ನೀರಿನಲ್ಲಿ ತೇಲುವ ಪಡಿತರ ಅಕ್ಕಿ – ಪ್ಲಾಸ್ಟಿಕ್ ಅಕ್ಕಿ ಬೆರೆಸಿದ್ದಾರೆಂಬ ಆತಂಕ !

0

ಪುತ್ತೂರು: ಪಡಿತರ ಧಾನ್ಯ ವಿತರಣೆ ವ್ಯವಸ್ಥೆಯ ಅಡಿಯಲ್ಲಿ ನೀಡುವ ಅಕ್ಕಿಯಲ್ಲಿ ಕೆಲವೊಂದಷ್ಟು ಅಕ್ಕಿಗಳು ನೀರಿನಲ್ಲಿ ತೇಲುತ್ತಿರುವುದು ಬೆಳಕಿಗೆ ಬಂದಿದ್ದು, ಪಡಿತರದಲ್ಲಿ ಪ್ಲಾಸ್ಟಿಕ್ ಅಕ್ಕಿ ಬೆರೆಸಲಾಗಿದೆ ಎಂದು ಫಲಾನುಭವಿಗಳು ಆತಂಕಕ್ಕೆ ಒಳಗಾಗುತ್ತಿರುವ ಸನ್ನಿವೇಶ ಸೃಷ್ಟಿಯಾಗಿದೆ.


ಬನ್ನೂರಿನ ಮೊಹಮ್ಮದ್ ಅಶ್ರಫ್ ಎಂಬವರು ಪಡಿತರ ಅಂಗಡಿಯಿಂದ ಪಡೆದ ಅಕ್ಕಿಯನ್ನು ನೀರಿನಲ್ಲಿ ಹಾಕಿದಾಗ ಅದು ತೇಲುತ್ತಿದ್ದು, ನೀರಿನಲ್ಲಿ ಮುಳುಗಬೇಕಾದ ಅಕ್ಕಿ ತೇಲುವುದು ಕಂಡು ಅವರು ಆತಂಕಕ್ಕೆ ಒಳಗಾಗಿದ್ದಾರೆ. ಆ ಅಕ್ಕಿಯನ್ನು ಕತ್ತರಿಸಲು ಆಗುತ್ತಿಲ್ಲ. ತುಂಬಾ ಹೊಳಪಿನಿಂದ ಕೂಡಿದ ಅಕ್ಕಿ ಪ್ಲಾಸ್ಟಿಕ್ ಅಕ್ಕಿ ಆಗಿರಬಹುದೇ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಚೀನಾದಲ್ಲಿ ಪ್ಲಾಸ್ಟಿಕ್ ಅಕ್ಕಿ ಕುರಿತ ವರದಿಗಳು ಬರುತ್ತಿದ್ದವು. ಹಾಗಾಗಿ ಇಲ್ಲೂ ಪ್ಲಾಸ್ಟಿಕ್ ಅಕ್ಕಿ ಬೆರೆಸಿರಬಹುದೇ ಎಂದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ.

