ಉದನೆಯಲ್ಲಿ ಮತ್ಸ್ಯಧಾಮಕ್ಕೆ ಬೇಲಿ ನಿರ್ಮಿಸಿ ರಕ್ಷಣೆ ಮಾಡಲು ಆಗ್ರಹ
ಕಡಬ: 2021-22ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅನುದಾನದಲ್ಲಿ ನಿರ್ಮಾಣವಾದ ಮೂಡಲ ರಸ್ತೆಯ ವಿಚಾರವಾಗಿ ಭಾರೀ ಚರ್ಚೆ ನಡೆದು ಆಕ್ಷೇಪ ವ್ಯಕ್ತವಾದ ಮತ್ತು ಉದನೆ ಮತ್ಸ್ಯಧಾಮಕ್ಕೆ ಬೇಲಿ ಹಾಕಿ ಮತ್ಸಧಾಮವನ್ನು ಸಂರಕ್ಷಣೆ ಮಾಡಬೇಕೆಂದು ಆಗ್ರಹ ವ್ಯಕ್ತವಾದ ಘಟನೆ ಕೊಣಾಜೆ ಗ್ರಾಮ ಸಭೆಯಲ್ಲಿ ನಡೆದಿದೆ.
ಸಭೆಯು ಗ್ರಾ.ಪಂ. ಅಧ್ಯಕ್ಷ ಶಿವಪ್ಪ ಗೌಡ ಅವರ ಅಧ್ಯಕ್ಷತೆಯಲ್ಲಿ ಭಜನಾ ಮಂದಿರದಲ್ಲಿ ನಡೆಯಿತು. ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಅಭಿಯಂತರರಾದ ರೂಪ್ಲ ನಾಯಕ್‌ರವರು ಚರ್ಚಾನಿಯಂತ್ರಣಾಧಿಕಾರಿಯಾಗಿದ್ದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖಾ ಮಾಹಿತಿ ನೀಡುತ್ತಿದ್ದ ವೇಳೆ ವಿಷಯ ಪ್ರಸ್ತಾಪಿಸಿದ ಲೋಕಯ್ಯ ಗೌಡ ಅವರು ಈ ರಸ್ತೆಯ ವಿಚಾರವಾಗಿ ಕಳೆದ ಗ್ರಾಮ ಸಭೆಯಲ್ಲಿ ಚರ್ಚೆಯಾಗಿ ನಿರ್ಣಯ ಮಾಡಲಾಗಿತ್ತು. ಈ ವಿಚಾರ ಏನಾಗಿದೆ ಎಂದು ಪ್ರಶ್ನಿಸಿದರು. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಮಾಹಿತಿ ನೀಡಲು ಬಂದಿದ್ದ ವಾರ್ಡನ್ ಅವರು ಉತ್ತರಿಸಿ, ನನಗೆ ಈ ವಿಷಯ ಗೊತ್ತಿಲ್ಲ, ಮೇಲಾಧಿಕಾರಿಗಳಿಗೆ ವರದಿ ಮಾಡುತ್ತೇನೆ ಎಂದರು. ಈ ಉತ್ತರದಿಂದ ಆಕ್ರೋಶಗೊಂಡ ಚಂದ್ರಶೇಖರ್, ಶ್ರೀಧರ್, ನಾಗಪ್ಪ, ವಸಂತ ಅವರುಗಳು ಕಳೆದ ಗ್ರಾಮಸಭೆಯಲ್ಲಿಯೇ ನಿರ್ಣಯ ಆಗಿದೆ ಅಲ್ವ, ಈ ಗ್ರಾಮಸಭೆಯಲ್ಲಿ ಏನು ಉತ್ತರವಿಲ್ಲದಿದ್ದರೆ ಗ್ರಾಮ ಸಭೆ ನಡೆಸುವ ಉದ್ದೇಶವೇನು, ಆ ರಸ್ತೆಗೆ ಆಕ್ಷೇಪ ಇದೆ ಎಂದರು. ಬಳಿಕ ಈ ಬಗ್ಗೆ ಸುದೀರ್ಘ ಚರ್ಚೆ ಆರೋಪ ಪ್ರತ್ಯಾರೋಪಗಳು ನಡೆದು ಕೊನೆಗೆ ಪಿಡಿಒ ಅವರು ಉತ್ತರಿಸಿ ನಮಗೆ ಈ ಬಗ್ಗೆ ತನಿಖೆ ನಡೆಸಲು ಆಗುವುದಿಲ್ಲ, ಸಮಾಜ ಕಲ್ಯಾಣ ಇಲಾಖೆಯ ಅನುದಾನದಲ್ಲಿ ನಡೆದ ಕಾಮಗಾರಿ ಆಗಿರುವುದರಿಂದ ಆ ಇಲಾಖೆಗೆ ತನಿಖೆ ಮಾಡುವಂತೆ ಬರೆದುಕೊಳ್ಳುತ್ತೇವೆ ಈ ವಿಚಾರವನ್ನು ಸಾಮಾನ್ಯ ಸಭೆಯಲ್ಲಿ ಇಟ್ಟು ಬಳಿಕ ಬರೆಯುತ್ತೇವೆ ಎಂದಾಗ ಗ್ರಾಮಸಭೆಯಲ್ಲಿ ನಿರ್ಣಯ ಮಾಡಿದ ಮೇಲೆ ಸಾಮಾನ್ಯ ಸಭೆಯಲ್ಲಿ ಯಾಕೆ ಎಂದು ಗ್ರಾಮಸ್ಥರು ಪ್ರಶ್ನಿಸಿದಾಗ ಪಿಡಿಒ ಅವರು ಉತ್ತರಿಸಿ, ಗ್ರಾಮಸಭೆಯಲ್ಲಿ ಆಗಿರುವ ನಿರ್ಣಯವನ್ನು ಬದಲಾವಣೆ ಮಾಡುವುದಿಲ್ಲ, ಆದರೆ ಸಾಮಾನ್ಯ ಸಭೆಯಲ್ಲಿ ಇಟ್ಟು ಮತ್ತೆ ಸಂಬಂಧಪಟ್ಟ ಇಲಾಖೆಗೆ ಕಳಿಸುವ ನಿಯಮ ಇದೆ ಎಂದು ಹೇಳಿದರು.
ಉದನೆ ಹೊಳೆಯಲ್ಲಿರುವ ಮತ್ಸ್ಯಧಾಮದ ವಿಚಾರವಾಗಿ ಪ್ರಸ್ತಾಪಿಸಿದ ವಸಂತ ಅವರು, ಮತ್ಸ್ಯಧಾಮದ ವಿಚಾರವಾಗಿ ನಾನು 11 ವರ್ಷದಿಂದ ಕೋರ್ಟ್‌ಗೆ ಹೋಗ್ತಾ ಇದ್ದೇನೆ, ವಿ.ಎ.ಯವರು ಗಡಿ ಗುರುತು ಮಾಡುತ್ತೇನೆ ಎಂದು ಹೇಳಿದರೂ ಈವರೆಗೆ ಆಗಿಲ್ಲ, ಅಲ್ಲಿ ಮೀನು ಹಿಡಿಯಲಾಗುತ್ತದೆ, ಇಲ್ಲಿ ಗಡಿ ಸಮಸ್ಯೆಯೂ ಇದೆ, ಅರಣ್ಯ ಕಂದಾಯ ಇಲಾಖೆಗಳ ಮಧ್ಯೆ ಹೊಂದಾಣಿಕೆ ಇದ್ದರೆ ಈ ಸಮಸ್ಯೆ ಬಗೆಹರಿಸಬಹುದು ಎಂದು ಹೇಳಿದ ಅವರು ಹೊಳೆಯಲ್ಲಿ ಮತ್ಸಧಾಮ ಇದ್ದು ಅಲ್ಲಿ ಈಗಾಗಲೇ ನಾಮಫಲಕ ಅಳವಡಿಸಲಾಗಿದೆ. ಆದರೆ ಅಲ್ಲಿ ಬೇಲಿ ಹಾಕದೆ ಇರುವುದರಿಂದ ಮೀನು ಹಿಡಿಯಲು ಬರುತ್ತಿರುವವರಿಗೆ ಆ ಮತ್ಸ್ಯಧಾಮದ ಪಾವಿತ್ಯ್ರತೆ ಗೊತ್ತಾಗುತ್ತಿಲ್ಲ, ಆದುದರಿಂದ ಅಲ್ಲಿ ಬೇಲಿ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು. ಇಲ್ಲಿ ಮರಳು ದಂಧೆಯೂ ನಡೆಯುತ್ತಿದೆ, ಅಧಿಕಾರಿಗಳಿಗೆ ಮಾಮೂಲಿ ಸಿಗುವುದಿದ್ದರೆ ಬೇಗ ಬರುತ್ತಾರೆ ಎಂದು ಆರೋಪಿಸಿದರು. ಈ ಬಗ್ಗೆ ವಿ.ಎ. ಅವರು ಉತ್ತರಿಸಿ ಅಲ್ಲಿ ಬೇಲಿ ನಿರ್ಮಾಣ ಮಾಡಲು ಕಂದಾಯ ಇಲಾಖೆಯಲ್ಲಿ ಅನುದಾನವಿಲ್ಲ, ಬೇಲಿ ನಿರ್ಮಾಣವಾಗಬೇಕಾದರೆ ಪಂಚಾಯತ್‌ನವರು ಕ್ರಮ ಕೈಗೊಳ್ಳಬೇಕೆಂದು ವಿ.ಎ. ಹೇಳಿದರು. ಈ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪಿಡಿಓ ಹೇಳಿದರು. ಇದೇ ಪ್ರಶ್ನೆಗೆ ಅರಣ್ಯ ಇಲಾಖೆಯವರು ಉತ್ತರಿಸಿ ನಮ್ಮ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ಉದನೆ ತೂಗು ಸೇತುವೆಯ ಅಂಚಿನಲ್ಲಿ ವ್ಯಾಪಾರ ಉದ್ದೇಶದ ಕಟ್ಟಡಕ್ಕೆ 94ಸಿಯಡಿಯಲ್ಲಿ ಹಕ್ಕುಪತ್ರ ನೀಡಲಾಗಿದ್ದು ಈ ಬಗ್ಗೆ ಏನು ಕ್ರಮ ಕೈಗೊಂಡಿದ್ಧೀರಿ ಎಂದು ವಸಂತ ಅವರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ವಿ.