ಪುತ್ತೂರು: ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಮುಂದಿನ 1 ವರ್ಷ 8 ತಿಂಗಳ ಅವಧಿಗೆ ಅಧ್ಯಕ್ಷರಾಗಿ ವೆಂಕಟ್ರಮಣ ಗೌಡ ಕೆ.ಎಸ್.ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿದ್ದ ಪುತ್ತೂರು ಸಹಾಯಕ ನಿಬಂಧಕರ ಕಚೇರಿಯ ಅಧಿಕಾರಿ ಶೋಭಾರವರು ಆಯ್ಕೆ ಪ್ರಕ್ರಿಯೆ ನಡೆಸಿದರು.
ನಾಮಪತ್ರ ಸಲ್ಲಿಕೆ:
ಆಡಳಿತ ಮಂಡಳಿಯ ಅಧ್ಯಕ್ಷರ ಹುದ್ದೆಗೆ 2 ನಾಮಪತ್ರ ಸಲ್ಲಿಕೆಯಾಗಿತ್ತು. ನಿರ್ದೇಶಕರಾದ ತೀರ್ಥಾನಂದ ಗೌಡ ದುಗ್ಗಳ ಮತ್ತು ವೆಂಕಟ್ರಮಣ ಗೌಡ ಕೆ.ಎಸ್.ರವರು ನಾಮಪತ್ರ ಸಲ್ಲಿಸಿದ್ದರು. ಅಂತಿಮ ಕ್ಷಣದಲ್ಲಿ ತೀರ್ಥಾನಂದ ಗೌಡ ದುಗ್ಗಳರವರು ನಾಮಪತ್ರ ಹಿಂತೆಗೆದುಕೊಂಡಿದ್ದರು. ಬಳಿಕ ಅಂತಿಮ ಕಣದಲ್ಲಿದ್ದ ವೆಂಕಟ್ರಮಣ ಗೌಡ ಕೆ.ಎಸ್.ರವರು ಅಧ್ಯಕ್ಷರಾಗಿ ಆಯ್ಕೆಗೊಂಡರು.
ಅಭಿನಂದನೆ:
ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ವೆಂಕಟ್ರಮಣ ಗೌಡ ಕೆ.ಎಸ್.ರವರಿಗೆ ಉಪಾಧ್ಯಕ್ಷರು, ನಿರ್ದೇಶಕರು ಹಾಗೂ ಸಿಬಂದಿಗಳು ಹಾರಾರ್ಪಣೆ ಮಾಡಿ ಅಭಿನಂದನೆ ಸಲ್ಲಿಸಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ವೆಂಕಟ್ರಮಣ ಗೌಡ ಕೆ.ಎಸ್.ರವರು ಹಿರಿಯರಿಂದ ಈ ಸಹಕಾರಿ ಸಂಘ ಸ್ಥಾಪನೆಗೊಂಡಿದೆ. ಬಹಳ ಅಚ್ಚುಕಟ್ಟಾಗಿ ಸಂಘ ಮುನ್ನಡದಿದೆ. ಈ ಸಹಕಾರಿ ಸಂಘದ ಮೂಲಕ ಗ್ರಾಮದ ಅಭಿವೃದ್ಧಿ ಆಗಿದೆ. ಇದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿಯೂ ನಮ್ಮ ಮೇಲಿದೆ. ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಹಿಂದಿನ ಅಧ್ಯಕ್ಷರು ಉತ್ತಮವಾಗಿ ನಿರ್ವಹಿಸಿದ್ದಾರೆ. ಸದಸ್ಯರ ಬೇಡಿಕೆಗಳಿಗೆ, ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ ಎಂದು ಹೇಳಿ ಸಹಕಾರಿ ಸಂಘದ ಅಭಿವೃದ್ಧಿಗೆ ಎಲ್ಲರ ಸಹಕಾರ ಕೋರಿ ಕೃತಜ್ಞತೆ ಸಲ್ಲಿಸಿದರು.
