ಯವಾಗಿದೆ.


ಹೊಸ ತಾಲೂಕು ರಚನೆಯಾದರೂ ಹೋಬಳಿ ಮಾತ್ರ ಮಾಡಿಲ್ಲ:
ಕಂದಾಯ ಇಲಾಖೆಯ ಮುಖ್ಯವಾದ ಭಾಗ ಹೋಬಳಿ.ಈಗಾಗಲೇ ಕಡಬ ತಾಲೂಕಿನಲ್ಲಿ ಕಡಬ ಹೋಬಳಿ ಬಿಟ್ಟರೆ ತಾಲೂಕಿಗೆ ಸಂಬಂಧಪಟ್ಟು ಪಂಜ ಮತ್ತು ಉಪ್ಪಿನಂಗಡಿ ಹೋಬಳಿಗಳೇ ಕಾರ್ಯನಿರ್ವಹಿಸುತ್ತಿವೆ.ಕಡಬ ಹೋಬಳಿಯಲ್ಲಿ 26 ಗ್ರಾಮಗಳಿದ್ದರೆ, ಕಡಬ ತಾಲೂಕಿನ 7 ಗ್ರಾಮಗಳು ಇನ್ನೂ ಹಿಂದಿನ ಸುಳ್ಯ ತಾಲೂಕಿನ ಪಂಜ ಹೋಬಳಿಯಲ್ಲೆ ಇದ್ದರೆ, 9 ಗ್ರಾಮಗಳು ಉಪ್ಪಿನಂಗಡಿ ಹೋಬಳಿಯಲ್ಲೇ ಇರುವುದೂ ಜನ ಸಾಮಾನ್ಯರಿಗೆ ಸಮಸ್ಯೆಯಾಗಿದೆ.ತಾಲೂಕು ಒಂದು ಕಡೆ, ಹೋಬಳಿ ಕೇಂದ್ರ ಇನ್ನೊಂದು ತಾಲ್ಲೂಕ್ ವ್ಯಾಪ್ತಿಗೆ ಬರುವಾಗ ಕೆಲವೊಂದು ತಾಂತ್ರಿಕ ತೊಂದರೆಗಳು ಬರುತ್ತದೆ.ಪ್ರತ್ಯೇಕ ಹೋಬಳಿಯಾದರೆ ಅಲ್ಲಿ ನಾಡಕಛೇರಿ, ಉಪತಹಸೀಲ್ದಾರ್ ಸಹಿತ ವಿವಿಧ ಅಧಿಕಾರಿಗಳು ಲಭ್ಯರಾಗುತ್ತಾರೆ.ಹೋಬಳಿ ಮಟ್ಟದಲ್ಲಿ ಕಂದಾಯ ಇಲಾಖೆಯ ಬಹುತೇಕ ಕೆಲಸ ಕಾರ್ಯಗಳು ನಡೆಯುವುದರಿಂದ ಜನರಿಗೆ ತಾಲೂಕು ಕೇಂದ್ರಕ್ಕೆ ಅಲೆದಾಟ ಮಾಡುವ ಪ್ರಮೇಯ ತಪ್ಪುತ್ತದೆ.ಕಡಬ ತಾಲೂಕಿನಲ್ಲಿ ಹೋಬಳಿ ರಚನೆಗಾಗಿ ಈಗಾಗಲೇ ಪ್ರಸ್ತಾವನೆಗಳು ಸಲ್ಲಿಕೆಯಾಗಿರುವ ಮಾಹಿತಿ ಲಭಿಸಿದೆ.


