ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಪುತ್ತೂರು ಪ್ರಧಾನ ಶಾಖೆಯ ಕಟ್ಟಡದಲ್ಲಿ ಎಟಿಎಂ ಡಿ.ಆರ್.ಸೆಂಟರ್ ಉದ್ಘಾಟನೆ

0

ಮೊಳಹಳ್ಳಿ ಶಿವರಾಯರ ಭದ್ರಬುನಾದಿಯಿಂದ ಸಹಕಾರಿ ಬ್ಯಾಂಕ್ ಬೆಳೆಯಲು ಸಾಧ್ಯವಾಗಿದೆ – ಡಾ.ಎಂ.ಎನ್.ಆರ್.

ಪುತ್ತೂರು: ಮನುಷ್ಯ ಜೇಬಿನಲ್ಲಿ ಕಾರ್ಡ್ ಇಟ್ಟುಕೊಂಡು ಹೋಗುವ ಕಾಲ ಬಂದಿದೆ. ನಾವೆಲ್ಲರೂ ಹೊಸ ತಂತ್ರಜ್ಞಾನದ ಯುಗದಲ್ಲಿ ಇದ್ದೇವೆ. ಈ ತಂತ್ರಜ್ಞಾನಕ್ಕೆ ಹೊಂದಿಕೊಂಡು ಹೋಗುವ ಅನಿವಾರ್ಯತೆ ನಮಗೆ ಇದೆ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಪುತ್ತೂರಿನ ಪ್ರಧಾನ ಶಾಖೆಯ ಕಟ್ಟಡದಲ್ಲಿ ನಡೆದ ನೂತನ ಎಟಿಎಂ ಹಾಗೂ ನವೀಕೃತ ಡಿ.ಆರ್.ಸೆಂಟರ್ ಉದ್ಘಾಟನೆಯ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೊಳಹಳ್ಳಿ ಶಿವರಾಯರು ಹಾಕಿದ ಭದ್ರಬುನಾದಿಯಿಂದ ಇಂದು ಸಹಕಾರಿ ಬ್ಯಾಂಕ್ ಬೆಳೆಯಲು ಸಾಧ್ಯವಾಗಿದೆ. 113 ಶಾಖೆಗಳನ್ನು ಹೊಂದಿದ ಅತೀ ದೊಡ್ಡ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆ ಇದೆ. ಇಲ್ಲಿನ ರೈತರು ಸ್ವಾವಲಂಬಿಯಾಗಿ ಬದುಕುತ್ತಾರೆ. ಇದಕ್ಕೆ ಗ್ರಾಮ ಮಟ್ಟದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ನೆರವಾಗುತ್ತಿದೆ. ನವೋದಯ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಆರ್ಥಿಕ ಸ್ವಾವಲಂಬನೆಯಾಗಿದ್ದಾರೆ. ಅವರು ಬ್ಯಾಂಕ್‌ನಿಂದ ಸಾಲ ಪಡೆಯುವುದು ಮಾತ್ರವಲ್ಲದೆ ಬ್ಯಾಂಕ್‌ನಲ್ಲಿ ಠೇವಣಿ ಇಡುವ ಹಂತಕ್ಕೆ ಬೆಳೆದಿದ್ದಾರೆ. ನವೋದಯ ಸ್ವಸಹಾಯ ಸಂಘದಲ್ಲಿ ಯಾವುದೇ ಜಾತಿ, ಮತ, ಭೇಧವಿಲ್ಲ. ಇದಕ್ಕಾಗಿ ಸಂಘದ ಸದಸ್ಯೆಯರಿಗೆ ಸಮವಸ್ತ್ರ ಕೂಡ ವಿತರಣೆ ಮಾಡಲಾಗಿದೆ. ಸಂಘದ ಸದಸ್ಯರಿಗೆ ಹಾಗೂ ಸಹಕಾರಿಗಳಿಗೆ ಪುತ್ತೂರಿನಲ್ಲಿ ಆಟೋಟ ಸ್ಪರ್ಧೆ ನಡೆಸಲಾಗುವುದು ಎಂದರು. ಬೆಳೆಯುತ್ತಿರುವ ಪುತ್ತೂರು ನಗರಕ್ಕೆ ಎಟಿಎಂ ನೀಡಿದ್ದೇವೆ. ಅದೇ ರೀತಿ ಗ್ರಾಮಾಂತರ ಮಟ್ಟದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿಯೂ ಎಟಿಎಂ ಒದಗಿಸುವಲ್ಲಿಯೂ ಚಿಂತನೆ ಮಾಡುತ್ತಿದ್ದೇವೆ ಎಂದರು.

