ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ ನೃತ್ಯೋತ್ಕ್ರಮಣ-ತಾಯಿ ದೇಯಿ ಬೈದೆತಿಯ ಜೀವನದ ಚರಿತ್ರೆಯ ‘ಗೆಜ್ಜೆ ಗಿರಿತ ಬೊಲ್ಪು’ ನೃತ್ಯ ರೂಪಕ

0

ಪುತ್ತೂರು: ತುಳುನಾಡಿನ ಅವಳಿ ವೀರ ಪುರುಷರಾದ ಕೊಟಿ-ಚನ್ನಯರ ತಾಯಿ, ಮಹಾಮಾತೆ ದೇಯಿ ಬೈದೆತಿಯ ಜನನ ಮತ್ತು ಆಕೆಯ ಜೀವನದ ಮೇಲೆ ಬೆಳಕು ಚೆಲ್ಲುವ ಒಂದು ವಿಶಿಷ್ಟ ನೃತ್ಯ ರೂಪಕವೇ ‘ಗೆಜ್ಜೆ ಗಿರಿತ ಬೊಲ್ಪು’ ಆ.27ರಂದು ಸಂಜೆ ಪುತ್ತೂರು ತೆಂಕಿಲ ವಿವೇಕಾನಂದ ಕನ್ನಡ ಮಾದ್ಯಮ ಶಾಲೆಯ ಸಭಾಂಗಣದಲ್ಲಿ ವಿಶೇಷ ಪ್ರದರ್ಶನಗೊಂಡಿತ್ತು.
ಗೆಜ್ಜೆಗಿರಿ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಈ ನೃತ್ಯ ರೂಪಕ ನಿರ್ಮಾಣಗೊಂಡು ಆ ಪವಿತ್ರ ಕ್ಷೇತ್ರದಲ್ಲೇ ಪ್ರಥಮ ಪ್ರದರ್ಶನವನ್ನು ಮಾಡಲಾಗಿದ್ದು, ಇದೀಗ ಪುನರಪಿ ಅದನ್ನು ಪ್ರದರ್ಶನಗೊಳಿಸಲಾಯಿತು.


