ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ – ವ್ಯವಹಾರ ರೂ.161ಕೋಟಿ, ಲಾಭ ರೂ.1ಕೋಟಿ 79 ಸಾವಿರ, ಡಿವಿಡೆಂಟ್ ಶೇ.14 ಘೋಷಣೆ

0

ತಿಂಗಳಾಡಿಯಲ್ಲಿ 1 ಕೋಟಿ 4 ಲಕ್ಷದಲ್ಲಿ ಕಛೇರಿ ಕಟ್ಟಡ, ಕೆಯ್ಯೂರಿನಲ್ಲಿ 44 ಲಕ್ಷ ರೂ.ವೆಚ್ಚದಲ್ಲಿ ಗೋದಾಮು: ಶಶಿಧರ ರಾವ್

  • ಗ್ರಾಮ ಪಂಚಾಯತ್‌ಗೊಂದು ಸಹಕಾರಿ ಸಂಘ ರಚನೆ ವಿಚಾರದಲ್ಲಿ ಸರಕಾರ ಇನ್ನೂ ಯಾವುದೇ ಮಾನದಂಡ ಹೊರಡಿಸಿಲ್ಲ: ಎಸ್.ಬಿ.ಜಯರಾಮ ರೈ

ಪುತ್ತೂರು: ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯು ಆ.23ರಂದು ಸಂಘದ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಲರವರ ಅಧ್ಯಕ್ಷತೆಯಲ್ಲಿ ಕೆಯ್ಯೂರು ಜಯಕರ್ನಾಟಕ ಸಭಾಭವನದಲ್ಲಿ ನಡೆಯಿತು.2022-23ನೇ ವಾರ್ಷಿಕ ವರದಿ ಮಂಡಿಸಿದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ ಕುಮಾರ್ ರೈ ದೇರ್ಲರವರು, ವರದಿ ವರ್ಷದಲ್ಲಿ ಎ ತರಗತಿಯ ಒಟ್ಟು 3051 ಜನ ಸದಸ್ಯರಿದ್ದು ರೂ.2.36 ಕೋಟಿ ಪಾಲು ಬಂಡವಾಳ ಇರುತ್ತದೆ. ವರದಿ ವರ್ಷಾಂತ್ಯದಲ್ಲಿ ಒಟ್ಟು ರೂ.16.11 ಕೋಟಿ ಠೇವಣಿ ಇರುತ್ತದೆ ಎಂದು ತಿಳಿಸಿದರು.ನಿಧಿಗಳಲ್ಲಿ ಒಟ್ಟು ರೂ.3.54 ಕೋಟಿ ಇದ್ದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಪಡಕೊಂಡ ಸಾಲದಲ್ಲಿ ವರ್ಷಾರಂಭದಲ್ಲಿ ರೂ.12.64 ಕೋಟಿ ಇದ್ದು ರೂ.13.08 ಕೋಟಿ ಪಡಕೊಂಡು ರೂ.13.46 ಕೋಟಿ ಮರುಪಾವತಿಸಲಾಗಿದ್ದು ವರ್ಷಾಂತ್ಯಕ್ಕೆ ರೂ.12.26 ಕೋಟಿ ಹೊರಬಾಕಿ ಇದ್ದು ಯಾವುದೇ ಸುಸ್ತಿ ಇರುವುದಿಲ್ಲ, ಸದಸ್ಯರಿಗೆ ನೀಡಿದ ಸಾಲಗಳಲ್ಲಿ ವರ್ಷಾರಂಭದಲ್ಲಿ ರೂ.18.21 ಕೋಟಿ ಸಾಲ ಇದ್ದು ರೂ.20.53 ಕೋಟಿ ವಿತರಿಸಿ ರೂ.18.೦6 ಕೋಟಿ ವಸೂಲಾಗಿದ್ದು ವರ್ಷಾಂತ್ಯಕ್ಕೆ ರೂ.20.68 ಕೋಟಿ ಹೊರ ಬಾಕಿ ಇದ್ದು ವರದಿ ವರ್ಷದಲ್ಲಿ ಶೇ.98.76 ವಸೂಲಾತಿ ಆಗಿರುತ್ತದೆ ಎಂದು ತಿಳಿಸಿದರು.
