ಅಶೋಕ್ ಕುಮಾರ್ ರೈಯವರ ನೂತನ ಕಚೇರಿ ಉದ್ಘಾಟನೆ – ಶಾಸಕರಾಗಿ ಶತದಿನ ಪೂರೈಸಿದ ಸಂಭ್ರಮ-94ಸಿ, ಸಿಸಿ ಹಕ್ಕು ಪತ್ರ ವಿತರಣೆ

0

`ನಾನು ಭ್ರಷ್ಟಾಚಾರಿ ಆಗದಿದ್ದರೆ ಮತ್ಯಾರೂ ಭ್ರಷ್ಟಾಚಾರಿ ಆಗಲು ಸಾಧ್ಯವಿಲ್ಲ-ಅಶೋಕ್ ಕುಮಾರ್ ರೈ
ಪುತ್ತೂರು:ಪುತ್ತೂರು ಶಾಸಕರಾಗಿ ಶತದಿನ ಪೂರೈಸಿದ ಸಂಭ್ರಮದಲ್ಲಿರುವ ಅಶೋಕ್ ಕುಮಾರ್ ರೈ ಅವರ ನೂತನ ಸರಕಾರಿ ಕಚೇರಿಯು ಹಿಂದಿನ ಪುರಸಭೆಯ ಕಟ್ಟಡದಲ್ಲಿ ಆ.28ರಂದು ವೈದಿಕ ಕಾರ್ಯಕ್ರಮದೊಂದಿಗೆ ಉದ್ಘಾಟನೆಗೊಂಡಿತು. ಆರಂಭದಲ್ಲಿ ಗಣಪತಿ ಹೋಮ ನಡೆಯಿತು. ವೈದಿಕರ ಮಂತ್ರ ಘೋಷದೊಂದಿಗೆ ಶಾಸಕ ಅಶೋಕ್ ಕುಮಾರ್ ರೈ-ಸುಮಾ ಅಶೋಕ್ ಕುಮಾರ್ ರೈ ದಂಪತಿ ದೀಪ ಪ್ರಜ್ವಲನೆ ಮಾಡಿ ಕಚೇರಿಯನ್ನು ಉದ್ಘಾಟಿಸಿದರು.ಈ ಸಂದರ್ಭ ಅವರ ಪುತ್ರಿ ಧೃತಿ ಜೊತೆಗಿದ್ದರು. ಬಳಿಕ ನಡದ ಸಭಾ ಕಾರ್ಯಕ್ರಮದಲ್ಲಿ 150 ಮಂದಿ ಫಲಾನುಭವಿಗಳಿಗೆ 94ಸಿ ಮತ್ತು 94ಸಿಸಿ ಹಕ್ಕು ಪತ್ರ ವಿತರಣೆ ಮಾಡಲಾಯಿತು. ಸಹಾಯಕ ಕಮಿಷನರ್ ಗಿರೀಶ್‌ನಂದನ್, ತಹಸೀಲ್ದಾರ್ ಶಿವಶಂಕರ್ ಉಪಸ್ಥಿತರಿದ್ದರು.

