ಅಪಾಯದ ಸ್ಥಿತಿಯಲ್ಲಿ ಕಟ್ಟತ್ತಾರು, ತೆಗ್ಗು ಶಾಲಾ ಕಟ್ಟಡ, ದುರಸ್ತಿಗೆ ಮನವಿ
ಪುತ್ತೂರು: ಕೆಯ್ಯೂರು ಗ್ರಾಮದ ಕಟ್ಟತ್ತಾರು ಹಾಗೂ ತೆಗ್ಗು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಮೇಲ್ಛಾವಣಿ ನಾದುರಸ್ತಿಯಲ್ಲಿದ್ದು ಅಪಾಯದ ಅಂಚಿನಲ್ಲಿದೆ. ಆದ್ದರಿಂದ ಈ ಕಟ್ಟಡಗಳನ್ನು ಶೀಘ್ರ ದುರಸ್ತಿ ಮಾಡಿಕೊಡುವಂತೆ ಶಾಲಾ ವತಿಯಿಂಂದ ಬಂದ ಅರ್ಜಿಯ ಬಗ್ಗೆ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯು ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರ ಅಧ್ಯಕ್ಷತೆಯಲ್ಲಿ ಆ.29 ರಂದು ಗ್ರಾಪಂ ಸಭಾಂಗಣದಲ್ಲಿ ನಡೆಯಿತು.
ಕಟ್ಟತ್ತಾರು ಶಾಲಾ ಕಟ್ಟಡದ ಮೇಲ್ಛಾವಣಿ ನಾದುರಸ್ತಿಯಲ್ಲಿದ್ದು ಅಲ್ಲಲ್ಲಿ ಪಕ್ಕಾಸುಗಳು ತುಂಡಾಗಲು ತಯಾರಾಗಿದ್ದು ಶೀಘ್ರವೇ ಈ ಕಟ್ಟಡವನ್ನು ದುರಸ್ತಿ ಮಾಡಿಕೊಡುವಂತೆ ಶಾಲಾ ವತಿಯಿಂದ ಅರ್ಜಿಯನ್ನು ನೀಡಲಾಗಿದ್ದು ಈ ಬಗ್ಗೆ ಚರ್ಚಿಸಲಾಯಿತು. ಇದೇ ವಿಷಯದ ಬಗ್ಗೆ ಮಾತನಾಡಿದ ಅಬ್ದುಲ್ ಖಾದರ್ ಮೇರ್ಲರವರು, ತೆಗ್ಗು ಶಾಲೆಯ ಕಟ್ಟಡದ ಮೇಲ್ಛಾವಣಿ ಕೂಡ ಅಪಾಯದ ಸ್ಥಿತಿಯಲ್ಲಿದೆ ಎಂಬ ಬಗ್ಗೆ ತಿಳಿಸಿದರು. ಇದಕ್ಕೆ ಸ್ಪಂದಿಸಿದ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರು ಶಾಲಾ ಕಟ್ಟಡದ ಸ್ಥಿತಿಗತಿಯ ಬಗ್ಗೆ ಶೀಘ್ರವೇ ಪರಿಶೀಲನೆ ಮಾಡುವುದು, ಅಪಾಯದ ಕಟ್ಟಡದಲ್ಲಿ ವಿದ್ಯಾರ್ಥಿಗಳ ಪಾಠ ಕೇಳುತ್ತಿದ್ದರೆ ಅವರನ್ನು ತಕ್ಷಣವೇ ಅಲ್ಲಿಂದ ಸ್ಥಳಾಂತರ ಮಾಡುವುದು ಹಾಗೂ ಕಟ್ಟಡ ದುರಸ್ತಿಯ ಪರಿಶೀಲನೆ ಮಾಡುವುದು ಎಂದು ತಿಳಿಸಿದರು.
ಸೋಲಾರ್ ಬೀದಿ ದೀಪ ಬೇಡವೇ ಬೇಡ…!?
