ಸಾಧನೆಗೆ ಕ್ರೀಡಾಚಟುವಟಿಕೆಗಳು ಪೂರಕ: ಲೋಕೇಶ್ ಎಸ್.ಆರ್.
ನೆಲ್ಯಾಡಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಹಾಗೂ ಸರಕಾರಿ ಪ್ರೌಢಶಾಲೆ ಕೊಣಾಲು ಇದರ ಸಹಯೋಗದೊಂದಿಗೆ ಪುತ್ತೂರು ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕ ಹಾಗೂ ಬಾಲಕಿಯರ ಖೋ ಖೋ ಪಂದ್ಯಾಟ ಸೆ.4ರಂದು ಕೊಣಾಲು ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ಅವರು, ವಿದ್ಯಾರ್ಥಿಗಳು ಸತತ ಪರಿಶ್ರಮ ಪಟ್ಟಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲೂ ಆಡಲು ಸಾಧ್ಯವಿದೆ. ಸೋಲಿನ ಬಗ್ಗೆ ನಿರಾಸೆ ಬೇಡ. ಸೋಲು ಅನುಭವ ನೀಡಲಿದೆ. ಆದ್ದರಿಂದ ಕ್ರೀಡಾಸ್ಪೂರ್ತಿ, ಕ್ರೀಡಾ ಮನೋಭಾವನೆಯಿಂದ ಆಟವಾಡಿ. ಮುಂದೆ ಉದ್ಯೋಗ ಹುಡುಕುವ ಸಂದರ್ಭದಲ್ಲಿ ತಾಳ್ಮೆ, ಸಹಕಾರ ಅಗತ್ಯವಾಗಿದ್ದು ಅದು ಕ್ರೀಡೆಯಿಂದ ಸಿಗಲಿದೆ. ಅಲ್ಲದೇ ಕ್ರೀಡೆ ಮಾನಸಿಕ, ದೈಹಿಕ ಚಟುವಟಿಕೆಗೂ ಸಹಕಾರಿಯಾಗಲಿದೆ. ವಿದ್ಯಾರ್ಥಿ ತನ್ನ ಜೀವನದಲ್ಲಿ ಕಾಣುವ ಕನಸ್ಸಿನ ಸಾಧನೆಗೆ ಕ್ರೀಡಾ ಚಟುವಟಿಕೆಗಳು ಪೂರಕವಾಗಿವೆ ಎಂದರು.
ಅತಿಥಿಯಾಗಿದ್ದ ದ.ಕ.ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಮಹಮ್ಮದ್ ರಿಯಾಝ್‌ರವರು ಮಾತನಾಡಿ, ಶಿಕ್ಷಕರು ಎಂದಿಗೂ ವಿದ್ಯಾರ್ಥಿಗೆ ಮೋಸ ಮಾಡುವುದಿಲ್ಲ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗೆ ಸಂಬಂಧಿಸಿ ವಿದ್ಯಾರ್ಥಿಯಲ್ಲಿನ ಪ್ರತಿಭೆಯನ್ನು ಗುರುತಿಸಿ ಶಿಕ್ಷಕರು ಪ್ರೋತ್ಸಾಹ ನೀಡುತ್ತಾರೆ. ಆದ್ದರಿಂದ ಶಿಕ್ಷಕರ ಮನನಸ್ಸಿಗೆ ನೋವು ಕೊಡಬೇಡಿ. ಬರುವ ತೀರ್ಪನ್ನು ವಿದ್ಯಾರ್ಥಿಗಳು ಗೌರವಿಸಿ. ಮುಂದೆ ಕ್ರೀಡಾಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ಹೋಗಬೇಕೆಂದು ಹೇಳಿದರು. ಸಮಾರಂಭ ಉದ್ಘಾಟಿಸಿ ಮಾತನಾಡಿದ ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷೆ ಸವಿತಾ ಆಲಂತಾಯ ಅವರು, ಖೋ ಖೋ ದೇಶಿಯ ಕ್ರೀಡೆಯಾಗಿದೆ. ಇದರಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಮುತುವರ್ಜಿ ವಹಿಸಿಕೊಂಡು ಭಾಗವಹಿಸಬೇಕು. ವಿದ್ಯಾರ್ಥಿಗಳೂ ಕ್ರೀಡಾಮನೋಭಾವನೆ ಬೆಳೆಸಿಕೊಳ್ಳಿ ಎಂದು ಹೇಳಿ ಶುಭಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಅವರು, ಕಳೆದ ವರ್ಷ ಕೊಣಾಲು ಸರಕಾರಿ ಪ್ರೌಢಶಾಲೆಯ ಆಶ್ರಯದಲ್ಲಿ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ ಅದ್ದೂರಿಯಾಗಿ ನಡೆದಿದೆ. ಈಗ ಮತ್ತೆ ತಾಲೂಕು ಮಟ್ಟದ ಖೋ ಖೋ ಪಂದ್ಯಾಟ ಆಯೋಜಿಸುವ ಮೂಲಕ ಕೊಣಾಲು ಸರಕಾರಿ ಪ್ರೌಢಶಾಲೆ ದೊಡ್ಡ ಸಾಹಸ ಮಾಡಿದೆ. ಇದರೊಂದಿಗೆ ಇಲಾಖೆಗೆ ಗೌರವ, ವಿಧೇಯತೆಯನ್ನೂ ತೋರಿಸಿದ್ದಾರೆ. ಅಲ್ಲದೇ ಕ್ರೀಡೆ ಹಾಗೂ ಇನ್ನಿತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲೂ ಶೇ.100 ಫಲಿತಾಂಶ ದಾಖಲಿಸಿರುವ ಸಾಧನೆಯೂ ಮಾಡಿದೆ. ಕೊಣಾಲು ಸರಕಾರಿ ಪ್ರೌಢಶಾಲೆ ಎಲ್ಲಾ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿರುವ ಏಕೈಕ ಸರಕಾರಿ ಪ್ರೌಢಶಾಲೆಯೂ ಆಗಿದೆ ಎಂದು ಮೆಚ್ಚುಗೆ ಸೂಚಿಸಿದರು. ತೀರ್ಪುಗಾರರು ಕ್ರೀಡಾ ನಿಯಮಗಳಿಗೆ ಬದ್ಧರಾಗಿ ಕೆಲಸ ನಿರ್ವಹಿಸಬೇಕು. ಕ್ರೀಡಾಪಟುಗಳು ಸಂಘಟಕರಿಗೆ ಹಾಗೂ ತೀರ್ಪುಗಾರರಿಗೆ ಗೌರವ ಕೊಡಬೇಕು. ಇಲ್ಲಿ ವಿಜೇತರು ಮುಂದೆ ಜಿಲ್ಲೆ, ವಿಭಾಗ, ರಾಜ್ಯ, ರಾಷ್ಟ್ರಮಟ್ಟದಲ್ಲೂ ಮಿಂಚುವಂತಾಗಬೇಕೆಂದು ಸುಂದರ ಗೌಡರವರು ಹೇಳಿದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದ.ಕ.ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಿಮಲ್ ನೆಲ್ಯಾಡಿ, ಕಡಬ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ ಅವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.
ಅಂಚೆ ಇಲಾಖೆ ನಿವೃತ್ತ ಉದ್ಯೋಗಿ ಡೊಂಬಯ್ಯ ಗೌಡ ಎಣ್ಣೆತ್ತೋಡಿಯವರು ಕ್ರೀಡಾಂಗಣ ಉದ್ಘಾಟಿಸಿದರು. ಕೊಣಾಲು ಸರಕಾರಿ ಪ್ರೌಢಶಾಲಾ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಕಮಲಾಕ್ಷ ಜಿ., ಕೊಣಾಲು ಸರಕಾರಿ ಪ.ಪೂ.ಕಾಲೇಜಿನ ಪ್ರಾಂಶುಪಾಲ ದಿನೇಶ್‌ಕುಮಾರ್, ಪುತ್ತೂರು ತಾಲೂಕು ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ, ಕಡಬ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಾಂತರಾಮ ಓಡ್ಲ, ಕಡಬ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ, ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸೀತಾರಾಮ ಗೌಡ, ಬಜತ್ತೂರು ಕ್ಲಸ್ಟರ್ ಸಿಆರ್‌ಪಿ ಮಂಜುನಾಥ್, ಕ್ರೀಡಾಕೂಟದ ನೋಡೆಲ್ ಅಧಿಕಾರಿ ಚಕ್ರಪಾಣಿ ಬಾಕಿಲ, ಗೋಳಿತ್ತೊಟ್ಟು ಗ್ರಾ.ಪಂ.ಸದಸ್ಯೆ ಪ್ರಜಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೊಣಾಲು ಸರಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ಸತೀಶ್ಚಂದ್ರ ಎ.ಎಸ್.ಸ್ವಾಗತಿಸಿ, ಸಹಶಿಕ್ಷಕ ಅಬ್ದುಲ್ ಖಾದರ್ ವಂದಿಸಿದರು. ಶಿಕ್ಷಕಿ ರಮಣಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಜಿ.ಪಂ.ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು, ಎಪಿಎಂಸಿ ಮಾಜಿ ಸದಸ್ಯ ಕುಶಾಲಪ್ಪ ಗೌಡ ಅನಿಲ, ಕೊಣಾಲು ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮಹಮ್ಮದ್ ರಫೀಕ್ ಸೇರಿದಂತೆ ಹಲವು ಮಂದಿ ಆಗಮಿಸಿ ಶುಭಹಾರೈಸಿದರು.
ಸನ್ಮಾನ:
ಗೋಳಿತ್ತೊಟ್ಟು ಗ್ರಾ.ಪಂ.ನ ನೂತನ ಅಧ್ಯಕ್ಷೆ ಸವಿತಾ ಆಲಂತಾಯ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಪ್ರೌಢಶಾಲಾ ಸಹಶಿಕ್ಷಕರ ಸಂಘದ ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ಮಹಮ್ಮದ್ ರಿಯಾಝ್‌ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಸ್ಮಾಯಿಲ್ ಕೋಲ್ಪೆ, ದಾನಿಗಳಾದ ದುಬೈ ಬ್ರದರ್‍ಸ್ ಕೋಲ್ಪೆ ಇದರ ಅಧ್ಯಕ್ಷ ನೌಸೀರ್, ತೌಫೀಕ್ ಕೋಲ್ಪೆ ಅವರಿಗೆ ಶಾಲುಹಾಕಿ ಗೌರವಿಸಲಾಯಿತು.