ನಾನು ಭ್ರಷ್ಟಾಚಾರಿ ಆಗದಿದ್ದರೆ ಮತ್ಯಾರೂ ಭ್ರಷ್ಟಾಚಾರಿ ಆಗಲು ಸಾಧ್ಯವಿಲ್ಲ: ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ 5 ಗ್ಯಾರೆಂಟಿಗಳನ್ನು ಕೂಡಾ ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಪುತ್ತೂರಿನಲ್ಲಿ ಪ್ರತಿಯೊಂದು ವಿಚಾರದಲ್ಲೂ ನನಗೆ ಪ್ರೇರೇಪಣೆ ಆಗಿರುವುದು, ಭ್ರಷ್ಟಾಚಾರದ ವಿರೋಧವಾಗಿ ಕೆಲಸ ಮಾಡಬೇಕು ಎಂಬುದು. ಈ ನಿಟ್ಟಿನಲ್ಲಿ ನಾನು ಭ್ರಷ್ಟಾಚಾರಿ ಆಗದಿದ್ದರೆ ಮತ್ಯಾರೂ ಭ್ರಷ್ಟಾಚಾರಿ ಆಗಲು ಸಾಧ್ಯವಿಲ್ಲ. ಹಾಗಾಗಿ ದ.ಕ.ಜಿಲ್ಲೆಯಲ್ಲಿ ಒಳ್ಳೆಯ ರೀತಿಯ ತಂಡ ಸಿಕ್ಕಿದೆ. ಶಾಸಕಾಂಗದ ಜೊತೆ ಕಾರ್ಯಾಂಗವೂ ಮುನ್ನಡೆದರೆ ಮಾತ್ರ ಅಭಿವೃದ್ಧಿ ಸಾಧ್ಯ. ಅದಕ್ಕೆ ಪೂರಕವಾಗಿ ಜಿಲ್ಲಾಧಿಕಾರಿ, ಎಸ್ಪಿ, ಡಿವೈಎಸ್ಪಿ, ಸಹಾಯಕ ಕಮಿಷನರ್, ತಹಸೀಲ್ದಾರ್ ಭ್ರಷ್ಟಾಚಾರ ರಹಿತ ಅಧಿಕಾರಿಗಳಿದ್ದಾರೆ. ಹಾಗಾಗಿ ಎಲ್ಲರಿಗೂ ನ್ಯಾಯ ಸಿಗುವ ಕೆಲಸ ಆಗುತ್ತಿದೆ. ಇದು ಕಾಂಗ್ರೆಸ್ ಸರಕಾರದ ಸಾಧನೆ ಎಂದರು. ಹಿಂದಿನ ಸರಕಾರದಲ್ಲಿ ಯಾವ ರೀತಿಯಲ್ಲಿ ಕೆಲಸ ನಡೆಯುತ್ತಿತ್ತೆಂದು ಹೇಳಲು ನಾನು ಇಚ್ಚೆ ಪಡುವುದಿಲ್ಲ ಎಂದು ಹೇಳಿದ ಅಶೋಕ್ ರೈ, ನಮ್ಮ ಕಚೇರಿಯಲ್ಲಿ ಸರಕಾರದ ಯೋಜನೆಗಳು, ನಮ್ಮ ಟ್ರಸ್ಟ್‌ನ ಮೂಲಕ ಅಗುವ ಯೋಜನೆಗಳೆಲ್ಲವನ್ನು ಅತ್ಯಂತ ಪಾರದರ್ಶಕವಾಗಿ ಭ್ರಷ್ಟಾಚಾರ ರಹಿತವಾಗಿ ಮಾಡುವ ಕೆಲಸವನ್ನು ಮಾಡುತ್ತೇವೆ. ನಿಮ್ಮೆಲ್ಲರ ಆಶೀರ್ವಾದ ಇರಲಿ. ಜಾತಿ, ಮತ, ಪಕ್ಷ ಭೇದ ಮರೆತು ಎಲ್ಲರಿಗೂ ಶಾಸಕರ ಕಚೇರಿಯಲ್ಲಿ ಉತ್ತಮ ಸೇವೆ ಸಿಗಬೇಕು. ಪಕ್ಷದ ಮೂಲಕ ಅನೇಕ ಉತ್ತಮ ಕಾರ್ಯ ನಡೆಯಬೇಕು. ಮುಂದಿನ ದಿನ ಪಕ್ಷ ಕೂಡಾ ಬಲಿಷ್ಠವಾಗಬೇಕು ಎಂದು ಹೇಳಿದರು.