ಗ್ರಾಮದಲ್ಲಿ ಅಳವಡಿಸಿದ ಸೋಲಾರ್ ದಾರಿ ದೀಪಗಳು ಉರಿಯದೇ ಇರುವ ಬಗ್ಗೆ ಬಂದ ಸಾರ್ವಜನಿಕ ಅರ್ಜಿಯ ವಿಚಾರದಲ್ಲಿ ಚರ್ಚೆ ನಡೆಸಲಾಯಿತು.ಗ್ರಾಮದ ಬಹುತೇಕ ಸೋಲಾರ್ ದಾರಿ ದೀಪಗಳು ಉರಿಯುತ್ತಿಲ್ಲ ಎಂಬ ವಿಷಯವನ್ನು ಸದಸ್ಯರು ತಿಳಿಸಿದರು. ಬಟ್ಯಪ್ಪ ರೈ ದೇರ್ಲರವರು ಮಾತನಾಡಿ, ಸೋಲಾರ್ ದಾರಿ ದೀಪಗಳು ಪ್ರಯೋಜನವಿಲ್ಲ, ಹಾಕಿದ ಒಂದೇ ವರ್ಷದಲ್ಲಿ ಕೆಟ್ಟು ಹೋಗುತ್ತವೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಹಾಕಿದರೂ ಯಾವುದೇ ಉಪಯೋಗವಿಲ್ಲ ಆದ್ದರಿಂದ ಸೋಲಾರ್ ದಾರಿ ದೀಪಗಳು ಬೇಡವೇ ಬೇಡ ಅದರ ಬದಲಾಗಿ ವಿದ್ಯುತ್ ದಾರಿ ದೀಪಗಳನ್ನೇ ಅಳವಡಿಸುವುದು ಸೂಕ್ತ ಎಂದು ತಿಳಿಸಿದರು. ಇದಕ್ಕೆ ಶೇಷಪ್ಪ ದೇರ್ಲ, ಅಬ್ದುಲ್ ಖಾದರ್ ಮೇರ್ಲ, ತಾರಾನಾಥ ಕಂಪ, ವಿಜಯ ಕುಮಾರ್ ಮತ್ತಿತರರು ಧ್ವನಿಗೂಡಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ಶರತ್ ಕುಮಾರ್‌ರವರು, ಈಗಾಗಲೇ ಕೆಟ್ಟು ಹೋಗಿರುವ ದಾರಿ ದೀಪಗಳನ್ನು ಒಂದು ವಾರದೊಳಗೆ ಸರಿಪಡಿಸಲಾಗುವುದು ಎಂದು ತಿಳಿಸಿದರು.
ಕೆಯ್ಯೂರು ದೇವಳದ ದ್ವಾರದ ಬಳಿ ಹೈಮಾಸ್ಕ್ ಲೈಟ್ ಬೇಕು
ಕೆಯ್ಯೂರು ಶ್ರೀ ಕ್ಷೇತ್ರಕ್ಕೆ ತೆರಳುವ ದ್ವಾರದ ಬಳಿ ಅಂದರೆ ದೇವಿನಗರ ಜಂಕ್ಷನ್‌ನಲ್ಲಿ ಹೈಮಾಸ್ಕ್ ಲೈಟ್‌ನ ಅವಶ್ಯಕತೆ ಇದೆ ಆದ್ದರಿಂದ ಈ ಬಗ್ಗೆ ನಿರ್ಣಯ ಮಾಡಿ ಶಾಸಕರಿಗೆ ಬರೆದುಕೊಳ್ಳುವ ಎಂದು ಅಬ್ದುಲ್ ಖಾದರ್ ಮೇರ್ಲ ತಿಳಿಸಿದರು. ಅದರಂತೆ ನಿರ್ಣಯ ದಾಖಲಿಸಿಕೊಳ್ಳಲಾಯಿತು.
