ಪುತ್ತೂರು: ಗ್ರಾಮೀಣ ಭಾರತದ ಚೈತನ್ಯವನ್ನು ಪುನರುಜ್ಜೀವನಗೊಳಿಸಿ, ಸಮುದಾಯ, ಸಂಪ್ರದಾಯ ಮತ್ತು ಆರೋಗ್ಯಕರ ಸ್ಪರ್ಧೆಯ ಪ್ರಜ್ಞೆಯನ್ನು ಬೆಳೆಸುವ ಉದ್ದೇಶದಿಂದ ಈಶ ಫೌಂಡೇಷನ್ ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಆ.12 ರಿಂದ ಸೆ.23 ರವರೆಗೆ ಗ್ರಾಮೋತ್ಸವವನ್ನು ಕೈಗೊಂಡಿದೆ. ಇದಕ್ಕಾಗಿ 3200ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕ್ಲಸ್ಟರ್ ಮಟ್ಟದ ಪಂದ್ಯಾವಳಿಗಳು ನಡೆಯಲಿದ್ದು, ಆ.12 ಮತ್ತು 13ರಂದು ಪುತ್ತೂರು ವಿವೇಕಾನಂದ ಕಾಲೇಜಿನ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪಂದ್ಯಗಳು ನಡೆಯಲಿದೆ ಎಂದು ಈಶ ಫೌಂಡೇಶನ್‌ನ ಸ್ವಯಂ ಸೇವಕ ಅರವಿಂದ್ ಸಿ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಶಿವಮೊಗ್ಗ ಸೇರಿದಂತೆ ರಾಜ್ಯದ 13 ಜಿಲ್ಲೆಗಳ 3200 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲು ಈಗಾಗಲೇ ಸಿದ್ಧತೆ ಕೈಗೊಂಡಿದ್ದು ಇದರಡಿ ಕ್ಲಸ್ಟರ್ ಮಟ್ಟದ ಕ್ರೀಡಾ ಪಂದ್ಯಾವಳಿಗಳು ಆ.12 ರಿಂದ ಪ್ರಾರಂಭವಾಗಲಿದ್ದು ಸೆ.3 ರಂದು ಗೆದ್ದ ತಂಡಗಳು ವಿಭಾಗ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಇದರ ಮಾದರಿಯಲ್ಲಿ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಪಾಂಡಿಚೇರಿಯಲ್ಲೂ ಸ್ಪರ್ಧೆಗಳು ನಡೆಯಲಿದ್ದು ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿರುವ 112 ಅಡಿ ಎತ್ತರದ ಆದಿಯೋಗಿ ಎದುರು ಅಂತಿಮ ಪಂದ್ಯಾವಳಿಗಳು ನಡೆಯಲಿವೆ ಎಂದ ಅವರು ಗ್ರಾಮೀಣ ಭಾರತದ ಚೈತನ್ಯವನ್ನು ಪುನರುಜ್ಜೀವನಗೊಳಿಸಿ, ಸಮುದಾಯ, ಸಂಪ್ರದಾಯ ಮತ್ತು ಆರೋಗ್ಯಕರ ಸ್ಪರ್ಧೆಯ ಪ್ರಜ್ಞೆಯನ್ನು ಬೆಳೆಸುವುದೇ ಕಾರ್ಯಕ್ರಮದ ಪ್ರಮುಖ ಉದ್ದೇಶ. ಇದರಲ್ಲಿ ಕ್ರೀಡಾ ವೃತ್ತಿಪರರನ್ನು ಹೊರತುಪಡಿಸಿದಂತೆ ಯಾರೂ ಬೇಕಾದರೂ ಭಾಗವಹಿಸಬಹುದು. ಪ್ರತಿನಿತ್ಯ ಕ್ರೀಡೆಗಳನ್ನು ಆಡಲು ಅವಕಾಶ ಇಲ್ಲದಿರುವರಿಗೆ ಆದ್ಯತೆ ನೀಡಲಾಗುತ್ತದೆ. ಇನ್ನು ತಂಡದಲ್ಲಿ ಒಂದೇ ಗ್ರಾಮದವರು ಮಾತ್ರ ಇರುವುದು ವಿಶೇಷವಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪಂದ್ಯಾವಳಿಗಳು
ಮೊದಲನೇ ಹಂತದ (ಕ್ಲಸ್ಟರ್) ಪಂದ್ಯಾವಳಿಗಳು ಆ.12 ಹಾಗೂ ಆ.13 ರಂದು ಚಿಕ್ಕಬಳ್ಳಾಪುರ, ವಿಜಯಪುರ, ಕೋಲಾರ , ವಿಜಯನಗರ, ಶಿವಮೊಗ್ಗ, ಮೈಸೂರು,ದಕ್ಷಿಣ ಕನ್ನಡ, ಉಡುಪಿ, ಆ.19 ಹಾಗೂ ಆ.20 ರಂದು ಬೆಂಗಳೂರು ಗ್ರಾಮಾಂತರ, ತುಮಕೂರು, ಕೊಡಗು, ಚಾಮರಾಜನಗರ, ಆ.26 ಹಾಗೂ ಆ.27 ರಂದು ಚಿಕ್ಕಮಗಳೂರು, ಎರಡನೇ ಹಂತದ ಪಂದ್ಯಾವಳಿಗಳು ಸೆ.3 ರಂದು ಚಿಕ್ಕಬಳ್ಳಾಪುರ ಹಾಗೂ ಮೈಸೂರು ಜಿಲ್ಲೆ, ಸೆ.23 ರಂದು ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ಅಂತಿಮ ಪಂದ್ಯಾವಳಿಗಳು ನಡೆಯಲಿವೆ ಎಂದು ಅರವಿಂದ್ ಸಿ ಕುಮಾರ್ ಹೇಳಿದರು.
ಗ್ರಾಮೋತ್ಸವ ಹಿನ್ನೆಲೆ
2004 ರಲ್ಲಿ ಸದ್ಗುರುಗಳಿಂದ ಪ್ರಾರಂಭವಾದ ಗ್ರಾಮೋತ್ಸವದಡಿ ಈ ವರ್ಷ ಪುರುಷರಿಗಾಗಿ ವಾಲೀಬಾಲ್, ಮಹಿಳೆಯರಿಗಾಗಿ ಥ್ರೋಬಾಲ್ ಮತ್ತು ತಮಿಳುನಾಡಿನ ಗ್ರಾಮೀಣ ಆಟಗಳು, ಕಬಡ್ಡಿ ಸ್ಪರ್ಧೆಯನ್ನು ಕೈಗೊಂಡಿದ್ದು ಇದರಲ್ಲಿ 65 ಸಾವಿರಕ್ಕೂ ಹೆಚ್ಚು ಆಟಗಾರರು ಭಾಗವಹಿಸುವ ನಿರೀಕ್ಷೆ ಇದೆ. 56 ಲಕ್ಷ ರೂ ಮೌಲ್ಯದ ಬಹುಮಾನಗಳನ್ನು ನೀಡಲಾಗುತ್ತದೆ. ವಾಲೀಬಾಲ್ ಪಂದ್ಯಾವಳಿಯಲ್ಲಿ ವಿಜೇತರಿಗೆ 5 ಲಕ್ಷ ರೂ, ಕಬ್ಬಡಿ ಮತ್ತು ಥ್ರೋಬಾಲ್‌ನಲ್ಲಿ ಗೆದ್ದ ತಂಡಗಳಿಗೆ ತಲಾ 2 ಲಕ್ಷ ರೂಗಳನ್ನು ನೀಡಲಾಗುತ್ತದೆ ಎಂದು ಅರವಿಂದ್ ಸಿ ಕುಮಾರ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಈಶ ಫೌಂಡೇಶನ್‌ನ ಸ್ವಯಂ ಸೇವಕರಾದ ಸಿಂಧುಶ್ರೀ, ಸ್ವೀಕಾರ್, ಸೃಜನ್ ಉಪಸ್ಥಿತರಿದ್ದರು.