ಸಂಸ್ಕೃತ ಭಾಷೆ ಇತರ ಭಾರತೀಯ ಭಾಷೆಗಳ ಮಾತೃಸ್ವರೂಪಿ : ಸೌಂದರ್ಯಲಕ್ಷ್ಮೀ
ಪುತ್ತೂರು: ಸಂಸ್ಕೃತ ಇತರ ಭಾರತೀಯ ಭಾಷೆಗಳ ಮಾತೃಸ್ವರೂಪಿ. ದೇಸೀಯವಾದ ಯಾವುದೇ ಭಾಷೆಯಲ್ಲೂ ಸಂಸ್ಕೃತದ ಗಾಢ ಪ್ರಭಾವವಿದೆ. ಅನೇಕ ಭಾಷೆಗಳಲ್ಲಿನ ಐವತ್ತು ಶೇಕಡಾಕ್ಕಿಂತಲೂ ಹೆಚ್ಚಿನ ಶಬ್ದಗಳು ಸಂಸ್ಕೃತ ಭಾಷೆಯಿಂದ ಬಂದಂತಹವುಗಳಾಗಿವೆ. ಆದ್ದರಿಂದ ಸಂಸ್ಕೃತದ ಅಗಾಧತೆಯನ್ನು ಅರಿಯುವ, ತನ್ಮೂಲಕ ಆ ಭಾಷೆಯಲ್ಲಿನ ಉತ್ಕೃಷ್ಟತೆಯನ್ನು ಅರ್ಥ ಮಾಡಿಕೊಳ್ಳುವ ಕಾರ್ಯ ಆಗಬೇಕಿದೆ ಎಂದು ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಸಂಸ್ಕೃತ ಶಿಕ್ಷಕಿ ಸೌಂದರ್ಯಲಕ್ಷ್ಮೀ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಸಂಸ್ಕೃತ ದಿನಾಚರಣೆ ಪ್ರಯುಕ್ತ ಸಂಸ್ಕೃತ ವಿಭಾಗದಿಂದ ಆಯೋಜಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರುವಾರ ಮಾತನಾಡಿದರು.
ಸಂಸ್ಕೃತವನ್ನು ಬಳಸುವವರ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ. ಇದು ಹೀಗೆಯೇ ಮುಂದುವರಿದಲ್ಲಿ ಭಾಷೆಗೆ ದೊರಕಬಹುದಾದ ಅನುದಾನಗಳಂತಹ ಪ್ರೋತ್ಸಾಹಗಳು ಮರೆಯಾಗುವ ಅಪಾಯವಿದೆ. ಸಂಸ್ಕೃತ ದೇಶದಿಂದ ಕಾಣೆಯಾದಲ್ಲಿ ಸಂಸ್ಕೃತಿಯ ಮೇಲೂ ಅದು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಕಳಪೆ ಬೈಗುಳಗಳ ಹಾವಳಿಯಿಲ್ಲದ ಅತ್ಯಂತ ಗೌರವಾರ್ಹವಾದ ಭಾಷೆಯಾಗಿ ಸಂಸ್ಕೃತ ನಮ್ಮ ನಡುವಿದೆ. ಇಂತಹ ಭಾಷೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಮಾತನಾಡಿ ಭಾರತೀಯ ಪಂಡಿತ ಪರಂಪರೆ, ಜ್ಞಾನಪರಂಪರೆಯ ಮೂಲ ಸಂಸ್ಕೃತ. ಇಂತಹ ಭಾಷೆಯನ್ನು ನಿರ್ಲಕ್ಷಿಸುವುದು ಜ್ಞಾನರಾಶಿಗೆ ಮಾಡುವ ಅವಮಾನವೆನಿಸುತ್ತದೆ. ಯಾವಾಗ ಶಿಕ್ಷಣದ ಉದ್ದೇಶ ಜ್ಞಾನದ ಬದಲಾಗಿ ಆರ್ಥಿಕ ಲಾಭ ಎಂದೆನಿಸತೊಡಗಿತೋ ಆಗ ಸಂಸ್ಕೃತಕ್ಕೆ ದೊರಕುವ ಪ್ರಾಧಾನ್ಯತೆ ಕಡಿಮೆಯಾಗತೊಡಗಿತು. ಸ್ವಾತಂತ್ರ್ಯಾನಂತರದ ಭಾರತದಲ್ಲಿ ರಾಜಕೀಯ ನೇತಾರರಿಗೆ ಜ್ಞಾನದ ಬಗೆಗೆ ಆಸಕ್ತಿ ಇಲ್ಲದ್ದು ಸಂಸ್ಕೃತ ಹಿಂದುಳಿಯುವುದಕ್ಕೆ ಕಾರಣವಾಗಿದೆ ಎಂದರು.
ವೇದಿಕೆಯಲ್ಲಿ ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶ್ರೀಲಕ್ಷ್ಮೀ ಪ್ರಾರ್ಥಿಸಿದರು. ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ ಸ್ವಾಗತಿಸಿದರು. ಸಂಸ್ಕೃತ ವಿಭಾಗ ಮುಖ್ಯಸ್ಥೆ ಶಶಿಕಲಾ ವರ್ಕಾಡಿ ವಂದಿಸಿದರು. ವಿದ್ಯಾರ್ಥಿ ನವೀನ್ ಶೆಟ್ಟಿ ಸಂಸ್ಕೃತದಲ್ಲಿ ಕಾರ್ಯಕ್ರಮ ನಿರ್ವಹಿಸಿದರು.