ಕೈಕೊಟ್ಟ ಮಳೆ: ಕಾದ ಇಳೆ-ನೀರಿಲ್ಲದೆ ಸೊರಗಿದ ನೇತ್ರಾವತಿ

0

ಉಪ್ಪಿನಂಗಡಿ: ಪ್ರತಿ ವರ್ಷ ಈ ಸಂದರ್ಭದಲ್ಲಿ ಸಮೃದ್ಧವಾಗಿ ಹರಿಯುತ್ತಿದ್ದ ದ.ಕ. ಜಿಲ್ಲೆಯ ಜೀವನದಿಗಳು ಮಳೆಯ ಕೊರತೆಯಿಂದ ಈ ಬಾರಿ ಸೊರಗಿ ಹೋಗಿದ್ದು, ಆಗಸ್ಟ್ ತಿಂಗಳು ಅರ್ಧ ಕಳೆಯುವಷ್ಟರಲ್ಲೇ ನೀರಿಲ್ಲದೆ ನದಿಯ ಮರಳು ಕಾಣಲು ಶುರುವಾಗಿದೆ.


ಮಳೆ ಕೊರತೆ:
ಕಳೆದ ಬೇಸಿಗೆಯಲ್ಲಿ ಇತಿಹಾಸದಲ್ಲೇ ಪ್ರಥಮ ಬಾರಿಯೆಂಬಂತೆ ಉಪ್ಪಿನಂಗಡಿ ಭಾಗದಲ್ಲಿ ನೇತ್ರಾವತಿ ನದಿಯು ಸಂಪೂರ್ಣ ಬತ್ತಿ ಹೋಗಿತ್ತು. ಕೆಲವು ಗುಂಡಿಗಳಲ್ಲಿ ಅಲ್ಪ ಸ್ವಲ್ಪ ನೀರಿದ್ದಿದ್ದು ಬಿಟ್ಟರೆ, ಮತ್ತೆ ನದಿ ಬಯಲಿನಂತಾಗಿತ್ತು. ಜಲಚರ, ಪ್ರಾಣಿ ಪಕ್ಷಿಗಳಿಗೆ, ಕೃಷಿಗೆ, ಕುಡಿಯುವ ನೀರಿಗೂ ತತ್ವಾರ ಬಂದಿತ್ತು. ಈ ಬಾರಿ ಮಳೆಗಾಲದಲ್ಲಿ ಮಳೆ ಕೈಕೊಟ್ಟಿದ್ದು, ಜೂನ್‌ನಲ್ಲಿಯೂ ನದಿಯು ಬತ್ತಿದ ಸ್ಥಿತಿಯಲ್ಲಿಯೇ ಇತ್ತು. ಜು.3- 4ರ ಬಳಿಕವಷ್ಟೇ ನದಿಯಲ್ಲಿ ನೀರು ಬಂದು ನದಿಯ ಮರಳು ಕಾಣದಂತಾದದ್ದು. ಬಳಿಕ ಜು.23 ರಿಂದ ಮೂರು ದಿನಗಳ ಕಾಲ ಮಾತ್ರ ನದಿಗಳು ಮೈದುಂಬಿ ಹರಿದಿದ್ದವು. ಬಳಿಕ ನದಿ ನೀರು ಇಳಿಮುಖಗೊಳ್ಳುತ್ತಲೇ ಸಾಗಿದ್ದು. ಈಗ ಅಲ್ಲಲ್ಲಿ ನೇತ್ರಾವತಿ ನದಿಯ ತಳದ ಮರಳು ಕಾಣುತ್ತಿದೆ. 2022ರ ಜೂನ್ ತಿಂಗಳಲ್ಲಿ ಉಪ್ಪಿನಂಗಡಿಯಲ್ಲಿ 455.4 ಮಿ.ಮೀ. ಮಳೆಯಾಗಿದ್ದರೆ, 2023ರ ಜೂನ್‌ನಲ್ಲಿ 209.4 ಮಳೆಯಾಗಿದೆ. 2022ರ ಜುಲೈನಲ್ಲಿ 1530.4 ಮಿ.ಮೀ. ಮಳೆಯಾಗಿದ್ದರೆ, 2023ರಲ್ಲಿ ಜುಲೈನಲ್ಲಿ 1350 ಮಿ.ಮೀ. ಮಳೆಯಾಗಿದೆ.