ಹವಾಮಾನ ಬೆಳೆ ಆಧಾರಿತ ಬೆಳಿ ವಿಮೆ ಯೋಜನೆಯಲ್ಲಿ ಒಟ್ಟು 680 ಸದಸ್ಯರು ನೋಂದಾಣಿಯಾಗಿದ್ದು ರೂ.28,97,740 ಪಾವತಿಸಲಾಗಿದೆ. ಯಶಸ್ವಿನಿ ಆರೋಗ್ಯ ವಿಮೆ ಯೋಜನೆಯಡಿಯಲ್ಲಿ 1952 ಮಂದಿ ನೋಂದಾವಣಿ ಮಾಡಿಕೊಂಡಿರುತ್ತಾರೆ. 2018 ನೇ ಸಾಲ ಮನ್ನಾ ಯೋಜನೆಗೆ ಸಂಘದಿಂದ ಸಾಲ ಪಡೆದಿರುವ 523 ಸದಸ್ಯರ ಸಾಲ ರೂ.3,54,22,೦೦೦/. ಮಾಹಿತಿ ಕಳುಹಿಸಿದ್ದು ಈ ಪೈಕಿ ಇದುವರೆಗೆ 441 ಸದಸ್ಯರ ರೂಪೇಕಾರ್ಡು ಖಾತೆಗೆ ರೂ.2,84,55,೦೦೦/-ಜಮಾ ಬಂದಿರುತ್ತದೆ ಈ ಪೈಕಿ 12 ಸದಸ್ಯರ ರೂ.8,52,೦೦೦/- ಬರಲು ಬಾಕಿ ಇರುತ್ತದೆ ಎಂದು ತಿಳಿಸಿದರು.ಕ್ಯಾಂಪ್ಕೋ ನೆರವಿನೊಂದಿಗೆ ಅಡಿಕೆ ಖರೀದಿಯಲ್ಲಿ ರೂ.2,31,372 ಕಮೀಷನ್ ಬಂದಿರುತ್ತದೆ.ಕೃಷಿಕರಿಗೆ ರಾಸಾಯನಿಕ ಗೊಬ್ಬರ, ಮೈಲುತುತ್ತು, ಸುಣ್ಣ ಒದಗಿಸುತ್ತಿದ್ದು ರೂ.7೦.1೦ ಲಕ್ಷದ ಸಾಮಾಗ್ರಿಗಳನ್ನು ಮಾರಾಟ ಮಾಡಿರುತ್ತೇವೆ.ದಿನ ಬಳಕೆ ವಸ್ತುಗಳ ಮಾರಾಟ ಮಳಿಗೆಯಾದ ಸಹಕಾರಿ ಮಾರ್ಟ್‌ನ್ನು ಸೆ.1 ರಂದು ಆರಂಭಿಸಿದ್ದು ವರ್ಷಾಂತ್ಯಕ್ಕೆ ರೂ.4.86 ಲಕ್ಷ ಲಾಭ ಬಂದಿರುತ್ತದೆ. ಅಡಿಟ್ ವರ್ಗೀಕರಣ ಎ ತರಗತಿಯಲ್ಲಿದ್ದು ಸಂಘದ ಸೇವೆಯನ್ನು ಪರಿಗಣಿಸಿ 2022-23ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಪ್ರೋತ್ಸಾಹಕ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ ಕುಮಾರ್ ರೈ ದೇರ್ಲ ತಿಳಿಸಿದರು.
ಸಂಘದ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಲ ಮಾತನಾಡಿ, ಸಂಘವು ವರದಿ ಸಾಲಿನಲ್ಲಿ ಒಟ್ಟು ರೂ.161.25 ಕೋಟಿ ವ್ಯವಹಾರ ಮಾಡಿದ್ದು ಸಂಘದ 65 ವರ್ಷಗಳ ಸುಧೀರ್ಘ ಪಯಣದಲ್ಲಿ ಮೊದಲ ಬಾರಿಗೆ ರೂ.1ಕೋಟಿ 79 ಸಾವಿರದ 998 ಲಾಭ ಬಂದಿದ್ದು ಸದಸ್ಯರಿಗೆ ಶೇ.14 ಡಿವಿಡೆಂಟ್ ನೀಡುವುದು ಎಂದು ಘೋಷಿಸಿದರು. ವೇದಿಕೆಯಲ್ಲಿ ನಿರ್ದೇಶಕರುಗಳಾದ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು, ಎಸ್.ಬಿ.