118 ದಿನದಲ್ಲಿ ಕುಡಿಯುವ ನೀರಿನ ಯೋಜನೆಗೆ ರೂ.970 ಕೋಟಿ ಅನುದಾನ: ನಾನು ಶಾಸಕನಾಗಿ 118 ದಿನದಲ್ಲಿ ಕುಡಿಯುವ ನೀರಿನ ಯೋಜನೆಗೆ ರೂ.970 ಕೋಟಿ ಅನುದಾನ ಸಿಕ್ಕಿರುವುದು ಪುತ್ತೂರಿಗೆ ಮಾತ್ರ.ಆಲಂಕಾರು ಭಾಗದ್ದು ಟೆಂಡರ್ ಹಂತದಲ್ಲಿದೆ.ಅಲ್ಲಿ ಅದು ರೂ.570 ಕೋಟಿಯದ್ದು ರೂ.670 ಕೋಟಿ ಅನುದಾನ ಆಗುವ ಮೂಲಕ ವಿಟ್ಲ ಪಟ್ಟಣ ಪಂಚಾಯತ್‌ಗೂ ಕುಡಿಯುವ ನೀರು ಸೌಲಭ್ಯ ಆಗಲಿದೆ. ಪುತ್ತೂರಿಗೆ ಸಮಗ್ರ ಒಳಚರಂಡಿ ಯೋಜನೆಗೆ ನಗರಸಭೆಯಿಂದ ಸರ್ವೆ ಕಾರ್ಯಕ್ಕೆ ಸೂಚನೆ ಬಂದಿದೆ.ಪಶುವೈದ್ಯಕೀಯ ಕಾಲೇಜು ಆರಂಭಿಸಲು ಅನುಮೋದನೆ ಮತ್ತು ಅಲ್ಲಿ ಫ್ಯಾಕಲ್ಟಿಗೂ ಅನುಮೋದನೆ ದೊರೆತಿದೆ. ಇವತ್ತಿನ ತನಕ ರೂ.1 ಕೋಟಿ ಅನುದಾನ ಬಾರದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ನಾನು ರೂ.25 ಕೋಟಿ ಅನುದಾನ ಕೇಳಿದ್ದಕ್ಕೆ ರೂ.5.6 ಕೋಟಿ ಅನುದಾನವನ್ನು ಮುಖ್ಯಮಂತ್ರಿ ಮಂಜೂರು ಮಾಡಿದ್ದಾರೆ.ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ, ಅಲ್ಪಸಂಖ್ಯಾತರಿಗೆ ಬೇರೆ ಬೇರೆ ಕಾರ್ಯಕ್ರಮಗಳಿಗೆ ಅನುದಾನ ಕೇಳಿದ್ದೆ.ಅದಕ್ಕೂ ರೂ.5 ಕೋಟಿಯನ್ನು ಮುಖ್ಯಮಂತ್ರಿಗಳು ಮಂಜೂರು ಮಾಡಿದ್ದಾರೆ. ನಿರಂತರ ಅನುದಾನ ತರುವ ಮೂಲಕ ಅದನ್ನು ಫಾಲೋಅಪ್ ಮಾಡುವ ಕೆಲಸವನ್ನು ಮಾಡುತ್ತಿದ್ದೇನೆ ಎಂದು ಹೇಳಿದ ಶಾಸಕರು, ಅವತ್ತಿನಿಂದ ಇವತ್ತಿನ ತನಕವೂ ನಾನು ಹೇಳುತ್ತಿರುವುದೇನೆಂದರೆ, ದುಡ್ಡು ಮಾಡಲು ನಾನು ರಾಜಕೀಯಕ್ಕೆ ಬಂದಿಲ್ಲ. ನಾನು ಕೂಡಾ ಉದ್ಯಮಿ. ಕೆಲಸ ಮಾಡಿ ಹಣ ಮಾಡಬೇಕು. ಮತದಾರರು ಆಶೀರ್ವಾದ ಮಾಡಿದ್ದಾರೆ. ಅದಕ್ಕೆ ತಕ್ಕಂತೆ ಸರಕಾರ 5 ಗ್ಯಾರೆಂಟಿ ಕೊಡುವ ಕೆಲಸ ಮಾಡಿದೆ.ಈ ಸೌಲಭ್ಯವನ್ನು ಪ್ರತಿಯೊಬ್ಬ ಕಾರ್ಯಕರ್ತರು ಎಲ್ಲಾ ಬಡವರ ಮನೆಗೆ ತಲುಪಿಸುವ ಕೆಲಸ ಮಾಡಬೇಕು. ಆ ಮೂಲಕ ನಾವು ದ್ವೇಷ ರಾಜಕಾರಣ ಮಾಡದೆ ಎಲ್ಲರು ನಮ್ಮ ಪ್ರೀತಿಗೆ ಪಾತ್ರರಾಗುವಂತೆ ಮಾಡಬೇಕು ಎಂದು ಹೇಳಿದರು.
ಹಳೆ ಕಡತಗಳು 45 ದಿನಗಳಲ್ಲಿ ವಿಲೇವಾರಿ ಆಗಲಿದೆ: ಅಕ್ರಮ ಸಕ್ರಮ, 94 ಸಿ,ಸಿಸಿ ಈ ಭಾಗದ ಜನರ ಹಕ್ಕು. ಅದನ್ನು ಅವರಿಗೆ ಕೊಡುವ ಕೆಲಸ ಆಗಬೇಕು. ಆ ರೀತಿಯಲ್ಲಿ ಅಧಿಕಾರಿಗಳ ಜೊತೆ ಕೂತು ಚರ್ಚೆ ಮಾಡುವಾಗ ನಮಗೆ ಪೂರಕ ಭರವಸೆ ನೀಡಿದ್ದಾರೆ.ಹಳೆ ಕಡತಗಳು ಯಾವುದೆಲ್ಲ ಬಾಕಿ ಇದೆಯೋ ಅದನ್ನು 45 ದಿನಗಳಲ್ಲಿ ಅದರ ಲೋಪದೋಷಗಳನ್ನು ನೋಡಿ ವಿಲೇವಾರಿ ಮಾಡುವ ಭರವಸೆ ನೀಡಿದ್ದಾರೆ. ಅಧಿಕಾರಿಗಳು ಮತ್ತು ನಾವು ಒಂದು ತಂಡವಾಗಿ ಕೆಲಸ ಮಾಡುವ ಮೂಲಕ ಅಧಿಕಾರಿಗಳಿಗೂ ಉತ್ತಮ ವಾತಾವರಣ ನಿರ್ಮಾಣ ಮಾಡಿ ಅವರಿಗೆ ಶಕ್ತಿ ನೀಡುವ ಕೆಲಸ ಮಾಡಲಿದ್ದೇವೆ. ನಮ್ಮ ಇಲಾಖೆಯಲ್ಲಿ ಮ್ಯಾನ್ ಪವರ್ ಕಡಿಮೆ ಇದೆ. ಮುಂದಿನ ದಿನ ಅದಕ್ಕೆ ಬೇರೊಬ್ಬರ ನಿಯೋಜನೆ ಮಾಡಿಯಾದರೂ ಅಭಿವೃದ್ಧಿ ಕಾರ್ಯಗಳಿಗೆ ವೇಗ ಕೊಡುವ ಕೆಲಸ ಮಾಡಲಿದ್ದೇವೆ. ಒಂದು ತಿಂಗಳ ಒಳಗೆ ಅಕ್ರಮ ಸಕ್ರಮ ಸಮಿತಿಯು ರಚನೆಯಾಗಲಿದೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.

