ನೆಕ್ಕಿಲಾಡಿ: ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ನೆಕ್ಕಿಲಾಡಿ ಇದರ ನೇತೃತ್ವದಲ್ಲಿ ಒಕ್ಕಲಿಗ ಗೌಡ ಗ್ರಾಮ ಸಮಿತಿ ನೆಕ್ಕಿಲಾಡಿ, ಯುವ ಘಟಕ ,ಮಹಿಳಾ ಘಟಕ ನೆಕ್ಕಿಲಾಡಿ ಇದರ ಸಹಕಾರದೊಂದಿಗೆ ಆಟಿ ಆಚರಣೆ -2023 ಕಾರ್ಯಕ್ರಮ,ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಗೌರವಾರ್ಪಣೆ,ಮಕ್ಕಳಿಗೆ, ಪುರುಷರಿಗೆ, ಮಹಿಳೆಯರಿಗೆ ಆಟೋಟ ಸ್ಪರ್ಧೆಯು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಕ್ಕಿಲಾಡಿಯಲ್ಲಿ ಆ 6 ರಂದು ನಡೆಯಿತು.
ಕಾರ್ಯಕ್ರಮವನ್ನು ಗ್ರಾಮದ ಊರು ಗೌಡರು ಗಿರಿಯಪ್ಪ ಗೌಡ ನೆಕ್ಕಿಲಾಡಿಗುತ್ತು ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಮಧ್ಯಾಹ್ನ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಅಧ್ಯಕ್ಷರಾದ ಡಿ ವಿ ಮನೋಹರ್ ಮಾತನಾಡಿ ಸಮುದಾಯವನ್ನು ಒಗ್ಗೂಡಿಸುವುದರ ಜೊತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡ ಆರ್ಥಿಕವಾಗಿ ಸದೃಢವಾಗಬೇಕು,ಸ್ವಾವಲಂಬಿ ಜೀವನ ನಡೆಸಬೇಕು ಎಂಬ ದ್ಯೇಯೋದ್ದೇಶದಿಂದ ಆರಂಭಗೊಂಡ ಸ್ವ ಸಹಾಯ ಟ್ರಸ್ಟ್ ಇದೀಗ 820 ಕ್ಕೂ ಮಿಕ್ಕಿ ಸ್ವ ಸಹಾಯ ಸಂಘಗಳನ್ನು ರಚಿಸಿಕೊಂಡು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು ಇನ್ನು ಹೆಚ್ಚಿನ ಪ್ರಗತಿಗೆ ಎಲ್ಲರ ಸಹಕಾರ ಅಗತ್ಯ,ಸಮುದಾಯದ ಒಗ್ಗಟ್ಟಿಗೆ ಇಂತಹ ಕಾರ್ಯಕ್ರಮ ಹಮ್ಮಿಕೊಂಡ ಒಕ್ಕೂಟದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ,ಕಾರ್ಯಕ್ರಮ ಹಮ್ಮಿಕೊಂಡ ನೆಕ್ಕಿಲಾಡಿ ಒಕ್ಕೂಟ ತಾಲೂಕಿನ ಎಲ್ಲಾ ಒಕ್ಕೂಟಗಳಿಗೆ ಮಾದರಿಯಾಗಿದೆ ಎಂದರು.
ಆಟಿ ಕಾರ್ಯಕ್ರಮದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಶಾಂತಿಯಡ್ಕ ಅಂಗನವಾಡಿ ಕಾರ್ಯಕರ್ತೆ ತುಳಸಿ ನಾರಾಯಣ ಗೌಡ ಆಟಿ ತಿಂಗಳ ತಿಂಡಿ ತಿನಿಸುಗಳು,ಆಹಾರ ಕ್ರಮಗಳು ತನ್ನದೇ ಆದ ವೈಶಿಷ್ಟ್ಯದ ಜೊತೆಗೆ ಔಷಧೀಯ ಗುಣಗಳನ್ನು ಹೊಂದಿದೆ.ಹಿರಿಯರ ಕಾಲದ ಕಷ್ಟದ ದಿನಗಳನ್ನು ನೆನಪಿಸುವುದರ ಜೊತೆಗೆ ಹಿರಿಯರು ಹಾಕಿ ಕೊಟ್ಟ ತುಳುನಾಡಿನ ಸಂಪ್ರದಾಯ ಸಂಸ್ಕೃತಿ, ಆಚಾರ ವಿಚಾರಗಳನ್ನು ಅರಿಯುವ ಜೊತೆಗೆ ಮುಂದಿನ ಯುವ ಪೀಳಿಗೆ ಇವುಗಳನ್ನು ಉಳಿಸುವಂತಾಗಬೇಕು ಎಂದರು.