ಜಯರಾಮ ರೈ ಬಳಜ್ಜ, ಶಿವರಾಮ ರೈ ಬೊಳಿಕಲಕಜೆ, ಭಾಸ್ಕರ ಬಲ್ಲಾಳ್ ಬೀಡು, ತಾರಾನಾಥ ಕಂಪ, ಲೀಲಾವತಿ ರೈ ಕೋಡಂಬು, ನಿಮಿತಾ ರೈ, ವೀರಪ್ಪ ನಾಯ್ಕ ಪಟ್ಟೆತ್ತಡ್ಕ, ಬಾಬು ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ಸೂರಜ್ ಕುಮಾರ್ ಕೆ ವಿವಿಧ ವರದಿಗಳನ್ನು ಓದಿ ಸಭೆಗೆ ಮಂಡಿಸಿದರು. ಸಂಘದ ಸಿಬ್ಬಂದಿ ಅಣ್ಣು ತಿಂಗಳಾಡಿ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಶಿವರಾಮ ಗೌಡ ಇದ್ಯಪೆ ಸ್ವಾಗತಿಸಿದರು. ನಿರ್ದೇಶಕ ಸೂರ್ಯಪ್ರಸನ್ನ ರೈ ಎಂಡೆಸಾಗು ವಂದಿಸಿದರು. ಸಂಘದ ಸಿಬ್ಬಂದಿಗಳಾದ ನಿರುಪಮ,ಪ್ರೀತಮ್ ರೈ, ಕೌಶಲ್ಯ, ಭವ್ಯ, ದುರ್ಗಾಕಿರಣ್, ಐತ್ತಪ್ಪ ನಾಯ್ಕ, ಪ್ರದೀಪ್ ಶೆಟ್ಟಿ ಸಣಂಗಳ ಸಹಕರಿಸಿದ್ದರು.

ತಿಂಗಳಾಡಿಯಲ್ಲಿ 1 ಕೋಟಿ 4 ಲಕ್ಷದಲ್ಲಿ ಕಛೇರಿ ಕಟ್ಟಡ
ಕೆಯ್ಯೂರಿನಲ್ಲಿ 44 ಲಕ್ಷ ರೂ.ವೆಚ್ಚದಲ್ಲಿ ಗೋದಾಮು: ಶಶಿಧರ್ ರಾವ್ ಬೊಳಿಕ್ಕಲ
ಸಭಾಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಲರವರು ಮಾತನಾಡಿ, ಸಂಘವು ಕಳೆದ ಹಲವು ವರ್ಷಗಳಿಂದ ಸತತ ಲಾಭದತ್ತ ಸಾಗುತ್ತಿದ್ದು ಇದಕ್ಕೆ ಕಾರಣೀಕರ್ತರಾದ ಸರ್ವ ಸದಸ್ಯರುಗಳಿಗೆ, ಆಡಳಿತ ಮಂಡಳಿಗೆ ಹಾಗೂ ಸಾಲವನ್ನು ಕ್ಲಪ್ತ ಸಮಯದಲ್ಲಿ ಮರುಪಾವತಿ ಮಾಡುತ್ತಿರುವ ನಮ್ಮೆಲ್ಲ ಸಾಲದಾರರಿಗೆ ಹಾಗೇ ಡಿಸಿಸಿ ಬ್ಯಾಂಕ್ ಅಧಿಕಾರಿ ವರ್ಗಕ್ಕೆ ಸರಕಾರಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಬೆಳವಣಿಗೆ ನಿಮ್ಮಿಂದಾಗಿ ಸಾಧ್ಯವಾಗಿದೆ ಎಂದರು. ಸಂಘದ ಮುಂದಿನ ಯೋಜನೆಯಾಗಿ ಈಗಾಗಲೇ ತಿಂಗಳಾಡಿಯಲ್ಲಿ ೨೦ ಸೆಂಟ್ಸ್ ಜಾಗವನ್ನು ಖರೀದಿಸಲಾಗಿದ್ದು ಇಲ್ಲಿ ಸುಮಾರು 1 ಕೋಟಿ 4 ಲಕ್ಷ ರೂ.ವೆಚ್ಚದಲ್ಲಿ ಸುಸಜ್ಜಿತ ಕಛೇರಿ ಕಟ್ಟಡ ನಿರ್ಮಾಣ ಮಾಡುವುದು ಹಾಗೇ ಕೆಯ್ಯೂರಿನಲ್ಲಿ ಗೋದಾಮುನ ಕೊರತೆ ಇದ್ದು ಸುಮಾರು 44 ಲಕ್ಷ ರೂ.ವೆಚ್ಚದಲ್ಲಿ ಗೋದಾಮು ನಿರ್ಮಾಣ ಮಾಡುವ ಯೋಜನೆ ಇದೆ. ಇದಕ್ಕೆ ಸರ್ವ ಸದಸ್ಯರು ಸಹಕಾರ ನೀಡಬೇಕು ಎಂದು ಕೇಳಿಕೊಂಡರು.