ಸಾರವರ್ಧಿತ ಅಕ್ಕಿಯಾಗಿರಬಹುದು:
ಜನಸಾಮಾನ್ಯರಲ್ಲಿನ ಅಪೌಷ್ಟಿಕತೆ ಹೋಗಲಾಡಿಸಿ ಆರೋಗ್ಯ ವೃದ್ಧಿಸುವ ಉದ್ದೇಶದಿಂದ ಸಾರ್ವಜನಿಕ ವಿತರಣಾ ಪದ್ಧತಿಯ ಅನ್ನಭಾಗ್ಯ ಯೋಜನೆಯಡಿ ವಿತರಣೆ ಮಾಡಲಾಗುವ ಪ್ರತಿ 50 ಕೆಜಿ ಅಕ್ಕಿಯ ಚೀಲದಲ್ಲಿ ಅರ್ಧ ಕೆಜಿಯಷ್ಟು ಪೋಷಕಾಂಶ(ವಿಟಮಿನ್ ಎ ಮತ್ತು ಡಿ. ಐರನ್, ಪೋಲಿಕ್ ಆಸಿಡ್, ಬಿಕಾಂಪ್ಲೆಕ್ಸ್, ಜಿಂಕ್ ಹಾಗೂ ಐಯೋಡಿನ್)ಭರಿತ ಸಾರವರ್ಧಿತ ಅಕ್ಕಿಯಲ್ಲಿ ಬೆರೆಸಿ ನ್ಯಾಯ ಬೆಲೆ ಅಂಗಡಿಯಲ್ಲಿ ವಿತರಣೆ ಮಾಡಲಾಗುತ್ತಿದೆ. ಸಾರವರ್ಧಿತಗೊಳಿಸಿರುವ (ಪೋರ್ಟಿಫೈಡ್) ಅಕ್ಕಿಯಲ್ಲಿ ಕೆಲವೊಂದು ಅಕ್ಕಿಯ ಕಾಳುಗಳು ಹೊಳಪಿನಿಂದ ನೋಡಲು ಪ್ಲಾಸ್ಟಿಕ್ ರೀತಿಯಲ್ಲಿ ಕಾಣಿಸುತ್ತಿದೆ ಎಂದು ಕೆಲವೊಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಪ್ಲಾಸ್ಟಿಕ್ ಅಕ್ಕಿ ಆಮದು ಅಸಾಧ್ಯ:
ಪ್ಲಾಸ್ಟಿಕ್ ಅಕ್ಕಿಯನ್ನು ಭಾರತಕ್ಕೆ ಆಮದು ಮಾಡಿಕೊಳ್ಳುವುದು ಅಸಂಭವವಾಗಿದೆ ಏಕೆಂದರೆ ಇದು ಸಾಮಾನ್ಯ ಭತ್ತಕ್ಕಿಂತ ಹೆಚ್ಚು ವೆಚ್ಚದಾಯಕವಾಗುತ್ತದೆ. ಎರಡನೆಯದಾಗಿ ಭಾರತವು ಸಾಕಷ್ಟು ಭತ್ತವನ್ನು ಉತ್ಪಾದಿಸುತ್ತದೆ ಮತ್ತು ಚೀನಾದಿಂದ ಅಕ್ಕಿಯನ್ನು ಆಮದು ಮಾಡಿಕೊಳ್ಳುವ ಅಗತ್ಯವಿಲ್ಲ. ಸುಮಾರು ಏಳು ವರ್ಷಗಳ ಹಿಂದೆ ಚೀನಾದಲ್ಲಿ ಪ್ಲಾಸ್ಟಿಕ್ ಅಕ್ಕಿಯ ಪರಿಕಲ್ಪನೆಯು ಮೊದಲು ಕಾಣಿಸಿಕೊಂಡಿತು. ಅದನ್ನು ವುಚಾಂಗ್ ಅಕ್ಕಿ ಹಗರಣ ಎಂದು ಜನಪ್ರಿಯವಾಗಿ ಕರೆಯಲಾಗುತ್ತಿತ್ತು. ಇದನ್ನು ಸಿಹಿ ಆಲೂಗಡ್ಡೆ ಮತ್ತು ಕೃತಕ ರಾಳದಿಂದ ನಿಜವಾದ ಅಕ್ಕಿಯ ಆಕಾರಕ್ಕೆ ಅಚ್ಚು ಮಾಡಲಾಗಿದೆ ಎಂದು ಹೇಳಲಾಗಿದೆ. 2016 ರಲ್ಲಿ ನೈಜೀರಿಯಾದ ಅಧಿಕಾರಿಗಳು ಸುಮಾರು 2.5 ಟನ್ ಪ್ಲಾಸ್ಟಿಕ್ ಅಕ್ಕಿಯನ್ನು ವಶಪಡಿಸಿಕೊಂಡಿದ್ದರು.

LEAVE A REPLY

Please enter your comment!
Please enter your name here