ಗ್ಯಾಸ್ ಪರಿಶೀಲಿಸಲು ರೂ.239 ತೆರಬೇಕಾಗುವುದು ಕಂಪೆನಿಯ ಕಾನೂನು ಬಾಹಿರ ಅವ್ಯವಹಾರ-ದೂರು

0

ಪುತ್ತೂರು: ಹಿಂದೂಸ್ತಾನ್ ಪೆಟ್ರೋಲಿಯಂ ಅವರ ಆದೇಶದಂತೆ ಮತ್ತು ಸುಧಾ ಜೋಷಿ ಕಮಿಟಿಯ ಶಿಫಾರಸ್ಸಿನಂತೆ ಪ್ರತಿಯೊಬ್ಬ ಗ್ಯಾಸ್ ಗ್ರಾಹಕನ ಮನೆಗೆ ಪೆಟ್ರೋಲಿಯಂ ಕಂಪನಿಯ ಗುರುತು ಚೀಟಿ ಹೊಂದಿರುವ ವ್ಯಕ್ತಿಗಳು ತೆರಳಿ ಗ್ರಾಹಕನ ಮನೆಯ ಗ್ಯಾಸ್‌ನ್ನು ಪರಿಶೀಲಿಸಲು ರೂ.239 ಮತ್ತು ರಬ್ಬರ್ ಗ್ಯಾಸ್ ಟ್ಯೂಬ್ ಬದಲಾಯಿಸಬೇಕಾದಲ್ಲಿ ರೂ.190ರಂತೆ ತೆರಬೇಕಾಗುವುದು ಕಾನೂನು ಬಾಹಿರ ಅವ್ಯವಹಾರವಾಗಿದೆ.ಹಿಂದೂಸ್ಥಾನ್ ಪೆಟ್ರೋಲಿಯಂನ ಯಾವ ಆದೇಶವೂ ಗ್ರಾಹಕನಿಗೆ ಬಾಧಿಸುವುದಿಲ್ಲ ಎಂದು ಆರ್.ಕೆ.ಪಾಂಗಣ್ಣಾಯ ಎಂಬವರು ಸರಕಾರದ ಪ್ರಧಾನ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು, ತಹಶೀಲ್ದಾರ್‌ಗೆ ದೂರು ನೀಡಿದ್ದಾರೆ.


ಗ್ರಾಹಕನಿಗೆ ಬೈಂಡಿಂಗ್ ಆಗಬೇಕಾದಲ್ಲಿ ಸರಕಾರವು ಬಹುಮತದಿಂದ ನಿರ್ಣಯಿಸಿ ರಾಷ್ಟ್ರಪತಿಯ ಅಂಕಿತಗೊಂಡು ಗಜೆಟ್ ಪಬ್ಲಿಕೇಷನ್ ಆದ ನಂತರವೇ ನಮಗೆ ಹಾಗೂ ನಿಮಗೆಲ್ಲರಿಗೂ ಬಾಧ್ಯವಾಗಿರುತ್ತದೆ.ಆದರೆ ರೂ.236ರಂತೆ ಪುತ್ತೂರು ತಾಲೂಕಿನ 10,೦೦೦ ಗ್ರಾಹಕರು ತೆತ್ತಲ್ಲಿ ರೂ.94,40,೦೦೦ ಅವ್ಯವಹಾರ, ಅದೇ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 2 ಲಕ್ಷ ಗ್ರಾಹಕರಿಂದ ರೂ. 4೦,2೦,೦೦,೦೦೦ ವಸೂಲಿ ಮಾಡಿದ್ದಲ್ಲಿ 5೦ ಸಾವಿರ ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಹಣವನ್ನು ಕಂಪೆನಿಯು ಗ್ರಾಹಕರಿಂದ ವಸೂಲಿ ಮಾಡಿದಂತಾಗುತ್ತದೆ.ಇದೇ ರೀತಿ 2015ರಲ್ಲೂ ಗ್ಯಾಸ್ ಏಜೆನ್ಸಿಯವರು ಇದೇ ರೀತಿ ವಸೂಲಿಗೆ ಪ್ರಾರಂಭಿಸಿದಾಗ ಜಿಲ್ಲಾಧಿಕಾರಿ ಮತ್ತು ಸಹಾಯಕ ಆಯುಕ್ತರಿಗೆ ಮನವಿ ಮಾಡಿ ಅವ್ಯವಹಾರವನ್ನು ಸ್ಥಗಿತಗೊಳಿಸಲಾಗುತ್ತಿತ್ತು.ಅದಕ್ಕೆ ಸರಿಯಾದ ಕಾರಣವನ್ನು ಕೂಡಾ ನೀಡಲಾಗಿತ್ತು. ಆನಂತರ 2022ರ ಡಿ. 18ರಂದು ಮತ್ತೆ ಈ ಅವ್ಯವಹಾರ ಮುಂದುವರಿಸುವ ಬಗ್ಗೆ ಪ್ರತಿಕೆಯಲ್ಲಿ ಪ್ರಕಟಣೆ ನೀಡಲಾಗಿದೆ.

