ಶಾಸಕ ಅಶೋಕ್ ಕುಮಾರ್ ರೈ ಅವರು ಮಾಜಿ ಶಾಸಕರಿಂದ ಪಾಠ ಕಲಿಯಬೇಕಾಗಿಲ್ಲ-ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಸುದ್ದಿಗೋಷ್ಠಿ

0

ಪುತೂರು:ನಮ್ಮ ಶಾಸಕ ಅಶೋಕ್ ಕುಮಾರ್ ರೈ ಅವರ ಬಗ್ಗೆ ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಅನೇಕ ಆರೋಪಗಳನ್ನು ಹೊರಿಸುವ ಮೂಲಕ ಅವರ ಸಣ್ಣತನವನ್ನು ತೋರಿಸಿದ್ದಾರೆ.ಜನರ ತೆರಿಗೆಯ ಹಣ ಇದರಲ್ಲಿ ದುರುಪಯೋಗ ಆಗಿದೆ.ಶಾಸಕರ ಐಶಾರಾಮಿ ಕಚೇರಿ ಬೇಕಿತ್ತಾ ಎಂದೆಲ್ಲಾ ಪ್ರಶ್ನೆ ಮಾಡಿದ್ದಾರೆ.ಆದರೆ, ಇಂತಹ ಪ್ರಶ್ನೆಗಳನ್ನು, ಆರೋಪಗಳನ್ನು ಮಾಡಲು ಮಠಂದೂರು ಅವರಿಗೆ ನೈತಿಕತೆಯೇ ಇಲ್ಲ.ಅವರಿಂದ ನಮ್ಮ ಶಾಸಕರು ಪಾಠ ಕಲಿಯಬೇಕಾಗಿಲ್ಲ ಎಂದು ಕೆಪಿಸಿಸಿ ಸಂಯೋಜಕ,ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಹೇಳಿದ್ದಾರೆ.


ಶಾಸಕರ ಕಚೇರಿ ವಿಚಾರದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಹೇಮನಾಥ ಶೆಟ್ಟಿಯವರು, ಶಾಸಕ ಅಶೋಕ್ ಕುಮಾರ್ ರೈ ಅವರು ತೆರಿಗೆ ಹಣವನ್ನು ದುರುಪಯೋಗ ಮಾಡುವವರಾ ಅಥವಾ ತೆರಿಗೆ ಹಣವನ್ನು ಸದುಪಯೋಗ ಮಾಡುವ ಮೂಲಕ ಸಾರ್ವಜನಿಕರಿಗೆ ಸಹಾಯ ಮಾಡುವವರಾ ಅನ್ನುವಂತದ್ದು ಜನರಿಗೆ ಗೊತ್ತಿದೆ.ಕೋಟ್ಯಾಂತರ ರೂಪಾಯಿಯನ್ನು ಸಾವಿರಾರು ಮಂದಿಗೆ ಧನಸಹಾಯ ಮಾಡಿರುವ ಅಶೋಕ್ ಕುಮಾರ್ ರೈ ಅವರು ಮಾಜಿ ಶಾಸಕರಿಂದ ಪಾಠ ಕಲಿಯಬೇಕಾಗಿಲ್ಲ.ನಮ್ಮ ಶಾಸಕ ಅಶೋಕ್ ಕುಮಾರ್ ರೈ ಅವರು ಈಗಾಗಲೇ ಈ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ದೊಡ್ಡ ಮಟ್ಟದ ಅನೇಕ ಚಿಂತನೆ ನಡೆಸಿದ್ದಾರೆ.ಶಾಸಕರಾಗಿ ಮೂರು ದಿನದಲ್ಲೇ ಪುತ್ತೂರಿಗೆ ಮೆಡಿಕಲ್ ಕಾಲೇಜು ತರಿಸುವ ಪ್ರಯತ್ನ ಮಾಡಿದ್ದಾರೆ.ಮಾಣಿಯಿಂದ ಪುತ್ತೂರಿಗೆ ಬರುವ ಚತುಷ್ಪಥ ರಸ್ತೆ ಹೆದ್ದಾರಿ ಕಾಮಗಾರಿಗೆ ಆದಷ್ಟು ಶೀಘ್ರವಾಗಿ ಕೇಂದ್ರ ಸರಕಾರದ ಜೊತೆ ಚರ್ಚಿಸಿ ಚಾಲನೆ ನೀಡಲಿದ್ದಾರೆ.ಪುತ್ತೂರಿಗೆ ಒಳಚರಂಡಿ ವ್ಯವಸ್ಥೆ, ಮಂಗಳೂರಿನಿಂದ ಪುತ್ತೂರಿಗೆ ಕೆಎಂಎಫ್ ಘಟಕ ವರ್ಗಾವಣೆ, ಕೊಯಿಲದಲ್ಲಿ ಪಶುವೈದ್ಯಕೀಯ ಸಂಸ್ಥೆಗೆ ರೂ.20 ಕೋಟಿ ಅನುದಾನ, ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ರೂ.5.60 ಕೋಟಿ ಅನುದಾನ ಸೇರಿದಂತೆ ಕ್ಷೇತ್ರದ ಅನೇಕ ಜನಪರ ಅಭಿವೃದಿಗೆ ಮುತುವರ್ಜಿ ವಹಿಸಿ ಶಾಸಕರು ಕೆಲಸ ಕಾರ್ಯ ಮಾಡುತ್ತಿದ್ದಾರೆ. ಇದರ ಜೊತೆಗೆ ಬಂಟ್ವಾಳ, ಸುಳ್ಯ ವಿಧಾನಸಭಾ ಕ್ಷೇತ್ರ ಒಳಗೊಂಡಂತೆ ರೂ.960 ಕೋಟಿ ಅನುದಾನದಲ್ಲಿ ಕುಡಿಯುವ ನೀರಿನ ಯೋಜನೆ ಅತ್ಯಂತ ಯಶಸ್ವಿಯಾಗಿ ಮಾಡಲಿದ್ದಾರೆ ಎಂದರು.

