ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರಾಜ್ಯ ಅಪೆಕ್ಸ್ ಬ್ಯಾಂಕ್‌ನ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ

0

ಆ.19: ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಸನ್ಮಾನ

ವರದಿ: ಸುನೀಲ್ ಕಾವು

ಕಾವು: ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿ. ಬೆಂಗಳೂರು ಇವರು ನೀಡುವ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿಗೆ ತಾಲೂಕಿನ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಆಯ್ಕೆಯಾಗಿದೆ. 2021-22ನೇ ಸಾಲಿನಲ್ಲಿ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರವು ಬ್ಯಾಂಕಿಂಗ್ ವ್ಯವಹಾರದಲ್ಲಿ ಸಾಧಿಸಿರುವ ಗಣನೀಯ ಪ್ರಗತಿ ಮತ್ತು ಸೇವೆಯನ್ನು ಪರಿಗಣಿಸಿ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿಗೆ ಅಯ್ಕೆ ಮಾಡಿದ್ದು, ಆ.19ರಂದು ಮಂಗಳೂರಿನಲ್ಲಿ ನಡೆಯಲಿರುವ ಎಸ್‌ಸಿಡಿಸಿಸಿ ಬ್ಯಾಂಕಿನ ಮಹಾಸಭೆಯಲ್ಲಿ ಸದ್ರಿ ಪ್ರಶಸ್ತಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.


ಸಂಘದ ಕಾರ್ಯ ಸಾಧನೆ:
110 ವರ್ಷಗಳ ಇತಿಹಾಸ ಹೊಂದಿರುವ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಮಾಡ್ನೂರು ಮತ್ತು ನೆಟ್ಟಣಿಗೆ ಮುಡ್ನೂರು ಗ್ರಾಮವ್ಯಾಪ್ತಿಯನ್ನು ಹೊಂದಿದ್ದು, ಕಾವುನಲ್ಲಿ ಪ್ರಧಾನ ಕಛೇರಿ, ಈಶ್ವರಮಂಗಲ ಮತ್ತು ಕರ್ನೂರಿನಲ್ಲಿ ಶಾಖೆಗಳನ್ನು ಹೊಂದಿದೆ. ಸಂಘವು ನಿರಂತರವಾಗಿ ಉತ್ತಮ ಪ್ರಗತಿ, ಸಾಧನೆಯನ್ನು ಮಾಡುತ್ತಾ ಬರುತ್ತಿದ್ದು, ಆಡಿಟ್ ವರದಿಯಲ್ಲೂ ನಿರಂತರವಾಗಿ ಎ ತರಗತಿಯನ್ನು ಪಡೆದುಕೊಂಡಿದೆ. ಸಂಘವು 2021-22ನೇ ಸಾಲಿನಲ್ಲಿ ಸೇರಿದಂತೆ ಹಲವು ಬಾರಿ ಸಾಲ ವಸೂಲಾತಿಯಲ್ಲಿ ಶೇ.100 ಸಾಧನೆಯನ್ನು ಮಾಡಿತ್ತು.


2022-23ರಲ್ಲಿ ಸಾರ್ವಕಾಲಿಕ ದಾಖಲೆ:
ಸಂಘವು 2022-23ರ ಆರ್ಥಿಕ ವರ್ಷದಲ್ಲಿ ಎಲ್ಲಾ ವಿಭಾಗದಲ್ಲೂ ಸಾರ್ವಕಾಲಿಕ ದಾಖಲೆಯನ್ನು ಮಾಡಿದೆ. ಪ್ರಮುಖವಾಗಿ ರೂ. 243.48ಕೋಟಿ ವಾರ್ಷಿಕ ವ್ಯವಹಾರ ನಡೆಸಿ, ರೂ. 1.13ಕೋಟಿ ನಿವ್ವಳ ಲಾಭಗಳಿಸಿ ಸದಸ್ಯರಿಗೆ ಶೇ.16 ಡಿವಿಡೆಂಡ್ ನೀಡಲಾಗಿದೆ. ಸಂಘದಲ್ಲಿ 2181 ಜನ ಸದಸ್ಯರಿದ್ದು, ರೂ.2,24,17,330 ಪಾಲು ಬಂಡವಾಳವಿದೆ. ಕಳೆದ ವರ್ಷಾಂತ್ಯಕ್ಕೆ ವಿವಿಧ ಠೇವಣಿಗಳಾಗಿ ರೂ. 34,26,49,692 ಹೊಂದಿದ್ದು, ವರ್ಷಾಂತ್ಯಕ್ಕೆ ರೂ.28,42,24,251 ಸಾಲ ಹೊರ ಬಾಕಿ ಇರುತ್ತದೆ.


