ರೂ.32.40 ಕೋಟಿ ವ್ಯವಹಾರ, ರೂ.20.33 ಲಕ್ಷ ಲಾಭ, ಶೇ.15 ಡಿವಿಡೆಂಡ್, ರೂ.10 ಬೋನಸ್
ಪುತ್ತೂರು: ದ.ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘವು 2022-23ನೇ ಸಾಲಿನಲ್ಲಿ ರೂ.32.40 ಕೋಟಿ ವ್ಯವಹಾರ ನಡೆಸಿ ರೂ.20,33,526.15 ಲಾಭ ಗಳಿಸಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.15 ಡಿವಿಡೆಂಡ್ ಹಾಗೂ ಪ್ರತೀ ಕೆ.ಜಿ ಜೇನಿಗೆ ರೂ.10 ಬೋನಸ್ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದರು.
ಸಂಘದ 85ನೇ ಮಹಾಸಭೆಯು ಸೆ.1ರಂದು ಸಂಘದ ಪ್ರಧಾನ ಕಚೇರಿಯ `ಮಾಧುರಿ ಸೌಧ’ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವರದಿ ವರ್ಷ ಸಂಘದಲ್ಲಿ ರೂ.12,71,200 ಪಾಲು ಬಂಡವಾಳ, ರೂ.3,41,28,782.78 ವಿವಿಧ ಠೇವಣಿ, ರೂ.2,58,69,309.87 ನಿಧಿ ಹೊಂದಿದ್ದು ರೂ.1,48,31,364 ವಿವಿಧ ರೂಪ ಸಾಲ ನೀಡಲಾಗಿದೆ. ವರದಿ ವರ್ಷದಲ್ಲಿ ಒಟ್ಟು 1,11,312.950 ಕೆ.ಜಿ ಜೇನು ಖರೀದಿಸಿ, 1,10,228.050 ಕೆ.ಜಿ ಜೇನು ಮಾರಾಟಮಾಡಲಾಗಿದ್ದು ಜೇನು ವ್ಯವಹಾರದಿಂದ ರೂ.94,39,004.37 ಆದಾಯಗಳಿಸಿರುತ್ತದೆ. ಲೆಕ್ಕಪರಿಶೋಧನೆಯಲ್ಲಿ ಸಂಘವು ಎ ಶ್ರೇಣಿಯನ್ನು ಪಡೆದುಕೊಂಡಿದೆ. ಸಂಘಗಳಿಸಿದ ಲಾಭಾಂಶವನ್ನು ಉಪ ನಿಬಂಧನೆಯಂತೆ ವಿಂಗಡಿಸಲಾಗಿದೆ ಎಂದು ಅವರು ಹೇಳಿದರು.
ಸುಳ್ಯದಲ್ಲಿರುವ ಸಂಘದ ಶಾಖಾ ಕಟ್ಟಡ ಕಾಮಗಾರಿಯು ಅಂತಿಮ ಹಂತದಲ್ಲಿದ್ದು ಮುಂದಿನ ತಿಂಗಳು ಲೋಕಾರ್ಪಣೆಯಾಗಲಿದೆ. ಇದರೊಂದಿಗೆ ಆಧುನಿಕ ತಂತ್ರಜ್ಞಾನ ಆಧಾರಿತವಾದ ಸಂಸ್ಕರಣಾ ಘಟಕ, ಪ್ರಯೋಗಾಲಯ, ಪ್ಯಾಕಿಂಗ್ ವ್ಯವಸ್ಥೆ, ನೂತನ ವಿನ್ಯಾಸದ ಬಾಟಲಿಗಳನ್ನು ಮಾರುಕಟ್ಟೆಗೆ ಬಿಡುಗಡೆಮಾಡಲಾಗುವುದು. ಜೊತೆಗೆ ಜೇನಿನ ಚಾಕೋಲೆಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಅಧ್ಯಕ್ಷ ಚಂದ್ರ ಕೋಲ್ಚಾರ್ ಹೇಳಿದರು.
ಸನ್ಮಾನ:
ಚಂದ್ರಯಾನ ಉಪಗ್ರಹ ಯಶಸ್ವೀ ಉಡಾವಣೆಯ ಇಸ್ರೋ ವಿಜ್ಞಾನಿಗಳೊಂದಿಗೆ ತಂಡದಲ್ಲಿದ್ದ ಸುಳ್ಯ ಮಂಡೆಕೋಲಿನ ಮಾನಸರವರನ್ನು ಮಹಾಸಭೆಯಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ಮಾಜಿ ಶಾಸಕ ಸಂಜೀವ ಮಠಂದೂರು ಉಪಸ್ಥಿತರಿದ್ದರು.