ಕೊಳ್ತಿಗೆ ಗ್ರಾಮದ ಕಟ್ಟಪುಣಿ ನಿವಾಸಿಯಾಗಿರುವ ವೆಂಕಟ್ರಮಣ ಗೌಡ ಕೆ.ಎಸ್.ರವರು ಕೊಳ್ತಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿ, ಕೊಳ್ತಿಗೆ ಗ್ರಾಮ ಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗಿ, ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿರುವ ಇವರು 3ನೇ ಬಾರಿಗೆ ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿ ಗಿರಿಜಾ ಚುನಾವಣಾಧಿಕಾರಿಯಾಗಿದ್ದ ಶೋಭಾರವರಿಗೆ ಅಭಿನಂದನೆ ಸಲ್ಲಿಸಿದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಹಂಸಾವತಿ ಎಸ್‌ಸಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಶರತ್ ಕುಮಾರ್ ಹಾಗೂ ಹಾಲಿ ಅಧ್ಯಕ್ಷರಾಗಿದ್ದ ವಸಂತ ಕುಮಾರ್ ರೈ ದುಗ್ಗಳರವರಿಗೆ ಅಭಿನಂದನೆ ಸಲ್ಲಿಸಿದರು. ಉಪಾಧ್ಯಕ್ಷೆ ಲಕ್ಷ್ಮಿ ಕೆ.ಜಿ., ನಿರ್ದೇಶಕರುಗಳಾದ ಗಂಗಾಧರ ಗೌಡ ಕೆ., ತೀರ್ಥಾನಂದ ಗೌಡ ದುಗ್ಗಳ, ಸತೀಶ್ ಪಾಂಬಾರು, ಅಣ್ಣಪ್ಪ ನಾಯ್ಕ ಬಿ., ಶಿವರಾಮ, ಗುರುವಪ್ಪ ಎಮ್., ನಾಗವೇಣಿ ಕೆ., ವಿಶಾಲಾಕ್ಷಿ, ಶ್ರೀಧರ ಗೌಡ ಅಂಗಡಿಹಿತ್ಲು, ಮಾಜಿ ನಿರ್ದೇಶಕ ಸತೀಶ್ ನೂಜಿ, ಕೊಳ್ತಿಗೆ ರೈತಮಿತ್ರ ಕೂಟದ ಅಧ್ಯಕ್ಷ ಮುರಳೀಧರ ಗೌಡ ಕೆಮ್ಮಾರ, ಕೊಳ್ತಿಗೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಭರತ್ ಗೌಡ ಕೆಮ್ಮಾರ, ಕೊಳ್ತಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶ್ರೀಧರ ಪೂಜಾರಿ ಚಾಳೆಪಡ್ಪು ಹಾಗೂ ಸಂಘದ ಸಿಬಂದಿಗಳು ಉಪಸ್ಥಿತರಿದ್ದರು.
ರೈತರ ಅವಶ್ಯಕತೆಗಳನ್ನು ಪೂರೈಕೆ ಮಾಡುವುದೇ ನಮ್ಮ ಧ್ಯೇಯ:
ಸಹಕಾರಿ ಸಂಘದ ಅಧ್ಯಕ್ಷರ ಜವಾಬ್ದಾರಿಯನ್ನು ಸಹಕಾರಿ ಸಂಘದ ಹಿರಿಯ ನಿರ್ದೇಶಕರ ಅಪೇಕ್ಷೆ ಮೇರೆಗೆ ವಹಿಸಿಕೊಂಡಿರುತ್ತೇನೆ. ಒಗ್ಗಟ್ಟಿನಿಂದ ಸಹಕಾರಿ ಸಂಘ ನಡೆಯುತ್ತಿದೆ. ಗ್ರಾಮದ ರೈತರಿಗೆ ಬೇಕಾದ ಸೌಲಭ್ಯಗಳನ್ನು ಅವಶ್ಯಕತೆಗಳನ್ನು ಪೂರೈಕೆ ಮಾಡುವುದು ನಮ್ಮ ಧ್ಯೇಯವಾಗಿದೆ, ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಆರ್ಥಿಕವಾಗಿ ಲಾಭಾಂಶ ತಂದುಕೊಡುವ ಜವಾಬ್ದಾರಿ ಕೂಡ ಇದೆ. ಸಾಲ ನೀಡಿಕೆ, ವ್ಯಾಪಾರದಲ್ಲಿ ಸಂಘದ ಪ್ರಗತಿ ಮಾಡುತ್ತೇವೆ. ಬ್ಯಾಂಕ್‌ನ ವ್ಯಾಪ್ತಿಯ ರೈತರಿಗೆ ಸದಸ್ಯರ ಬೇಡಿಕೆಗಳನ್ನು ಪೂರೈಸುತ್ತೇವೆ.
ಸಭಾಭವನ, ಇಂಟರ್‌ಲಾಕ್ ಯೋಜನೆಯನ್ನು ಪೂರೈಸುತ್ತೇವೆ:
ವೆಂಕಟ್ರಮಣ ಗೌಡ ಕೆ.ಎಸ್.ರವರು 3ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರು ತುಂಬಾ ಅನುಭವಿ ಇದ್ದಾರೆ. ಅವರ ಅವಧಿಯಲ್ಲಿ ಸಂಘ ಅಭಿವೃದ್ಧಿ ಕಾಣಲಿ. ನಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ನನಗೆ ಸಹಕಾರ ನೀಡಿದ ಎಲ್ಲರಿಗೆ ಕೃತಜ್ಞತೆಗಳು. ಸಂಘದ ನೂತನ ಸಭಾಭವನದ ಯೋಜನೆ, ಇಂಟರ್‌ಲಾಕ್ ಯೋಜನೆಯನ್ನು ಈ ಅವಧಿಯಲ್ಲಿ ಪೂರೈಸುತ್ತೇವೆ. ಸಂಘದ ಸರ್ವತೋಮುಖ ಅಭಿವೃದ್ಧಿಯಲ್ಲಿ ಎಲ್ಲರೂ ಕೈಜೋಡಿಸಿ.