ಸಂಸದ ನಳಿನ್ ಕುಮಾರ್ ಕಟೀಲ್‌ರವರ ಐಷಾರಾಮಿ ಕಚೇರಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವುದು ತೆರಿಗೆ ದುರುಪಯೋಗವಲ್ಲವೇ? – ಪುತ್ತೂರು ಶಾಸಕರ ವಿರುದ್ಧ ಬಿಜೆಪಿಯ ಪತ್ರಿಕಾಗೋಷ್ಠಿಗೆ ನಗರ ಕಾಂಗ್ರೆಸ್ ಅಧ್ಯಕ್ಷರ ಪ್ರತಿಕಾಗೋಷ್ಠಿ

0

ಪುತ್ತೂರು: ಶಾಸಕರ ಕಚೇರಿ ನಗರಸಭೆಯ ಕಟ್ಟಡವಾಗಿದ್ದು, ಅದನ್ನು ದುರಸ್ಥಿ ಪಡಿಸಲು ನಗರಸಭೆಯ ಅನುದಾನವನ್ನು ಬಳಸಬೇಕಲ್ಲದೆ ಬೇರೆ ಯಾವ ಅನುದಾನವನ್ನು ಬಳಕೆ ಮಾಡಬಹುದು? ಅದು ಶಾಸಕರ ಕಚೇರಿ ಹೊರತು ಅಶೋಕ್ ಕುಮಾರ್ ರೈ ಅವರ ವೈಯುಕ್ತಿಕ ಕಚೇರಿಯಲ್ಲ. ಮುಂದಿನ ದಿನ ಯಾರೆ ಶಾಸಕರಾಗಲಿ ಅವರಿಗೆ ಈ ಕಚೇರಿ ಉಪಯೋಗಕ್ಕೆ ಬರುತ್ತದೆ ಎಂದ ಬಿಜೆಪಿಯಿಂದ ಶಾಸಕ ಅಶೋಕ್ ಕುಮಾರ್ ರೈ ಅವರ ವಿರುದ್ಧ ನಡೆದ ಪತ್ರಿಕಾಗೋಷ್ಠಿಗೆ ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದು, ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಐಷಾರಮಿ ಕಚೇರಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವುದು ತೆರಿಗೆಯ ದುರುಪಯೋಗವಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಅಶೋಕ್ ಕುಮಾರ್ ರೈ ಅವರು ಶಾಸಕರಾಗಿ ಮೂರೇ ತಿಂಗಳಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು, ಜನಪರ ಯೋಜನೆಗಳನ್ನು ಹಾಕಿಕೊಂಡು ಜನಪ್ರಿಯರಾಗುತ್ತಿದ್ದಾರೆ. ಅವರ ಜನಪ್ರಿಯತೆ ಸಹಿಸಲಾಗದೆ ಹೊಟ್ಟೆಕಿಚ್ಚಿನಿಂದ ಮಾಜಿ ಶಾಸಕ ಸಂಜೀವ ಮಠಂದೂರು ಶಾಸಕರ ನೂತನ ಕಚೇರಿ ಕುರಿತು ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಇವತ್ತು ಮಾಜಿ ಶಾಸಕರಿಗೆ ಕೆಲಸವಿಲ್ಲ. ಕಳೆದ ಚುನಾವಣೆಯಲ್ಲಿ ಅವರಿಗೆ ಟಿಕೇಟ್ ಕೊಡಲಿಲ್ಲ. ಇವತ್ತು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಬೇರೆ ಬೇರೆ ವಿಚಾರ ತೆಗೆದು ಕೊಂಡು ಮಾದ್ಯಮದ ಮುಂದೆ ಬರುತ್ತಿದ್ದಾರೆ. ಅಶೋಕ್ ಕುಮಾರ್ ರೈ ಅವರು ತಮ್ಮನ್ನು ಭೇಟಿಯಾಗಲು ಬರುವ ಸಾರ್ವಜನಿಕರಿಗೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಲ್ಲಿ ಸಭೆ ನಡೆಸಲು ಅನುಕೂಲವಾಗುವ ವ್ಯವಸ್ಥಿತವಾದ ಕಚೇರಿ ಇರಬೇಕೆಂಬ ಸುದುದ್ದೇಶದಿಂದ ಸುಸಜ್ಜಿತ ಕಚೇರಿ ನಿರ್ಮಿಸುವಂತೆ ಜಿಲ್ಲಾಡಳಿತದಲ್ಲಿ ಕೇಳಿಕೊಂಡಂತೆ ಹಿಂದಿನ ಪುರಸಭಾ ಕಟ್ಟಡದಲ್ಲಿ ನೂತನ ಕಚೇರಿ ನಿರ್ಮಾಣ ಮಾಡಲಾಗಿದೆ. ಆದರೆ ಈ ವಿಷಯವನ್ನು ತೆಗೆದುಕೊಂಡು ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಹಿಂದಿನ ಕಚೇರಿ ಗೂಡಂಗಡಿ:
ಹಿಂದಿನ ಶಾಸಕ ಸಂಜೀವ ಮಠಂದೂರು ಅವರ ಮಿನಿ ವಿಧಾನ ಸೌಧದಲ್ಲಿರುವ ಕಚೇರಿ ಗೂಡಂಗಡಿಯಂತೆ ಇತ್ತು. ಈ ಕಚೇರಿಯಲ್ಲಿ ಸಾರ್ವಜನಿಕರಿಗೆ ಬಂದು ಭೇಟಿಯಾಗಿ ಮಾತನಾಡಲು ಸರಿಯಾದ ಸ್ಥಳಾವಕಾಶವಿರಲಿಲ್ಲ. ಅವರಿಗೆ ಸಾರ್ವಜನಿಕರಿಗೆ ತನ್ನ ಕಚೇರಿಯಿಂದ ಅನಾನುಕೂಲ ಆಗುತ್ತದೆ ಎಂಬ ಕಾಳಜಿಯೂ ಇರಲಿಲ್ಲ. ಆದರ ಈಗಿನ ಶಾಸಕರು ಸಾರ್ವಜನಿಕರಿಗಾಗಿ ವಿಶಾಲವಾದ ಕಚೇರಿ ಮಾಡಿಕೊಂಡಿದ್ದಾರೆ ಎಂದು ಹೆಚ್.ಮಹಮ್ಮದ್ ಆಲಿ ಹೇಳಿದರು .

ಸಂಜೀವ ಮಠಂದೂರು ಅವರಿಂದ ಕೋಟ್ಯಾಂತರ ರೂಪಾಯಿ ದುರುಪಯೋಗ:
ಮಾಜಿ ಶಾಸಕ ಸಂಜೀವ ಮಠಂದೂರು ಅವರ ಅವಧಿಯಲ್ಲಿ ಸರಕಾರದ ವಿವಿಧ ಯೋಜನೆಯಲ್ಲಿ ಕೋಟ್ಯಾಂತರ ರೂಪಾಯಿ ಹಣ ದುರುಪಯೋಗ ಆಗಿದೆ. ನಗರಸಭೆಗೆ ಸುಸಜ್ಜಿತ ಕಚೇರಿ ಇದ್ದಾಗಲೂ ಶಾಸಕ ಸಂಜೀವ ಮಠಂದೂರು ಅವರು ಹಿಂದಿನ ಪುರಸಭೆಯ ಕಟ್ಟಡ ಕೆಡವಿದಲ್ಲದೆ ಪಕ್ಕದಲ್ಲಿರುವ ಈಗಿನ ಶಾಸಕರ ಕಚೇರಿ ಕಟ್ಟಡವನ್ನು ಕೆಡವಿ ರೂ.13 ಕೋಟಿ ವೆಚ್ಚದಲ್ಲಿ ಹೊಸ ನಗರಭೆ ಕಚೇರಿ ನಿರ್ಮಿಸಲು ಹೊರಟಿದ್ದರು. ಆಗ ಜನರ ತೆರಿಗೆ ಹಣ ದುರುಪಯೋಗ ಆಗುತ್ತದೆ ಎಂದು ಅವರಿಗೆ ಗೊತ್ತಿರಲಲಿಲ್ಲವೇ? ಪುಡಾ ಕಚೇರಿಯಿಂದ ರೂ.13 ಸಾವಿರ ಬರುವ ಬಾಡಿಗೆ ನಷ್ಟ ಆಗಿದೆ ಎನ್ನುತ್ತಿರುವ ಮಾಜಿ ಶಾಸಕರಿಗೆ ಆ ಕಟ್ಟಡ ಕೆಡವಿದಾಗ ಪುಡಾದ ಬಾಡಿಗೆ, ತಳ ಅಂತಸ್ಥಿನಲ್ಲಿರುವ ಹೊಟೇಲ್, ಇನ್ನಿತರ ಉದ್ಯಮದಿಂದ ಬರುವ ಬಾಡಿಗೆ ನಷ್ಟ ಆಗುತ್ತದೆ ಎಂದು ಗೊತ್ತಿರಲಿಲ್ಲವೇ? ನಗರಸಭೆಯ ವಿವಿಧ ಕಡೆಗಳಲ್ಲಿ ಹಲವು ಕಡೆ ಜನರೇ ಇಲ್ಲದಲ್ಲಿಗೆ ಪಾರ್ಕ್ ಮಾಡಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿರುವುದು, ರಸ್ತೆ ಬದಿಯ ಇಂಟರ್ ಲಾಕ್ ತೆರವು