ಆ.11ರಂದು ತೆರೆಕಾಣಲಿದೆ ತುಳುನಾಡ ಮಣ್ಣಿನ ಸಂಸ್ಕೃತಿ ಬಿಂಬಿಸುವ ʼಕೊರಮ್ಮʼ ತುಳು ಸಿನಿಮಾ

0

ಪುತ್ತೂರು: ಸಾಲುಸಾಲಾಗಿ ಬಿಡುಗಡೆಯಾಗುತ್ತಿರುವ ಹಾಸ್ಯಮಯ ತುಳು ಚಲನಚಿತ್ರಗಳಿಂದ ಜಸಿನಿಪ್ರೇಕ್ಷಕರಿಗೆ ಒಂದಷ್ಟು ಬದಲಾವಣೆಯನ್ನು ತಂದುಕೊಡುವ ನಿಟ್ಟಿನಲ್ಲಿ ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾವೊಂದು ತುಳು ಭಾಷೆಯಲ್ಲಿ ತಯಾರಾಗಿದೆ. ಅದರ ಹೆಸರು ಕೊರಮ್ಮʼ. ಹೌದು, ನಟ, ನಿರ್ದೇಶಕ, ನಿರ್ಮಾಪಕನಾಗಿ ಕಳೆದ 25 ವರ್ಷಗಳಿಂದ ಕನ್ನಡ ಮತ್ತು ತುಳು ಚಿತ್ರರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಸಿದ್ಧ ನಟ ಶಿವಧ್ವಜ್ ಶೆಟ್ಟಿಯವರು ಈಗಕೊರಮ್ಮ’ ಎಂಬ ಹೊಸ ತುಳು ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಸಿನಿಮಾ ಇದೇ ಆ.11ರಂದು ಕರಾವಳಿಯಾದ್ಯಂತ ಸಿನಿಮಾ ಮಂದಿರಗಳಲ್ಲಿ ತೆರೆಕಾಣಲಿದೆ.

ಕೊರಮ್ಮ' ಎನ್ನುವುದು ನಮ್ಮ ಊರಿನ ಯಜಮಾನ ಮತ್ತು ಆತನನ್ನೇ ನಂಬಿ, ಜೀವನವನ್ನೇ ಆತನಿಗಾಗಿ ಸಮರ್ಪಿಸಿದ ಕೆಲಸಗಾರನೊಬ್ಬನ ಕತೆಯನ್ನು ಹೇಳುತ್ತದೆ. ತುಳುನಾಡಿನಲ್ಲಿ ಸರಿಸುಮಾರು 80ರ ದಶಕದಲ್ಲಿ ನಡೆದ ಕಥೆಯನ್ನು ಆಧರಿಸಿ ಸಿನಿಮಾ ರಚನೆಗೊಂಡಿದೆ. ಊರ ಯಜಮಾನ ಮಂಜಯ್ಯ ಹೆಗ್ಗಡೆಯವರ ಬಲಗೈ ಬಂಟ ಕೊರಮ್ಮ. ಯಜಮಾನರ ಒಳಿತು, ಕೆಡುಕು ಎಲ್ಲದರಲ್ಲಿ ಕೊರಮ್ಮ ಅವರ ಜೊತೆಗಿರುತ್ತಾನೆ. ಯಜಮಾನರ ಕೆಲಸ ಬಿಟ್ಟರೆ ತನಗೊಂದು ಅಸ್ತಿತ್ವವನ್ನೇ ಕೊರಮ್ಮ ನಿರೀಕ್ಷಿಸುವುದೂ ಇಲ್ಲ, ಸಿಕ್ಕಿಯೂ ಇಲ್ಲ. ಯಜಮಾನತಿಗೆ ಆತನ ಬಗ್ಗೆ ಇರುವ ಸಣ್ಣ ಅನುಕಂಪ, ಅವರ ಮಗನಿಗೆ ಇವನ ಬಗ್ಗೆ ಇರುವ ತಾತ್ಸಾರ, ಯಜಮಾನರ ಮಗನಿಗೆ ಮದುವೆಯಾಗದೆ ತನ್ನ ಮದುವೆಯ ಬಗ್ಗೆ ಯೋಚನೆಯನ್ನೂ ಮಾಡದ ಕೊರಮ್ಮ- ಈ ರೀತಿ ಕತೆ ಸಾಗುತ್ತಾ ಹೋಗುತ್ತದೆ. ಯಜಮಾನ ಮತ್ತು ಕೆಲಸಗಾರನ ನಡುವಣ ಸಂಬAಧ ಬದಲಾಗುವ ಪರಿಸ್ಥಿತಿಯಲ್ಲಿ ಯಾವ ರೀತಿ ಅನಾವರಣಗೊಳ್ಳುತ್ತದೆ ಎನ್ನುವುದುಕೊರಮ್ಮ’ದ ತಿರುಳು. ಇಲ್ಲಿ ಕರಾವಳಿಯ ಸಮೃದ್ಧವಾದ ಸಂಸ್ಕೃತಿ, ಪರಂಪರೆ, ಆಚಾರ, ವಿಚಾರ, ಜೀವನ ಪದ್ಧತಿಗಳನ್ನು ತಿಳಿಸುವ ಕೆಲಸವನ್ನು ತುಂಬಾ ನಾಜೂಕಿನಿಂದ ಮಾಡಲಾಗಿದೆ.

