ನ್ಯಾಯಾಂಗ ತನಿಖೆಗೆ ಆದೇಶಿಸಿದ ರಾಜ್ಯ ಸರ್ಕಾರ-40% ಕಮಿಷನ್ ಆರೋಪ

0

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು, ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರಕಾರದ ಆಡಳಿತದಲ್ಲಿ ಸಾರ್ವಜನಿಕ ಕೆಲಸಗಳಿಗಾಗಿ ಸಾರ್ವಜನಿಕ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪವನ್ನು ಮಾಡಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದರು.ವಿಧಾನಸಭೆ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್, ಆಗಿನ ಆಡಳಿತ ಪಕ್ಷ ಬಿಜೆಪಿ ವಿರುದ್ಧ 40 ಪರ್ಸೆಂಟ್ ಕಮಿಷನ್ ವಿಚಾರವನ್ನು ಪ್ರಮುಖ ಅಸ್ತ್ರವಾಗಿ ಬಳಸಿಕೊಂಡಿತ್ತು. ಭ್ರಷ್ಟಾಚಾರದ ವಿರುದ್ಧ ದ.ಕ.ಜಿಲ್ಲೆಯಿಂದಲೂ ಗುತ್ತಿಗೆದಾರರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದರು.

ಬೆಂಗಳೂರು: ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಾರೀ ಸದ್ದು ಮಾಡಿದ್ದ 40 ಪರ್ಸೆಂಟ್ ಕಮಿಷನ್ ಆರೋಪದ ಬಗ್ಗೆ ನ್ಯಾಯಾಂಗ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆದೇಶಿಸಿದೆ.

ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಮಾಡಿದ್ದ ಕಮಿಷನ್ ಆರೋಪದ ತನಿಖೆಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿ ಆದೇಶ ಹೊರಡಿಸಿದೆ. ಸ್ಥಳ ಹಾಗೂ ದಾಖಲಾತಿಗಳನ್ನು ಪರಿಶೀಲಿಸಿ ವಿವರವಾದ ತನಿಖೆ ನಡೆಸಿ, ಲೋಪದೋಷಗಳ ಮಾಹಿತಿ ಹಾಗೂ ಕಾರಣರಾದ ಆರೋಪಿಗಳನ್ನು ಪತ್ತೆ ಮಾಡಿ ಸಂಪೂರ್ಣ ವರದಿಯನ್ನು ಒಂದು ತಿಂಗಳಲ್ಲಿ ನೀಡಬೇಕು. ಹಾಗೇ ಈ ಪ್ರಕರಣಕ್ಕೆ ಸಂಬಂಧಿಸಿದ ಅಗತ್ಯ ಕಡತ, ದಾಖಲೆಗಳನ್ನು ಆಯಾ ಇಲಾಖೆಯ ಅಧಿಕಾರಿಗಳು ಈ ತನಿಖಾ ಸಮಿತಿಗೆ ನೀಡಬೇಕೆಂದು ಆದೇಶದಲ್ಲಿ ಸೂಚಿಸಲಾಗಿದೆ.

ಪ್ರಧಾನಿಗೆ ಪತ್ರ ಬರೆಯಲಾಗಿತ್ತು:
ಎಲ್ಲ ಸಾರ್ವಜನಿಕ ಯೋಜನೆಗಳಲ್ಲಿ ಶೇ.40ರಷ್ಟು ಕಮಿಷನ್ ಪಡೆಯುತ್ತಿರುವ ಬಗ್ಗೆ ಆರೋಪಿಸಿ ರಾಜ್ಯ ಗುತ್ತಿಗೆದರರ ಸಂಘದವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂಗೆ ಪತ್ರ ಬರೆದು ಈ ಕುರಿತು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಕೋರಿದ್ದರು. ದ.ಕ.ಜಿಲ್ಲೆಯಿಂದಲೂ ಗುತ್ತಿಗೆದಾರರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದರು.

ಕಾಮಗಾರಿ ಆರಂಭಕ್ಕೂ ಮುನ್ನವೇ ಜನ ಪ್ರತಿನಿಧಿಗಳಿಗೆ ಶೇ.25ರಿಂದ 30ರಷ್ಟು ಕಮಿಷನ್ ನೀಡಿದರೆ, ಉಳಿದ ಹಣವನ್ನು ಕಾಮಗಾರಿ ಮುಗಿದ ನಂತರ ಪಾವತಿಸಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು. ಆದರೂ,ಈ ಗಂಭೀರ ಆರೋಪಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನಿಯಮಗಳು ಮತ್ತು ಕಾಮಗಾರಿಗಳ ಗುಣಮಟ್ಟದ ಪ್ರಕಾರ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆಯೇ ಎಂದು ಆಯೋಗವು ತನಿಖೆ ನಡೆಸಲಿದೆ.