ಎ. ಅವರು ಈ 94ಸಿ ಹಕ್ಕುಪತ್ರವನ್ನು ರದ್ದುಗೊಳಿಸಲು ಈಗಾಗಲೇ ತಹಸೀಲ್ದಾರ್ ಅವರಿಗೆ ವರದಿ ನೀಡಲಾಗಿದೆ. ಮುಂದಿನ ಕ್ರಮ ಅವರು ಕೈಗೊಳ್ಳುತ್ತಾರೆ ಎಂದು ಹೇಳಿದರು.
ಶಿಶು ಅಭಿವೃದ್ದಿ ಇಲಾಖೆಯ ಮಾಹಿತಿ ನೀಡುತ್ತಿದ್ದ ವೇಳೆ ವಿಷಯ ಗ್ರಾಮಸ್ಥರು ಪ್ರಸ್ತಾಪಿಸಿ ಈಗಾಗಲೇ ಅಂಗನವಾಡಿ ಕೇಂದ್ರಗಳಿಗೆ ಬರುವ ಮೊಟ್ಟೆಯು ಹಾಳಾಗಿರುತ್ತದೆ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಮೇಲ್ವಿಚಾರಕಿಯವರು ಈ ವಿಷಯವನ್ನು ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದರು.
ಕೊಣಾಜೆ ಗ್ರಾಮದ ಕಡ್ಯ-ಕತ್ತಿಕೂಟಿಕಲ್-ಇಂದ್ರಾಜೆ ರಸ್ತೆಯ ಕೆಲಸ ಆಗಿದೆ ಎಂಬ ವರದಿಗೆ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಅಧ್ಯಕ್ಷೆ ಬೇಬಿ ಅವರು, ಅಲ್ಲಿ ಕೆಲಸವೇ ಆಗಿಲ್ಲ ಎಂದು ಹೇಳಿದರು. ಶಾಲಾ ಆವರಣದಲ್ಲಿ ವಾಹನ ಪಾರ್ಕಿಂಗ್ ಮಾಡುವ ಬಗ್ಗೆಯೂ ಆಕ್ಷೇಪ ವ್ಯಕ್ತವಾಯಿತು. ಶಿರಾಡಿ ಆರೋಗ್ಯ ಕೇಂದ್ರದಲ್ಲಿ ಸರಿಯಾದ ಔಷಧಿಯೇ ಇಲ್ಲ, ನಿಮ್ಮಲ್ಲಿ ಔಷಧಿಗಾಗಿ ಬಂದರೆ ನೀವು ಮೆಡಿಕಲ್‌ಗೆ ಚೀಟಿ ಕೊಡುತ್ತೀರಿ ಎಂದು ಗ್ರಾಮಸ್ಥರೋರ್ವರು ಆರೋಪಿಸಿದಾಗ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚಂದ್ರಶೇಖರ್ ಅವರು, ನೀವು ಒಮ್ಮೆಯಾದರೂ ಬಂದಿದ್ದೀರಾ, ಸಾವಿರಾರು ಔಷಧಿ ಇರುತ್ತದೆ, ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರುವ ಔಷಧಿಗಳು ಇದೆ. ಕೆಲವೊಂದು ಕಾಯಿಲೆಗಳಿಗೆ ಮಾತ್ರ ಔಷಧಿ ಅಂಗಡಿಗಳಿಂದ ತೆಗೆದುಕೊಳ್ಳಲು ಹೇಳುತ್ತೇವೆ ವಿನಾಃ ಹೆಚ್ಚಿನ ಎಲ್ಲಾ ಔಷಧಿಗಳು ಇದೆ ಎಂದು ಉತ್ತರಿಸಿದರು. ಶಾಲಾ ಆವರಣದಲ್ಲಿ ಅನ್ಯ ಕಾರ್ಯಕ್ರಮಗಳನ್ನು ನಡೆಸಬಾರದು ಎನ್ನುವ ಸರಕಾರದ ಸುತ್ತೋಲೆ ಬಗ್ಗೆ ಗ್ರಾಮಸ್ಥ ಶಿವಕುಮಾರ್ ಅವರು ವಿಷಯ ಪ್ರಸ್ತಾಪಿಸಿದಾಗ, ಶಿಕ್ಷಣ ಇಲಾಖೆಯ ಸಿ.