ತಾ.ಪಂ.ನ ಎಲ್ಲಾ ಹುದ್ದೆಗಳು ಪ್ರಭಾರವೆ! :
ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕ ನಿರ್ದೇಶಕ ಸಹಿತ ಎಲ್ಲ ಹುದ್ದೆಗಳು ಪ್ರಭಾರವೇ ಆಗಿದೆ.ಒಂದು ಹುದ್ದೆಗೂ ಪೂರ್ಣಕಾಲಿಕ ಅಧಿಕಾರಿ ನೇಮಕವಾಗಿಲ್ಲ.ಪುತ್ತೂರು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಯವರೇ ಇಲ್ಲಿ ಈಗಲೂ ಪ್ರಭಾರ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಜೊತೆಗೆ ತಾಲೂಕು ಆರೋಗ್ಯಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿಯವರೂ ಪುತ್ತೂರಿನವರೇ ಪ್ರಭಾರ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇಲಾಖೆಗಳ ಕಾರ್ಯಾರಂಭಕ್ಕೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇನೆ-ಭಾಗೀರಥಿ ಮುರುಳ್ಯ
ನಾನು ಈ ಬಗ್ಗೆ ಈಗಾಗಲೇ ಅಧಿಕಾರಿಗಳ ಬಳಿ ಚರ್ಚೆ ನಡೆಸಿದ್ದೇನೆ.ಎಲ್ಲಾ ಇಲಾಖೆಗಳ ಕಾರ್ಯಾರಂಭಕ್ಕೆ ಜಮೀನು ಕಾದಿರಿಸುವ ಬಗ್ಗೆ ಕೆಲಸ ಕಾರ್ಯಗಳು ನಡೆಯುತ್ತಿರುವುದರಿಂದ ಶೀಘ್ರದಲ್ಲಿ ಇಲಾಖೆಗಳ ಪ್ರಾರಂಭಕ್ಕೆ ಕ್ರಮ ಕೈಗೊಳ್ಳುತ್ತೇನೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರತಿಕ್ರಿಯಿಸಿದ್ದಾರೆ.

ಹೊಸ ತಾಲೂಕು ಕೇಂದ್ರಗಳನ್ನು ನಿರ್ಮಾಣ ಮಾಡಿರುವುದೇ ಜನರ ಅನುಕೂಲಕ್ಕಾಗಿ.ತಾಲೂಕು ಆದ ಕೂಡಲೇ ಎಲ್ಲವೂ ಒಂದೇ ವರ್ಷದಲ್ಲಿ ಆಗಬೇಕೆಂದು ನಿರೀಕ್ಷಿಸುವುದೂ ಸರಿಯಲ್ಲ.ಆದರೆ ತಾಲೂಕು ರಚನೆಯಾಗಿ ನಾಲ್ಕೈದು ವರ್ಷಗಳು ಕಳೆದರೂ ಇಲಾಖೆಗಳ ಹುದ್ದೆ ಸೃಷ್ಟಿಯಾಗದಿರುವುದು, ಪ್ರಮುಖ ಇಲಾಖೆಗಳೇ ಕಾರ್ಯನಿರ್ವಹಿಸದಿರುವುದರಿಂದ ಜನರು ತಮ್ಮ ಇಲಾಖಾ ಕೆಲಸ ಕಾರ್ಯಗಳಿಗಾಗಿ ಎರಡು ಮೂರು ತಾಲೂಕಿಗೆ ಅಲೆದಾಟ ಮಾಡಬೇಕಾದ ಪರಿಸ್ಥಿತಿಗಳು ನಿರ್ಮಾಣವಾಗುವುದರಿಂದ ತೊಂದರೆಯಾಗಿದೆ.ಜನಪ್ರತಿನಿಧಿಗಳ ನಿರ್ಲಕ್ಷವೋ ಅಥವಾ ಅಧಿಕಾರಿಗಳ ನಿರುತ್ಸಾಹ ಇದಕ್ಕೆ ಕಾರಣವೋ ಗೊತ್ತಿಲ್ಲ.ಒಟ್ಟಾರೆ ಇವರ ಇಚ್ಚಾಶಕ್ತಿಯ ಕೊರತೆಯಿಂದ ಜನರಿಗೆ ಅಲೆದಾಟ ಮಾತ್ರ ತಪ್ಪಿಲ್ಲ,ಇನ್ನಾದರೂ ಇಲಾಖೆಗಳನ್ನು ಪ್ರಾರಂಭಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕೆನ್ನುವುದು ಕಡಬ ತಾಲೂಕಿನ ಜನತೆಯ ಬೇಡಿಕೆಯಾಗಿದೆ.