ದೇರ್ಲದಲ್ಲಿ ರಸ್ತೆಯಲ್ಲೇ ಕ್ರಿಕೆಟ್ ಪಂದ್ಯಾಟ- ವಾಹನ ಸವಾರರಿಗೆ ತೊಂದರೆ
ದೇರ್ಲದಲ್ಲಿ ಸಂಜೆ ವೇಳೆ ರಸ್ತೆ ಮಧ್ಯೆಯೇ ಯುವಕರು ಕ್ರಿಕೆಟ್ ಪಂದ್ಯಾಟ ಆಡುತ್ತಿದ್ದಾರೆ ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಎಷ್ಟೇ ಹೇಳಿದರೂ ಕ್ಯಾರ್ ಮಾಡುತ್ತಿಲ್ಲ ಎಂಬ ಬಗ್ಗೆ ಬಂದ ಸಾರ್ವಜನಿಕ ಅರ್ಜಿಯ ಬಗ್ಗೆ ಚರ್ಚೆ ನಡೆಸಲಾಯಿತು. ಇಲ್ಲಿ ಅಂಗನವಾಡಿ ಕೂಡ ಇದೆ ಅಲ್ಲದೆ ತಿರುವು ರಸ್ತೆಯಾಗಿರುವುದರಿಂದ ವಾಹನ ಸವಾರರಿಗೆ, ಪಾದಚಾರಿಗಳಿಗೆ ತೊಂದರೆ ಉಂಟಾಗುವುದು ಸಹಜ ಆದ್ದರಿಂದ ಈ ಬಗ್ಗೆ ಪೊಲೀಸ್ ಇಲಾಖೆಗೆ ತಿಳಿಸುವುದು ಸೂಕ್ತ ಎಂದು ನಿರ್ಣಯಿಸಲಾಯಿತು.
ಮನೆ ಬಿದ್ದು ಹೋಗಿದೆ ಮನೆ ಕೊಡಿ-ವೃದ್ಧೆಯಿಂದ ಅರ್ಜಿ
ಇತ್ತೀಚೆಗೆ ಸುರಿದ ಭಾರಿ ಮಳೆ ಹಾಗೂ ಗಾಳಿಗೆ ಗ್ರಾಮದ ಕಟ್ಟೇಜಿರ್ ಎಂಬಲ್ಲಿ ಒಂಟಿ ವೃದ್ಧೆ ಭೀಪಾತುಮ್ಮ ಎಂಬವರು ವಾಸ ಮಾಡಿಕೊಂಡಿದ್ದ ಮನೆಯೊಂದು ಮುರಿದು ಬಿದ್ದಿತ್ತು. ಮನೆ ಬೀಳುವ ಸಂದರ್ಭದಲ್ಲಿ ಭೀಪಾತುಮ್ಮರವರು ಪಕ್ಕದ ಮನೆಯಲ್ಲಿ ವಾಸವಿದ್ದುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ ಎನ್ನಲಾಗಿದೆ. ಈ ಬಗ್ಗೆ ಗ್ರಾಮಕರಣಿಕರು, ತಹಶೀಲ್ದಾರ್‌ರವರು ಸ್ಥಳ ತನಿಖೆ ನಡೆಸಿದ್ದರು. ಆದರೆ ವೃದ್ಧೆಗೆ ಯಾವುದೇ ಪರಿಹಾರ ಸಿಗದ ಹಿನ್ನಲೆಯಲ್ಲಿ ನನಗೆ ಈಗ ವಾಸಕ್ಕೆ ಮನೆ ಇಲ್ಲದೆ ತುಂಬಾ ತೊಂದರೆಯಾಗಿದೆ ಆದ್ದರಿಂದ ಮನೆ ನಿರ್ಮಿಸಿ ಕೊಡಿ ಎಂದು ಪಂಚಾಯತ್‌ಗೆ ಅರ್ಜಿ ಸಲ್ಲಿಸಿದ್ದರು ಈ ಅರ್ಜಿಯ ಬಗ್ಗೆ ಚರ್ಚೆ ನಡೆಸಲಾಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಬ್ದುಲ್ ಖಾದರ್ ಮೇರ್ಲರವರು, ಮನೆ ಬೀಳುವ ಸಂದರ್ಭದಲ್ಲಿ ಅಜ್ಜಿ ಮನೆಯಲ್ಲಿ ಇರಲಿಲ್ಲ ಒಂದು ವೇಳೆ ಇದ್ದಿದ್ದರೆ ಸತ್ತೇ ಹೋಗುತ್ತಿದ್ದರು ಈಗ ಕಂದಾಯ ಅಧಿಕಾರಿಗಳು ಅದರಲ್ಲಿ ಯಾರೂ ವಾಸವಿರಲಿಲ್ಲ ಆದ್ದರಿಂದ ಯಾವುದೇ ಪರಿಹಾರ ಕೊಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಇದು ಯಾವ ನ್ಯಾಯ ಹಾಗಾದರೆ ಅಜ್ಜಿ ಸಾಯುತ್ತಿದ್ದರೆ ಮಾತ್ರ ಪರಿಹಾರವಾ ಎಂದು ಕೇಳಿದರು. ಇದಕ್ಕೆ ಧ್ವನಿಗೂಡಿಸಿದ ಬಟ್ಯಪ್ಪ ರೈಯವರು, ಈ ಬಗ್ಗೆ ನಾನು ಶಾಸಕರ ಜೊತೆಯು ಮಾತನಾಡಿದ್ದೇನೆ. ಅಜ್ಜಿ ವಾಸವಿದ್ದದ್ದು ಅದೇ ಮನೆಯಲ್ಲಿ ಈ ಮನೆ ಬಿದ್ದು ಹೋಗಿದೆ, ಬೀಳುವ ಸಂದರ್ಭದಲ್ಲಿ ಅಜ್ಜಿ ಇರಲಿಲ್ಲ ಹಾಗಂತ ಅಜ್ಜಿ ಇಲ್ಲದೇ ಇದ್ದುದರಿಂದ ಪರಿಹಾರ ಕೊಡಲು ಸಾಧ್ಯವಿಲ್ಲ ಎನ್ನುವುದು ಸರಿಯಲ್ಲ ಈ ಬಗ್ಗೆ ಶಾಸಕರು ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ ಎಂದು ಹೇಳಿದರು.
ಪಂಚಾಯತ್‌ನಿಂದಲೇ ಪಂಪು ಖರೀದಿಸಿ
ಸಕಾಲದಲ್ಲಿ ಬೇಕಾದಷ್ಟು ಮಳೆ ಬೀಳದೆ ಇರುವುದರಿಂದ ಈ ವರ್ಷ ನೀರಿಗೆ ಬಹಳಷ್ಟು ಬರ ಬರುವ ಸಾಧ್ಯತೆ ಇದೆ ಈ ಬಗ್ಗೆ ಪಂಚಾಯತ್ ನೀರಿನ ಮೂಲದ ಬಗ್ಗೆ ಬಹಳಷ್ಟು ಎಚ್ಚರಿಕೆಯಿಂದರಬೇಕಾಗಿದೆ ಎಂಬ ಬಗ್ಗೆ ಚರ್ಚಿಸಲಾಯಿತು. ಕೊಳವೆ ಬಾವಿಗಳಿಗೆ ಹಾಕುವ ಪಂಪುಗಳು ಪದೇ ಪದೇ ಕೈಕೊಡುವ ಬಗ್ಗೆ ಚರ್ಚಿಸಲಾಯಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಜಯ ಕುಮಾರ್ ಸಣಂಗಳರವರು, ಕೊಳವೆ ಬಾವಿಗಳಿಗೆ ಹಾಕಲು ಪಂಪುಗಳನ್ನು ಪಂಚಾಯತ್‌ನಿಂದಲೇ ಖರೀದಿಸಿ ಕೊಡುವುದು ಸೂಕ್ತ ಏಕೆಂದರೆ ಕಂಟ್ರಾಕ್ಟ್‌ದಾರರು ಯಾವ ಪಂಪು ಹಾಕ್ತಾರೆ ಮತ್ತು ಅದರ ಸಾಧಕ ಬಾಧಕಗಳ ಬಗ್ಗೆ ನಮಗೆ ಯಾವುದೇ ಮಾಹಿತಿ ಇರುವುದಿಲ್ಲ ಎಂದು