ವ್ಯಾಪಾರ ವಹಿವಾಟು:
ಸಂಘದಲ್ಲಿ ಸದಸ್ಯರಿಗೆ ಮತ್ತು ಗ್ರಾಹಕರಿಗೆ ಕೃಷಿ ಅನುಕೂಲಕ್ಕಾಗಿ ರಾಸಾಯನಿಕ ಮತ್ತು ಸಾವಯವ ರಸಗೊಬ್ಬರ, ಕೀಟನಾಶಕ, ರಬ್ಬರ್ ಪರಿಕರ, ಕೃಷಿ ಉಪಕರಣ, ಪಡಿತರ ವ್ಯವಸ್ಥೆ ಸಮರ್ಪಕವಾಗಿ ನಡೆಯುತ್ತಿದ್ದು ಸಂಘದ ಪ್ರಧಾನ ಕಛೇರಿ ಮತ್ತು ಈಶ್ವರಮಂಗಲ ಶಾಖೆಯಲ್ಲಿ ರಬ್ಬರ್ ಖರೀದಿ ವ್ಯವಹಾರ ನಡೆಯುತ್ತಿದೆ.


ಸಹಕಾರಿ ಸೂಪರ್ ಮಾರ್ಟ್:
ಸಂಘವು ತನ್ನ ಪ್ರಧಾನ ಕಛೇರಿಯ ಕಾವುನಲ್ಲಿರುವ ಸ್ವಂತ ಕಟ್ಟಡದಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಸಹಕಾರಿ ಮಾರ್ಟ್‌ನ್ನು ತೆರೆದು, ಗ್ರಾಹಕರಿಗೆ ಮಿತದರದಲ್ಲಿ ದಿನಬಳಕೆ ವಸ್ತುಗಳನ್ನು ಮಾರಾಟ ಮಾಡುತ್ತಿದೆ. ಆ ಮೂಲಕ ತಾಲೂಕಿನಲ್ಲಿಯೇ ಮೊದಲ ಸಹಕಾರಿ ಮಾರ್ಟ್ ತೆರೆದ ಹೆಗ್ಗಳಿಕೆಗೆ ಪಾತ್ರವಾಗಿದೆ.