ತಾಲೂಕು ಆಡಳಿತ ಸೌಧ ಕಚೇರಿಯಲ್ಲಿ ಸ್ಥಳಾವಕಾಶ ಕಡಿಮೆಯಿತ್ತು: ಸಹಾಯಕ ಕಮಿಷನರ್ ಗಿರೀಶ್ ನಂದನ್ ಅವರು ಮಾತನಾಡಿ ಈ ಹಿಂದೆ ತಾಲೂಕು ಆಡಳಿತ ಸೌಧದಲ್ಲಿದ್ದ ಶಾಸಕರ ಕಚೇರಿಯಲ್ಲಿ ತುಂಬಾ ಸ್ಥಳಾವಕಾಶ ಕಡಿಮೆ ಇತ್ತು. ಶಾಸಕರಲ್ಲಿಗೆ ಹೆಚ್ಚಿನ ಜನರು ಬರುವುದರಿಂದ ಮತ್ತು ಅಲ್ಲಿ ಕರ್ತವ್ಯ ನಿರ್ವಹಿಸಲು ಅಡ್ಡಿಯಾಗುವುದರಿಂದ ಹೊಸ ಕಟ್ಟಡ ಹುಡುಕಿ ಈ ಕಟ್ಟಡ ಗುರುತಿಸಿ ಶಾಸಕರ ಕಚೇರಿ ಮಾಡಲಾಗಿದೆ ಎಂದು ಹೇಳಿದರು.

ಕ್ರಿಯಾಶೀಲ ಶಾಸಕರನ್ನು ಪಡೆದಿರುವುದು ನಮ್ಮ ಸೌಭಾಗ್ಯ: ವಿಟ್ಲ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ.ಅವರು ಮಾತನಾಡಿ ಅಶೋಕ್ ಕುಮಾರ್ ರೈ ಅವರಂತಹ ಕ್ರಿಯಾಶೀಲ ಶಾಸಕರನ್ನು ಪಡೆದಿರುವುದು ನಮ್ಮ ಸೌಭಾಗ್ಯ. ಅವರ ಕ್ರಿಯಾಶೀಲತೆ ಎಲ್ಲರಿಗೂ ಮಾದರಿಯಾಗಲಿದೆ ಎಂದರು.

ಶಾಸಕರ ನಿರೀಕ್ಷೆ, ಕನಸು ನನಸಾಗಲಿ: ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಅವರು ಮಾತನಾಡಿ ಒಳ್ಳೆಯ ವಾತಾವರಣದಲ್ಲಿ ಶಾಸಕರ ಕಚೇರಿ ಉದ್ಘಾಟನೆಯಾಗಿದೆ.ಸರಕಾರದ ಉತ್ತಮ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ತಲುಪಲು ಕಚೇರಿಯಿಂದ ಉತ್ತಮ ವಾತಾವರಣ ನಿರ್ಮಾಣ ಆಗಿದೆ.ಶಾಸಕರ ನಿರೀಕ್ಷೆ, ಕನಸು ನನಸಾಗಲಿ ಎಂದು ಹಾರೈಸಿದರು.

ಶಾಸಕರಿಂದ ಎಲ್ಲರಿಗೂ ನ್ಯಾಯಕೊಡುವ ಕೆಲಸ ಆಗಿದೆ: ಜಿ.ಪಂ ಮಾಜಿ ಉಪಾಧ್ಯಕ್ಷ ಎಮ್.ಎಸ್ ಮಹಮ್ಮದ್ ಅವರು ಮಾತನಾಡಿ ಸದನದಲ್ಲಿ ಪ್ರಥಮ ಬಾರಿಗೆ ಬಡವರ ಪರವಾಗಿ, ನೊಂದವರ ಪರವಾಗಿ ಕಾರ್ಮಿಕರ ಪರವಾಗಿ ಯಾವ ಶಾಸಕರಿಗೂ ಆಲೋಚನೆಯಲ್ಲಿ ಎಟಕದ ರೀತಿಯಲ್ಲಿ ಸದನದಲ್ಲಿ ಮಾತನಾಡುವುದು ಮಾತ್ರವಲ್ಲ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳನ್ನು, ಸಚಿವರುಗಳನ್ನು ಭೇಟಿ ಮಾಡುವ ಮೂಲಕ ಎಲ್ಲರಿಗೂ ನ್ಯಾಯ ಕೊಡುವ ಕೆಲಸ ಮಾಡಿದ್ದಾರೆ. ಅವರು ಮಾಡಿದ ಎಲ್ಲ ಕೆಲಸ ದಾಖಲೆಯಾಗಿದೆ ಎಂದು ಹೇಳಿದರು.

