ಬಡಗನ್ನೂರುಃ ಪಡುವನ್ನೂರು ಗ್ರಾಮದ ಪಿಳಿಪಂಜರ ಎಂಬಲ್ಲಿ ಪಂಚಾಯತ್ ನಿವೇಶನಕ್ಕೆ ಕಾದಿರಿಸಿದ ಜಾಗಕ್ಕೆ ಸಂಚರಿಸಲು ದಾರಿಗೆ ಜಮೀನು ಕಲ್ಪಿಸಿಕೊಡುವಂತೆ ಪುತ್ತೂರು ತಹಶಿಲ್ದಾರ್ ರವರಿಗೆ ಬರೆಯಲು ಬಡಗನ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಭೆಯು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ಎಂ ರವರ ಅಧ್ಯಕ್ಷತೆಯಲ್ಲಿ ಅ.29 ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.ಪಡುವನ್ನೂರು ಗ್ರಾಮದ ಪಿಳಿಪಂಜರ ಎಂಬಲ್ಲಿ ಪಂಚಾಯತ್ ನಿವೇಶನಕ್ಕೆ ಕಾದಿರಿಸಿದ ಜಾಗದ ಸುತ್ತಲೂ ಕೃಷಿ ಭೂಮಿ ಇದ್ದು ನಿವೇಶಕ್ಕೆ ಕಾದಿರಿಸಿದ ಜಾಗಕ್ಕೆ ಹೋಗಲು ಮಾರ್ಗದ ವ್ಯವಸ್ಥೆ ಇಲ್ಲ, ಪಂಚಾಯತ್ ವತಿಯಿಂದ ಕೃಷಿ ಜಮೀನು ಮಾಲೀಕರೋಂದಿಗೆ ನಿವೇಶನ ಜಾಗಕ್ಕೆ ಹೋಗಲು ರಸ್ತೆ ಸೌಕರ್ಯ ಮಾಡುವ ನಿಟ್ಟಿನಲ್ಲಿ ಮಾತುಕತೆ ನಡೆಸಲಾಗಿದೆ ಅದರೆ ಯಾವುದೇ ಫಲಕಾರಿಯಾಗಲಿಲ್ಲ. ನಿವೇಶನ ಇಲ್ಲದ ಫಲಾನುಭವಿಗಳ ಅರ್ಜಿ ಹೆಚ್ಚಾಗಿದೆ. ನಿವೇಶನಕ್ಕೆ ಹೋಗುವ ಜಮೀನಿಗೆ ಮಾರ್ಗದ ವ್ಯವಸ್ಥೆ ಇಲ್ಲದೆ ನಿವೇಶನ ಹಂಚಿಕೆಯಲ್ಲಿ ತೊಡಕು ಉಂಟಾಗಿದೆ ಅದರಿಂದ ನಿವೇಶನಕ್ಕೆ ಹೋಗುವ ಜಮೀನಿಗೆ ಮಾರ್ಗದ ವ್ಯವಸ್ಥೆಗೆ ಅವಕಾಶ ಕಲ್ಪಿಸಿಕೊಂಡುವಂತೆ ಕಂದಾಯ ಇಲಾಖೆಗೆ ಬರೆಯುವಂತೆ ಸದಸ್ಯ ರವಿರಾಜ ರೈ ಸಜಂಕಾಡಿ ಸಭೆಯ ಗಮನಕ್ಕೆ ತಂದರು.ಈ ಬಗ್ಗೆ ಸರ್ವ ಸದಸ್ಯರ ಒಮ್ಮತದಿಂದ ಪುತ್ತೂರು ತಹಶಿಲ್ದಾರ್ ರವರೆಗೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.
