ದೋಳ್ಪಾಡಿ: ಮೋದಿ ಸ್ಕೀಮ್ ನವರು ಎಂದು ನಂಬಿಸಿ ಮನೆಯಿಂದ ಚಿನ್ನದ ಸರ ಕಳವು

0

ಕಾಣಿಯೂರು: ಬ್ಯಾಂಕಿನ ಕಡೆಯಿಂದ ಹಣ ಡಬಲ್ ಮಾಡುವ ಮೋದಿ ಸ್ಕೀಮ್ ನವರು ಎಂದು ಮನೆಗೆ ಬಂದು ಅಪರಿಚಿತನೊಬ್ಬ ಮನೆಗೆ ಬಂದು ಚಿನ್ನದ ಸರ ಎಗರಿಸಿ ಪರಾರಿಯಾದ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಾಣಿಯೂರು ಸಮೀಪದ ದೋಳ್ಪಾಡಿ ಗ್ರಾಮದ ಪುಳಿಮರಡ್ಕದ ಲಲಿತಾ ಎಂಬವರು ದೂರು ನೀಡಿದ್ದಾರೆ. ಮನೆಯಿಂದ ಕಾಣಿಯೂರಿನತ್ತ ಮುಂಜಾನೆ ರಸ್ತೆಯಲ್ಲಿ ನಡೆದುಕೊಂಡು ಹೋಗುವ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಬೈಕ್‌ ನಿಲ್ಲಿಸಿ ಪರಿಚಯದವನಂತೆ ಮಹಿಳೆಯನ್ನು ಮಾತನಾಡಿಸಿದ್ದಾನೆ . ಆತ ನಾವು “ಬಡವರಿಗೆ ಬ್ಯಾಂಕಿನ ಕಡೆಯಿಂದ ಹಣ ಡಬಲ್ ಮಾಡುವ ಮೋದಿ ಸ್ಕೀಮ್‌ನವರು ಮನೆಯಲ್ಲಿ ಮಾತನಾಡೋಣ ಬನ್ನಿ ಎಂದು ಹೇಳಿ ಜೊತೆಯಲ್ಲಿಯೇ ಬೈಕಿನಲ್ಲಿ ಕುಳ್ಳಿರಿಸಿಕೊಂಡು ಮಹಿಳೆಯ ಮನೆಗೆ ಕರೆದುಕೊಂಡು ಹೋಗಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


ಅಪರಿಚಿತನು ಮಹಿಳೆಯ ಬಳಿ 7000/-ಹಣ ಕೊಟ್ಟಲ್ಲಿ 1 ಲಕ್ಷ ಹಣ ನೀಡುವುದಾಗಿ ತಿಳಿಸಿದ್ದು ಹಣವಿಲ್ಲ ಎಂದು ಹೇಳಿದಾಗ ಆತ ಮತ್ತೊಂದು ಆಫರ್‌ ಇದೆ ನೀವು 1 ಪವನ್‌ ಚಿನ್ನ ಕೊಟ್ಟರೆ ನಿಮಗೆ ಬ್ಯಾಂಕಿನಿಂದ 4 ಪವನ್‌ ಚಿನ್ನ ಸಿಗುತ್ತದೆ.ಎಂದು ತಿಳಿಸಿದ್ದ.


ಅದರಂತೆ ಮಹಿಳೆ ತನ್ನಲ್ಲಿದ್ದ 6 ಗ್ರಾಂ ತೂಕದ ಚಿನ್ನದ ಸರವನ್ನು ಕೊಡಲು ತನ್ನ ಕೈಯಲ್ಲಿ ಹಿಡಿದುಕೊಂಡು ಬಂದು ಅಪರಿಚಿತನ ಜೊತೆ ಮಾತನಾಡುವಾಗ ಸ್ವಲ್ಪ ಟೀ ಮಾಡಿಕೊಡಿ ಎಂದು ಕೇಳಿದ್ದ ಎನ್ನಲಾಗಿದೆ. ಮಹಿಳೆ ಚಿನ್ನದ ಸರವನ್ನು ಟೇಬಲ್‌ ಮೇಲೆ ಇರಿಸಿ ಅಡುಗೆ ಕೋಣೆಗೆ ಟೀ ಮಾಡಲು ಹೋದಾಗ ಅಪರಿಚಿತ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ 67/2023 ಕಲಂ:454,380 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here