ಇಲಾಖೆಗಳ ಕಾರ್ಯಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ನೀಡಲಾಗಿದೆ-ಪಿ.ಪಿ.ವರ್ಗೀಸ್
ಈಗಾಗಲೇ ರಾಜ್ಯ ಸರಕಾರ ಅಸ್ತಿತ್ವಕ್ಕೆ ಬಂದು ಎರಡು ತಿಂಗಳು ಆಗಿದೆ.ಕಡಬ ತಾಲೂಕು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ನಾವು ಪ್ರಯತ್ನ ಮಾಡುತ್ತಲೇ ಇದ್ದೇವೆ,ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಈ ಕುರಿತು ಮನವಿ ನೀಡಲಾಗಿದೆ,ಹಂತ ಹಂತವಾಗಿ ಇಲಾಖೆಗಳ ಕಾರ್ಯಾರಂಭಕ್ಕೆ ಕ್ರಮ ಕೈಗೊಳ್ಳುತ್ತೇನೆಂದು ಅವರು ಭರವಸೆ ನೀಡಿದ್ದಾರೆ.ಪೂರ್ಣ ಪ್ರಮಾಣದ ಇಲಾಖೆಗಳು ಆಗಬೇಕಾದರೆ ಹಣಕಾಸಿನ ವ್ಯವಸ್ಥೆಯೂ ಆಗಬೇಕು, ಈ ನಿಟ್ಟಿನಲ್ಲಿ ನಾವು ಖಂಡಿತಾ ಪ್ರಯತ್ನ ಮಾಡುತ್ತೇನೆ ಎಂದು ಜಿ.ಪಂ.ಮಾಜಿ ಸದಸ್ಯ,ಕಾಂಗ್ರೆಸ್ ಮುಖಂಡ ಪಿ.ಪಿ.ವರ್ಗೀಸ್ ಅವರು ಹೇಳಿದ್ದಾರೆ.

ಪಿ.ಪಿ.ವರ್ಗೀಸ್

ಕಟ್ಟಡ ಕೊರತೆ ನಿವಾರಣೆ ಆಗಿದೆ, ಇಲಾಖೆಗಳನ್ನು ತಕ್ಷಣ ಪ್ರಾರಂಭಿಸಿ-ಕೃಷ್ಣ ಶೆಟ್ಟಿ
ಈ ಹಿಂದೆ ಇಲಾಖೆಗಳು ಕಾರ್ಯನಿರ್ವಹಿಸಲು ಕಟ್ಟಡದ ಕೊರತೆ ಎದುರಾಗಿತ್ತು, ಆದರೆ ಹಿಂದಿನ ಸರಕಾರದ ಅವಧಿಯಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗಿದೆ,ಇದೀಗ ಆಡಳಿತದಲ್ಲಿರುವ ಸರಕಾರ ಇಲಾಖೆಗಳನ್ನು ಕೂಡಲೇ ಪ್ರಾರಂಭಿಸಬೇಕು.ಈ ಬಗ್ಗೆ ಹಿಂದೆ ಸಚಿವರ ಮೂಲಕ ಮನವಿ ಮಾಡಿದ್ದೆವು, ಮುಂದೆ ನಮ್ಮ ಶಾಸಕರ ಮೂಲಕ ಸರಕಾರಕ್ಕೆ ಮನವಿ ಮಾಡುತ್ತೇವೆ, ಈಗಾಗಲೇ ಮಿನಿ ವಿಧಾನಸೌಧದಲ್ಲಿ ಸಬ್ ರಿಜಿಸ್ಟ್ರಾರ್ ಕಛೇರಿ, ಉಪಖಜಾನೆಗಳಿಗೆ ಸ್ಥಳಾವಕಾಶ ನೀಡಿದ್ದು ಕೂಡಲೇ ಅವರು ಅಲ್ಲಿ ಕಾರ್ಯನಿರ್ವಹಿಸಬೇಕು, ಅಲ್ಲದೆ ಕೋರ್ಟ್‌ಗೆ ೩ ಎಕರೆ ಜಮೀನು ಕಾದಿರಿಸಲಾಗಿದೆ ಶೀಘ್ರ ಕಟ್ಟಡ ನಿರ್ಮಾಣದ ಕೆಲಸಗಳನ್ನು ಪ್ರಾರಂಭಿಸಬೇಕು ಎಂದು ಜಿ.ಪಂ.ಮಾಜಿ ಸದಸ್ಯ,ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ ಆಗ್ರಹಿಸಿದ್ದಾರೆ.

