ನಿವ್ವಳ ಲಾಭ 83,626 , ಲೀಟರ್ ಹಾಲಿಗೆ 31 ಪೈಸೆ ಬೋನಸ್
ನಿಡ್ಪಳ್ಳಿ: ನಿಡ್ಪಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ 2022-23 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸಂಘದ ಅಧ್ಯಕ್ಷ ಎ.ರಾಧಾಕೃಷ್ಣ ರೈ ಇವರ ಅಧ್ಯಕ್ಷತೆಯಲ್ಲಿ ಆ.22 ರಂದು ಸಂಘದ ವಠಾರದಲ್ಲಿ ಜರಗಿತು.
ಸಂಘ ವರದಿ ಸಾಲಿನಲ್ಲಿ ಒಟ್ಟು ರೂ. 83,626 ಲಾಭ ಗಳಿಸಿದ್ದು, ಪ್ರತಿ ಲೀಟರ್ ಹಾಲಿಗೆ 31 ಪೈಸೆ ಬೋನಸ್ ನೀಡಲಾಗುವುದು ಎಂದು ಅಧ್ಯಕ್ಷರು ಹೇಳಿದರು. ಪ್ರಸ್ತುತ ಸಂಘದಲ್ಲಿ ಒಟ್ಟು 123 ಸದಸ್ಯರಿದ್ದು, 73 ಸದಸ್ಯರು ಸಂಘಕ್ಕೆ ಹಾಲು ಪೂರೈಸುತ್ತಿದ್ದಾರೆ. ಸಂಘದ ಅಭಿವೃದ್ಧಿ ದೃಷ್ಟಿಯಿಂದ ಹೆಚ್ಚಿನ ರೈತರು ಹೈನುಗಾರಿಕೆ ನಡೆಸಿ ಗುಣಮಟ್ಟದ ಹಾಲನ್ನು ಪೂರೈಸುವಂತೆ ವಿನಂತಿಸಿದರು. ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಇರುವ ನ್ಯೂನ್ಯತೆಯನ್ನು ಸರಿ ಪಡಿಸಿ ಆದಷ್ಟು ಬೇಗ ಕಟ್ಟಡ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲು ಪ್ರಯತ್ನ ನಡೆಯುತ್ತಿದ್ದು ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಅಧ್ಯಕ್ಷರು ಹೇಳಿದರು.
ಕಾರ್ಯದರ್ಶಿ ದಯಾಮಣಿ ಎಸ್.ರೈ ಎಲ್ಲರನ್ನೂ ಸ್ವಾಗತಿಸಿ, ಸಾಮಾನ್ಯ ಸಭೆಯ ನೋಟೀಸ್ ಓದಿ ದಾಖಲಿಸಿದರು. ನಂತರ ವರದಿ ಸಾಲಿನ ವಾರ್ಷಿಕ ವರದಿ ವಾಚಿಸಿದರು. ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ 2022-23 ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಮಂಡಿಸಿದರು. ಅದರ ಪರಿಶೀಲನೆ ನಡೆಸಿ ಮಂಜೂರಾತಿ ಪಡೆದು ಅನುಪಾಲನಾ ವರದಿ ಪರಿಗಣಿಸಲಾಯಿತು. ನಂತರ ಸಂಘದ ಅಭಿವೃದ್ಧಿಗೆ ಬೇಕಾದ ಮಾಹಿತಿ ನೀಡಿದರು.
ದ.ಕ.ಹಾಲು ಒಕ್ಕೂಟದ ಪಶುವೈದ್ಯಾಧಿಕಾರಿ ಡಾ.ಅನುದೀಪ್ ಮಾತನಾಡಿ, ಹಸುಗಳಿಗೆ ಬರುವ ಚರ್ಮಗಂಟು ರೋಗ ಮತ್ತು ಕಾಲು ಬಾಯಿ ಜ್ವರದ ಲಕ್ಷಣಗಳು ಮತ್ತು ಅದನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು. ಹಸು ಮತ್ತು ಕರು ಸಾಕಾಣಿಕೆ ಮಾಡುವ ಕ್ರಮಗಳ ಬಗ್ಗೆ ವಿವರಿಸಿದರು.
ಬಹುಮಾನ ವಿತರಣೆ:
ಅತಿ ಹೆಚ್ಚು ಹಾಲು ಹಾಕಿದ ಅಧ್ಯಕ್ಷ ಆನಾಜೆ ರಾಧಾಕೃಷ್ಣ ರೈ ಪ್ರಥಮ, ನಿರ್ದೇಶಕಿ ಡೆಲ್ಫಿನ್ ಡಿ’ ಸೋಜಾ ದ್ವಿತೀಯ ಹಾಗೂ ನಿರ್ದೇಶಕ ಲಿಂಗಪ್ಪ ಗೌಡ ತೃತೀಯ ಸ್ಥಾನ ಪಡೆದು ಕೊಂಡಿದ್ದು ಅತಿಥಿಗಳು ಅವರಿಗೆ ಬಹುಮಾನ ವಿತರಿಸಿದರು. ಅಲ್ಲದೆ ಹಾಲು ಪೂರೈಸುವ ಸದಸ್ಯರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.
ಉಪಾಧ್ಯಕ್ಷ ಹರೀಶ್ ಕುಮಾರ್ ಪಿ, ನಿರ್ದೇಶಕರಾದ ಲೋಕನಾಥ ರೈ, ಗಂಗಾಧರ ಸಿ.ಹೆಚ್, ನಾಗೇಶ ಗೌಡ, ಲಿಂಗಪ್ಪ ಗೌಡ, ನಾರ್ಣಪ್ಪ ನಾಯ್ಕ, ಗೀತಾ ನಾಯ್ಕ, ಡೆಲ್ಫಿನ್ ಡಿ’ ಸೋಜಾ, ದೇವಕಿ, ಶೀನಪ್ಪ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹಾಯಕಿ ಲತಾ ಪ್ರಾರ್ಥಿಸಿ, ಉಪಾಧ್ಯಕ್ಷ ಹರೀಶ್ ಕುಮಾರ್ ವಂದಿಸಿದರು. ಕೃತಕ ಗರ್ಭಧಾರಣಾ ದಾರ ಕೊರಗಪ್ಪ ಗೌಡ ಸಹಕರಿಸಿದರು.ಸಂಘದ ಸದಸ್ಯರು ಪಾಲ್ಗೊಂಡರು.