ಮಾಡಿ ಡಾಮಾರು ಹಾಕಿಸಿರುವುದು, ಲಕ್ಸಾಂತರ ರೂಪಾಯಿ ಖರ್ಚು ಮಾಡಿ ಸ್ಮಾರ್ಟ್ ಬಸ್ ತಂಗುದಾಣ ಮಾಡಿರುವುದು, ಕೃಷಿ ಭೂಮಿ ಸಂರಕ್ಷಣೆಗೆ ಒದಗಿಸಲ್ಪಟ್ಟ ಸಣ್ಣ ನೀರಾವರಿ ಇಲಾಖೆಯ ಅನುದಾನದಲ್ಲಿ ನಿಮ್ಮ ಆಪ್ತರ ಪರಿವರ್ತನ ಭೂಮಿಗೆ ತಡೆಗೋಡೆ ಕಟ್ಟಿರುವುದು, ನಗರಸಭೆಯ ಕಚೇರಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸುಸಜ್ಜಿತ ಕಚೇರಿ ಇದ್ದಾಗಲೂ ಬಿಜೆಪಿ ಆಡಳಿತ ಬಂದಾಗ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಎಸಿ ಅಳವಡಿಸಿ ಕಚೇರಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವುದು, ಮುಕ್ರಂಪಾಡಿಯಲ್ಲಿ ರೂ.50 ಲಕ್ಷದಲ್ಲಿ ಆಗುವ ಸೇತುವೆಗೆ ರೂ.1.75 ಕೋಟಿ ಖರ್ಚು ತೋರಿಸಿರುವುದು, ಇರ್ದೆ ಗ್ರಾಮದ ಬೈಲಾಡಿ ಗೋಪಾಲಕೃಷ್ಣ ದೇವಾಲಯದಿಂದ ಬೆಂದ್ರ್‌ತೀರ್ಥಕ್ಕೆ ಹೋಗಲು ತೂಗು ಸೇತುವೆ ನಿರ್ಮಾಣ ಮಾಡುವ ಬದಲು ಖಾಸಗಿ ತೋಟಕ್ಕೆ ಹೋಗಲು ಸೇತುವೆ ಮಾಡಿರುವುದು, ಇದೆ ಗ್ರಾಮದ ಕೆಲ್ಲಾಡಿ ಎಂಬಲ್ಲಿ 500 ಮೀಟರ್ ಅಂತರದಲ್ಲಿ ರಸ್ತೆ ಸಂಪರ್ಕ ಇಲ್ಲದ ಗುಡ್ಡೆಗ ರೂ. 6.50 ಕೋಟಿ ಸೇತುವೆ ನಿರ್ಮಾಣ ಮಾಡಿರುವುದು ಯಾರ ತೆರಿಗೆಯ ಹಣದಲ್ಲಿ ಎಂದು ಪ್ರಶ್ನಿಸಿದ ಮಹಮ್ಮದ್ ಆಲಿಯವರು ಇದೆಲ್ಲ ದುರುಪಯೋಗವಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇವೆಲ್ಲ ಶೇ.40 ಕಮಿಷನ್ ಆಸೆಗಾಗಿ ಮಾಜಿ ಶಾಸಕ ಸಂಜೀವ ಮಠಂದೂರು ಮಾಡಿದ ದುರುಪಯೋಗ ಎಂದರು. ಇವತ್ತು ಮಾಜಿ ಪುರಸಭೆ ಕಟ್ಟಡದಲ್ಲಿ ಶಾಸಕರ ಕಚೇರಿ ನಿರ್ಮಾಣಗೊಂಡಿದ್ದರಿಂದ ಅಲ್ಲಿ ಕಟ್ಟಡ ಕೆಡವುವ ಬಿಜೆಪಿಯ ಹುನ್ನಾರಕ್ಕೆ ತಡೆ ಹಿಡಿಯಲಾಗಿದೆ. ಮುಂದೆಯೂ ಅಲ್ಲಿ ನಗರಸಭೆ ಕಚೇರಿ ನಿರ್ಮಾಣ ಮಾಡಲು ನಾವು ಬಿಡುವುದಿಲ್ಲ ಎಂದು ಮಹಮ್ಮದ್ ಆಲಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರೋಶನ್ ರೈ ಬನ್ನೂರು, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಕ್ಟರ್ ಪಾಯಸ್, ಉಪಾಧ್ಯಕ್ಷ ಮಂಜುನಾಥ್ ಕೆಮ್ಮಾಯಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here