ಕಾರ್ಯಕ್ರಮದ ಒಕ್ಕಲಿಗ ಸ್ವ ಸಂಘಗಳ ಉಪ್ಪಿನಂಗಡಿ ವಲಯದ ಅಧ್ಯಕ್ಷರು ಹಾಗೂ ನೆಕ್ಕಿಲಾಡಿ ಗ್ರಾಮ ಒಕ್ಕೂಟದ ಅಧ್ಯಕ್ಷರು ಆಗಿರುವ ಗಂಗಯ್ಯ ಗೌಡ ಕನ್ನಡಾರು ಮಾತನಾಡಿ ಗ್ರಾಮದ ಸಮುದಾಯ ಬಾಂಧವರನ್ನು ಒಟ್ಟುಗೂಡಿಸುವಲ್ಲಿ ಇಂಥಹ ಕಾರ್ಯಕ್ರಮ ಅಗತ್ಯವಾಗಿದ್ದು,ಯುವ ಪೀಳಿಗೆ ಸಂಘಟಿತ ಮನೋಭಾವನೆಯನ್ನು ಮೈಗೂಡಿಸಿಕೊಂಡು ನಾಯಕತ್ವ ಗುಣವನ್ನು ಬೆಳೆಸಿಕೊಂಡು ಸಮಾಜದಲ್ಲಿ ಉನ್ನತ ನಾಯಕರಾಗಿ ಮೂಡಿಬರಬೇಕು ಎಂದರು, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದ ಕುರಿತು ಅಂಬೆಲ ದೈವಸ್ಥಾನದ ಅಧ್ಯಕ್ಷರಾದ ಕುಶಾಲ ಗೌಡ ನೆಕ್ಕಿಲಾಡಿ ಗುತ್ತು, ನೆಕ್ಕಿಲಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ಗೌಡ ಕನ್ನಡಾರು, ಊರು ಗೌಡರು ಆನಂದ ಗೌಡ ಕೋಳಕ್ಕೆ ಮಾತನಾಡಿ ಶುಭ ಹಾರೈಸಿದರು, ವೇದಿಕೆಯಲ್ಲಿ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಸಲಹಾ ಸಮಿತಿ ಸದಸ್ಯ ವೆಂಕಪ್ಪ ಗೌಡ ,ಗ್ರಾಮ ಸಮಿತಿ ಅಧ್ಯಕ್ಷರಾದ ರಮೇಶ್ ಗೌಡ ಬೇರಿಕೆ, ಯುವ ಘಟಕದ ಅಧ್ಯಕ್ಷರಾದ ಶಶಿಧರ ಗೌಡ ನೆಕ್ಕಿಲಾಡಿ ಗುತ್ತು,ಮಹಿಳಾ ಘಟಕದ ಅಧ್ಯಕ್ಷರಾದ ಮೀನಾಕ್ಷಿ ಬೇರಿಕೆ, ಗ್ರಾಮ ಪಂಚಾಯತ್ ಸದಸ್ಯರಾದ ವೇದಾವತಿ ಲಕ್ಷ್ಮಣ ಗೌಡ ,ಗೀತಾ ವಾಸಪ್ಪ ಗೌಡ ಉಪಸ್ಥಿತರಿದ್ದರು.