ಈ ಹಿಂದೆ ಅಧಿಕಾರಿಗಳ ವರ್ಗಾವಣೆಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿತ್ತು.ಆದರೆ ಇವತ್ತು ಲಂಚಕ್ಕೆ ಅವಕಾಶ ಕೊಡದೆ ಪಾರದರ್ಶಕವಾಗಿ ಕ್ಷೇತ್ರದ ಜನರ ಕೆಲಸ ಆಗಲು ಪ್ರಯತ್ನ ಮಾಡುತ್ತಿದ್ದಾರೆ.ಇದನ್ನೆಲ್ಲ ನೋಡಿ ಈ ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು ಅವರಿಗೆ ಹೊಟ್ಟೆ ನೋವಾಗಿದೆ.ನಾನು ಮಾಡಿದ ಎಲ್ಲಾ ಕೆಲಸಗಳಿಗೆ ಇವರು ರಿಬ್ಬನ್ ಕಟ್ ಮಾಡುತ್ತಾರೆ ಎಂದು ಹೇಳುವ ಮಾಜಿ ಶಾಸಕರು, ಏನೆಲ್ಲಾ ಕೆಲಸ ಮಾಡಿ ಇನ್ನೊಮ್ಮೆ ನಿಲ್ಲದಂತೆ ಆಯಿತು ಎಂಬುದು ಈ ಕ್ಷೇತ್ರದ ಜನತೆಗೆ ಗೊತ್ತಿದೆ.ಮಾಜಿ ಶಾಸಕರು ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ.ಅವರ ಪ್ರತಿಭಟನೆ ನಾವು ನೋಡುತ್ತೇವೆ. ನಮಗೂ ಅವರ ವಿಚಾರ ಗೊತ್ತಿದೆ.ಹಿಂದಿನ ಸರಕಾರ ಇರುವಾಗ ಕಂಬಕಂಬಗಳಲ್ಲಿ ಲಂಚ ಕೇಳುತ್ತಿತ್ತು.ಇವತ್ತು ಅಂತಹ ಪ್ರಸಂಗ ಇಲ್ಲ.ಕಂದಾಯ, ಪೊಲೀಸ್, ಅರಣ್ಯ ಇಲಾಖೆಯಲ್ಲಿ ಲಂಚ ಕೊಡದೆ ಕೆಲಸಗಳು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಆಗುತ್ತದೆ ಎಂದು ನಮಗೆಲ್ಲ ಅಭಿಮಾನ ಎಂದರು. ಪತ್ರಿಕಾಗೋಷ್ಠಿಯಲ್ಲಿ ನಗರಸಭಾ ಮಾಜಿ ಸದಸ್ಯ ಅನ್ವರ್ ಖಾಸಿಂ ಮತ್ತು ರಾಜ್ಯ ಎನ್‌ಎಸ್‌ಯುಐ ಘಟಕ ಉಪಾಧ್ಯಕ್ಷ ಫಾರುಕ್ ಬಾಯಬೆ ಉಪಸ್ಥಿತರಿದ್ದರು.


