ಪಾಣಾಜೆ ಯಾದವ ಸಭಾದಿಂದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ

0

ಸನ್ಮಾನ, ವಿವಿಧ ಆಟೋಟ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು

ಪುತ್ತೂರು:ಯಾದವ ಸಭಾ ಪ್ರಾದೇಶಿಕ ಸಮಿತಿ ಆರ್ಲಪದವು ಪಾಣಾಜೆ ಇದರ ವತಿಯಿಂದ ಸೆ.೬ರಂದು ಆರ್ಲಪದವು ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂದಿರದ ವಠಾರದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕ್ರೀಡಾಕೂಟಗಳೊಂದಿಗೆ ನಡೆದ 17ನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿಯು ಸಡಗರ, ಸಂಭ್ರಮದಿಂದ ನೆರವೇರಿತು.

ಬೆಳಿಗ್ಗೆ ವೇ.ಮೂ ಗೋಪಾಲಕೃಷ್ಣ ಅಡಿಗ ಅಪಿನಿಮೂಲೆಯವರ ನೇತೃತ್ವದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಭಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ವಿವಿಧ ಸ್ಪರ್ಧೆಗಳು, ಕ್ರೀಡಾಕೂಟಗಳು ಪ್ರಾರಂಭಗೊಂಡಿತು. ಮಧ್ಯಾಹ್ನ ಶ್ರೀಕೃಷ್ಣಾರ್ಪಣ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಪಲ್ಲಪೂಜೆ, ಸಾರ್ವಜನಿಕ ಅನ್ನಸಂತರ್ಪನೆ ನಡೆಯಿತು.

ವಿವಿಧ ಕ್ರೀಡಾಕೂಟದಲ್ಲಿ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಆಲ್ ಇಂಡಿಯಾ ಓಪನ್ ಮಾಸ್ಟರ ಬ್ಯಾಡ್ಮಿಂಟನ್ ವಿನ್ನರ್ ಆಗಿರುವ ಸಿದ್ದಾರ್ಥ್ ಯಾದವ್ ನೀರ್ಚಾಲ್ ಉದ್ಘಾಟಿಸಿದರು. ಅಂಗನವಾಡಿ ಪುಟಾಣಿಗಳು, ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ, ಮಹಿಳೆಯರು, ಪುರುಷರಿಗೆ ಪ್ರತೇಕವಾಗಿ ನಡೆದ ಕ್ರೀಡಾಕೂಟಗಳಲ್ಲಿ ನೂರಾರು ಮಂದಿ ಉತ್ಸಾಹದಲ್ಲಿ ಭಾಗವಹಿಸಿ ಸ್ಪರ್ಧೆಯ ಜೊತೆಗೆ ಮನೋರಂಜನೆ ನೀಡಿತು. ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ವಿಜೇತರಾದವರಿಗೆ ಪ್ರಥಮ ರೂ.೨೦೦೦, ದ್ವಿತೀಯ ರೂ.೧೦೦೦ ಹಾಗೂ ಶ್ರೀಕೃಷ್ಣ ಟ್ರೋಪಿ, ಹಾಗೂ ಅಡ್ಡಕಂಬ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ರೂ.1000 ನಗದು ಹಾಗೂ ಟ್ರೋಪಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ ಹಾಗೂ ಮಹಿಳೆಯರಿಗೆ ಹೂಮಾಲೆ ಕಟ್ಟುವ ಸ್ಪರ್ಧೆ ಆಯೋಜಿಸಲಾಗಿತ್ತು.

