ಪುತ್ತೂರು: 5 ವರ್ಷಗಳ ಹಿಂದೆ ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿಯ ಪೆದಮಲೆ ಎಂಬಲ್ಲಿ ಬೈಕ್‌ಗೆ ಲಾರಿಯೊಂದು ಡಿಕ್ಕಿಯಾದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಲಾರಿ ಚಾಲಕ ಸಂಪಾಜೆಯ ಖಾದರ್ ಎಂಬವರಿಗೆ ಬೆಳ್ತಂಗಡಿ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪ್ರಾಸಿಕ್ಯೂಷನ್ ಪರವ ಬೆಳ್ತಂಗಡಿ ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕ ಪುತ್ತೂರು ಉರ್ಲಾಂಡಿ ನಿವಾಸಿ ದಿವ್ಯರಾಜ್ ಹೆಗ್ಡೆ ವಾದಿಸಿದ್ದಾರೆ.
ಅಪಘಾತದಿಂದಾಗಿ ಐದು ದಿನಗಳ ಬಳಿಕ ವೈವಾಹಿಕ ಬದುಕಿಗೆ ಕಾಲಿರಿಸಬೇಕಾಗಿದ್ದ ಯುವಕ ಪಿಲಿಗೂಡಿನ ಮೂಡಬೈಲ್‌ನ ಬೈಕ್ ಸವಾರ ಅಶೋಕ್ (29 ವ.) ಮೃತಪಟ್ಟಿದ್ದರು. ಇವರು ಉಪ್ಪಿನಂಗಡಿಯಿಂದ ಗುರುವಾಯನಕೆರೆ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭ ಗುರುವಾಯನಕೆರೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಲಾರಿ ಇವರ ಬೈಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿತ್ತು.
ಲಾರಿ ಡಿಕ್ಕಿಯಾದ ಪರಿಣಾಮ ಅಶೋಕ್ ಬೈಕ್‌ನಿಂದ ರಸ್ತೆಗೆಸೆಯಲ್ಪಟ್ಟು ಸ್ಥಳದಲ್ಲೇ ಮೃತ ಪಟ್ಟಿದ್ದರು. ಘಟನೆಗೆ ಸಂಬಂಧಿಸಿ ಆರೋಪಿ ಲಾರಿ ಚಾಲಕ ಸಂಪಾಜೆಯ ಖಾದರ್ ಟಿ.ಎಮ್ ಎಂಬವರ ವಿರುದ್ಧ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.
ವಿಚಾರಣೆ ನಡೆಸಿದ ಬೆಳ್ತಂಗಡಿ ನ್ಯಾಯಾಲಯ ಆರೋಪಿ ಲಾರಿ ಚಾಲಕ ಸಂಪಾಜೆಯ ಖಾದರ್ ಟಿ.ಎಮ್(58ವ)ಎಂಬವರನ್ನು ದೋಷಿ ಎಂದು ಪರಿಗಣಿಸಿ, ಆರೋಪಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಸೆಕ್ಷನ್ 279ಕ್ಕೆ ಸಂಬಂಧಿಸಿ 3 ತಿಂಗಳು ಜೈಲು ಶಿಕ್ಷೆ ಮತ್ತು 1ಸಾವಿದ ಜುಲ್ಮನೆ. ತಪ್ಪಿದಲ್ಲಿ 1 ತಿಂಗಳು ಸಜೆ, ಸೆಕ್ಷನ್ 304(ಎ)ಗೆ ಸಂಬಂಧಿಸಿ 1 ವರ್ಷ ಜೈಲು ಶಿಕ್ಷೆ ಮತ್ತು ರೂ. 5ಸಾವಿರ ದಂಡ. ದಂಡ ತೆರಳು ತಪ್ಪಿದಲ್ಲಿ 2 ತಿಂಗಳು ಸಜೆ ವಿಧಿಸಿ ತೀರ್ಪು ನೀಡಿದೆ.