ತಿಳಿಸಿದರು. ಇದಕ್ಕೆ ಅಬ್ದುಲ್ ಖಾದರ್ ಮೇರ್ಲ ಧ್ವನಿಗೂಡಿಸಿದರು. ಈ ಬಗ್ಗೆ ಉತ್ತರಿಸಿದ ಕಾರ್ಯದರ್ಶಿ ಸುರೇಂದ್ರ ರೈಯವರು, ನಮ್ಮಲ್ಲಿ 18 ಸ್ಥಾವರ ಇದೆ. ಈ ಸ್ಥಾವರಗಳ ನಿರ್ವಹಣೆಯನ್ನು ಇಬ್ಬರು ಕಂಟ್ರಾಕ್ಟ್‌ದಾರರು ನಿರ್ವಹಿಸುತ್ತಿದ್ದಾರೆ. ಅವರು ಪಂಪು ಹಾಕುವ ಸಂದರ್ಭದಲ್ಲಿ ನಮ್ಮ ಸಿಬ್ಬಂದಿಗಳಿಗೆ ತೋರಿಸಿ ಹಾಕುತ್ತಿದ್ದಾರೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಸುಮಿತ್ರಾ ಪಲ್ಲತ್ತಡ್ಕ, ಸದಸ್ಯರುಗಳಾದ ಜಯಂತಿ ಎಸ್.ಭಂಡಾರಿ, ತಾರಾನಾಥ ಕಂಪ, ವಿಜಯ ಕುಮಾರ್, ಮಮತಾ ರೈ, ಸುಭಾಷಿಣಿ, ನೆಬಿಸಾ, ಅಮಿತಾ ಎಚ್.ರೈ, ಗಿರಿಜಾ ಕೆ, ಶೇಷಪ್ಪ ದೇರ್ಲ, ಬಟ್ಯಪ್ಪ ರೈ ದೇರ್ಲ, ಅಬ್ದುಲ್ ಖಾದರ್ ಮೇರ್ಲ, ಜಯಂತ ಪೂಜಾರಿ ಕೆಂಗುಡೇಲು, ಮೀನಾಕ್ಷಿ ವಿ.ರೈ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ನಮಿತಾ ಕೆರವರು ವಿವಿಧ ಮಾಹಿತಿಗಳನ್ನು ನೀಡಿ ನಿರ್ಣಯಗಳನ್ನು ದಾಖಲಿಸಿಕೊಂಡರು. ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಸ್ವಾಗತಿಸಿ ಸರಕಾರ ಸುತ್ತೋಲೆ ಹಾಗೂ ಸಾರ್ವಜನಿಕ ಅರ್ಜಿಗಳನ್ನು ಓದಿದರು. ಸಿಬ್ಬಂದಿಗಳಾದ ಶಿವಪ್ರಸಾದ್, ರಾಕೇಶ್, ಧರ್ಮಣ್ಣ, ಮಾಲತಿ, ಜ್ಯೋತಿ ಸಹಕರಿಸಿದ್ದರು.
ತಿಂಗಳ ಊಟಕ್ಕೆ ಎರಡೂವರೆ ವರ್ಷ…?ಕೋರಿ ರೊಟ್ಟಿ, ಇಡ್ಲಿ ಸಾಂಬಾರ್
ಕೆಯ್ಯೂರು ಗ್ರಾಮ ಪಂಚಾಯತ್‌ನ ಪ್ರತಿ ಸಾಮಾನ್ಯ ಸಭೆಯಲ್ಲೂ ಮಧ್ಯಾಹ್ನ ಭರ್ಜರಿ ಊಟವಿರುತ್ತದೆ. ಪಂಚಾಯತ್‌ನಲ್ಲಿ ಒಟ್ಟು 15 ಮಂದಿ ಸದಸ್ಯರಿದ್ದು ಪ್ರತಿ ತಿಂಗಳು ಓರ್ವ ಸದಸ್ಯನ ವತಿಯಿಂದ ಊಟದ ವ್ಯವಸ್ಥೆ ಇರುತ್ತದೆ. ಈ ರೀತಿಯ ಊಟದ ವ್ಯವಸ್ಥೆ ಆರಂಭವಾಗಿ ಬರೋಬ್ಬರಿ ಎರಡೂವರೆ ವರ್ಷ ಕಳೆದು ಹೋಗಿದೆ. ನಿಕಟಪೂರ್ವ ಅಧ್ಯಕ್ಷೆ ಜಯಂತಿ ಎಸ್.