ಕೃಷ್ಣ ಶೆಟ್ಟಿ

ಮೂರು ತಿಂಗಳು ಸಮಯಾವಕಾಶ ನೀಡಿದ್ದೇವೆ, ತಪ್ಪಿದ್ದಲ್ಲಿ ಧರಣಿ ಸತ್ಯಾಗ್ರಹ-ಸೈಯದ್ ಮೀರಾ ಸಾಹೇಬ್
ನಾನು ಕೆಲವು ದಿನಗಳ ಹಿಂದೆ ಈ ಬಗ್ಗೆ ಮನವಿ ನೀಡಿದ್ದೇನೆ, ಅವರಿಗೆ ಮೂರು ತಿಂಗಳ ಕಾಲಾವಕಾಶ ಕೂಡ ನೀಡಿದ್ದೇನೆ,ಆ ಬಳಿಕವೂ ಮಾಡದಿದ್ದರೆ ಧರಣಿ ಸತ್ಯಾಗ್ರಹ ಮಾಡುತ್ತೇನೆ, ಉಗ್ರ ಹೋರಾಟ ಮಾಡುತ್ತೇನೆ ಎಂದು ಮಾಜಿ ಜಿಲ್ಲಾ ಪರಿಷತ್ ಸದಸ್ಯ ಸಯ್ಯದ್ ಮೀರಾ ಸಾಹೇಬ್ ಹೇಳಿದ್ದಾರೆ.ಪಿಡಬ್ಲ್ಯೂಡಿ ಇಲಾಖೆಗೆ 80 ಸೆಂಟ್ಸ್ ಜಾಗ ಈ ಹಿಂದೆಯೇ ನೀಡಲಾಗಿದ್ದು ಇಂದು ಸಣ್ಣ ಕಟ್ಟಡವೂ ಇದೆ, ಆದರೆ ಇದುವರೆಗೆ ಆ ಅಧಿಕಾರಿಗಳು ಅಲ್ಲಿಗೆ ಸೋಂಕಿಲ್ಲ, ಕಡಬ ತಾಲೂಕು ಸರ್ವೆ ಇಲಾಖೆಯಲ್ಲಿ 7 ಜನ ಸರ್ವೇಯರ್ ಬೇಕಿದ್ದು ಅದು ಇಲ್ಲ, ತಾಲೂಕು ಸರ್ವೇಯರ್ 15 ದಿನಕ್ಕೊಮ್ಮೆ ಬಂದು ಫೈಲ್ ಹಿಡ್ಕೊಂಡು ಪುತ್ತೂರಿಗೆ ಹೋಗ್ತಾರೆ, 42 ಗ್ರಾಮದ 64 ಶಾಲೆಗಳ ಕೆಲಸ ಕಾರ್ಯಗಳು ಪುತ್ತೂರು ಬಿ.ಇ.ಒ.ಆಫೀಸ್‌ನಲ್ಲಿಯೇ ಆಗಬೇಕು, ಅಷ್ಟು ದೊಡ್ಡ ತಾ.ಪಂ. ಕಟ್ಟಡ ಕಟ್ಟಿ ಅಲ್ಲಿ ಅವರಿಗೆ ಕಾರ್ಯನಿರ್ವಹಿಸಬಹುದು.ಕಡಬ ಸಮುದಾಯ ಆಸ್ಪತ್ರೆಯ ಸ್ಥಿತಿ ಹೇಳಲು ಸಾಧ್ಯವಿಲ್ಲ,ಡಯಾಲಿಸಿಸ್ ವಿಭಾಗ ಮಾಡುತ್ತೇವೆ ಎಂದವರ ಸುದ್ದಿಯೇ ಇಲ್ಲ,ಈ ಭಾಗದ ಸುಮಾರು 170 ರೋಗಿಗಳು ಪುತ್ತೂರು, ಮಂಗಳೂರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಜಾಗ ಇದ್ದರೂ ಪದವಿ ಕಾಲೇಜು ಸ್ಥಾಪನೆಯಾಗಿಲ್ಲ, ಕಡಬಕ್ಕೆ ಬರುವ ಬಸ್ಸುಗಳು ರಸ್ತೆಯಲ್ಲೇ ತಂಗುವ ಪರಿಸ್ಥಿತಿ ಇದೆಯಾದರೂ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳಿಗೆ ಕಾಣುತ್ತಿಲ್ಲ, ಅವರಿಗೆ ಜಾಗ ಕೊಟ್ಟರೂ ಅಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲು ಮುಂದೆ ಬರುತ್ತಿಲ್ಲ, ಈ ರೀತಿಯಾದರೆ ಹೇಗೆ ಪೂರ್ಣ ಪ್ರಮಾಣದ ತಾಲೂಕು ಆಗುವುದು, ಮುಂದೆ ಹೋರಾಟ ಅನಿವಾರ್ಯ ಎಂದು, ಪೂರ್ಣಪ್ರಮಾಣದಲ್ಲಿ ತಾಲೂಕು ಕಾರ್ಯನಿರ್ವಹಿಸಬೇಕೆಂದು ಈಗಾಗಲೇ ಹೋರಾಟಕ್ಕೆ ಇಳಿದಿರುವ ಸಯ್ಯದ್ ಮೀರಾ ಸಾಹೇಬ್ ಹೇಳಿದ್ದಾರೆ.

ಸೈಯದ್ ಮೀರಾ ಸಾಹೇಬ್

LEAVE A REPLY

Please enter your comment!
Please enter your name here