ಸಹಕಾರಿ ಬ್ಯಾಂಕ್ ಪುತ್ತೂರಿನಿಂದ ಆರಂಭಗೊಂಡಿದೆ-ಶಾಸಕ ಅಶೋಕ್ ಕುಮಾರ್ ರೈ: ನೂತನ ಎಟಿಎಂ ಉದ್ಘಾಟಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈರವರು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ್ನು ಡಾ.ಎಂ.ಎನ್. ರಾಜೇಂದ್ರಕುಮಾರ್ ರವರು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿದದ್ದಾರೆ. ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ಗೆ ಸಮನಾಗಿ ಇವತ್ತು ಸಹಕಾರಿ ಬ್ಯಾಂಕ್ ಬೆಳೆದಿದೆ. ಇದರ ಅಧೀನದಲ್ಲಿರುವ ಗ್ರಾಮ ಮಟ್ಟದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಕಛೇರಿಗಳೂ ಆಧುನಿಕತೆಯನ್ನು ಹೊಂದಿದೆ ಎಂದರು. ಬ್ಯಾಂಕ್‌ಗಳು ಮೂಲಭೂತ ಅವಶ್ಯಕತೆಗಳಲ್ಲಿ ಒಂದು. ಮೊಳಹಳ್ಳಿ ಶಿವರಾಯರು ಸ್ಥಾಪನೆ ಮಾಡಿದ ಸಹಕಾರಿ ಬ್ಯಾಂಕ್ ಪುತ್ತೂರಿನಿಂದ ಆರಂಭಗೊಂಡಿದೆ. ಪುತ್ತೂರಿನಲ್ಲಿ ಉದ್ಯಮದೊಂದಿಗೆ ಸಹಕಾರಿ ರಂಗವೂ ಬೆಳೆದರೆ ಪುತ್ತೂರು ಕೂಡ ಅಭಿವೃದ್ಧಿಯಾಗುತ್ತದೆ. ನಾನು ಈ ಹಂತಕ್ಕೆ ಬೆಳೆಯಲು ಡಾ. ರಾಜೇಂದ್ರ ಕುಮಾರ್ ಹಲವು ಬಾರಿ ನನಗೆ ಮಾರ್ಗದರ್ಶನ ನೀಡಿದ್ದಾರೆ. ಸಹಕಾರಿ ಬ್ಯಾಂಕ್‌ನಿಂದ ಜನರಿಗೆ ಪ್ರಯೋಜನ ಸಿಗಲಿ ಎಂದರು.

ರಾಷ್ಟ್ರಮಟ್ಟದಲ್ಲಿ ಬ್ಯಾಂಕ್ ಗುರುತಿಸುವಂತಾಗಿದೆ: ಕಾರ್ಯಕ್ರಮದ ರೂವಾರಿ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಪ್ರಾಸ್ತಾವಿಕವಾಗಿ ಮಾತನಾಡಿ 1941ರಲ್ಲಿ ಪ್ರಾರಂಭಗೊಂಡಿರುವ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗ್ರಾಹಕರ ಸಹಕಾರದಿಂದ ಉತ್ತಮ ರೀತಿಯಲ್ಲಿ ಬೆಳೆಯುತ್ತಾ ಬಂದಿದೆ. ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಅಧ್ಯಕ್ಷರಾದ ಬಳಿಕ ಬ್ಯಾಂಕ್ ಸಾಧನೆಯ ಹಾದಿಯಲ್ಲಿ ಮುಂದುವರಿದಿದೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ದ.ಕ.ಜಿಲ್ಲಾ ಕೇಂದ್ರ ಬ್ಯಾಂಕ್ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಎಟಿಎಂ ನ್ನು ನೀಡಿದೆ. ಇಂದು 13,500 ಕೋಟಿ ರೂ.ಗಳ ವ್ಯವಹಾರವನ್ನು ಬ್ಯಾಂಕ್ ಮಾಡುತ್ತಿದೆ. ಡಾ. ರಾಜೇಂದ್ರ ಕುಮಾರ್‌ರವರ ನೇತೃತ್ವದಲ್ಲಿ ಬ್ಯಾಂಕ್ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ಹೇಳಿದರು.