ಕಥಾ ಹಿನ್ನಲೆ:
ಮಾತೆ ದೇಯಿ ಬೈದೆತಿಯನ್ನು ಆದಿಶಕ್ತಿ ದೇವಿಯ ಅಂಶವಾಗಿ ಪರಿಗಣಿಸಲಾಗಿದೆ. ಆದಿ ಪರಾಶಕ್ತಿ ದೇವಿಯು ಪ್ರಪಂಚದಲ್ಲಿ ಧರ್ಮ ಸ್ಥಾಪನೆಗೆ ಅನೇಕ ರೂಪಗಳನ್ನು ತಾಳಿ ದುಷ್ಟರನ್ನು ನಿಗ್ರಹಿಸಿ ಧರ್ಮ ಸ್ಥಾಪನೆ ಮಾಡುತ್ತಾಳೆ. ಅದೇ ರೀತಿಯಲ್ಲಿ ತುಳುನಾಡಿಗೆ ಬಂದು ಇಲ್ಲಿಯ ಸಂಸ್ಕೃತಿಯ ಪ್ರತೀಕವಾಗಿ ಜುಮಾದಿ ದೈವದ ಸ್ವರೂಪವನ್ನು ಪಡೆದು ಈ ನೆಲದಲ್ಲಿ ಧರ್ಮ ಸ್ಥಾಪನೆಗೆ ಕಾರಣೀಕರ್ತಳಾಗುತ್ತಾಳೆ. ಧರ್ಮ ಸಂಸ್ಥಾಪನೆಗಾಗಿ ಈ ಮಣ್ಣಿನಲ್ಲಿ ಪ್ರಕಟಗೊಂಡ ಎರಡು ಶಕ್ತಿಗಳು, ದೈವೀ ಶಕ್ತಿಯಾಗಿ ಜುಮಾದಿ ದೈವವಿದ್ದರೆ, ಮಾನವ ಸ್ವರೂಪಳಾಗಿ ದೇಯಿ ಬೈದೆತಿಯ ರೂಪದಲ್ಲಿ ಆ ಶಕ್ತಿ ಇಲ್ಲಿ ಮೈದಳೆಯುತ್ತದೆ. ಹೀಗೆ ಮುಂದುವರಿದು ಹಲವು ಭಾಗಗಳಲ್ಲಿ ನೃತ್ಯ ರೂಪಕ ಮೂಡಿ ಬರುತ್ತದೆ. ಕ್ಷೇತ್ರದ ಮೂಲ ಪರಿಕಲ್ಪನೆ, ಸಾಹಿತ್ಯ ರಚನೆ ಹಾಗೂ ಸಂಭಾಷಣೆ ಸುಧಾಕರ ಸುವರ್ಣ ಅವರದ್ದಾಗಿದ್ದು, ಈ ನೃತ್ಯ ರೂಪಕದ ನೃತ್ಯ ಸಂಯೋಜನೆ ಹಾಗೂ ಒಟ್ಟು ನಿರ್ದೇಶನವನ್ನು ವಿದ್ಯಾನ್ ದೀಪಕ್ ಕುಮಾರ್ ಪುತ್ತೂರು ಅವರು ಮಾಡಿದ್ದರು. ಈ ನೃತ್ಯ ರೂಪಕ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ, ಪುತ್ತೂರು ಇವರು ನಿರ್ಮಾಣದಲ್ಲಿ ಮೂಡಿಬಂದಿದ್ದು. ಈ ನೃತ್ಯ ರೂಪಕದ ಹಾಡುಗಾರಿಕೆಯಲ್ಲಿ ನಂದಕುಮಾರ್ ಉನ್ನಿಕೃಷ್ಣನ್ ಬೆಂಗಳೂರು (ಪುರುಷ ಧ್ವನಿ) ಹಾಗೂ ವಿದುಷಿ ಪ್ರೀತಿಕಲಾ ಪುತ್ತೂರು (ಸ್ತ್ರೀ ಧ್ವನಿ) ಇಬ್ಬರು ಕಲಾವಿದರು ತೊಡಗಿಸಿಕೊಂಡಿದ್ದರು. ಮೃದಂಗ ಹಾಗೂ ಲಯ ವಾದ್ಯದಲ್ಲಿ ವಿದ್ವಾನ್ ಹರ್ಷ ಸಾಮಗ ಬೆಂಗಳೂರು ಇವರು ಸಾಥ್ ನೀಡಿದ್ದು, ಕೊಳಲು ವಾದನದಲ್ಲಿ ನಿತೀಶ್ ಅಮ್ಮಣ್ಣಾಯ ಬೆಂಗಳೂರು, ರಿಂದ ಪ್ಯಾಡ್ ನಲ್ಲಿ ಕಾರ್ತಿಕ್ ವೈರಾಥ್ರಿ ಬೆಂಗಳೂರು ಹಾಗೂ ಕೀಬೋರ್ಡ್ ಹಾಗೂ ಎಫೆಕ್ಟ್ಸ್ ನಲ್ಲಿ ಸಂಗೀತ್ ಥಾಮಸ್ ಬೆಂಗಳೂರು ಇವರು ಸಹಕರಿಸಿದ್ದಾರೆ. ಈ ನೃತ್ಯ ರೂಪಕದ ಧ್ವನಿ ಮುದ್ರಣವನ್ನು ಓಂಕಾರ್ ಸ್ಟುಡಿಯೋ ಬೆಂಗಳೂರಿನಲ್ಲಿ ಮಾಡಲಾಗಿತ್ತು.