ಕಚೇರಿಯ ಎಲ್ಲಾ ಖರ್ಚನ್ನು ಕೈಯಿಂದ ಹಾಕುವ ತಾಕತ್ತು ನಮ್ಮ ಶಾಸಕರಿಗಿದೆ
ಸುಸಜ್ಜಿತವಾದ ಶಾಸಕರ ಕಚೇರಿ ಇದ್ದರೆ ಸಾರ್ವಜನಿಕರಿಗೆ ತಮ್ಮ ಕೆಲಸಗಳನ್ನು ಸ್ವಚ್ಚ ಮನಸ್ಸಿನಿಂದ ಮಾಡಲು ಸಾಧ್ಯವಿದೆ.ಹಾಗಾಗಿ ವಿಶಾಲವಾದ ಪಾರ್ಕಿಂಗ್, ಸಾರ್ವಜನಿಕರಿಗೆ ಕೂತುಕೊಳ್ಳಲು ಒಳ್ಳೆಯ ವ್ಯವಸ್ಥೆ ಮಾಡಲಾಗಿದೆ.ಅಶೋಕ್ ಕುಮಾರ್ ರೈ ಅವರಿಗೆ ಭ್ರಷ್ಟಾಚಾರ, ಲಂಚದ ಆಸೆಗಳಿಲ್ಲ.ಚುನಾವಣೆ ಸಂದರ್ಭ ಮತ್ತು ಅದರ ನಂತರದ ದಿನದಲ್ಲಿ ಈ ಭಾಗದ ಜನರಿಗೆ ಯಾವುದು ಬೇಕಾದರೂ ಅದನ್ನು ಒದಗಿಸಲು ಅತ್ಯಂತ ಪ್ರಾಮಾಣಿಕ ಸೇವೆ ಮಾಡುತ್ತಿದ್ದಾರೆ.ಶಾಸಕರ ಕಚೇರಿಗಳ ಸಾವಿರ ಪಾಲು ಮೇಲ್ಪಟ್ಟ ಸ್ವಂತ ಕಚೇರಿ ಹೊಂದಿರುವ ಅಶೋಕ್ ಕುಮಾರ್ ರೈ ಅವರನ್ನು ಪ್ರಶ್ನಿಸುವ ನೈತಿಕತೆ ಮಾಜಿ ಶಾಸಕ ಸಂಜೀವ ಮಠಂದೂರು ಅವರಿಗೆ ಇಲ್ಲ.ಹಲವು ಕಾರ್ಯಕ್ರಮಗಳು ಸರಕಾರಿ ಹಣದಲ್ಲೇ ನಡೆಯುತ್ತದೆ. ಅಶೋಕ್ ಕುಮಾರ್ ರೈ ಅವರು ತಮ್ಮ ಸ್ವಂತಕ್ಕಾಗಿ ಮಾಡಿಲ್ಲ.ಆದರೆ, ಸಾರ್ವಜನಿಕರು ಭೇಟಿಯಾಗುವ ಕಚೇರಿಯನ್ನು ಸುಂದರವಾಗಿ ನಿರ್ಮಿಸಲು ಮಠಂದೂರು ಅವರಿಗೆ ಯೋಗ ಇಲ್ಲ ಎಂದು ಅಶೋಕ್ ಕುಮಾರ್ ರೈ ಅವರು ಯಾಕೆ ಮಾಡಬಾರದು ಎಂದು ಪ್ರಶ್ನಿಸಿದ ಹೇಮನಾಥ ಶೆಟ್ಟಿಯವರು ಅಶೋಕ್ ಕುಮಾರ್ ರೈ ಅವರ ಮೇಲೆ ಸಂಜೀವ ಮಠಂದೂರು ಅವರಿಗೆ ಹೊಟ್ಟೆ ನೋವಿದ್ದರೆ,ಕಚೇರಿಗೆ ಆಗುವ ಎಲ್ಲಾ ಖರ್ಚನ್ನು ತನ್ನ ಕೈಯಿಂದ ಹಾಕಲು ನಮ್ಮ ಶಾಸಕರಿಗೆ ತಾಕತ್ತಿದೆ.ಇವತ್ತು ಶಾಸಕರಿಗೆ ಬರುವ ಸಂಬಳಕ್ಕಿಂತ ಎರಡಪಟ್ಟು,ಕಚೇರಿಗೆ ಬರುವ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಲೆಂದು ಇಟ್ಟಿರುವ 6 ಮಂದಿ ಸಿಬ್ಬಂದಿಗಳಿಗೆ ತನ್ನ ಸ್ವಂತ ಖರ್ಚಿನಿಂದ ಅವರು ಸಂಬಳ ನೀಡುತ್ತಾರೆ ಎಂದು ಹೇಮನಾಥ ಶೆಟ್ಟಿ ಹೇಳಿದರು.

LEAVE A REPLY

Please enter your comment!
Please enter your name here