ಬಹುಮಾನ ವಿತರಣೆ:
ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಜೇನು ಪೂರೈಸಿದ ಮನಮೋಹನ ಅರಂಬ್ಯ ಇರ್ದೆ, ಪುಟ್ಟಣ್ಣ ಗೌಡ ಉಬರಡ್ಕ ಮಿತ್ತೂರು, ಶಿವಾನಂದ ನೆಲ್ಲಿ ಪದವು, ಚಂದ್ರಶೇಖರ ಗೌಡ ಮದಕ, ಬಶೀರ್ ದುಗ್ಗಲಡ್ಕ, ಹರೀಶ್ ಕೋಡ್ಲಾ, ರಾಧಾಕೃಷ್ಣ ದಾಸ್ ಉಬರಡ್ಕ ಮಿತ್ತೂರು, ಮಂಜಪ್ಪ ಎನ್ ಬೊಮ್ಮಾರು ಸುಳ್ಯ, ಸುರೇಶ್ ರೈ ಇರ್ದೆ, ದಿನೇಶ್ ಅರಂಬ್ಯ ಇರ್ದೆ, ಚಿನ್ನಕೇಶವ ಪೊಯ್ಯೆಮಜಲು ಸುಳ್ಯ, ವಿಜಯ ಕುಮಾರ್ ಬಾಳೆಕಲ್ಲು ಮಾಣಿಲ, ಪುನೀತ್ ಕುಮಾರ್ ಉಬರಡ್ಕ ಮಿತ್ತೂರು, ಅತೀ ಹೆಚ್ಚು ಜೇನು ಖರೀದಿಸಿದ ಕರುಣಾಕರ ಹಿರಿಯಡ್ಕ, ಎಸ್.ಜಿ.ಆರ್.ಎಸ್ ಟ್ರೇಡರ್ಸ್ ಮೈಸೂರು, ತತ್ವ ಅಗ್ರೋಟೆಕ್ ಬೆಂಗಳೂರು, ವಿಜಯ ಕುಮಾರ್ ಕನ್ಯಾಡಿ ಧರ್ಮಸ್ಥಳ, ಸಾವಯವ ನ್ಯಾಚುರಲ್ ಫುಡ್ ಪ್ರಾಡಕ್ಟ್ ಬೆಂಗಳೂರು ಹಾಗೂ ರಾಧಾಕೃಷ್ಣ ದಾಸ್ ಕೆ ಉಬರಡ್ಕ ಮಿತ್ತೂರು ಬಹುಮಾನ ನೀಡಿ ಅಭಿನಂದಿಸಲಾಯಿತು.
ಸಂಘದ ನಿರ್ದೇಶಕರಾದ ಜಿ.ಪಿ ಶ್ಯಾಮ ಭಟ್, ಜನಾರ್ದನ ಚೂಂತಾರು, ಡಿ.ತನಿಯಪ್ಪ, ಶ್ರೀಶ ಕೊಡವೂರು, ಎಚ್.ಸುಂದರ ಗೌಡ, ಇಂದಿರಾ ಕೆ., ಹರೀಶ್ ಕೋಡ್ಲ, ಪಾಂಡುರಂಗ ಹೆಗ್ಡೆ, ಪುರುಷೋತ್ತಮ ಭಟ್ ಎಂ., ಶಿವಾನಂದ, ಮನಮೋಹನ ಅರಂಬ್ಯ, ಪುಟ್ಟಣ್ಣ ಗೌಡ, ಗೋವಿಂದ ಭಟ್ ಪಿ., ಶಂಕರ ಪಿ., ಸರಸ್ವತಿ ವೈ.ಪಿ, ಸುಶೀಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಿಬ್ಬಂದಿ ದಕ್ಷಿತಾ ಪ್ರಾರ್ಥಿಸಿದರು. ವ್ಯವಸ್ಥಾಪನಾ ನಿರ್ದೇಶಕ ತಿಮ್ಮಯ್ಯ ಪಿ ವರದಿ, ಲೆಕ್ಕಪತ್ರಗಳನ್ನು ಮಂಡಿಸಿದರು. ಉಪಾಧ್ಯಕ್ಷ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹ ಭೋಜನೆ ನಡೆಯಿತು.