ಉದ್ಘಾಟನೆ:
ನೃತ್ಯ ರೂಪಕದ ಆರಂಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ
ಭಾರತೀಯ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸುವ ಮೂಲಕ ಅವರ ಪ್ರತಿಭೆಗೆ ಅವಕಾಶ ನೀಡುವ ಕೆಲಸವನ್ನು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಮಾಡುತ್ತಿರುವುದು ಶ್ಲಾಘನೀಯ. ಇವತ್ತಿನ ಕಾಲಗಟ್ಟದಲ್ಲಿ ಕೇವಲ ತುಳುವಿನ ಹಾಸ್ಯದ ಕಡೆ ಹೋಗುತ್ತಿರುವ ಪ್ರೇಕ್ಷರು ನಿಜವಾಗಿಯೂ ನಮ್ಮ ಹಿಂದಿನ ತುಳು ಸಾಂಸ್ಕೃತಿಕ ಪದ್ಧತಿಯ ಕುರಿತು ಅರಿವು ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಶ್ರೀ ಮೂಕಾಂಬಿಕ ಕಲ್ಚರಲ್ ಅಕಾಡೆಮಿ ಉತ್ತಮ ಸಾಧನೆ ಮಾಡಿದೆ. ಹಲವು ಕಡೆ ನೃತ್ಯದ ತರಗತಿಗಳನ್ನು ನೀಡುತ್ತಿರುವ ಈ ಸಂಸ್ಥೆ ಮುಂದೆ ನಮ್ಮ ಅಕ್ಷಯ ಕಾಲೇಜಿನಲ್ಲೂ ತರಗತಿ ಆರಂಭಿಸವಂತೆ ನಾನು ಭಿನ್ನವಿಸಿಕೊಳ್ಳುತ್ತೇನೆ ಎಂದರು.


ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಕೋಶಾಧಿಕಾರಿ ಅಶೋಕ್ ಕುಂಬಳೆ ಭರತನಾಟ್ಯ ನೃತ್ಯ ಕ್ಷೇತ್ರದಲ್ಲಿ ಹಲವು ಆಯಾಮಗಳನ್ನು ತೋರಿಸಿ ಹೆಸರುವಾಸಿಯಾಗಿರುವ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ ನಡೆಯುವ ಈ ಕಾರ್ಯಕ್ರಮದಿಂದ ನಮ್ಮ ಶಾಲೆಗೂ ಕೀರ್ತಿ ಬರಲಿದೆ. ಸಂಸ್ಕಾರ, ಸಂಸ್ಕೃತಿಗೆ ನಮ್ಮ ಶಾಲೆ ಸದಾ ಪ್ರೋತ್ಸಾಹ ನೀಡುತ್ತದೆ ಎಂದರು. ವೇದಿಕೆಯಲ್ಲಿ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸಂಚಾಲಕಿ ಪ್ರಭಾ ಬಿ ಶಂಕರ್ ಉಪಸ್ಥಿತರಿದ್ದರು. ಆಪ್ತಚಂದ್ರ ಮುಳಿಯ ಕಾರ್ಯಕ್ರಮ ನಿರೂಪಿಸಿದರು.