ಗಣ್ಯರ ಭೇಟಿ:
ಕಾರ್ಯಕ್ರಮಕ್ಕೆ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಳಾ ಟಿ. ಶೆಟ್ಟಿ, ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ತಾ.ಪಂ ಮಾಜಿ ಅಧ್ಯಕ್ಷ ರಾಧಾಕರಷ್ಣ ಬೋರ್ಕರ್ ಸಹಿತ ಹಲವು ಗಣ್ಯರು ಭೇಟಿ ನೀಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಧಾರ್ಮಿಕ ಸಭಾ ಕಾರ್ಯಕ್ರಮ, ಸನ್ಮಾನ, ಬಹುಮಾನ ವಿತರಣೆ:
ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಕುದ್ರೊಳಿ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿಗಳು ಬೆಳದಿಂಗಳು ಪೌಂಡೇಷನ್ ಅಧ್ಯಕ್ಷರಾಗಿರುವ ಪದ್ಮರಾಜ ಆರ್ ಮಾತನಾಡಿ, ಗೆಳೆತನಕ್ಕೆ ಇನ್ನೊಂದು ಹೆಸರು ಕೃಷ್ಣ-ಸುದಾಮರು. ಶ್ರೀಕೃಷ್ಣನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಾವು ಪರಸ್ಪರ ಪ್ರೀತಿ ವಿಶ್ವಾಸ ಗಳಿಸದಾಗ ಜಗತ್ತನ್ನು ಗೆಲ್ಲಬಹುದು. ಧ್ವೇಷ, ಅಸೂಯೆ ಬಿಟ್ಟು ಜೀವನ ನಡೆಸಬೇಕು. ಧ್ವೇಷ ಬೆಳೆಸಿಕೊಳ್ಳುವುದರಿಂದ ಏನನ್ನು ಗಳಿಸಲು ಸಾಧ್ಯವಿಲ್ಲ. ಇದರಿಂದ ಅವನತಿಯೇ ಹೆಚ್ಚು. ಯಾದವ ಸಮಾಜವು ಸತ್ಯ, ಪ್ರಾಮಾಣಿಕತೆ, ನಿಷ್ಠೆಗಳಿಗೆ ಹೆಸರಾಗಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಂದೇಶಗಳನ್ನು ಆಧರಿಸಿರುವ ಸಮಾಜವಾಗಿದೆ. ಪ್ರಾಮಾಣಿಕ, ದಕ್ಷ ಅಧಿಕಾರಿಗಳನು ನೀಡಿದ ಸಮಾಜದವಾಗಿದೆ. ಪಾಣಾಜೆಯಲ್ಲಿ ಎಲ್ಲಾ ಸಮಾಜದವರನ್ನು ಒಟ್ಟು ಸೇರಿಸಿಕೊಂಡು ಅಚ್ಚು ಕಟ್ಟಾಗಿ ನಡೆಸುವ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಶ್ಲಾಘಿಸಿದ ಅವರು, ಕನಿಷ್ಠ ವಿದ್ಯಾಭ್ಯಾಸ ಪಡೆಯಲು ಸಂಕಷ್ಟದಲ್ಲಿರುವ ಮಕ್ಕಳಿಗೆ ಗುರು ಬೆಳೆಂದಿಗಳು ಫೌಂಡೇಶನ್ ಸಹಕಾರ ನೀಡಲಿದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ವಿಟ್ಲ-ಉಪ್ಪಿಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಬಿ ರಾಜರಾಮ ಮಾತನಾಡಿ, ಶ್ರೀಕೃಷ್ಣ ಒಬ್ಬ ಗುರುವಾಗಿ, ಸಾರಥಿಯಾಗಿದ್ದವರು. ವೃತ್ತಿ ನಿಷ್ಠೆ ಪಾಲನೆಯ ಬಗ್ಗೆ ಬೋಧಿಸಿದ್ದು ಅದನ್ನು ಜೀವನದಲ್ಲಿ ಪಾಲಿಸಿದಾಗ ಭಕ್ತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಿದಂತಾಗುತ್ತದೆ. ಶ್ರೀಕೃಷ್ಣ ಜನ್ಮಾಷ್ಟಮಿಯ ಮೂಲಕ ಎಲ್ಲಾ ಸಮಾಜ ಬಾಂಧವರನ್ನು ಒಟ್ಟು ಸೇರಿಸುವ ಮೂಲಕ ಪಾಣಾಜೆಯಲ್ಲಿ ಬಾಂಧವ್ಯದ ಬೆಸುಗೆ, ಸ್ನೇಹದ ಸಂಕೋಲೆ ಹೆಣೆದಂತಾಗಿದೆ.
ಯಾದವ ಸಭಾ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷ ಎ.ಕೆ ಮಣಿಯಾಣಿ ಬೆಳ್ಳಾರೆ ಮಾತನಾಡಿ, ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬಕ್ಕೆ ವಿಶೇಷ ಆಕರ್ಷಣೆ ಇದೆ. ಈ ಹಬ್ಬದ ನಂತರ ಇತರ ಹಬ್ಬಗಳು ಬರಲಿದೆ. ಯಾದವ ಕುಲದಲ್ಲಿ ಜನಿಸಿದ ಶ್ರೀಕೃಷ್ಣ ಜಗದೊಡೆಯನಾಗಿ ಹೆಸರಗಳಿಸಿದರು. ಸತತ 17 ವರ್ಷಗಳಿಂದ ಶ್ರೀಕೃಷ್ಣ ಜನ್ಮಾಷ್ಟಮಿಯು ಇನ್ನಷ್ಟು ವೈಭವದಲ್ಲಿ ನಡೆಯಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀಪ್ರಸಾದ್ ಪಾಣಾಜೆ ಮಾತನಾಡಿ, ಕೃಷ್ಣ ಲೀಲೆಗಳು ಅಂದಿನ ಕಾಲಕ್ಕೆ ಸೀಮಿತವಾಗಿರದೆ ಪ್ರಸ್ತುತ ದಿನಗಳಿಗೂ ಅನ್ವಯವಾಗುತ್ತಿದೆ. ಜಾತಿ, ಪಕ್ಷ, ಧರ್ಮ ಮೀರಿದ ಒಗ್ಗಟ್ಟು ಪಾಣಾಜೆಯಲ್ಲಿದೆ. ಎಲ್ಲಾ ಸಮಾಜದವರ ಸಹಕಾರದಿಂದ ಶ್ರೀಕೃಷ್ಣ ಜನ್ಮಾಷ್ಟಮಿಯು ಯಶಸ್ವಿಯಾಗಿ ನಡೆಯುತ್ತಿದ್ದು ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.
ಆರ್ಲಪದವು ನೇಹಾ ಟೆಕ್ಸ್‌ಟೈಲ್ಸ್‌ನ ಮ್ಹಾಲಕ ವರದರಾಯ ನಾಯಕ್ ಬಹುಮಾನ ವಿತರಿಸಿದರು. ಪಾಣಾಜೆ ಗ್ರಾ.ಪಂ ಉಪಾಧ್ಯಕ್ಷೆ ಜಯಶ್ರೀ ದೇವಸ್ಯ, ಶಾರದೋತ್ಸವ ಸಮಿತಿ ಗೌರವಾಧ್ಯಕ್ಷ ಸದಾಶಿವ ರೈ ಸೂರಂಬೈಲು, ಪ್ರಗತಿಪರ ಕೃಷಿಕ ಲಕ್ಷ್ಮೀನಾರಾಯಣ ರೈ ಕೆದಂಬಾಡಿ, ಪಾಣೆಮಂಗಳೂರು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ವಿ. ಮೆಲ್ಕಾರ್, ಜಯಂತ ಪೈಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ರಾಜ್ಯ ಸರಕಾರದಿಂದ ಶ್ರೇಷ್ಠ ವೈದ್ಯ ಪ್ರಶಸ್ತಿ ಪುರಸ್ಕೃತರಾದ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅಜೇಯ್‌ಯವರನ್ನು ಕಾರ್ಯಕ್ರಮದಲ್ಲಿ ಅದ್ಧೂರಿಯಾಗಿ ಸನ್ಮಾನಿಸಿ, ಗೌರವಿಸಲಾಯಿತು.