`ಕೊರಮ್ಮ’ ಸಿನಿಮಾವನ್ನು ಈ ಚಿತ್ರವನ್ನು ಈಶ್ವರಿದಾಸ್ ಶೆಟ್ಟಿ ಮತ್ತು ರಾಜೇಶ್ವರಿ ರೈ ನಿರ್ಮಿಸಿದ್ದಾರೆ. ಅಡ್ಯಾರ್ ಮಾಧವ ನಾಯಕ್ ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಕಥೆ-ಚಿತ್ರಕಥೆ- ನಿರ್ದೇಶನದ ಜವಾಬ್ದಾರಿಯನ್ನು ಶಿವಧ್ವಜ್ ನಿರ್ವಹಿಸಿದ್ದಾರೆ. ಶ್ರೀನಿಧಿ ಡಿ.ಎಸ್. ಸಂಭಾಷಣೆ ಬರೆದಿದ್ದಾರೆ. ಶಿನಾಯ್ ಜೋಸೆಫ್ ಅವರ ಸಂಗೀತವಿದೆ. ಗಣೇಶ್ ನೀರ್ಚಾಲ್ ಸಂಕಲನ ಮಾಡಿದ್ದಾರೆ. ತಾರಾಗಣದಲ್ಲಿ ಮೋಹನ್ ಶೇಣಿ, ಬಿಂದು ರಕ್ಷಿದಿ, ಗುರು ಹೆಗ್ಡೆ, ರೂಪಾ ವರ್ಕಾಡಿ, ಲಕ್ಷ್ಮಣ್ ಕುಮಾರ್ ಮಲ್ಲೂರು, ಜಿನಪ್ರಸಾದ್, ದಿವ್ಯಶ್ರೀ ನಾಯಕ್ ಮುಖ್ಯಪಾತ್ರದಲ್ಲಿದ್ದಾರೆ. ಈ ಸಿನಿಮಾದಲ್ಲಿ ಬಹಳ ಮಂದಿ ಸ್ಥಳೀಯ ಕಲಾವಿದರು ಅಭಿನಯಿಸಿದ್ದಾರೆ. ಸುರೇಶ್ ಭೈರಸಂದ್ರ ಅವರ ಕ್ಯಾಮರ ಕೈಚಳಕವಿದೆ. ಉಡುಪಿ ಜಿಲ್ಲೆಯ ಕಾರ್ಕಳದ ಬೈಲೂರು ಸುತ್ತಮುತ್ತ ಸಿನಿಮಾ ಚಿತ್ರೀಕರಣಗೊಂಡಿದೆ.