ಆಡಳಿತ ಮಂಡಳಿ:
ಸಂಘದ ಆಡಳಿತ ಮಂಡಳಿಯಲ್ಲಿ ನನ್ಯ ಅಚ್ಚುತ ಮೂಡೆತ್ತಾಯರವರು ಅಧ್ಯಕ್ಷರಾಗಿ ಸಂಘವನ್ನು ಯಶಸ್ವಿಯಾಗಿ ಮುನ್ನಡೆಸಿ ಅಭಿವೃದ್ಧಿಯನ್ನು ಕಂಡಿದೆ. ಸಂಘದಲ್ಲಿ ಉಪಾಧ್ಯಕ್ಷರಾಗಿ ರಮೇಶ್ ಪೂಜಾರಿ ಮುಂಡ್ಯ, ನಿರ್ದೇಶಕರುಗಳಾಗಿ ಪ್ರವೀಣ್ ರೈ ಮೇನಾಲ, ಮಂಜುನಾಥ ರೈ ಸಾಂತ್ಯ, ಶಿವಪ್ರಸಾದ್ ಕೊಚ್ಚಿ, ಲೋಕೇಶ್ ಚಾಕೋಟೆ, ಹೇಮಾವತಿ ಚಾಕೋಟೆ, ಮೋಹನಾಂಗಿ ಬೀಜಂತಡ್ಕ, ಶ್ರೀಧರ್ ರಾವ್ ನಿಧಿಮುಂಡ, ರಾಮಣ್ಣ ನಾಯ್ಕ ಕುದ್ರೋಳಿ, ಲೋಹೀತ್ ಅಮ್ಚಿನಡ್ಕ, ವಲಯ ಮೇಲ್ವಿಚಾರಕ ಶರತ್ ಡಿ ಇವರುಗಳು ಕಾರ್ಯನಿರ್ವಹಿಸುತ್ತಿದ್ದು, ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಕೇಶವಮೂರ್ತಿ ಪಿ.ಜಿ ಮತ್ತು ಸಿಬ್ಬಂದಿ ವರ್ಗದವರು ಸಂಘದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

110 ವರ್ಷಗಳ ಇತಿಹಾಸ ಹೊಂದಿರುವ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಕೇವಲ 2 ಗ್ರಾಮ ವ್ಯಾಪ್ತಿಯನ್ನು ಹೊಂದಿದ್ದರೂ ವರ್ಷದಿಂದ ವರ್ಷಕ್ಕೆ ದಾಖಲೆಯ ಸಾಧನೆಯನ್ನು ಮಾಡುತ್ತಿದೆ. ಕಳೆದ ಆರ್ಥಿಕ ವರ್ಷದಲ್ಲಿ 1 ಕೋಟಿಗೂ ಮಿಕ್ಕಿ ನಿವ್ವಳ ಲಾಭವನ್ನು ಗಳಿಸಿ ಸದಸ್ಯರಿಗೆ ಶೇ.16 ಡಿವಿಡೆಂಡ್ ನೀಡಲಾಗಿದೆ. ಸಂಘದ ಪ್ರಗತಿ, ಸಾಧನೆಗಾಗಿ ಸತತವಾಗಿ ಅನೇಕ ವರ್ಷಗಳಿಂದ ಎಸ್‌ಸಿಡಿಸಿಸಿ ಬ್ಯಾಂಕ್‌ನ ಪ್ರಶಸ್ತಿಗೆ ಆಯ್ಕೆಯಾಗುತ್ತಿತ್ತು, ವಿಶೇಷವಾಗಿ ಈ ಬಾರಿ ರಾಜ್ಯ ಅಪೆಕ್ಸ್ ಬ್ಯಾಂಕ್‌ನ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತಸ ತಂದಿದೆ. ಸಂಘದ ಪ್ರಗತಿ, ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದ ರಾಜ್ಯ ಅಪೆಕ್ಸ್ ಬ್ಯಾಂಕ್‌ಗೆ, ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ಕೃತಜ್ಞರಾಗಿದ್ದೇವೆ. ಮತ್ತು ಸಂಘವು ನಿರಂತರವಾಗಿ ಗಣನೀಯವಾದ ಸಾಧನೆ ಮಾಡಲು ಸಹಕರಿಸುತ್ತಿರುವ ಆಡಳಿತ ಮಂಡಳಿ ನಿರ್ದೇಶಕರುಗಳಿಗೆ, ಸಂಘದ ಸದಸ್ಯರುಗಳಿಗೆ, ಎಸ್‌ಸಿಡಿಸಿಸಿ ಬ್ಯಾಂಕ್‌ಗೆ, ಸಂಘದ ಸಿಬ್ಬಂದಿ ವರ್ಗಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದೇವೆ.

-ನನ್ಯ ಅಚ್ಚುತ ಮೂಡೆತ್ತಾಯ,
ಅಧ್ಯಕ್ಷರು, ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ

LEAVE A REPLY

Please enter your comment!
Please enter your name here