ಸದ್ರಿ ಪ್ರಕಟಣೆಯ ಅನ್ವಯ ಸದ್ರಿ ಅವ್ಯವಹಾರವನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ತಿಳುವಳಿಕೆ ನೋಟೀಸು ನೀಡಲಾಗಿತ್ತು.ಆದರೆ ಅಧಿಕಾರಿಗಳು ಈವರೆಗೆ ಯಾವುದೇ ಕ್ರಮಕೈಗೊಂಡಿರುವುದಿಲ್ಲ.ಬದಲಾಗಿ ಇದೀಗ ಮತ್ತೆ ಅವ್ಯವಹಾರವನ್ನು ಮುಂದುವರಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.ಆದರೆ ಅನಿಲ ಜಾಡಿಯನ್ನು ಮನೆಗಳಿಗೆ ಸರಬರಾಜು ಮಾಡುವವರೇ ಪ್ರತೀ ಬಾರಿ ಗ್ಯಾಸ್ ರಿಫಿಲ್ ನೀಡುವ ಸಮಯ ಪರೀಕ್ಷಿಸಿ ಕುಂದುಕೊರತೆಗಳನ್ನು ನಿವಾರಿಸಿ ಕೊಡಬೇಕೆಂದು ಕಾನೂನು ಹೇಳುತ್ತದೆ.ಇವರುಗಳು ಮನೆಗಳ ವಠಾರವನ್ನು ಪ್ರವೇಶಿಸುವ ಸಮಯ ಮನೆಯಲ್ಲಿ ಗಂಡಸರು ಇಲ್ಲದಿರುವುದರಿಂದ ಮನೆಯಲ್ಲಿದ್ದ ಹೆಂಗಸರನ್ನು ಬೆದರಿಸುವುದು ಸುಲಭವೆಂದು ಕೆಲಸ ಪ್ರಾರಂಭಿಸಿದ್ದಾರೆ.ಇವರು ಮನೆಯೊಳಗೆ ಬಂದರೆ ಮನೆಯ ಕೋಣೆ ಸಹಿತ ಎಲ್ಲಾ ಮನೆಗುಟ್ಟು ಇವರಿಗೆ ಗೊತ್ತಾಗುತ್ತದೆ.ಪುತ್ತೂರಿನಲ್ಲಿ ಹಲವಾರು ಕಳ್ಳತನದ ಪ್ರಕರಣಗಳು ದಾಖಲಾಗುತ್ತಿದ್ದು, ಮನೆಗಳ ಪೂರ್ಣ ವಿವರಗಳು ಮನೆ ಮನೆಗಳಿಗೆ ಹೋಗಿ ಸುಲಿಗೆ ಮಾಡುವ ಇಂಥವರುಗಳಿಗೆ ಮಾತ್ರ ತಿಳಿದಿರುತ್ತದೆ.ಮನೆಗಳ ಮಾಲಿಕರ ಒಪ್ಪಿಗೆ ಇಲ್ಲದೇ ಮನೆ ಆವರಣ ಪ್ರವೇಶಿಸುವುದು ಭಾರತೀಯ ದಂಡ ಸಂಹಿತೆಯ ಪ್ರಕಾರ ಕ್ರಿಮಿನಲ್ ಅಪರಾಧವಾಗಿರುತ್ತದೆ.ನ್ಯಾಯಾಲಯದ ವಾರೆಂಟ್ ಹೊರತುಪಡಿಸಿ ಬಲತ್ಕಾರದಿಂದ ಮನೆಯೊಳಗೆ ಪ್ರವೇಶಿಸುವುದು ಅಪರಾಧವಾಗಿರುತ್ತದೆ ಮತ್ತು ಇದು ಮಾನವ ಹಕ್ಕು ಉಲ್ಲಂಘನೆಯಾಗಿದೆ.ಈ ಕುರಿತು, ಇಂತಹ ಕಂಪನಿಯ ಕಾನೂನು ಬಾಹಿರ ಅವ್ಯವಹಾರಗಳನ್ನು ತಡೆದು ಕರ್ನಾಟಕದ ಜನತೆಯ ಮೇಲಾಗುವ ಮಾನವ ಹಕ್ಕು ಉಲ್ಲಂಘನೆಯನ್ನು ತಡೆದು ಜನತೆಗೆ ನ್ಯಾಯ ಒದಗಿಸಿಕೊಡುವಂತೆ ಅವರು ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here