ಬಹುಮಾನ ವಿತರಣೆ:
ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಅಂಗನವಾಡಿ ಪುಟಾಣಿಗಳು, ಶಾಲಾ ವಿದ್ಯಾರ್ಥಿಗಳು, ಮಕ್ಕಳ, ಪುರುಷರು ಹಾಗೂ ಮಹಿಳೆಯರಿಗೆ ಮಕ್ಕಳಿಗೆ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ನವ್ಯಶ್ರೀ ಪ್ರಾರ್ಥಿಸಿದರು. ಶ್ರೀಹರಿ ಪಾಣಾಜೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಯಾದವ ಸಭಾ ಪಾಣಾಜೆ ಪ್ರಾದೇಶಿಕ ಸಮಿತಿ ಅಧ್ಯಕ್ಷ ಧನಂಜಯ ಮಣಿಯಾಣಿ ಆರ್ಲಪದವು, ಕಾರ್ಯದರ್ಶಿ ಹರಿಕೃಷ್ಣ ಕಂಪ, ಕೋಶಾಧಿಕಾರಿ ಶಿವರಾಮ ಮಣಿಯಾಣಿ, ಮಾಜಿ ಅಧ್ಯಕ್ಷ ವಿಜಯ ಕುಮಾರ್ ಭರಣ್ಯ, ಪದಾಧಿಕಾರಿಗಳಾದ ಗೋಪಾಲ ಮಣಿಯಾಣಿ, ಕುಂಞಿ ಮಣಿಯಾಣಿ, ವಿಜಯಲಕ್ಷ್ಮೀ ಭರಣ್ಯ ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು. ವಿದ್ಯಾಶ್ರೀ ಪಾಣಾಜೆ ಕಾರ್ಯಕ್ರಮ ನಿರೂಪಿಸಿ, ದಿನೇಶ್ ಯಾದವ್ ಆರ್ಲಪದವು ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಭಾ ಕಾರ್ಯಕ್ರಮದ ಬಳಿಕ ಸಂಗೀತ ರಾಜರತ್ನ ರಾಜ್ಯಪ್ರಶಸ್ತಿ ಪುರಸ್ಕೃತ ಪ್ರವೀಣ್ ಜಯ ವಿಟ್ಲ ಸಾರಥ್ಯದ ನ್ಯೂ ಶೈನ್ ಮ್ಯೂಸಿಕಲ್ ವಿಟ್ಲ ತಂಡವದರಿಂದ ಗಾನ-ನಾಟ್ಯ-ಸಂಭ್ರಮ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಿಗೆ ಬಿಲ್ವಪತ್ರೆ, ರಕ್ತ ಚಂದನ ಗಿಡ ವಿತರಿಸಲಾಯಿತು.

LEAVE A REPLY

Please enter your comment!
Please enter your name here