`ಕೊರಮ್ಮ’ ಸಿನಿಮಾ ಈಗಾಗಲೇ ಕೆಲ ಪ್ರೀಮಿಯರ್ ಶೋಗಳನ್ನು ಕಂಡಿದೆ. ಬೆಂಗಳೂರಿನಲ್ಲಿ ಸಿನಿಮಾ ವೀಕ್ಷಿಸಿದ ಮಂದಿ ಕ್ಲೈಮಾಕ್ಸ್ನಲ್ಲಿ ಕಣ್ಣೀರಿಟ್ಟಿದ್ದಾರೆ. ಸಿನಿಮಾ ನೋಡಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ತುಂಬಾ ನಾಜೂಕಾದ ಕಥೆ ಹೊಂದಿರುವ ಸಿನಿಮಾ, ಹಿಂದಿನ ಸಂಸ್ಕೃತಿ, ಪರಂಪರೆ ಹೇಗಿತ್ತು ಎನ್ನುವುದನ್ನು ತಿಳಿಸಿಕೊಡುವ ಸಿನಿಮಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಥೆ-ಚಿತ್ರಕತೆ -ಛಾಯಾಗ್ರಹಣ-ಸಂಗೀತ-ಸಂಭಾಷಣೆ ಎಲ್ಲವೂ ಅತ್ಯುತ್ತಮವಾಗಿದೆ ಎನ್ನುವ ಗ್ಯಾರಂಟಿ ನೀಡ್ತೇವೆ ಎನ್ನುವುದು ನಿರ್ದೇಶಕರ ಮಾತು. ಇದೇ ಆ.11ರಂದು ಕರಾವಳಿಯಾದ್ಯಂತ ಇರುವ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದು, ಕರಾವಳಿಯ ಮಣ್ಣಿನ ಸೊಗಡಿನ ಈ ಸಿನಿಮಾವನ್ನು ಕುಟುಂಬ ಸಮೇತರಾಗಿ ಬಂದು ವೀಕ್ಷಿಸಿ, ಹಾರೈಸಿ ಎನ್ನುವುದು ಚಿತ್ರತಂಡದ ಮನವಿ.

`ನನ್ನನ್ನು ಒಬ್ಬ ನಟನಾಗಿ, ನಿರ್ದೇಶಕನಾಗಿ ಬೆಳೆಸಿದ ತುಳುನಾಡು ಮತ್ತು ತುಳುಚಿತ್ರರಂಗಕ್ಕೆ ನನ್ನ ಕೈಲಾದ ಸೇವೆ ಮಾಡುವ ಒಂದು ಪುಟ್ಟ ಪ್ರಯತ್ನವಿದು. ತುಳುಚಿತ್ರರಂಗಕ್ಕೆ ಐವತ್ತು ವರ್ಷಗಳು ತುಂಬಿರುವ ಈ ಶುಭ ಘಳಿಗೆಯಲ್ಲಿ ತುಳುವಿನಲ್ಲಿ ಉತ್ತಮ ಕಥಾವಸ್ತು ಇರುವ, ಸದಭಿರುಚಿಯ ಚಲನಚಿತ್ರಗಳನ್ನು ನೀಡುವ ಉದ್ದೇಶ ನನ್ನದು. ಮುಂದಿನ ದಿನಗಳಲ್ಲೂ ಈ ರೀತಿಯ ನಮ್ಮ ನಾಡಿನ ಸಂಸ್ಕೃತಿ, ಆಚಾರ ವಿಚಾರಗಳನ್ನು ದೇಶ ವಿದೇಶಗಳಲ್ಲಿರುವ ಸಿನಿಪ್ರಿಯರಿಗೆ ಹಂಚಬೇಕು ಎಂಬ ಹಂಬಲ ನನ್ನದು. ಒಂದೇ ತೆರನಾದ ಹಾಸ್ಯಮಯ ಸಿನಿಮಾಗಳ ನಡುವೆ ನೈಜ ಕಥೆಯಾಧಾರಿತ, ಸಾಮಾಜಿಕ ಸಂದೇಶಗಳುಳ್ಳ ಸಿನಿಮಾಗಳು ತುಳು ಸಿನಿರಂಗದಿಂದ ಕಣ್ಮರೆಯಾಗುತ್ತಿವೆ. ಇದೇ ರೀತಿ ಮುಂದುವರೆದರೆ ತುಳು ಸಿನಿರಂಗಕ್ಕೆ ಭವಿಷ್ಯವಿಲ್ಲ. ಈ ನಿಟ್ಟಿನಲ್ಲಿ ವಿಭಿನ್ನ ಕಥಾನಕದ ಸಿನಿಮಾ ನಿರ್ಮಿಸಿದ್ದೇವೆ. ಹಿಂದೆ ನಮ್ಮ ಸಂಸ್ಕೃತಿ, ಪರಂಪರೆ ಹೇಗಿತ್ತು ಎನ್ನುವುದನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಯುವಜನತೆ ಈ ಸಿನಿಮಾ ನೋಡಲೇಬೇಕು” ಎನ್ನುವುದು ನಿರ್ದೇಶಕ ಶಿವಧ್ವಜ್ ಶೆಟ್ಟಿ ಅವರ ಮನವಿ.

LEAVE A REPLY

Please enter your comment!
Please enter your name here