ಪುತ್ತೂರು : ಶಿಕ್ಷಕರಿಗೆ ಗೌರವವನ್ನು ನೀಡುವುದರ ಮೂಲಕ ಶಿಕ್ಷಕರ ದಿನಾಚರಣೆ ನಡೆಯಬೇಕು. ವಿದ್ಯಾರ್ಥಿಗಳ ಬಾಳಿನಲ್ಲಿ ಶಿಕ್ಷಕರು ಆದರ್ಶ ವ್ಯಕ್ತಿಗಳಾಗಿರುತ್ತಾರೆ. ಗುರು ಮುಂದೆ ,ಗುರಿ ಹಿಂದೆ ಎಂಬ ಮಾತಿನಂತೆ ವಿಧ್ಯಾರ್ಥಿಗಳ ಯಶಸ್ಸಿನ ಕನಸಿಗೆ ರುವಾರಿಗಳಾಗಿ ಶಿಕ್ಷಕರಿರುತ್ತಾರೆ ಎಂದು ಪುತ್ತೂರಿನ ಅಕ್ಷಯ ಕಾಲೇಜಿನ ಅಧ್ಯಕ್ಷರು ಹಾಗೂ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಜಯಂತ ನಡುಬೈಲು ಹೇಳಿದರು.
ಅವರು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಶಿಕ್ಷಕ ದಿನಾಚರಣೆಯ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು `ವರ್ಣ ಮಾತ್ರಂ ಕಲಿಸಿದಾತಂ ಗುರು’ ಎಂಬುದು ಕವಿವಾಣಿ. ಗುರು ಬದುಕಿಗೆ ದಾರಿ, ಜೀವನಕ್ಕೆ ಜ್ಯೋತಿ. ಪ್ರತಿಯೊಬ್ಬರ ವ್ಯಕ್ತಿತ್ವವನ್ನು ರೂಪಿಸುವ ಮಹಾನ್ ಶಕ್ತಿ ಎಂದರೆ ಗುರುಗಳು. ಹೀಗಾಗಿ ಪ್ರತಿಯೊಬ್ಬರ ಬದುಕಿನಲ್ಲೂ ಗುರುವಿಗೆ ದೇವರ ಸ್ಥಾನವಿದೆ. ಇಂತಹ ದೇವರ ಸ್ಥಾನದಲ್ಲಿರುವ ಶಿಕ್ಷಕರಿಗೆ ಮೀಸಲಾದ ದಿನವೇ ಸೆಪ್ಟೆಂಬರ್ 5 ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕಾಲೇಜಿನ ಕ್ಯಾಂಪಸ್ ನಿರ್ದೇಶಕರಾದ ರೆ. ಫಾ ಸ್ಟ್ಯಾನಿ ಪಿಂಟೋ ಮಾತನಾಡಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಶಿಕ್ಷಕರ ದಿನಾಚರಣೆ ಕೇವಲ ಒಂದು ಆಚರಣೆಯಲ್ಲ. ನಮ್ಮ ಜೀವನದಲ್ಲಿ ಶಿಕ್ಷಕರ ಮಹತ್ವವನ್ನು ನೆನೆಪಿಸಿಕೊಳ್ಳುವ ದಿನ. ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವಲ್ಲಿ ಶಿಕ್ಷಕರ ನಿಸ್ವಾರ್ಥ ಸೇವೆ, ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ಅವರ ಪಾತ್ರ ಮತ್ತು ಒಟ್ಟಾರೆಯಾಗಿ ವ್ಯಕ್ತಿಗಳು ಮತ್ತು ಸಮಾಜದ ಮೇಲೆ ಶಿಕ್ಷಕರು ಬೀರುವ ಸಕರಾತ್ಮಕ ಪ್ರಭಾವವನ್ನು ಗುರುತಿಸುವ ದಿನವಾಗಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ರೆ. ಫಾ ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ ಗುರು ಬದುಕಿಗೆ ದಾರಿ, ಜೀವನಕ್ಕೆ ಜ್ಯೋತಿ. ಪ್ರತಿಯೊಬ್ಬರ ವ್ಯಕ್ತಿತ್ವವನ್ನು ರೂಪಿಸುವ ಮಹಾನ್ ಶಕ್ತಿ ಎಂದರೆ ಗುರುಗಳು. ಹೀಗಾಗಿ ಪ್ರತಿಯೊಬ್ಬರ ಬದುಕಿನಲ್ಲೂ ಗುರುವಿಗೆ ದೇವರ ಸ್ಥಾನವಿದೆ. ಇಂತಹ ದೇವರ ಸ್ಥಾನದಲ್ಲಿರುವ ಶಿಕ್ಷಕರಿಗೆ ಮೀಸಲಾದ ದಿನವೇ ಸೆಪ್ಟೆಂಬರ್ 5 ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ರೆ. ಫಾ. ಲಾರೆನ್ಸ್ ಮಸ್ಕರೇನಸ್ ಮಾತನಾಡಿ ಗುರುವನ್ನು ದೇವರಿಗೆ ಹೋಲಿಸಲಾಗುತ್ತದೆ. ಅಜ್ಞಾನದ ಕತ್ತಲೆಯಿಂದ ಜ್ಞಾನವೆಂಬ ಬೆಳಕಿನೆಡೆಗೆ ಕೊಂಡೊಯ್ದು ಬದುಕನ್ನು ಉತ್ತಮವಾಗಿ ರೂಪಿಸುವಲ್ಲಿ ಅವರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಯಾವುದೇ ಸ್ವಾರ್ಥವಿಲ್ಲದೆ ವಿದ್ಯಾರ್ಥಿ ಜೀವನವನ್ನು ಸಕರಾತ್ಮಕತೆಯತ್ತ ಕೊಂಡೊಯ್ಯುವಲ್ಲಿ ಪೋಷಕರ ನಂತರ ಶಿಕ್ಷಕರು ಮಾತ್ರ ಸಹಾಯ ಮಾಡಬಲ್ಲರು ಎಂದು ಹೇಳಿದರು.
ದ್ವಿತೀಯ ವಿಜ್ಞಾನ ವಿಭಾಗದ ವಿಂಧ್ಯಾ ಶ್ರೀ ರೈ ಶಿಕ್ಷಕರ ದಿನಾಚರಣೆಯ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. ರಕ್ಷಕ – ಶಿಕ್ಷಕ ಸಂಘದ ಪದಾದಿಕಾರಿಗಳು, ಕಾಲೇಜಿನ ಬೋಧಕ/ ಬೋಧಕೇತರ ಸಿಬ್ಬಂದಿ ವರ್ಗ ,ಕಾಲೇಜಿನ ವಿದ್ಯಾರ್ಥಿ ನಿಲಯದ ಪಾಲಕರಾದ ರೆ.ಫಾ ರೂಪೇಶ್ ತಾವ್ರೊ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿ, ಪ್ರವನ್ ಪೊನ್ನಪ್ಪ ಅತಿಥಿಗಳನ್ನು ಸ್ವಾಗತಿಸಿದರು. ಪೃಥ್ವಿ ಕೆ ವಂದಿಸಿ, ವಿದ್ಯಾರ್ಥಿಗಳಾದ ಸಾಕಿನ, ತನ್ವಿ ಹಾಗೂ ಮುಜಮಿಲ್ ಕಾರ್ಯಕ್ರಮವನ್ನು ನಿರೂಪಿಸಿದರು.