ಬಡವರ, ದೀನದಲಿತರ ಅಶಾಕಿರಣ ನಮ್ಮ ಶಾಸಕರು: ಕಾಂಗ್ರೆಸ್ ಸೇವಾದಳದ ಜಿಲ್ಲಾ ಅಧ್ಯಕ್ಷ ಜೋಕಿಂ ಡಿಸೋಜ ಅವರು ಮಾತನಾಡಿ ಬಡವರ, ದೀನದಲಿತರ ಮನಸ್ಸನ್ನು ಮುಟ್ಟುವ ಮೂಲಕ ಆಶಾಕಿರಣ ಶಾಸಕರಾಗಿ ಅಶೋಕ್ ಕುಮಾರ್ ರೈ ಅವರು ಮೂಡಿದ್ದಾರೆ ಎಂದರು.

ನುಡಿದಂತೆ ನಡೆಯುವ ಶಾಸಕರು: ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿಯವರು ಮಾತನಾಡಿ ನಮ್ಮ ಶಾಸಕರು ನುಡಿದಂತೆ ನಡೆಯುವವರು. ಬಡವರಿಗೆ 94 ಸಿ, 94ಸಿಸಿ ಹಕ್ಕು ಪತ್ರ ಇರಬಹುದು, ಬಡವರ ಕಷ್ಟಗಳಿಗೆ ಸ್ಪಂದಿಸುವ ಗುಣ ಹೊಂದಿದ್ದಾರೆ ಎಂದರು.

ಶಾಸಕರ ಕಚೇರಿ ಹೇಗಿರಬೇಕೆಂದು ತೋರಿಸಿಕೊಟ್ಟವರು: ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿಯವರು ಮಾತನಾಡಿ ಪುತ್ತೂರಿನ ಇತಿಹಾಸದಲ್ಲಿ ಶಾಸಕರ ಕಚೇರಿ ಹೇಗಿರಬೇಕೆಂದು ತೋರಿಸಿಕೊಟ್ಟವರು ಅಶೋಕ್ ರೈ ಅವರು. ಅವರ ಕಚೇರಿ ಎಷ್ಟು ಸುಂದರವಾಗಿದೆಯೋ ಅಷ್ಟೇ ದೊಡ್ಡದಾಗಿ ಜನಮೆಚ್ಚುವ ಅಭಿವೃದ್ಧಿ ಕಾರ್ಯಗಳು ಅಶೋಕ್ ಕುಮಾರ್ ರೈ ಅವರಿಂದ ಶ್ರೀ ಮಹಾಲಿಂಗೇಶ್ವರ ದೇವರು ನಡೆಸಿಕೊಡಲಿ ಎಂದು ನಾನು ದೇವರಲ್ಲಿ ಬೇಡುವುದು ಎಂದರು.ಜನರು ಮೆಚ್ಚುವ, ಜನರಿಗೆ ಆಕರ್ಷಣೆಯಾಗುವ ಪ್ರಮುಖ ಕಾರ್ಯಕ್ರಮ ಹಾಕಿ ತೋರಿಸಿದ ಕೆಲಸ ಅಶೋಕ್ ಕುಮಾರ್ ರೈ ಅವರು ಮಾಡಿ ತೋರಿಸಿದ್ದಾರೆ. ನಾನೂ ಸದನದಲ್ಲಿ ತುಳುವಿನ ಬಗ್ಗೆ ಮಾತನಾಡಿದ್ದೆ.ಆದರೆ ಸದನದಲ್ಲಿ ತುಳುವಿನಲ್ಲಿ ಮಾತನಾಡಿ ತುಳುವನ್ನು ವಿಶ್ವಕ್ಕೆ ತೋರಿಸಿದವರು ಅಶೋಕ್ ಕುಮಾರ್ ರೈ ಅವರು ಮಾತ್ರ ಎಂದರು.

