ಬಾಹ್ಯಕಾಶ ಯೋಜನೆಯಲ್ಲಿ ಕೈಜೋಡಿಸಿದ ಗ್ರಾಮೀಣ ಪ್ರತಿಭೆ-ಚಂದ್ರಯಾನ- 3ಯಲ್ಲಿ ಕಾಂಚನದ ಶಿವಪ್ರಸಾದ ಕಾರಂತರು

0

ಉಪ್ಪಿನಂಗಡಿ: ಚಂದ್ರಯಾನ- 3 ಯಶಸ್ವಿ ಯೋಜನೆಯ ಹಿಂದಿರುವ ಇಸ್ರೋ ತಂಡದಲ್ಲಿರುವ ವಿಜ್ಞಾನಿಗಳಲ್ಲಿ ಗೋಳಿತ್ತೊಟ್ಟು ಗ್ರಾಮದ ಗ್ರಾಮೀಣ ಪ್ರದೇಶವಾಗಿರುವ ಕಾಂಚನದ ಮಣಿಕ್ಕುಳ ಎಂಬಲ್ಲಿಯ ಶಿವಪ್ರಸಾದ ಕಾರಂತರು ಕೂಡಾ ಒಬ್ಬರು.


ಕೇಂದ್ರ ಸರಕಾರದಿಂದ ಕೇಂದ್ರ ಸಂಪುಟ ಕಾರ್ಯದರ್ಶಿ ಕೇಡರ್‌ಗೆ ಸಮಾನವಾದ ಉನ್ನತ ವಿಜ್ಞಾನಿ ಹುದ್ದೆಗೆ ಭಡ್ತಿ ಪಡೆದಿರುವ 49ರ ಹರೆಯದ ಶಿವಪ್ರಸಾದ ಅವರು ಬೆಂಗಳೂರಿನ ಇಸ್ರೋ ಸಂಸ್ಥೆಯಲ್ಲಿ ಹಿರಿಯ ವಿಜ್ಞಾನಿಯಾಗಿದ್ದಾರೆ. ಕಾಂಚನದ ಕಾರಂತರ ಮನೆತನದ ಪರಮೇಶ್ವರ ಕಾರಂತ್ ಡಿ. ಮತ್ತು ರಮಾದೇವಿ ಅವರ ಪುತ್ರನಾಗಿರುವ ಇವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಾಂಚನದ ಶ್ರೀ ಲಕ್ಷ್ಮೀನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿದ್ದು, ಪ್ರೌಢ ಶಿಕ್ಷಣವನ್ನು ಕಾಂಚನದ ಶ್ರೀ ವೆಂಕಟಸುಬ್ರಹ್ಮಣ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಪೂರೈಸಿದ್ದಾರೆ. ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳದ ಸಿದ್ಧವನ ಗುರುಕುಲದಲ್ಲಿದ್ದುಕೊಂಡು ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪಿಯುಸಿ ಹಾಗೂ ಪದವಿ ಶಿಕ್ಷಣವನ್ನು ಪೂರೈಸಿದ್ದಾರೆ. ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಎಂ.ಟೆಕ್ ಪದವಿ ಪಡೆದಿರುವ ಇವರು ಸುಮಾರು 24 ವರ್ಷಗಳ ಹಿಂದೆ ಇಸ್ರೋ ಸಂಸ್ಥೆ ಸೇರಿದ್ದರು.

ಪತ್ನಿ ರಶ್ಮಿ ಹಾಗೂ ಎಂ.ಟೆಕ್ ಓದುತ್ತಿರುವ ಪುತ್ರ ಪೃಥ್ವಿಯೊಂದಿಗೆ ಈಗ ಬೆಂಗಳೂರಿನಲ್ಲಿ ಇವರು ವಾಸ್ತವ್ಯವಿದ್ದರೂ, ಕೃಷಿ ಕುಟುಂಬದಿಂದ ಬಂದಿರುವ ಇವರಿಗೆ ಕಾಂಚನದಲ್ಲಿ ಕೃಷಿ ಭೂಮಿ ಹಾಗೂ ಮನೆಯಿದೆ. ಬಿಡುವಿದ್ದಾಗ ಇಲ್ಲಿಗೆ ಬಂದು ಹೋಗುತ್ತಾರೆ. ಜಗತ್ತನ್ನೇ ಬೆರಗುಗೊಳಿಸಿದ ಇಸ್ರೋ ಸಾಧನೆಯ ಹಿಂದೆ ಇವರು ಕೂಡಾ ಇರುವುದು ನಮಗೆಲ್ಲರಿಗೂ ಹೆಮ್ಮೆ ಎನ್ನುತ್ತಾರೆ ಇವರ ಸೋದರ ಅಣ್ಣ ಶಿವರಾಮ ಕಾರಂತರು.

LEAVE A REPLY

Please enter your comment!
Please enter your name here