ಪುತ್ತೂರು: ಬಪ್ಪಳಿಗೆ ಕರ್ಕುಂಜ ನೆಲ್ಲಿಗುಂಡಿಯಲ್ಲಿ ರಸ್ತೆ ಸಮಸ್ಯೆಗೆ ಸಂಬಂಧಿಸಿ ಅದನ್ನು ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಪರಿಶೀಲನೆ ಮಾಡಿಕೊಂಡು ಸೂಕ್ತ ಕ್ರಮ ಕೈಗೊಂಡು ಅರ್ಜಿದಾರರಿಗೆ ಮಾಹಿತಿ ಒದಿಗಿಸುವಂತೆ ದ.ಕ.ಜಿಲ್ಲಾ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸೂಚನೆ ಮಾಡಿರುವ ಕುರಿತು ಅರ್ಜಿದಾರರಿಗೆ ಮುಖ್ಯಮಂತ್ರಿ ಕಚೇರಿಯಿಂದ ಪತ್ರ ಬಂದಿದೆ.
ಬಪ್ಪಳಿಗೆ ಕರ್ಕುಂಜ ನೆಲ್ಲಿಗುಂಡಿಯ ದಲಿತ ಕಾಲೋನಿಗೆ ಹಾದು ಹೋಗುವ ಸಂಪರ್ಕ ರಸ್ತೆಯನ್ನು ಸಾರ್ವನಿಕರಿಗೆ ಉಪಯೋಗಿಸಲು ಅಡ್ಡಿಪಡಿಸುತ್ತಿದ್ದಾರೆಂದು ಆ ಭಾಗದ ಜಯರಾಮ್ ನೆಲ್ಲಿಗುಂಡಿ ಎಂಬವರು ಪರಿಸರದ ಜನರೊಂದಿಗೆ ಮುಖ್ಯಮಂತ್ರಿಯವರ ಜನತಾ ದರ್ಶನದಲ್ಲಿ ಮನವಿ ಮಾಡಿದ್ದರು. ಮನವಿಗೆ ಸ್ಪಂಧಿಸಿದ ಮುಖ್ಯಮಂತ್ರಿಯವರ ವಿಶೇಷಾಧಿಕಾರಿ ಜಿಲ್ಲಾ ಇಲಾಖಾ ಮಟ್ಟದ ಪ್ರಗತಿ ಪರಿಶೀಲನೆಯಲ್ಲಿ ಈ ಬಗ್ಗೆ ಪರಿಶೀಲಿಸಲಾಗುವುದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಆದ್ಯತೆಯ ಮೇರೆಗೆ ಸದರಿ ಮನವಿಯ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಲು ಸೂಚಿಸಿದೆ. ಕೈಗೊಂಡ ಕ್ರಮದ ಬಗ್ಗೆ ಸದರಿ ಅರ್ಜಿದಾರರಿಗೆ ಸೂಕ್ತ ಮಾಹಿತಿಯನ್ನು ಒದಗಿಸಲು ಮತ್ತು ಆ ವಿವರಗಳನ್ನು ಜನಸ್ಪಂದನ ಪೋರ್ಟಲ್‌ನಲ್ಲಿ ಕಾಲೋಚಿತಗೊಳಿಸಲು ಸಹ ಸೂಚಿಸಿದೆ ಎಂದು ಅರ್ಜಿದಾರರಿಗೆ ಮುಖ್ಯಮಂತ್ರಿಯವರ ಕಚೇರಿಯಿಂದ ಪತ್ರ ಬಂದಿದೆ.