ಕಚೇರಿಗಿಂತ ಕ್ಷೇತ್ರದ ಬಗ್ಗೆ ಚಿಂತನೆ ಮಾಡುವವರು: ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು ಮಾತನಾಡಿ, ದೊಡ್ಡ ದೊಡ್ಡ ಯೋಜನೆಗಳನ್ನು ಪುತ್ತೂರಿಗೆ ತರುವ ನಿಟ್ಟಿನಲ್ಲಿ ದೊಡ್ಡ ರೀತಿಯ ಪ್ರಯತ್ನ ಮಾಡುವ ಕಾರ್ಯ ಶಾಸಕ ಅಶೋಕ್ ರೈ ಅವರಿಂದ ಆಗುತ್ತಿದೆ.ರಾಜ್ಯದ ಎಲ್ಲಾ ಕಡೆ ಈಗಾಗಲೇ ಶಾಸಕರು ಕಚೇರಿ ಆರಂಭಿಸಿದ್ದಾರೆ.ಆದರೆ ನಮ್ಮ ಶಾಸಕರು ತನ್ನ ಕಚೇರಿಯ ಬಗ್ಗೆ ಚಿಂತನೆ ಮಾಡದೆ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಚಿಂತನೆ ಮಾಡಿದವರು.ತನ್ನ ಕಚೇರಿಯಿಂದ ಜನರಿಗೆ ಉತ್ತಮ ಸೇವೆ ಸಿಗಬೇಕೆಂಬ ಚಿಂತನೆಯ ಮೂಲಕ ತಡವಾಗಿಯಾದರೂ ಸುಸಜ್ಜಿತವಾದ, ರಾಜ್ಯದಲ್ಲೇ ವಿನೂತನ ಮಾದರಿಯ ಕಚೇರಿ ಇವತ್ತು ಉದ್ಘಾಟನೆಗೊಂಡಿದೆ ಎಂದರು.ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ಕೃಷ್ಣಪ್ರಸಾದ್ ಆಳ್ವ ವಂದಿಸಿದರು.ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ, ಕೋಡಿಂಬಾಡಿ ಗ್ರಾ.ಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು, ಪೆರ್ನೆ ಗ್ರಾ.ಪಂ ಮಾಜಿ ಅಧ್ಯಕ್ಷ ಉಮಾನಾಥ ಶೆಟ್ಟಿ, ಬಲ್ನಾಡು ಗ್ರಾ.ಪಂ ಮಾಜಿ ಅಧ್ಯಕ್ಷ ಪ್ರವೀಣ್‌ಚಂದ್ರ ಆಳ್ವ,ಕೋಟಿ ಚೆನ್ನಯ ಜೋಡುಕೆರೆ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ, ದಿನೇಶ್ ಪಿ.ವಿ, ಶಿವರಾಮ ಆಳ್ವ, ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿ, ರಘು ಬೆಳ್ಳಿಪ್ಪಾಡಿ, ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಶಾರದಾ ಅರಸ್ ಸಹಿತ ಹಲವಾರು ಮಂದಿ ಸಭೆಯಲ್ಲಿ ಉಪಸ್ಥಿತರಿದ್ದರು.ಸಭೆಯಲ್ಲಿ 150 ಮಂದಿಗೆ 94 ಸಿ ಮತ್ತು 94 ಸಿಸಿ ಹಕ್ಕುಪತ್ರ ವಿತರಣೆ ಮಾಡಲಾಯಿತು. ಕಂದಾಯ ನಿರೀಕ್ಷಕ ಗೋಪಾಲ್ ಹಕ್ಕುಪತ್ರ ಕಾರ್ಯಕ್ರಮ ನಿರ್ವಹಿಸಿದರು.