ಜನಸ್ನೇಹಿ ಬ್ಯಾಂಕ್-ಜೀವಂಧರ್ ಜೈನ್: ನವೀಕೃತ ಡಿ.ಆರ್.ಸೆಂಟರ್ ಉದ್ಘಾಟಿಸಿ ಮಾತನಾಡಿದ ಪುತ್ತೂರು ನಗರಸಭಾ ನಿಕಟಪೂರ್ವ ಅಧ್ಯಕ್ಷ ಜೀವಂಧರ ಜೈನ್ ಮಾತನಾಡಿ, ಮೊಳಹಳ್ಳಿ ಶಿವರಾಯರು ಹುಟ್ಟುಹಾಕಿದ ಬ್ಯಾಂಕ್‌ನ್ನು ಡಾ. ರಾಜೇಂದ್ರ ಕುಮಾರ್ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಜನಸ್ನೇಹಿ ಬ್ಯಾಂಕ್ ಆಗಿದೆ. ನಾನು ಪುತ್ತೂರು ಪ್ರಧಾನ ಕಚೇರಿಯ ಗ್ರಾಹಕನಾಗಿದ್ದೇನೆ. ಈ ಬ್ಯಾಂಕ್ ಸಿಬ್ಬಂದಿಗಳು ನಗುಮೊಗದಲ್ಲಿ ಉತ್ತಮ ರೀತಿಯಲ್ಲಿ ಸೇವೆ ನೀಡುತ್ತಿದ್ದಾರೆ. ಈ ಎಟಿಎಂ ಕೇಂದ್ರದ ಉಪಯೋಗ ಎಲ್ಲರಿಗೂ ಸಿಗಲಿ ಎಂದರು.

ಮಹಿಳೆಯರಿಗೆ ಆರ್ಥಿಕ ಸಹಾಯ ಮಾಡಿದೆ-ಗೌರಿ ಬನ್ನೂರು: ನಗರಸಭಾ ಸದಸ್ಯೆ ಹಾಗೂ ಪುತ್ತೂರು ಮಹಿಳಾ ವಿವಿದೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷೆ ಗೌರಿ ಬನ್ನೂರು ಮಾತನಾಡಿ ದಿನದ 24 ಗಂಟೆಯೂ ಹಣ ಪಡೆಯುವ ಎಟಿಎಂ ನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇಂದು ನೀಡಿದೆ. ಇಂದು ಸಹಕಾರಿ ಬ್ಯಾಂಕ್‌ಗಳು ಸಹಕಾರಿ ತತ್ವದಡಿ ಕಾರ್ಯನಿರ್ವಹಿಸುತ್ತಿದೆ. ಬ್ಯಾಂಕ್ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯ ಮಾಡುತ್ತಿದೆ. ಇದರಿಂದ ಮಹಿಳೆಯರು ಆರ್ಥಿಕವಾಗಿ ಸಬಲೀಕರಣ ಹೊಂದಿದ್ದಾರೆ. ಅಲ್ಲದೆ ಸಣ್ಣ ಸಣ್ಣ ಸಹಕಾರಿ ಬ್ಯಾಂಕ್‌ಗಳಿಗೂ ಪ್ರೋತ್ಸಾಹ ನೀಡಿ ಏಳಿಗೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಮಾದರಿ ಯೋಜನೆಗಳನ್ನು ಸಮಾಜಕ್ಕೆ ನೀಡುವಂತಾಗಲಿ ಎಂದು ಹೇಳಿದರು.

ಸಹಕಾರಿ ಬ್ಯಾಂಕ್‌ನ್ನು ದೇಶದಲ್ಲಿ ಗುರುತಿಸುವಂತಾಗಿದೆ- ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಮಾತನಾಡಿ ಮನುಷ್ಯನಿಗೆ ಮುಂದಾಲೋಚನೆ, ಗುರಿ, ಜನರಿಗೆ ಹೊಸತನ್ನು ನೀಡಬೇಕೆಂಬ ಮನಸ್ಸು ಇದ್ದರೆ ಸಂಸ್ಥೆಯನ್ನು ಯಶಸ್ವಿಯಾಗಿ ಬೆಳೆಸಬಹುದು ಎಂದು ಡಾ.ರಾಜೇಂದ್ರಕುಮಾರ್ ತೋರಿಸಿಕೊಟ್ಟಿದ್ದಾರೆ. ಮಂಗಳೂರಿನ ಕೇಂದ್ರ ಸಹಕಾರಿ ಬ್ಯಾಂಕ್ ದೇಶದಲ್ಲಿ ಗುರುತಿಸುವ ಹಾಗೆ ಮಾಡಿದ್ದಾರೆ. ಅಲ್ಲದೆ ಮಹಿಳೆಯರಿಗೆ ಆರ್ಥಿಕ ಶಕ್ತಿಯನ್ನು ನೀಡಿದ್ದಾರೆ ಎಂದು ಹೇಳಿದರು.