ಭಂಡಾರಿಯವರ ಅವಧಿಯಲ್ಲಿ ಸದಸ್ಯರುಗಳೇ ನಿರ್ಣಯ ಮಾಡಿಕೊಂಡು ಪ್ರತಿ ಸಾಮಾನ್ಯ ಸಭೆಗೆ ಓರ್ವ ಸದಸ್ಯ ಊಟ ನೀಡುವುದು ಎಂದು ಘೋಷಿಸಿದ್ದರು ಅದರಂತೆ ಇದೀಗ ಎರಡೂವರೆ ವರ್ಷ ಕಳೆದಿದ್ದು ನೂತನ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರ ಅವಧಿಯಲ್ಲಿ ಮೊದಲ ಸಾಮಾನ್ಯ ಸಭೆಯ ಊಟವನ್ನು ಸದಸ್ಯ ಶೇಷಪ್ಪ ದೇರ್ಲರವರ ನೀಡಿದ್ದರು. ಕೋಳಿ ಸುಕ್ಕ, ರೊಟ್ಟಿ, ಕಬಾಬ್, ಅನ್ನ, ಸಾಂಬಾರ್ ಹೀಗೆ ತರಾವರಿ ಐಟಮ್‌ಗಳಿತ್ತು. ರಾಜಕೀಯ ಏನಿದ್ದರೂ ಪಂಚಾಯತ್‌ನಿಂದ ಹೊರಗೆ ಇಟ್ಟುಕೊಂಡು ಪಂಚಾಯತ್‌ನೊಳಗೆ ಎಲ್ಲರೂ ಒಗ್ಗಟ್ಟಾಗಿ ಗ್ರಾಮದ ಅಭಿವೃದ್ಧಿಪರ ಚಿಂತನೆ ನಡೆಸುವ ಇಲ್ಲಿನ ಸದಸ್ಯರ ಗುಣದಿಂದ ಇದೊಂದು ರಾಜಕೀಯ ರಹಿತ ಪಂಚಾಯತ್ ಎಂದೇ ಪ್ರಸಿದ್ಧಿಯನ್ನು ಪಡೆದುಕೊಂಡು ಬಂದಿದೆ.ಓಣಂ ಹಬ್ಬದ ಪ್ರಯುಕ್ತ ಗ್ರಾಪಂ ಅಭಿವೃದ್ಧಿ ಅಧಿಕಾರಿ ನಮಿತಾ ಕೆ.ರವರು ಸದಸ್ಯರಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ವಿಶೇಷ ಉಪಹಾರದ ವ್ಯವಸ್ಥೆಯನ್ನು ಮಾಡಿದ್ದರು.
` ಸಾಮಾನ್ಯ ಸಭೆಯಲ್ಲಿ ಕಂಡು ಬಂದ ಪ್ರಮುಖ ಬೇಡಿಕೆಗಳಾದ ಕಟ್ಟತ್ತಾರು ಹಾಗೂ ತೆಗ್ಗು ಶಾಲಾ ಕಟ್ಟಡದ ಬಗ್ಗೆ ಶೀಘ್ರವೇ ಪರಿಶೀಲನೆ ಮಾಡುವುದು, ಅಪಾಯ ಅಂತ ಕಂಡು ಬಂದರೆ ಕೂಡಲೇ ಮಕ್ಕಳನ್ನು ಸ್ಥಳಾಂತರ ಮಾಡುವ ಮೂಲಕ ಬದಲಿ ವ್ಯವಸ್ಥೆ ಮಾಡುವುದು, ಕೆಟ್ಟು ಹೋಗಿರುವ ದಾರಿ ದೀಪಗಳನ್ನು ಒಂದು ವಾರದೊಳಗೆ ಸರಿಪಡಿಸುವುದು ಹಾಗೇ ಇತರ ಸಾರ್ವಜನಿಕ ಬೇಡಿಕೆಗಳನ್ನು ಪರಿಶೀಲನೆ ಮಾಡಲಾಗುವುದು.’
ಶರತ್ ಕುಮಾರ್ ಮಾಡಾವು, ಅಧ್ಯಕ್ಷರು ಕೆಯ್ಯೂರು ಗ್ರಾಪಂ