ಗ್ರಾಮ ಪಂಚಾಯತ್‌ಗೊಂದು ಸಹಕಾರಿ ಸಂಘ ಸ್ಥಾಪನೆಗೆ ಸರಕಾರದಿಂದ ಯಾವುದೇ ಮಾನದಂಡ ಬಿಡುಗಡೆಯಾಗಿಲ್ಲ: ಎಸ್.ಬಿ.ಜಯರಾಮ ರೈ
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳನ್ನು ಒಳಗೊಂಡಂತೆ ಮೈಸೂರು ಪ್ರಾಂತ ಸಹಕಾರ ಸಂಘಗಳ ಜಂಟಿ ನಿಬಂಧಕರ ಕಾರ್ಯವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತ್ಯೇಕ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳನ್ನು ರಚಿಸುವಂತೆ ಜಂಟಿ ನಿಬಂಧಕರು ಹೊರಡಿಸಿದ ಆದೇಶದ ಹಿನ್ನೆಲೆಯಲ್ಲಿ ಒಂದಕ್ಕಿಂತ ಹೆಚ್ಚು ಗ್ರಾಮ ಪಂಚಾಯತ್ ವ್ಯಾಪ್ತಿ ಹೊಂದಿರುವ ಸಹಕಾರ ಸಂಘಗಳು ಅಂತಹ ಗ್ರಾಮಗಳನ್ನು ತಮ್ಮ ಕಾರ್ಯನಿರ್ವಹಣೆ ವ್ಯಾಪ್ತಿಯಿಂದ ಬಿಡುಗಡೆಗೊಳಿಸುವುದು ಅನಿವಾರ್ಯವಾಗಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಸಂಘದ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಲರವರು ಈ ಬಗ್ಗೆ ಮಾಹಿತಿ ನೀಡಿ ಸರಕಾರದ ಆದೇಶ ಹೊರಡಿಸಿದ್ದು ಈ ಬಗ್ಗೆ ಸದಸ್ಯರುಗಳು ಸೂಕ್ತ ಸಲಹೆ ಸೂಚನೆಗಳನ್ನು ನೀಡುವಂತೆ ಕೇಳಿಕೊಂಡರು. ಈ ಬಗ್ಗೆ ಮಾತನಾಡಿದ ನಿವೃತ್ತ ತಹಶೀಲ್ದಾರ್ ವಿಶ್ವನಾಥ ಪೂಜಾರಿ ಕೆಂಗುಡೇಲುರವರು, ಗ್ರಾಮ ಪಂಚಾಯತ್‌ಗೊಂದು ಸಹಕಾರ ಸಂಘ ರಚನೆಯ ಬಗ್ಗೆ ಸರಕಾರದ ಆದೇಶವನ್ನು ಓದಿ ಹೇಳಿದರು ಈ ನಿಟ್ಟಿನಲ್ಲಿ ಕೆಯ್ಯೂರು ಗ್ರಾಮಕ್ಕೆ ಪ್ರತ್ಯೇಕ ಸಂಘ ರಚನೆಯ ಅವಶ್ಯಕತೆ ಇದೆ ಎಂದು ತಿಳಿಸಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿಕ ಕಡಮಜಲು ಸುಭಾಷ್ ರೈ ಮಾತನಾಡಿ, ಈಗಾಗಲೇ ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘವು ಒಗ್ಗಟ್ಟಿನಲ್ಲಿ ಎರಡೂ ಗ್ರಾಮದವರ ಸಹಕಾರ ಪಡೆದುಕೊಂಡು ಕೆಲಸ ನಿರ್ವಹಿಸುತ್ತಿದ್ದು ಒಳ್ಳೆಯ ಅಭಿವೃದ್ಧಿಯತ್ತ ಸಾಗುತ್ತಿದೆ. ಸಹಕಾರಿ ನಿಬಂಧಕರ ಸೂಚನೆ ಇದ್ದರೂ ನಾವು ಬೇರೆ ಸಂಘ ಮಾಡುವುದು ಅಗತ್ಯವಿಲ್ಲ ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳುವ ಈ ಬಗ್ಗೆ ನಿರ್ಣಯ ದಾಖಲಿಸಿಕೊಳ್ಳುವುದು ಉತ್ತಮ ಎಂದು ತಿಳಿಸಿದರು. ಉದ್ಯಮಿ ಬಾಲಚಂದ್ರ ರೈ ಬೆದ್ರುಮಾರು ಮಾತನಾಡಿ,ಸ್ವಾತಂತ್ರ್ಯ ಪೂರ್ವದಿಂದಲೇ ಕೆದಂಬಾಡಿ ಕೆಯ್ಯೂರು ಎಂದು ಇದೆ ಇದನ್ನು ವಿಭಜಿಸುವುದು ಬೇಡ, ನಾವೆಲ್ಲರೂ ಒಟ್ಟಾಗಿ ಸಂಘದ ಅಭಿವೃದ್ದಿಗೆ ಪ್ರೋತ್ಸಾಹ ನೀಡಬೇಕಾಗಿದೆ ಎಂದರು. ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ನಾರಾಯಣ ಪೂಜಾರಿ ಕುರಿಕ್ಕಾರ ಮಾತನಾಡಿ, ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದಲ್ಲಿ ಉತ್ತಮ ವ್ಯವಹಾರ ಇದ್ದು ಅಭಿವೃದ್ಧಿಯತ್ತ ಸಾಗುತ್ತಿದೆ. ಹೀಗಿರುವಾಗ ಸಂಘವು ತಿಂಗಳಾಡಿಯಲ್ಲಿಯೇ ಇರಲಿ ಎಂದು ತಿಳಿಸಿದರು. ಕೆಯ್ಯೂರು ಗ್ರಾ ಪಂ ಮಾಜಿ ಅಧ್ಯಕ್ಷ ಎ.ಕೆ ಜಯರಾಮ ರೈ ಮಾತನಾಡಿ, ಗ್ರಾಮ ಪಂಚಾಯತ್‌ಗೊಂಡು ಸಹಕಾರ ಸಂಘ ರಚನೆಯ ಬಗ್ಗೆ ಸರಕಾರದ ಸುತ್ತೋಲೆ ಬಂದಿದ್ದರೂ ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮುಖ್ಯ ಕಛೇರಿ ತಿಂಗಳಾಡಿಯಲ್ಲಿಯೇ ಇರಲಿ. ಕೆಯ್ಯೂರಿನಲ್ಲಿಯೂ ಗ್ರಾಹಕರಿಗೆ ಎಲ್ಲಾ ರೀತಿಯ ಸೇವೆಗಳು ಸಿಗುವಂತಹ ವ್ಯವಸ್ಥೆ ಆಗಬೇಕು ಎಂದು ತಿಳಿಸಿದರು. ಇದಕ್ಕೆ ಉತ್ತರಿಸಿದ ಸಂಘದ ಅಧ್ಯಕ್ಷ ಶಶಿಧರ ರಾವ್‌ರವರು ಈಗಾಗಲೇ ಸಂಘಕ್ಕೆ ನೂತನ ಸಾಪ್ಟ್‌ವೇರ್ ಅಳವಡಿಕೆಯಾಗಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಕೆಯ್ಯೂರಿನಲ್ಲಿಯೂ ಗ್ರಾಹಕರಿಗೆ ಎಲ್ಲಾ ರೀತಿಯ ಸೌಲಭ್ಯ ಸಿಗಲಿದೆ ಕೆಯ್ಯೂರಿನವರು ತಿಂಗಳಾಡಿಗೆ ಬರುವ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಿದರು. ಸಂಘದ ನಿರ್ದೇಶಕ ಹಾಗೇ ಡಿಸಿಸಿ ಬ್ಯಾಂಕ್ ನಿರ್ದೇಶಕರೂ ಆಗಿರುವ ಎಸ್.ಬಿ.ಜಯರಾಮ ರೈ ಮಾತನಾಡಿ, ಗ್ರಾಮ ಪಂಚಾಯತ್‌ಗೊಂಡು ಸಹಕಾರ ಸಂಘ ರಚನೆಯ ಬಗ್ಗೆ ಸರಕಾರ ಸುತ್ತೋಲೆ ಹೊರಡಿಸಿದೆ ಆದರೆ ಸಂಘ ರಚನೆಯ ಬಗ್ಗೆ ಯಾವುದೇ ಮಾನದಂಡವನ್ನು ಸರಕಾರ ಹೊರಡಿಸಿಲ್ಲ, ಮುಂದಿನ ದಿನಗಳಲ್ಲಿ ಸರಕಾರ ಸರಿಯಾದ ಮಾನದಂಡದೊಂದಿಗೆ ಸುತ್ತೋಲೆ ಹೊರಡಿಸಿದರೆ ಸಂಘ ರಚನೆ ಮಾಡಲೇಬೇಕಾಗಿದೆ. ಈ ಬಗ್ಗೆ ಸದ್ಯಕ್ಕೆ ಯಾವುದೇ ಗೊಂದಲ ಬೇಡ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here