ಬೆಳೆ ಸಮೀಕ್ಷೆ ಒಂದು ಬಾರಿ ನಡೆಸಬೇಕು
ಕಂದಾಯ ಇಲಾಖೆ ಬೆಳೆ ಸಮೀಕ್ಷೆ ಪ್ರತಿವರ್ಷ ನಡೆಸುತ್ತದೆ ಆದರೆ ಕೃಷಿಕರಿಗೆ ಸಾಲ ತೆಗೆಯುವ ಸಂದರ್ಭದಲ್ಲಿ ಪುನಃ ವಿ.ಎ ಕಛೇರಿಗೆ ಅಲೆದಾಡುವ ಪ್ರಮೇಯ ಬರುತ್ತದೆ. ದ.ಕ ಜಿಲ್ಲೆಯಲ್ಲಿ ಅಡಿಕೆ,ತೆಂಗು, ರಬ್ಬರ್, ಗೇರು ಸಾಮಾನ್ಯವಾಗಿದ್ದು ವರ್ಷಕ್ಕೊಮ್ಮೆ ಬದಲಾವಣೆ ಆಗುವುದಿಲ್ಲ ಇದರಿಂದ ಒಂದು ಭಾರಿ ಬೆಳೆ ಸಮೀಕ್ಷೆ ನಡೆಸಿ ನಮೂದಿಸಿಕೊಳ್ಳಬೇಕು. ಇದರಿಂದ ಪ್ರತಿವರ್ಷ ಬೆಳೆ ಸಮೀಕ್ಷೆ ಮಾಡುವ ಪ್ರಮೇಯ ತಪ್ಪುತ್ತದೆ ಎಂದು ಸದಸ್ಯ ರವಿರಾಜ ರೈ ಸಜಂಕಾಡಿ ಸಭೆಯಲ್ಲಿ ಹೇಳಿದರು. ಈ ಬಗ್ಗೆ ಚರ್ಚಿಸಿ ಸಂಬಂಧಪಟ್ಟ ಇಲಾಖಾಧಿಕಾರಿಗೆ ಬರೆಯಲು ತೀರ್ಮಾನಿಸಲಾಯಿತು.
ಬಡಗನ್ನೂರು ಹಾಗೂ ಪಡುವನ್ನೂರು ಗ್ರಾಮಗಳ ಗ್ರಾಮ ಸಭೆಯನ್ನು ಸೆ. 27 ರಂದು ಮಾಡುವ ಬಗ್ಗೆ ದಿನಾಂಕ ನಿರ್ಣಯ ಮಾಡಲಾಯಿತು. ಸೆ. 21 ಮತ್ತು 22 ರಂದು ವಾರ್ಡ್ ಸಭೆ ಮಾಡುವ ಬಗ್ಗೆ ತೀರ್ಮಾನಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷೆ ಸುಶೀಲ ಪಕ್ಯೋಡ್ ಸದಸ್ಯರಾದ ಸಂತೋಷ್ ಆಳ್ವ ರವಿರಾಜ ರೈ ಸಜಂಕಾಡಿ, ಲಿಂಗಪ್ಪ ಗೌಡ ಮೋಡಿಕೆ, ವಸಂತ ಗೌಡ ಕನ್ನಯ, ರವಿಚಂದ್ರ ಸಾರೆಪ್ಪಾಡಿ, ಕುಮಾರ ಅಂಬಟೆಮುಲೆ, ವೆಂಕಟೇಶ ಕನ್ನಡ್ಕ, ಧರ್ಮೇಂದ್ರ ಕುಲಾಲ್ ಪದಡ್ಕ, ಹೇಮಾವತಿ ಮೋಡಿಕೆ, ,ಸುಜಾತ ಮೈಂದನಡ್ಕ, ಸವಿತಾ ನೇರೋತ್ತಡ್ಕ, ದಮಯಂತಿ ಕೆಮನಡ್ಕ, ಜ್ಯೋತಿ ಅಂಬಟೆಮೂಲೆ,ಕಲಾವತಿ ಗೌಡ ಪಟ್ಲಡ್ಕ ಉಪಸ್ಥಿತರಿದ್ದರು.ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಸೀಮ ಗಂಧದ ಸ್ವಾಗತಿಸಿ, ವಂದಿಸಿ, ಸಾರ್ವಜನಿಕ ಅರ್ಜಿ ಹಾಗೂ ಸರಕಾರಿ ಸುತ್ತೋಲೆಗಳನ್ನು ಓದಿದರು.ಗ್ರಾ.ಪಂ ಸಿಬ್ಬಂದಿಗಳು ಸಹಕರಿಸಿದರು.