ಸಾಕ್ಷಿ ಸಮೇತ ಸಾಬೀತುಪಡಿಸಲಿ – ಮಾಜಿ ಸಿಎಂ ಬೊಮ್ಮಾಯಿ ಆಗ್ರಹ
ಹಿಂದಿನ ಬಿಜೆಪಿ ಆಡಳಿತದಲ್ಲಿ 40 ಪರ್ಸೆಂಟ್ ಕಮಿಷನ್ ಇತ್ತು ಎಂಬುದನ್ನು ಸಾಕ್ಷಿ ಸಮೇತ ಸಾಬೀತುಪಡಿಸಬೇಕು. ಹಿಂದಿನ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳು ಅಥವಾ ಅಕ್ರಮಗಳ ಬಗ್ಗೆ ತನಿಖೆ ನಡೆಸಿ, ಸತ್ಯ ಹೊರಬರಲಿ ಎಂದು ತಾನು ಆಗ್ರಹಿಸುವುದಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೆಲ ದಿನಗಳ ಹಿಂದೆ ಮಾಧ್ಯಮದವರೊಂದಿಗೆ ಮಾತನಾಡಿದ ವೇಳೆ ಹೇಳಿದ್ದರು. 40 ಪರ್ಸೆಂಟ್ ಕಮಿಷನ್ ಆಪಾದನೆ ಮಾಡಿದ್ದು ಅವರು, ಅದನ್ನು ಈಗ ಸಾಕ್ಷ್ಯ ಸಮೇತ ಸಾಬೀತುಪಡಿಸಲಿ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದು, ಎಲ್ಲ ಪುರಾವೆಗಳೊಂದಿಗೆ 40 ಪರ್ಸೆಂಟ್ ಕಮಿಷನ್ ಇದೆ ಎಂದು ತೋರಿಸಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಬೊಮ್ಮಾಯಿ ಹೇಳಿದ್ದರು.

ಉಪ್ಪು ತಿಂದವರು ನೀರು ಕುಡಿಯಬೇಕಲ್ಲವೇ -ಸಿದ್ಧರಾಮಯ್ಯ ಟ್ವೀಟ್
ನಾವು ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹಗರಣಗಳನ್ನು ತನಿಖೆ ಮಾಡಿಸುವ ಭರವಸೆ ನೀಡಿದ್ದೆವು. ನಾಡಿನ ಮತದಾರರು ನಮ್ಮ ಮಾತಿನ ಮೇಲೆ ನಂಬಿಕೆಯಿಟ್ಟು ಬಿಜೆಪಿಯ ಭ್ರಷ್ಟಾಚಾರ, ಕಮಿಷನ್ ಹಾವಳಿ, ತೆರಿಗೆ ಲೂಟಿಯ ವಿರುದ್ಧ ಮತ ಚಲಾಯಿಸಿ 135 ಸ್ಥಾನಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ ಸುಭದ್ರ, ಸುಸ್ಥಿರ ಸರ್ಕಾರ ರಚನೆಗೆ ಅವಕಾಶ ನೀಡಿದ್ದಾರೆ. ಈಗ ಜನರಿಗೆ ನೀಡಿದ್ದ ವಚನ ಪಾಲನೆ ನಮ್ಮ ಕರ್ತವ್ಯವಾಗಿದ್ದು ಬಿಜೆಪಿ ಸರ್ಕಾರದ 40% ಕಮಿಷನ್ ಹಗರಣವನ್ನು ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದೇವೆ. ಬಿಜೆಪಿ ಅವಧಿಯಲ್ಲಿ ಕಾಮಗಾರಿಯನ್ನೇ ನಡೆಸದೆ, ಹಳೆಯ ಕಾಮಗಾರಿಗಳಿಗೆ, ಇನ್ನು ಕೆಲವು ಕಡೆ ಅರ್ಧಂಬರ್ಧ ಕೆಲಸ ಮಾಡಿ ಬಿಲ್ ಹಣ ಪಡೆಯಲಾಗಿದೆ. ನ್ಯಾಯಯುತವಾಗಿ ಕಾಮಗಾರಿ ಮಾಡಿದ ಯಾವೊಬ್ಬ ಗುತ್ತಿಗೆದಾರನಿಗೂ ಅನ್ಯಾಯವಾಗಲು ನಮ್ಮ ಸರ್ಕಾರ ಬಿಡುವುದಿಲ್ಲ. ಈ ಬಗ್ಗೆ ಗುತ್ತಿಗೆದಾರರಿಗೆ ಭಯ ಬೇಡ.. ಆದರೆ ಉಪ್ಪು ತಿಂದವರು ನೀರು ಕುಡಿಯಬೇಕಲ್ಲವೇ? ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ಹಿಂದೆ ಟ್ವೀಟ್ ಮಾಡಿದ್ದರು.

LEAVE A REPLY

Please enter your comment!
Please enter your name here