ಪುರಸಭಾಧ್ಯಕ್ಷ, ಉಪಾಧ್ಯಕ್ಷರ ಕಚೇರಿ ಇತ್ತು: ಪ್ರಸ್ತುತ ಶಾಸಕರ ಕಚೇರಿ ಉದ್ಘಾಟನೆಗೊಂಡಿರುವ ಕಟ್ಟಡದಲ್ಲಿ ಈ ಹಿಂದೆ ಸೂತ್ರಬೆಟ್ಟು ಜಗನ್ನಾಥ ರೈಯವರು ಪುರಸಭೆಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಪುರಸಭಾಧ್ಯಕ್ಷ, ಉಪಾಧ್ಯಕ್ಷರ ಕಚೇರಿ ಇದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಬಳಿಕ ಪುರಸಭಾ ಕಚೇರಿ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡ ಬಳಿಕ ಸಹಾಯಕ ಆಯುಕ್ತರ ಕಚೇರಿ, ಕೋರ್ಟ್ ಹಾಲ್ ಇದೇ ಕಟ್ಟಡದಲ್ಲಿತ್ತು.ಸಹಾಯಕ ಆಯುಕ್ತರ ಕಚೇರಿ ತಾಲೂಕು ಆಡಳಿತ ಸೌಧಕ್ಕೆ ಸ್ಥಳಾಂತರಗೊಂಡ ಬಳಿಕ ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಪ್ರಸಾದ್ ಕೌಶಲ್ ಶೆಟ್ಟಿಯವರ ಕಚೇರಿ ಇದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸಿತ್ತು.
ಅರ್ಹ ಫಲಾನುಭವಿಗಳಿಗೆ ನನ್ನ ಸ್ವಂತ ನೆಲದಲ್ಲಿ 600 ಮನೆ ನಿರ್ಮಾಣ
ಊಟಕ್ಕೆ ಅನ್ನ ಇಲ್ಲದೇ ಇರಬಾರದು, ಮನೆಯಲ್ಲಿ ದೀಪ ಇಲ್ಲದೇ ಇರಬಾರದು, ಯಾರಿಗೂ ಕುಡಿಯುವ ನೀರಿನ ಸಮಸ್ಯೆ ಇರಬಾರದು ಒಟ್ಟಿನಲ್ಲಿ ಮನುಷ್ಯನಿಗೆ ಭೂಮಿಯ ಮೇಲೆ ಬದುಕಲು ಏನೇನು ಸೌಲಭ್ಯ ಇರಬೇಕೋ ಅದನ್ನು ಖಂಡಿತವಾಗಿಯೂ ಮಾಡುವಂತೆ ಮತ್ತು ಮುಂದಿನ ದಿನದಲ್ಲಿ ಯಾರಿಗೂ ಮನೆ ಇಲ್ಲದಂತೆ ಆಗಬಾರದು.ಮನೆ ಇಲ್ಲದವರಿಗೆ ನನ್ನ ಸ್ವಂತ ನೆಲದಲ್ಲಿ 600 ಮನೆಗಳನ್ನು ಕಟ್ಟಿಕೊಡುವ ಕೆಲಸ ಮುಂದಿನ ದಿನದಲ್ಲಿ ಆಗಲಿದೆ. ಈಗಾಗಲೇ ವಿಟ್ಲ ಭಾಗದಲ್ಲಿ ಸುಮಾರು 5 ಎಕ್ರೆ ಜಾಗ ಖರೀದಿ ಮಾಡುವ ಕೆಲಸ ಮಾಡಿದ್ದೇನೆ. ನನ್ನ ಸ್ವಂತ ಖರ್ಚಿನಲ್ಲಿ ಜಾಗ ಖರೀದಿ ಮಾಡಿ ಅಲ್ಲಿ ಬಡವರಿಗೆ 3 ಸೆಂಟ್ಸ್‌ನಂತೆ ನಿವೇಶನ ನೀಡುವುದು. ವಿಧವೆಯವರು, ಅಶಕ್ತರಿಂದ ಬಂದಿರುವ ಅರ್ಜಿಗಳನ್ನು ಪರಿಶೀಲನೆ ಮಾಡಿ 600ರಲ್ಲಿ ಬಾಡಿಗೆ ಮನೆಯಲ್ಲಿ, ಹೊಟೇಲ್‌ಗಳಲ್ಲಿ ಕೆಲಸ ಮಾಡಿಕೊಂಡು ಹೆಣ್ಣುಮಕ್ಕಳನ್ನು ಹೊಂದಿರುವ 350 ವಿಧವೆಯರ ಅರ್ಜಿಗಳನ್ನು ಆಯ್ಕೆ ಮಾಡಿದ್ದೇವೆ. ಅವರಿಗೆ ಮೊದಲ ಹಂತದಲ್ಲಿ ಪ್ರಾತಿನಿಧ್ಯತೆ ಕೊಟ್ಟು ನಿವೇಶನ ಕೊಡುವ ಕೆಲಸ ಆಗಲಿದೆ. ಅದೇ ರೀತಿ ಗ್ರಾಮ ಮಟ್ಟದಲ್ಲಿ ಸರಕಾರಿ ಜಾಗ ಎಲ್ಲೆಲ್ಲಿ ಇದೆಯೋ ಆ ಜಾಗವನ್ನು ಗುರುತಿಸಿ ಸಹಾಯಕ ಕಮಿಷನರ್ ಅದನ್ನು ಪಂಚಾಯತ್‌ಗೆ ಹಸ್ತಾಂತರ ಮಾಡುವ ಮೂಲಕ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ಒಂದು ಸಾವಿರ ಜನರಿಗೆ ಮನೆ ಕಟ್ಟಲು ಜಾಗ ಕೊಡುವ ಕುರಿತು ಆಲೋಚನೆ ಮಾಡಿದ್ದೇವೆ
– ಅಶೋಕ್ ಕುಮಾರ್ ರೈ,
ಶಾಸಕರು ಪುತ್ತೂರು


ಏನೆಲ್ಲಾ ವ್ಯವಸ್ಥೆಗಳಿದೆ?
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾರ್ವಜನಿಕರು ಶಾಸಕರನ್ನು ಭೇಟಿಯಾಗಲು ಇದೇ ಕಚೇರಿಗೆ ಬರಬಹುದು. ಕಚೇರಿಯಲ್ಲಿ ಸಾರ್ವಜನಿಕರಿಂದ ಎಲ್ಲಾ ರೀತಿಯ ಅರ್ಜಿಗಳನ್ನು ಸ್ವೀಕರಿಸಲು ಪ್ರತ್ಯೇಕ ಕೌಂಟರುಗಳನ್ನು ತೆರೆಯಲಾಗಿದೆ.ಯಾವುದೇ ಇಲಾಖೆಗಳಿಗೆ ಅರ್ಜಿ ಸಲ್ಲಿಸಲು ಅಥವಾ ಯಾವುದೇ ಇಲಾಖೆಯಲ್ಲಿ ಕೆಲಸ ಕಾರ್ಯಗಳು ನಡೆಯದೆ ಇದ್ದಲ್ಲಿ ಶಾಸಕರ ಕಚೇರಿಯಲ್ಲಿರುವ ಆಯಾ ಇಲಾಖೆಗೆ ಸಂಬಂಧಿಸಿದ ಸಿಬ್ಬಂದಿಗಳನ್ನು ಭೇಟಿಯಾಗಿ ಮಾತನಾಡಬಹುದಾಗಿದೆ. ಕೆಲವೊಂದು ಸಮಸ್ಯೆಗಳಿಗೆ ಕಚೇರಿಯ ಸಿಬ್ಬಂದಿಗಳೇ ಪರಿಹಾರ ಸೂಚಿಸುವ ಕೆಲಸವನ್ನು ಮಾಡಲಿದ್ದಾರೆ. ಒಟ್ಟಿನಲ್ಲಿ ಸಾರ್ವಜನಿಕರಿಗೆ ನೆರವಾಗುವ ರೀತಿಯಲ್ಲಿ ಕಚೇರಿ ಕೆಲಸ ಮಾಡಲಿದೆ. ಕಚೇರಿಗೆ ಬರುವ ಸಾರ್ವಜನಿಕರಿಗೆ ನೆರವಾಗುವ ನಿಟ್ಟಿನಲ್ಲಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.