ಠೇವಣಿ ಪತ್ರ, ಸಾಲಪತ್ರ ವಿತರಣೆ: ಶಾಸಕ ಅಶೋಕ್ ಕುಮಾರ್ ರೈ ಅವರು ಠೇವಣಿ ಪತ್ರ, ಸಾಲಪತ್ರಗಳನ್ನು ವಿತರಿಸಿದರು. ವಕೀಲರಾದ ಕೆ.ಆರ್.ಆಚಾರ್ಯ, ಸುಬ್ಬಣ್ಣ ಭಟ್ ಕೆ. ಪುರುಷರಕಟ್ಟೆ, ಚೇತನಾ ಆರ್ಯಾಪುರವರಿಗೆ ಠೇವಣಿ ಪತ್ರ ವಿತರಿಸಲಾಯಿತು. ಉದಯ ಕುಮಾರ್ ಹಾರಾಡಿರವರಿಗೆ ಕೃಷಿ ಭೂಮಿ ಖರೀದಿ ಸಾಲಪತ್ರ, ವಿಶ್ವನಾಥ ಪೂಜಾರಿ ಮಠಂತಬೆಟ್ಟುರವರಿಗೆ ಬಾಲಗೋಪಾಲ ಗುವೆಲುಗದ್ದೆ, ಲಕ್ಷ್ಮಿ ಮಣಿಯಾಣಿ, ದಿನೇಶ್ ಮಣಿಯಾಣಿರವರಿಗೆ ಗೃಹಸಾಲ ಪತ್ರ, ವೀಣಾ ಸರಸ್ವತಿ ಆರ್ಯಾಪುರವರಿಗೆ ವಾಹನ ಸಾಲಪತ್ರ ವಿತರಿಸಲಾಯಿತು.

ನವೋದಯ ಸ್ವಸಹಾಯ ಸಂಘ ಉದ್ಘಾಟನೆ: ಕಾರ್ಯಕ್ರಮದಲ್ಲಿ ನೂತನ ಸ್ವಸಹಾಯ ಸಂಘವನ್ನು ಉದ್ಘಾಟಿಸಲಾಯಿತು. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್‌ರವರು ನೂತನ ನವೋದಯ ಸ್ವಸಹಾಯ ಸಂಘಗಳಾದ ಪುತ್ತೂರು ಕಸಬಾದ ಅಕ್ಷಯ ನವೋದಯ ಸ್ವಸಹಾಯ ಸಂಘ, ಬನ್ನೂರಿನ ಶಾಂತಿ ನವೋದಯ ಸ್ವಸಹಾಯ ಸಂಘ, ಹಾಗೂ ನೆಹರು ನಗರದ ಸೌಭಾಗ್ಯ ನವೋದಯ ಸ್ವಸಹಾಯ ಸಂಘವನ್ನು ಪದಾಧಿಕಾರಿಗಳಿಗೆ ಪುಸ್ತಕ ಹೂ ವಿತರಿಸಿ ಉದ್ಘಾಟಿಸಿದರು.

ಚೈತನ್ಯ ವಿಮಾ ಪರಿಹಾರ ವಿತರಣೆ: ನವೋದಯ ಸ್ವಸಹಾಯ ಸಂಘದ ಸದಸ್ಯರಿಗೆ ಚೈತನ್ಯ ವಿಮಾ ಪರಿಹಾರ ವಿತರಿಸಲಾಯಿತು. ಶಾಂತಿ ನವೋದಯ ಸ್ವಸಹಾಯ ಸಂಘದ ರುಕ್ಮಿಣಿ, ಶ್ರೀವಿಷ್ಣು ನವೋದಯ ಸ್ವಸಹಾಯ ಸಂಘದ ಕೃತಿ ಬಿ., ಸರಸ್ವತಿ ನವೋದಯ ಸ್ವಸಹಾಯ ಸಂಘದ ವಿಜಯ, ಸ್ವಸ್ತಿಕ್ ನವೋದಯ ಸ್ವಸಹಾಯ ಸಂಘದ ಅನುಷಾ, ಶ್ರೀಲಕ್ಷ್ಮಿ ನವೋದಯ ಸ್ವಸಹಾಯ ಸಂಘದ ಹರಿಣಾಕ್ಷಿ, ಶ್ರೀಗುರು ನವೋದಯ ಸ್ವಸಹಾಯ ಸಂಘದ ರಶ್ಮಿ ರೈ, ಹಾಗೂ ವಿಘ್ನೇಶ್ ನವೋದಯ ಸ್ವಸಹಾಯ ಸಂಘದ ಸುಮಿತ್ರಾರವರಿಗೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್‌ರವರು ಚೈತನ್ಯ ವಿಮಾ ಪರಿಹಾರ ವಿತರಿಸಿದರು.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಟಿ.ಬಿ.ರಾಜರಾಮ ಭಟ್, ಜೈರಾಜ್ ಬಿ.ರೈ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇದಿಕೆಯಲ್ಲಿದ್ದ ಗಣ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ನವೋದಯ ಸ್ವಸಹಾಯ ಸಂಘದ ಪ್ರೇರಕಿ ಮಾಲತಿ ಪ್ರಾರ್ಥಿಸಿದರು. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಗೋಪಾಲಕೃಷ್ಣ ಭಟ್ ವಂದಿಸಿದರು. ಸಹಕಾರಿ ಬ್ಯಾಂಕ್ ಪುತ್ತೂರು ಶಾಖೆಯ ಸಿಬಂದಿಗಳು, ಪುತ್ತೂರು ಕಡಬದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು, ನಿರ್ದೇಶಕರು ಉಪಸ್ಥಿತರಿದ್ದರು. ರೆಂಜ ಮಣಿಕಂಠ ಚೇಂಡೆ ಮೇಳದಿಂದ ಚೆಂಡೆವಾದನ ನಡೆಯಿತು. ಬೆಳಿಗ್ಗೆ ಉಪಾಹಾರ ಹಾಗೂ ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿತ್ತು.