ಆರ್.ಪಿ.ಕುಮಾರ್ ಅವರು ಉತ್ತರಿಸಿ, ಶಾಲೆ ಮತ್ತು ಊರಿನವರ ಬಾಂಧವ್ಯ ಚೆನ್ನಾಗಿದ್ದರೆ ಎಲ್ಲವೂ ಸಾಧ್ಯ, ಕೆಲವೊಂದು ದೂರುಗಳು ಬಂದಾಗ ಸರಕಾರದ ಸುತ್ತೋಲೆಯಂತೆ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದರು.
ನೆಟ್‌ವರ್ಕ್ ಸಮಸ್ಯೆ :
ಪುತ್ತಿಗೆ ಹಾಗೂ ಕೊಣಾಜೆಯಲ್ಲಿ ನೆಟ್‌ವರ್ಕ್ ಸಮಸ್ಯೆ ಇದೆ ಇದಕ್ಕೆ ಒಂದು ಪರಿಹಾರ ನೀಡಿ ಎಂದು ಗ್ರಾಮ ಸಭೆಯಲ್ಲಿ ಆಗ್ರಹ ವ್ಯಕ್ತವಾಯಿತು. ಮೆಸ್ಕಾಂ ಇಲಾಖೆಯ ಮಾಹಿತಿ ನೀಡುತ್ತಿದ್ದ ವೇಳೆ ವಿಷಯ ಪ್ರಸ್ತಾಪಿಸಿದ ವಸಂತರವರು ವಿದ್ಯುತ್ ತಂತಿಯ ಕೆಳಗೆ ಕಟ್ಟಡ ನಿರ್ಮಿಸಬಹುದಾ? ಇದನ್ನು ತೆರವುಗೊಳಿಸಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮೆಸ್ಕಾಂ ಅಧಿಕಾರಿಯವರು ವಿದ್ಯುತ್ ತಂತಿಯ ಕೆಳಗಡೆ ಕಟ್ಟಡ ನಿರ್ಮಿಸುವುದು ತಪ್ಪು, ಇಲ್ಲಿ ಅಪಾಯ ಎದುರಾಗುವ ಸಂಭವ ಇರುತ್ತದೆ, ಇಂತಹ ಪ್ರಕರಣಗಳು ಇದ್ದರೆ ನಮಗೆ ತಿಳಿಸಿ ಇದಕ್ಕೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಕೊಣಾಜೆ ಗ್ರಾ.ಪಂ. ಕಟ್ಟಡದ ಉದ್ಘಾಟನೆ ಮಾಡಿದ್ದೀರಾ ಇದಕ್ಕೆ ಯಾರನ್ನೂ ಕರೆದಿಲ್ವ ಎಂದು ಕೆಲ ಗ್ರಾಮಸ್ಥರು ಪ್ರಶ್ನಿಸಿದರು. ಇದಕ್ಕೆ ಅಧ್ಯಕ್ಷರು ಉತ್ತರಿಸಿದಾಗ ನಮಗೆ ನೋಡೆಲ್ ಅಧಿಕಾರಿಯವರು ಉತ್ತರ ಹೇಳಬೇಕು ಎಂದು ಆಗ್ರಹ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ಗ್ರಾಮಸ್ಥರು ಮೌನವಾಗಿದ್ದ ನೋಡೆಲ್ ಅಧಿಕಾರಿಯವರನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು. ಕೊಣಾಜೆ ಗ್ರಾಮದಲ್ಲಿ ಮೀಸಲಿಟ್ಟ ಸ್ಮಶಾನ ಭೂಮಿಯ ಬಗ್ಗೆ ಗ್ರಾಮಸ್ಥರಾದ ಮಧುಸೂಧನ ಭಟ್ ಕಡ್ಯ ಅವರು ವಿವರಣೆ ಕೇಳಿದರು. ಇದಕ್ಕೆ ಉತ್ತರಿಸಿದ ವಿ.ಎ. ಅವರು ಈ ಬಗ್ಗೆ ಸ್ಥಳದ ಗಡಿ ಗುರುತು ಆಗದೆ ಸ್ಪಷ್ಟವಾಗಿ ಹೇಳಲು ಸಾದ್ಯವಿಲ್ಲ ಎಂದರು.