ಸನ್ಮಾನ ಕಾರ್ಯಕ್ರಮ,ಬಹುಮಾನ ವಿತರಣೆ
ಭಾರತೀಯ ಸೇನೆಯಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಪ್ರಕಾಶ್ ಬೇರಿಕೆ ಇವರನ್ನು ಕಾರ್ಯಕ್ರಮದಲ್ಲಿ ಶಾಲು ಹಾಕಿ, ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು, ಹಾಗೂ 2022-2023 ನೇ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ನಲ್ಲಿ ಉತ್ತಮ ಸಾಧನೆಗೈದ ನಾರಾಯಣ ಗೌಡ ತುಳಸಿ ದಂಪತಿಗಳ ಪುತ್ರ ನಿಶಿತ್,ಪಿಯುಸಿ ನಲ್ಲಿ ಸಾಧನೆಗೈದ ಶಿನಪ್ಪ ಗೌಡ ಪುಷ್ಪ ಪೂವಾಜೆ ದಂಪತಿಗಳ ಪುತ್ರಿ ಕಾವ್ಯಶ್ರೀ, ಹಾಗೂ ಕ್ರೀಡಾ ಕ್ಷೇತ್ರದ ರಾಷ್ಟ್ರೀಯ ಥ್ರೋಬಾಲ್ ಪಂದ್ಯಾಟದಲ್ಲಿ ಸಾಧನೆಗೈದ ಕುಶಾಲಪ್ಪ ಗೌಡ ಕಲಾವತಿ ದಂಪತಿಗಳ ಪುತ್ರಿ ಕು|ಸೃಷ್ಟಿ ರಾಜ್ಯ ಮಟ್ಟದಲ್ಲಿ ಸಾಧನೆಗೈದ ವೆಂಕಟ್ರಮಣ ಗೌಡ ಶಶಿಕಲಾ ದಂಪತಿಗಳ ಪುತ್ರಿ ತ್ರಿಶಾ ಇವರುಗಳನ್ನು ಶಾಲು ಹಾಕಿ,ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಹಾಗೂ ಪುರುಷರಿಗೆ,ಮಹಿಳೆಯರಿಗೆ ,ಮಕ್ಕಳಿಗೆ ನಡೆದ ವಿವಿಧ ಅಟೋಟ ಸ್ಪರ್ಧೆಗಳ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
ಅತ್ಯುತ್ತಮ ಸ್ವ ಸಹಾಯ ಸಂಘ ಆಯ್ಕೆ
ನೆಕ್ಕಿಲಾಡಿ ಗ್ರಾಮ ಒಕ್ಕೂಟದ ಒಟ್ಟು ಸ್ವಸಹಾಯ ಸಂಘಗಳ ಪೈಕಿ ಅತ್ಯುತ್ತಮ ಸ್ವ ಸಹಾಯ ಸಂಘವಾಗಿ ಆಯ್ಕೆಗೊಂಡ ಯಶಸ್ವಿ ಒಕ್ಕಲಿಗ ಸ್ವ ಸಹಾಯ ಸಂಘದ ಸದಸ್ಯರಿಗೆ ಶಾಲು ಹಾಕಿ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಒಕ್ಕೂಟದ ವಾರ್ಷಿಕ ವರದಿಯನ್ನು ಒಕ್ಕೂಟದ ಕಾರ್ಯದರ್ಶಿ ಮೋಹನ್ ಗೌಡ ವಾಚಿಸಿದರು.ಯುವ ಘಟಕದ ಅಧ್ಯಕ್ಷರಾದ ಶಶಿಧರ್ ಗೌಡ ನೆಕ್ಕಿಲಾಡಿ ಸ್ವಾಗತಿಸಿ, ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ಬೇರಿಕೆ ವಂದಿಸಿದರು, ಟ್ರಸ್ಟ್ ನ ಮೇಲ್ವಿಚಾರಕರಾದ ಸುಮಲತಾ ಕಾರ್ಯಕ್ರಮ ನಿರ್ವಹಿಸಿದರು.ಆಟಿ ತಿಂಗಳ ವಿಶೇಷ ತಿಂಡಿ ತಿನಿಸುಗಳು ಹಾಗೂ ಖಾದ್ಯ ಗಳ ಬೆಳಗ್ಗಿನ ಉಪಹಾರ ಹಾಗೂ ಮಧ್ಯಾಹ್ನದ ಭೋಜನ ನಡೆಯಿತು.