ಮೊಳಹಳ್ಳಿ ಶಿವರಾಯ ವೃತ್ತಕ್ಕೆ ಮಾಲಾರ್ಪಣೆ
ಕಾರ್ಯಕ್ರಮ ಆರಂಭಕ್ಕೆ ಮೊದಲು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಧಾನ ಶಾಖೆಯ ಸಮೀಪದಲ್ಲಿರುವ ಮೊಳಹಳ್ಳಿ ಶಿವರಾಯರ ವೃತ್ತಕ್ಕೆ ಮಾಲಾರ್ಪಣೆ ಮಾಡಲಾಯಿತು. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮತ್ತು ಶಾಸಕ ಅಶೋಕ್ ಕುಮಾರ್ ರೈ ಮಾಲಾರ್ಪಣೆ ಮಾಡಿ ನಮಿಸಿದರು.

ಡಾ|ಎಂ.ಎನ್.ರಾಜೇಂದ್ರ ಕುಮಾರ್‌ರವರಿಗೆ ವಿಶೇಷ ಸನ್ಮಾನ
ಗ್ಲೋಬಲ್ ಎಕ್ಸಲೆನ್ಸ್ ಪ್ರಶಸ್ತಿ, ಮದರ್ ತೆರೇಸಾ ಪ್ರಶಸ್ತಿ ಹಾಗೂ ಸಹಕಾರಿ ಭೂಷಣ ಪ್ರಶಸ್ತಿ ಪುರಸ್ಕೃತರಾದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್‌ರವರನ್ನು ಪುತ್ತೂರು ಸಹಕಾರಿಗಳ ಪರವಾಗಿ ಸಭೆಯಲ್ಲಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿದ್ದ ಗಣ್ಯರು ದೇವರ ಬೆಳ್ಳಿಯ ವಿಗ್ರಹ, ಬೆಳ್ಳಿಯ ದೀಪ, ಶಾಲು, ಹಾರ, ಹಣ್ಣುಹಂಪಲು ಪೇಟ ತೊಡಿಸಿ ಸನ್ಮಾನಿಸಿದರು. ಬಳಿಕ ಪುತ್ತೂರು ಮತ್ತು ಕಡಬ ಭಾಗದ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು, ಸಿಇಒಗಳು ಡಾ|ಎಂ.ಎನ್.ರಾಜೇಂದ್ರ ಕುಮಾರ್‌ರವರನ್ನು ಅಭಿನಂದಿಸಿದರು.

ಶಾಸಕ ಅಶೋಕ್ ಕುಮಾರ್ ರೈರವರಿಗೆ ಸನ್ಮಾನ
ಬಡವರಿಗೆ, ಅಶಕ್ತಿರಿಗೆ, ಸಹಾಯ ಹಸ್ತ ಚಾಚಿದ ಶಾಸಕ ಅಶೋಕ್ ಕುಮಾರ್ ರಐರವರನ್ನು ಸನ್ಮಾನಿಸಲಾಯಿತು. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್‌ರವರು ಬೆಳ್ಳಿದೀಪ, ಶಾಲು, ಹಾರ, ಹಣ್ಣುಹಂಪಲು ನೀಡಿ ಗೌರವಿಸಿದರು.

LEAVE A REPLY

Please enter your comment!
Please enter your name here