ಹಳೆ ಗ್ರಾ.ಪಂ. ಕಟ್ಟಡ ಮುಂದೆ ಗ್ರಾಮಕರಣಿಕರ ಕಛೇರಿ: ಗ್ರಾಮ ಆಡಳಿತ ಅಧಿಕಾರಿಯವರು ಮಾಹಿತಿ ನೀಡುತ್ತಿದ್ದ ವೇಳೆ ವಿಷಯ ಪ್ರಸ್ತಾಪಿಸಿದ ಮಾಜಿ ಪಂಚಾಯತ್ ಉಪಾಧ್ಯಕ್ಷ ಯಶೋಧರ ಅವರು, ಈ ಹಿಂದೆ ಪಂಚಾಯತ್ ಇದ್ದ ಹಳೆಯ ಕಟ್ಟಡದಲ್ಲಿ ವಿ.ಎ. ಕಛೇರಿ ಜತೆಗೆ ಗ್ರಾಮ ಆರೋಗ್ಯ ಕೇಂದ್ರಕ್ಕೂ ಸ್ಥಳಾವಕಾಶ ನೀಡಬೇಕೆಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ವಿ.ಎ.ಯವರು ನಾವು ಈಗಾಗಲೇ ಇಕ್ಕಟ್ಟಿನ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ನಮ್ಮ ಕಂದಾಯ ಇಲಾಖೆಯ ಸ್ಥಳದಲ್ಲಿರುವ ಹಳೆ ಪಂಚಾಯತ್ ಕಟ್ಟಡವನ್ನು ನಮಗೆ ಬಿಟ್ಟುಕೊಡಬೇಕು, ಅದರಲ್ಲಿ ಬೇರೆ ಯಾರಿಗೂ ಸ್ಥಳಾವಕಾಶ ನೀಡಲು ಸಾಧ್ಯವಿಲ್ಲ, ಒಂದು ವೇಳೆ ಹಾಗೆ ಮಾಡಿದರೆ ನಾವು ಇಲ್ಲೆ ಇರುತ್ತೇವೆ, ಮುಂದಿನ ಕ್ರಮವನ್ನು ತಹಸೀಲ್ದಾರ್ ಮಾಡುತ್ತಾರೆ ಎಂದ ಅವರು ಈಗಾಗಲೇ ಪಂಚಾಯತ್‌ನವರು ನಮಗೆ ಬಿಟ್ಟು ಕೊಡುತ್ತೇವೆ ಎಂದು ಹೇಳಿದ್ದಾರೆ ಎಂದರು. ಈ ಸಂದರ್ಭದಲ್ಲಿ ಪಿಡಿಒ ಅವರು ಉತ್ತರಿಸಿ, ನಾವು ಆ ಕಟ್ಟಡವನ್ನು ವಿ.ಎ. ಕಛೇರಿಗೆ ಬಿಟ್ಟುಕೊಡುವ ಬಗ್ಗೆ ಈ ಹಿಂದೆಯೇ ಹೇಳಿದ್ದೇವೆ ಎಂದು ಹೇಳಿದರು. ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ರುಕ್ಮಿಣಿ, ಸದಸ್ಯರಾದ ನವೀನ ಎಂ. ಸರೋಜಿನಿ ಮತ್ತು ಮೈತ್ರಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಪದ್ಮನಾಭ ಅವರು ಸ್ವಾಗತಿಸಿ, ಸಿಬ್ಬಂದಿ ಮಲ್ಲಿಕಾ ಅವರು ವರದಿ ವಾಚಿಸಿದರು. ಸಿಬ್ಬಂದಿಗಳಾದ ಸತೀಶ್ ಕೆ.ಟಿ. ಪುನಿತ್ ಕುಮಾರ್ ಸಹಕರಿಸಿದರು. ಸಭೆಯಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆ, ಸಹಾಯಕರು, ಸಂಜೀವಿನಿ ಸದಸ್ಯರು ಉಪಸ್ಥಿತರಿದ್ದರು.