ಶಾಸಕರ ಕಚೇರಿ ಯಾಕಿಷ್ಟು ವಿಸ್ತಾರ…
ಶಾಸಕರ ಕಚೇರಿ ಇಷ್ಟು ದೊಡ್ಡದಾಗಿ ಬೇಕಿತ್ತಾ? ಇದರ ಅವಶ್ಯಕತೆ ಇತ್ತಾ? ಮೊದಲಿನ ಶಾಸಕರು ಈ ರೀತಿಯ ಕಚೇರಿ ಮಾಡಿದ್ರಾ? ಎಂಬೆಲ್ಲಾ ಪ್ರಶ್ನೆಗಳು ಬರುವುದು ಸಹಜ. ಆದರೆ ಯಾವುದೇ ಕೆಲಸ ಮಾಡಬೇಕಾದರೆ ಅದಕ್ಕೆ ಮನಸ್ಸಿನ ನೆಮ್ಮದಿ ಬೇಕು. ಅದಕ್ಕಾಗಿ ಶಾಸಕರ ಕಚೇರಿಗೆ ಬರುವವರು ಕೂತುಕೊಳ್ಳಲು ವ್ಯವಸ್ಥೆ, ವಾಹನ ನಿಲ್ಲಿಸುವ ವ್ಯವಸ್ಥೆ, ಇಷ್ಟೇ ಅಲ್ಲದೆ 7 ಮಂದಿ ಪಿಎಗಳನ್ನು ಸಹಾಯಕರನ್ನಾಗಿ ನೇಮಿಸಿದ್ದೇನೆ. ಯಾರಾದರೂ ಬಂದಾಗ ಅವರಿಗೆ ಬೇಕಾದ ವ್ಯವಸ್ಥೆ ಕೂಡಲೇ ಆಗಬೇಕು.ಅದಕ್ಕಾಗಿ ವೈದ್ಯಕೀಯ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ವ್ಯವಸ್ಥೆ, ಕಂದಾಯ ಇಲಾಖೆಯ ವಿಚಾರಕ್ಕೆ, ನಗರ ಸಭೆ ವ್ಯಾಪ್ತಿಯ ವಿಚಾರಕ್ಕೆ ತಲಾ ಒಂದೊಂದು, ಟ್ರಸ್ಟ್‌ಗೆ ಎರಡು ಮಂದಿ ಮತ್ತು ಸರಕಾರಿ ಆಪ್ತ ಸಹಾಯಕರನ್ನೂ ಇದರಲ್ಲಿ ಜೋಡಣೆ ಮಾಡುವ ಮೂಲಕ ಕಚೇರಿಯಲ್ಲಿ 7 ಮಂದಿ ನಿರಂತರ ಕರ್ತವ್ಯ ಮಾಡಲಿದ್ದಾರೆ. ಇಲ್ಲಿನ ಸಂಪರ್ಕ ಮತ್ತು ಕೆಲಸವನ್ನು ಫಾಲೋಅಪ್ ಮಾಡಲು ಬೆಂಗಳೂರಿಲ್ಲಿ 2 ಮಂದಿ ಪಿಎಗಳನ್ನು ಇಟ್ಟಿದ್ದೇನೆ. ನನಗೆ ಸಂಬಳ ಬರುವುದು 90 ಸಾವಿರ, ಆದರೆ ನನಗೆ ರೂ.2.25 ಲಕ್ಷ ಸಿಬ್ಬಂದಿಗಳ ಸಂಬಳಕ್ಕೆ ಖರ್ಚಾಗುತ್ತದೆ. ಎಲ್ಲರಿಗೂ ಸರಕಾರದ ಯೋಜನೆಗಳು ಸಿಗಬೇಕೆಂದು ಶಾಸಕರ ಕಚೇರಿಯು ಸರಕಾರದ ಕಚೇರಿಯ ಕೊಂಡಿಯಾಗಿ ಕೆಲಸ ಮಾಡಬೇಕೆಂಬುದು ನನ್ನ ಉದ್ದೇಶ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

LEAVE A REPLY

Please enter your comment!
Please enter your name here