30 ಧ್ವಜಸ್ಥಂಭಗಳಲ್ಲಿ ಏಕಕಾಲದಲ್ಲಿ ಧ್ವಜಾರೋಹಣ
ಪುತ್ತೂರು: ಎಸ್ ವೈ ಎಸ್ ದ.ಕ ಈಸ್ಟ್ ಜಿಲ್ಲಾ ಸಮಿತಿ ವತಿಯಿಂದ ಅಲ್ ಅರ್ಖಮಿಯ್ಯ ಯೂತ್ ಸ್ಕ್ವೇರ್ ಜಿಲ್ಲಾ ಪ್ರತಿನಿಧಿ ಸಮಾವೇಶ ಸೆ.2ರಂದು ಪುತ್ತೂರು ಟೌನ್ ಹಾಲ್‌ನಲ್ಲಿ ಬೆಳಗ್ಗಿನಿಂದ ಸಂಜೆ ವರೆಗೆ ನಡೆಯಲಿದೆ. ಕರ್ನಾಟಕ ಎಸ್ ವೈ ಎಸ್ ತನ್ನ ಮೂವತ್ತನೇ ವಾರ್ಷಿಕ ಆಚರಿಸುವ ಅಂಗವಾಗಿ ಬೆಳಗ್ಗೆ 8 ಗಂಟೆಗೆ ಕಿಲ್ಲೆ ಮೈದಾನದಲ್ಲಿ ಮೂವತ್ತು ಧ್ವಜಸ್ಥಂಭಗಳಲ್ಲಿ ಧ್ವಜಾರೋಹಣ ನಡೆಯಿತು. ಉಮರಾ ನಾಯಕರು ಹಾಗೂ ಧಾರ್ಮಿಕ ಮುಖಂಡರು ಧ್ವಜಾರೋಹಣ ನೆರವೇರಿಸಿದರು.
ನಂತರ ಝೈನುಲ್ ಉಲಮಾ ಮಾಣಿ ಉಸ್ತಾದ್ ಜಿಲ್ಲಾ ಪ್ರತಿನಿಧಿ ಸಮಾವೇಶ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಅಲ್ಲಾಹು ನಮಗೆ ಎಲ್ಲವನ್ನೂ ನೀಡಿದ್ದು, ಅದಕ್ಕಾಗಿ ಅಲ್ಲಾಹನಿಗೆ ನಾವು ಏನು ನೀಡಿದ್ದೇವೆ ಎಂದು ಆತ್ಮಾವಲೋಕನ ಮಾಡಬೇಕಿದೆ, ಅಲ್ಲಾಹನಿಗೆ ಇಷ್ಟವಿಲ್ಲದ ಏನನ್ನೂ ಮಾಡಬಾರದು, ಕೆಡುಕಿನ ಕಡೆಗೆ ಕಣ್ಣೆತ್ತಿಯೂ ನೋಡದೆ ಜೀವನದಲ್ಲಿ ಪರಿಶುದ್ಧತೆಯನ್ನು ಕಾಪಾಡಿಕೊಳ್ಳಬೇಕು, ಧರ್ಮದ ಅನುಸಾರ ಜೀವಿಸಿದರೆ ಮಾತ್ರ ಅಲ್ಲಾಹನ ತೃಪ್ತಿ ಸಂಪಾದಿಸಬಹುದು, ನಿಷ್ಕಲ್ಮಶ ಹೃದಯ ಮತ್ತು ಮನಸ್ಸಿನಿಂದ ಜೀವಿಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
ವೇದಿಕೆಯಲ್ಲಿ ತ್ವಾಹಿರ್ ಸಖಾಫಿ ಮಂಜೇರಿ, ಡಾ.ಸಯ್ಯಿದ್ ಸೈಫುದ್ದೀನ್ ಮರ್ಕಝ್ ನಾಲೆಡ್ಜ್ ಸಿಟಿ, ಅಬೂಬಕ್ಕರ್ ಸಅದಿ ಮಜೂರು, ಖಾಸಿಂ ಹಾಜಿ ಮಿತ್ತೂರು, ಕರೀಂ ಹಾಜಿ ಚೆನ್ನಾರ್, ಆದಂ ಹಾಜಿ ಪಡೀಲ್, ಇಸ್ಮಾಯಿಲ್ ಹಾಜಿ ಬನ್ನೂರು, ಅಡ್ವೊಕೇಟ್ ಶಾಕಿರ್ ಹಾಜಿ ಮಿತ್ತೂರು, ಇಸ್ಮಾಯಿಲ್ ಹಾಜಿ ಕೊಂಬಳ್ಳಿ, ಮಹಮೂದ್ ಮದನಿ, ಅಬೂಬಕ್ಕರ್ ಕೂರ, ಹಮೀದ್ ಬೀಜಕೊಚ್ಚಿ, ಹಮೀದ್ ಸುಣ್ಣಮೂಲೆ, ಹಸೈನಾರ್ ಹಾಜಿ ಮಜ್ಮ, ಜಿ. ಎಂ ಕುಂಞಿ ಜೋಗಿಬಿಟ್ಟು ಉಪಸ್ಥಿತರಿದ್ದರು.
ಸಯ್ಯದ್ ಸಾದತ್ ತಂಗಲ್ ಕರ್ವೇಲು ದುವಾ ಮಾಡಿದರು. ಸ್ವಾಲಿಹ್ ಮುರ ಸ್ವಾಗತಿಸಿದರು. ಸಿರಾಜುದ್ದೀನ್ ಸಖಾಫಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮ ಸಂಜೆ ವರೆಗೆ ನಡೆಯಲಿದ್ದು ಕೇರಳ ಹಾಗೂ ಕರ್ನಾಟಕದ ವಿದ್ವಾಂಸರು, ದಾರ್ಶನಿಕರು, ಸಾಹಿತಿಗಳು ಹಾಗೂ ಚಿಂತಕರಿಂದ ಆಧ್ಯಾತ್ಮಿಕತೆ, ಆದರ್ಶ, ಆರೋಗ್ಯ, ಸಂಘಟನೆ, ಸಾಹಿತ್ಯ ಮುಂತಾದ ವಿವಿಧ ವಿಷಯಗಳಲ್ಲಿ ತರಗತಿಗಳು ನಡೆಯಲಿದೆ.