2023 ಪ್ರಥಮಗಳಿಗೆ ಸಾಕ್ಷಿ!:
ಪ್ರತಿ ವರ್ಷವೂ ಆಗಸ್ಟ್ ತಿಂಗಳು ಮುಗಿಯುವವರೆಗೂ ಉಭಯ ನದಿಗಳಲ್ಲಿ ಉತ್ತಮ ನೀರಿನ ಹರಿವು ಇರುತ್ತಿತ್ತು. 2018ರಲ್ಲಿ ಇಲ್ಲಿ ನೆರೆ ಬಂದು ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಬಳಿ ಎರಡು ಬಾರಿ ಸಂಗಮ ಘಟಿಸಿದ್ದು ಕೂಡಾ ಆಗಸ್ಟ್ ೧೪ ಮತ್ತು ೧೬ರಂದು. ಆದರೆ ಈ ಬಾರಿ ಮಾತ್ರ ಈ ಸಮಯದಲ್ಲಿ ನದಿಯು ನೀರಿಲ್ಲದೆ ಸೊರಗಿ ಹೋಗಿದೆ. ಬೇಸಿಗೆಯಲ್ಲಿ ನದಿ ಈ ರೀತಿ ಬತ್ತಿರುವುದಕ್ಕೆ ಹಾಗೂ ಆಗಸ್ಟ್ ತಿಂಗಳಲ್ಲೇ ನದಿಯು ನೀರಿಲ್ಲದೆ ಈ ರೀತಿ ಸೊರಗಿ ಹೋಗಿರುವುದಕ್ಕೆ 2023ನೇ ವರ್ಷವೇ ಸಾಕ್ಷಿಯಾಗಿದೆ.


ಪ್ರಕೃತಿ ನಾಶ:
ಪ್ರಕೃತಿ ನಾಶ ಅವ್ಯಾಹತವಾಗಿ ನಡೆಯುತ್ತಿದ್ದು, ನೇತ್ರಾವತಿ ನದಿಯನ್ನು ಸೇರುವ ಉಪನದಿಗಳ ನೀರನ್ನು ಘಟ್ಟದ ಕಡೆ ಹರಿಸಲು ಹಾಕಿದ ಎತ್ತಿನ ಹೊಳೆ ಯೋಜನೆಗೆ 35 ಸಾವಿರಕ್ಕೂ ಅಧಿಕ ಕೋಟಿ ರೂಪಾಯಿ ಖರ್ಚು ಮಾಡಿದರೂ, ಅದಿನ್ನೂ ಮುಗಿದಿಲ್ಲ. ಈ ಕಾಮಗಾರಿಗಾಗಿ ಬಲಿಯಾದ ಮರಗಳಷ್ಟೋ ದೇವರೇ ಬಲ್ಲ. ಇನ್ನೊಂದೆಡೆ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಯೂ ನಡೆಯುತ್ತಿದ್ದು, ಇದಕ್ಕಾಗಿ ರಸ್ತೆ ಬದಿಯ ಮರಗಳೆಲ್ಲಾ ಆಹುತಿಯಾಗಿವೆ. ಇನ್ನು ದ.ಕ. ಜಿಲ್ಲೆಯಲ್ಲಿಯೂ ನೀರಿಂಗಿಸಲು ಪ್ರಮುಖ ಕಾರಣವಾಗಿದ್ದ ಭತ್ತದ ಗದ್ದೆಗಳು ನಾಶವಾಗಿವೆ. ಇವೆಲ್ಲವೂ ಪ್ರಾಕೃತಿಕ ಅಸಮತೋಲನಕ್ಕೆ ಕಾರಣವಾಗುತ್ತಿದೆ. ನಿರಂತರ ಮಳೆ ಬಂದು ಒಂದು ದಿನ ಮಳೆ ಇಲ್ಲದೇ ಹೋದರೂ ಸೆಖೆಯ ಧಗೆಯ ಅನುಭವ ಎಲ್ಲರಿಗೂ ಈ ಬಾರಿ ಆಗಿದೆ. ಈಗ ಮಳೆಯಿಲ್ಲದ, ನದಿಯು ಬತ್ತಿದ ಪರಿಣಾಮಗಳು ಇನ್ನೆರಡು ತಿಂಗಳಲ್ಲಿ ಜನರಿಗೆ ಗೋಚರವಾಗಲಿವೆ. ಇದೇ ರೀತಿ ಪ್ರಕೃತಿ ನಾಶ ಮುಂದುವರಿದರೆ ತಾಪಮಾನ ಏರುಪೇರು, ಪ್ರಾಕೃತಿಕ ಅಸಮತೋಲನವುಂಟಾಗಿ ದ.ಕ. ಜಿಲ್ಲೆಯೂ ಬರಗಾಲ ಪೀಡಿತ ಜಿಲ್ಲೆಯಾಗುವ ದಿನ ಗೋಚರಿಸಲಿವೆ. ಆ.18ರ ಬಳಿಕ ಈ ಭಾಗದಲ್ಲಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಹಾಗಾದಲ್ಲಿ ಮಳೆಯ ಕೊರತೆಯೂ ನೀಗಬಹುದು ಹಾಗೂ ಜೀವ ನದಿಗಳು ಮತ್ತೆ ಮೈತುಂಬಬಹುದು.