ಭರತನಾಟ್ಯ, ಜನಪದ ನೃತ್ಯದ ಹಿತ-ಮಿತ
ವಿದ್ವಾನ್ ದೀಪಕ್ ಕುಮಾರ್ ಅವರ ನೃತ್ಯ ಸಂಯೋಜನೆ ಮತ್ತು ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಗೆಜ್ಜೆಗಿರತ ಬೊಲ್ಪು’ ಎಂಬ ಈ ನೃತ್ಯ ರೂಪಕ ತುಳು ಸಾಹಿತ್ಯ ಹಾಗೂ ನೃತ್ಯ ಕ್ಷೇತ್ರದಲ್ಲಿ ಬಹಳ ವಿಶಿಷ್ಟವಾದುದು, ಯಾಕಂದ್ರೆ ಈ ರೂಪಕದಲ್ಲಿ ಶಾಸ್ತ್ರೀಯವಾಗಿರುವ ಭರತನಾಟ್ಯದ ಶೈಲಿ ಹಾಗೂ ನಮ್ಮ ಮಣ್ಣಿನ ಜನಪದ ನೃತ್ಯದ ಶೈಲಿಗಳನ್ನು ಹಿತ-ಮಿತವಾಗಿ ಅಳವಡಿಸಿಕೊಂಡು ಸಮಪಾಕದ ರೂಪಕವಾಗಿ ಇದು ಮೂಡಿಬಂದಿದೆ. ತುಳು ಪಾಡ್ದನಗಳು ಮತ್ತು ಅದಕ್ಕೆ ಹೊಂದುವಂತಹ ಜನಪದೀಯ ಶೈಲಿಯ ಸಮೂಹ ನೃತ್ಯ, ಚೆನ್ನು ಕುಣಿತದ ‘ಲೇಲೆ’ ಪಾಡುಗಳು ನಮ್ಮ ಮಣ್ಣಿನ ಸೊಗಡನ್ನು ಕಲಾ ಪ್ರೇಕ್ಷಕರಿಗೆ ಉಣಬಡಿಸಿದರೆ, ಇಲ್ಲಿ ಬರುವ ಯುದ್ಧದ ಸನ್ನಿವೇಶಗಳು ಹಾಗೂ ಇತರೇ ಸಮೂಹ ನೃತ್ಯಗಳು ಶಾಸ್ತ್ರೀಯ ಶೈಲಿಯಲ್ಲಿ ಮೂಡಿಬಂದು ನಮ್ಮನ್ನು ಬೇರೆಯದ್ದೇ ಲೋಕಕ್ಕೆ ಕರೆದೊಯ್ಯುತ್ತವೆ. ಇನ್ನು, ರೂಪಕದ ಪ್ರಾರಂಭದಲ್ಲಿ ಬರುವಂತಹ ಶ್ರೀ ದೇವಿಯ ಒಂದು ತಾಂಡವ ನೃತ್ಯ ಶುದ್ಧ ಭರತನಾಟ್ಯ ಶೈಲಿಯಲ್ಲಿ ಮೂಡಿರಲಿದೆ. ಒಟ್ಟಿನಲ್ಲಿ ಹೇಳುವುದಾದರೆ ‘ಗೆಜ್ಜಿಗಿರಿತ ಬೊಲ್ಪು’ ನೃತ್ಯ ರೂಪಕವು ಶಾಸ್ತ್ರೀಯ ಹಾಗೂ ತುಳುನಾಡಿನ ಜನಪದೀಪ ಪರಂಪರೆಯ ವಿಚಾರಗಳನ್ನು ಮೈಗೂಡಿಸಿಕೊಂಡು ನಮ್ಮ ಹಿರಿಯರು ರೂಪಿಸಿಕೊಟ್ಟು ನಂತರದ ಪೀಳಿಗೆಗೆ ಒಪ್ಪಿಸಿಕೊಟ್ಟು ಹೋಗಿರುವ ಜನಪದ ಸಂಸ್ಕೃತಿಯ ಶ್ರೀಮಂತಿಕೆಯನ್ನು, ಶಾಸ್ತ್ರೀಯತೆಯ ಸ್ವರೂಪವಾಗಿರುವ ಭರತನಾಟ್ಯದೊಂದಿಗೆ ಸಮ್ಮಿಳಿತಗೊಳಿಸಿ ಪ್ರೇಕ್ಷಕರಿಗೆ ಕಲಾ ಮೃಷ್ಟಾನ್ನವನ್ನು ಉಣಬಡಿಸುವ ಬಹುದೊಡ್ಡ ಪ್ರಯತ್ನಕ್ಕೆ ವಿದ್ಯಾನ್ ದೀಪಕ್ ಕುಮಾರ್ ಪುತ್ತೂರು ಮತ್ತು ಅವರ ತಂಡದ ಸದಸ್ಯರು ನೀಡಿದ್ದಾರೆ.

LEAVE A REPLY

Please enter your comment!
Please enter your name here