ಮೂಡಂಬೈಲು ಶಾಲೆಯಲ್ಲಿ ಆಟಿ ಊಟ – ಆಹಾರ ಅರಿವು ಸರಣಿ ಕಾರ್ಯಕ್ರಮ

0

ಪುತ್ತೂರು: ತುಳು ನಾಡಿನ ವಿಶೇಷ ಆಚರಣೆಯಾದ ಆಟಿಕೂಟವನ್ನು ಎಲ್ಲೆಡೆ ಒಂದು ದಿನ ವಿಜೃಂಭಣೆಯಿಂದ ಆಚರಿಸಿದರೆ , ಪುಣಚ ಗ್ರಾಮದ ಮೂಡಂಬೈಲು ಶಾಲೆಯಲ್ಲಿ ಆಟಿ ತಿಂಗಳು ಪೂರ್ತಿ ದಿನಕ್ಕೆರಡು ಮನೆಯಿಂದ ಆಟಿ ತಿಂಗಳಲ್ಲಿ ಮಾತ್ರ ಸಿಗುವ ಪ್ರಕೃತಿಯ ಸಂಪತ್ತನ್ನು ಬಳಸಿಕೊಂಡು ಪೌಷ್ಟಿಕಾಂಶಯುಕ್ತವಾದ ಆಹಾರ ತಯಾರಿಸಿ ಮಕ್ಕಳಿಗೆ ಬಡಿಸಿ ಪೋಷಕರು ಖುಷಿಪಟ್ಟಿದ್ದಾರೆ.

ನುಗ್ಗೆಸೊಪ್ಪು ಹಲಸಿನ ಬೀಜದ ಪಲ್ಯ ,ನುಗ್ಗೆಸೊಪ್ಪಿನ ಚಟ್ನಿಪುಡಿ,ಕೆಸುವಿನ ಸೊಪ್ಪಿನ ಪತ್ರೊಡೆ, ಪತ್ರೊಡೆ ಒಗ್ಗರಣೆ,ಬೆಂದಿ,ಕಣಿಲೆ ಮತ್ತು ಹೆಸರುಕಾಳು ಪಲ್ಯ,ತಗಟೆಸೊಪ್ಪು ಹಲಸಿನ ಬೀಜದ ಪಲ್ಯ,ಕೆಸುವಿನ ದಂಟು ಮತ್ತು ಹಲಸಿನ ಬೀಜದ ಸಾಂಬಾರ್, ಚೇಟ್ಲ ಮತ್ತು ಹಲಸಿನ ಬೀಜದ ಸಾಂಬಾರ್,ಉಪ್ಪಿನಲ್ಲಿ ಹಾಕಿದ ಹಲಸಿನ ಸೊಳೆ ಪಲ್ಯ,ಜೀಗುಜ್ಜೆ ಸಾಂಬಾರ್,ಒಂದೆಲಗ ಚಟ್ನಿ,ದೊಡ್ಡಪತ್ರೆ ಚಟ್ನಿ,ನೆಲನೆಲ್ಲಿ ಚಟ್ನಿ,ಅನಾನಸ್ ಗೊಜ್ಜು,ಉಂಡ್ಳುಕ,ಎಳನೀರಿನ ಪುಡ್ಡಿಂಗ್,ಹಲಸಿನ ಪಾಯಸ,ಹೈಬ್ರೀಡ್ ಒಂದೆಲಗ ಪಕೋಡ,ಬಾಳೆ ಕೂಂಬೆ ಪಲ್ಯ,ಹಲಸಿನ ಸುಟ್ಟೋವು,ಹಲಸಿನ ಬೀಜದ ಹಯಗ್ರೀವ,ಚಟ್ಟಂಬಡೆ,ತಗಟೆ ಸೊಪ್ಪು ದೊಡ್ಡ ಪತ್ರೆ ವಡೆ,ಹಲಸಿನ ಹಪ್ಪಳ,ಅಮಟೆಕಾಯಿ ನೀರುಗೊಜ್ಜು ಇತ್ಯಾದಿ. ಮಕ್ಕಳಿಗೆ ರಸದೌತಣ ಜೊತೆಗೆ ಮಕ್ಕಳು ತಮ್ಮ ಮನೆಯಲ್ಲಿ ಮಾಡಿದ ರೆಸಿಪಿ ಕೇಳಿ ಬರೆದು ತಂದಿದ್ದಾರೆ. ಮನೆಯವರೆಲ್ಲಾ ಸೇರಿ ಪ್ರೀತಿಯಿಂದ ಅಡುಗೆ ತಯಾರಿಸಿದ್ದಾರೆ. ಜೊತೆಗೆ ಪೋಷಕರು ತಾವು ಶಾಲೆಗೆ ಬಂದ ಲೆಕ್ಕದಲ್ಲಿ ನೆನಪಿಗಾಗಿ ಬೇರೆ ಬೇರೆ ಗಿಡ ನೆಟ್ಟು ಹೋಗಿದ್ದಾರೆ. ಗೊಬ್ಬರ ತಯಾರಿಕಾ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಅಂಗಡಿಯಿಂದ ದುಬಾರಿ ಬೆಲೆಕೊಟ್ಟು ತರುವ ತರಕಾರಿಗಳಿಗಿಂತಲೂ ಸುತ್ತಲೂ ಸುಲಭವಾಗಿ ಸಿಗುವ ಪದಾರ್ಥಗಳಿಂದ ಆಹಾರದಲ್ಲಿ ಏನೆಲ್ಲಾ ವೈವಿಧ್ಯತೆ ತಯಾರಿಸಬಹುದು ಎಂಬ ವಿಚಾರವನ್ನು ಮಕ್ಕಳಿಗೆ ತಿಳಿಸಿಕೊಡಲಾಯಿತು. ಶಾಲಾ ಮುಖ್ಯಗುರು ಅರವಿಂದ ಕುಡ್ಲ ಕಾರ್ಯಕ್ರಮ ಸಂಯೋಜಿಸಿದ್ದರು. ಶಾಲಾ ಶಿಕ್ಷಕರು ಸಹಕರಿಸಿದ್ದರು.

ಆಟಿ ತಿಂಗಳು ಪೂರ್ತಿ ದಿನಕ್ಕೆರಡು ಮನೆಯವರು ತಮ್ಮ ಮಕ್ಕಳ ಜೊತೆಯಲ್ಲಿ ಮನೆಯಲ್ಲಿ ತಯಾರಿಸಿದ ಆಟಿ ತಿಂಗಳ ವಿಶೇಷ ಆಹಾರ ಪದಾರ್ಥಗಳೊಂದಿಗೆ ಶಾಲೆಗೆ ಬಂದು ಶಾಲಾ ಮಕ್ಕಳ ಜೊತೆಯಲ್ಲಿ ಆಹಾರ ಪದಾರ್ಥ ಸೇವಿಸಿ ಖುಷಿಪಟ್ಟದ್ದು ಅಲ್ಲದೆ ಶಾಲಾ ಆವರಣದಲ್ಲಿ ಗಿಡ ನೆಟ್ಟಿದ್ದಾರೆ.

LEAVE A REPLY

Please enter your comment!
Please enter your name here