ಪ್ರಕೃತಿಯ ನಾಶದಿಂದ ಈ ಪರಿಸ್ಥಿತಿ
ಮೊದಲೆಲ್ಲಾ ಆಷಾಢ ತಿಂಗಳೆಂದರೆ ಬಹಳ ಮಳೆ. ನೇತ್ರಾವತಿ ನದಿಯಲ್ಲಿ ಅಕ್ಟೋಬರ್- ನವೆಂಬರ್ ತಿಂಗಳಲ್ಲೂ ಉತ್ತಮ ನೀರಿತ್ತು. ಆದರೆ ಈಗ ಮೊದಲಿನ ಮಳೆಯೂ ಇಲ್ಲ. ಮಳೆ ನೀರು ಇಂಗಲೂ ಅವಕಾಶವಿಲ್ಲ. ಹಾಗಾಗಿ ಭೂಗರ್ಭ ಒಣಗಿ ಹೋಗಿ ಅಂತರ್ಜಲವೇ ಬತ್ತಿ ಹೋಗಿವೆ. ಈಗ ಮಳೆಗಾಲದಲ್ಲೂ ನೀರಿನ ಒರತೆಗಳು ಕಾಣಸಿಗುವುದೇ ಕಡಿಮೆ. ಈ ರೀತಿ ಆಷಾಢದಲ್ಲಿ ಮಳೆ ಕೈಕೊಟ್ಟಿದ್ದು, ನದಿಯಲ್ಲಿ ಇಷ್ಟು ಬೇಗ ನೀರು ಖಾಲಿಯಾಗಿರುವುದು ನಾನು ತಿಳಿದ ಅನುಭವದಲ್ಲಿ ಇದೇ ಮೊದಲಿರಬಹುದು. ಮೊದಲು ನಾವೆಲ್ಲಾ ಇಲ್ಲಿಂದ ನೆಲ್ಯಾಡಿಗೆಲ್ಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದುಕೊಂಡೇ ಸಾಗುತ್ತಿದ್ದೆವು. ಅಷ್ಟು ನೆರಳಿತ್ತು. ಆದರೆ ಈಗ ದ್ವಿಚಕ್ರ ವಾಹನದಲ್ಲಿ ಕೂಡಾ ಹೋಗಲು ಆಗುತ್ತಿಲ್ಲ. ಯಾಕೆಂದರೆ ಹೆದ್ದಾರಿ ಬದಿಯ ಎಲ್ಲಾ ಮರಗಳು ನಾಶವಾಗಿವೆ. ಹೀಗೆ ಎಲ್ಲಾ ಕಡೆ ಪ್ರಕೃತಿಯ ನಾಶ ಆಗುತ್ತಿರುವುದರಿಂದ ಇಂತಹ ಪರಿಸ್ಥಿತಿ ಎದುರಾಗಿದೆ. ಕೆಲವರು ಈಗ ಮಳೆ ಇಲ್ಲ. ಓಡಾಟಕ್ಕೆ ತೊಂದರೆ ಇಲ್ಲ ಎಂದು ಖುಷಿ ಪಡುವವರೂ ಇದ್ದಾರೆ. ಆದರೆ ಇದರ ಪರಿಣಾಮ ಇನ್ನೊಂದೆರಡು ತಿಂಗಳಲ್ಲೇ ಗೊತ್ತಾಗುತ್ತದೆ.

—–ಎಂ. ಇಸ್ಮಾಯೀಲ್ ಕೆರೆಮೂಲೆ, ಹಿರಿಯ ಕೃಷಿಕರು

ಈ ರೀತಿಯ ಪರಿಸ್ಥಿತಿ ಇದೇ ಮೊದಲು
ಪ್ರಾಕೃತಿಕ ವಿಕೋಪ ರಕ್ಷಣಾ ತಂಡದಲ್ಲಿ 2017ರಿಂದ ನಾನು ಉಪ್ಪಿನಂಗಡಿಯಲ್ಲಿದ್ದೇನೆ. ವರ್ಷದ ಮಳೆಗಾಲದ ಮೂರು ತಿಂಗಳು ನಮ್ಮ ಕರ್ತವ್ಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿಯಿರುವ ನೇತ್ರಾವತಿ ನದಿ ದಡದಲ್ಲಿ. ಪ್ರತಿ ವರ್ಷವೂ ಆಗಸ್ಟ್ ಬಳಿಕವೂ ನೇತ್ರಾವತಿ ನದಿಯಲ್ಲಿ ಉತ್ತಮ ನೀರಿನ ಹರಿವು ಇರುತ್ತಿತ್ತು. ಆದರೆ ಈ ಬಾರಿ ಮಾತ್ರ ಈಗಲೇ ನದಿಯಲ್ಲಿ ಮರಳು ಕಾಣತೊಡಗಿದೆ. ಈ ಬಾರಿ ನೇತ್ರಾವತಿ ಮೈದುಂಬಿ ಹರಿದಿರುವುದೆಂದರೆ ಅದು ಜುಲೈ 23ರಿಂದ 25ರವರೆಗೆ ಮಾತ್ರ. ನಾನು ಇಲ್ಲಿ ಕರ್ತವ್ಯ ನಿರ್ವಹಿಸಲು ಆರಂಭಿಸಿದ ಬಳಿಕ ನದಿ ಈಗಲೇ ಈ ಪರಿಸ್ಥಿತಿಗೆ ಬಂದಿರುವುದು ನೋಡುತ್ತಿರುವುದು ಇದೇ ಮೊದಲು.

—ದಿನೇಶ್ ಬಿ., ಪ್ರಭಾರ ಘಟಕಾಧಿಕಾರಿ, ಗೃಹರಕ್ಷಕದಳ

LEAVE A REPLY

Please enter your comment!
Please enter your name here