ಬೊಬ್ಬೆಕೇರಿ-ಸುಬ್ರಹ್ಮಣ್ಯ ಹೆದ್ದಾರಿ ಕುಸಿತದ ಭೀತಿಯಲ್ಲಿ – ಇನ್ನೂ ಬಿಡುಗಡೆಗೊಂಡಿಲ್ಲ ಅನುದಾನ-ತಡೆಗೋಡೆ ನಿರ್ಮಾಣ ಅಗತ್ಯ

0

ಕಾಣಿಯೂರು: ಬೊಬ್ಬೆಕೇರಿ ಸಮೀಪ ಹೆದ್ದಾರಿ ಕೆಳಭಾಗದಲ್ಲಿ ಮಣ್ಣು ಕುಸಿತಗೊಂಡು ಹೆದ್ದಾರಿ ಕುಸಿತದ ಭೀತಿಯಲ್ಲಿದ್ದು, ಕುಸಿತ ತಡೆಗೆ ಮಳೆಹಾನಿ ಯೋಜನೆಯಡಿ ಅನುದಾನಕ್ಕಾಗಿ ಕಳೆದ ಕೆಲ ವರ್ಷಗಳಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೂ ಇನ್ನೂ ಅನುದಾನ ಬಿಡುಗಡೆಗೊಂಡಿರದೇ ಇರುವುದರಿಂದ ಆತಂಕದಲ್ಲೇ ಪ್ರಯಾಣಿಸಬೇಕಾಗಿದೆ.

ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯ ಮುರುಳ್ಯ-ಪುಣ್ಚತ್ತಾರು ಸಂಪರ್ಕ ರಸ್ತೆಯ ಬೊಬ್ಬೆಕೇರಿ ಸಮೀಪದಲ್ಲಿ ಹೆದ್ದಾರಿ ಕುಸಿಯುವ ಭೀತಿಯಲ್ಲಿದೆ. ಹೆದ್ದಾರಿ ಕೆಳಭಾಗದಲ್ಲಿ ಕೃಷಿಗೆ ತಾಗಿಗೊಂಡು ತೋಡೊಂದು ಹರಿಯುತ್ತಿದ್ದು ಇದರ ನೀರಿನ ತೇವಾಂಶದಿಂದ ಮಣ್ಣು ಸಡಿಲಗೊಂಡು ಹೆದ್ದಾರಿ ಭಾಗದಿಂದ ಮಣ್ಣು ಕುಸಿಯಲು ಆರಂಭವಾಗಿದೆ ಎನ್ನಲಾಗಿದೆ.

ಕುಸಿತ ಭೀತಿ:
ಹೆದ್ದಾರಿಯ ಕೆಳಭಾಗದಲ್ಲಿ ತೋಡು ಹರಿಯುತ್ತಿದೆ. ಹೆದ್ದಾರಿಗೆ ತಾಗಿಕೊಂಡಂತೆ ಕೆಳಭಾಗದಲ್ಲಿ ಅಲ್ಪ ಪ್ರಮಾಣದಲ್ಲಿ ಮಣ್ಣು ಕುಸಿತವಾಗಿದ್ದು, ಹೊಂಡ ನಿರ್ಮಾಣವಾಗಿದೆ. ಹೆದ್ದಾರಿಯಲ್ಲೂ ಒಂದು ಭಾಗದಲ್ಲಿ ಹೆದ್ದಾರಿ ಬಿರುಕು ರೀತಿಯಲ್ಲಿ ಕಾಣಿಸಿಕೊಂಡು ತೋಡಿನ ಭಾಗಕ್ಕೆ ತಗ್ಗಿರುವುದು ಕಂಡುಬಂದಿದೆ. ಮುನ್ನೆಚ್ಚರಿಕಾ ಕ್ರಮಕ್ಕಾಗಿ ಲೋಕೋಪಯೋಗಿ ಇಲಾಖೆ ವತಿಯಿಂದ ರಿಬ್ಬನ್ ಅಳವಡಿಸಲಾಗಿದ್ದು, ಆ ಭಾಗದಲ್ಲಿ ವಾಹನಗಳು ಸಂಚರಿಸದಂತೆ ಸೂಚಿಸಲಾಗಿದೆ. ಬೇಸಗೆಯಲ್ಲಿ ಅಪಾಯದ ಭೀತಿ ಇಲ್ಲದಿದ್ದರೂ ಮಳೆಗಾಲದಲ್ಲಿ ಮಣ್ಣು ಕುಸಿತಗೊಂಡಲ್ಲಿ ಹೆದ್ದಾರಿ ಸಂಪರ್ಕವೇ ಕಡಿತದ ಭೀತಿಯೂ ಇದೆ. ಅಲ್ಲದೇ ಅಪಾಯ ಉಂಟಾಗುವ ಸಾಧ್ಯತೆಯನ್ನೂ ಅಲ್ಲಗೆಳೆಯುವಂತಿಲ್ಲ. ಈ ರಸ್ತೆಯ ಮೂಲಕ ನಿತ್ಯ ನೂರಾರು ಲಘು ಹಾಗೂ ಘನ ವಾಹನಗಳು ಸಂಚರಿಸುತ್ತಿವೆ.

ಶಾಶ್ವತ ಪರಿಹಾರ ಅಗತ್ಯ:
ಮಣ್ಣು ಕುಸಿತ ತಡೆಗೆ ಶಾಶ್ವತ ಪರಿಹಾರ ಕಾಮಗಾರಿಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ತೋಡಿನ (ಕೆಳ) ಭಾಗದಿಂದ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಮಾಡಬೇಕಾಗಿದೆ. ತಡೆಗೋಡೆ ನಿರ್ಮಾಣಕ್ಕೆ ದೊಡ್ಡ ಮೊತ್ತದ ಅನುದಾನ ಬೇಕಿದೆ. ಸುಮಾರು ಅಂದಾಜು ಎರಡರಿಂದ ಮೂರು ಕೋಟಿ ಅನುದಾನದ ಅಗತ್ಯವಿದೆ.

ಇನ್ನೂ ಬಿಡುಗಡೆಯಾಗದ ಅನುದಾನ:
ಇಲ್ಲಿನ ಸಮಸ್ಯೆ ಪರಿಹಾರಕ್ಕೆ ಸುಳ್ಯ ಲೋಕೋಪಯೋಗಿ ಇಲಾಖೆ ವತಿಯಿಂದ ಕಳೆದ ಕೆಲ ವರ್ಷಗಳಿಂದ ಮಳೆಹಾನಿ ಪರಿಹಾರದಡಿ ಕಾಮಗಾರಿ ನಿರ್ವಹಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದರೂ ಇನ್ನೂ ಅನುದಾನ ಬಿಡುಗಡೆಗೊಳ್ಳದೇ ಇರುವುದರಿಂದ ಇಲ್ಲಿ ಯಾವುದೇ ಪರಿಹಾರ ಕಾರ್ಯ ನಡೆಸಲು ಇನ್ನೂ ಸಾಧ್ಯವಾಗಿಲ್ಲ. ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಹೆದ್ದಾರಿ ಕುಸಿತದ ತಡೆಗೆ ವಿಶೇಷ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲು ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ. ಯಾವ ಹಂತದಲ್ಲಿದೆ ಎನ್ನುವ ಬಗ್ಗೆ ಮಾಹಿತಿ ಪಡೆಯಲಾಗುವುದು. -ಭಾಗೀರಥಿ ಮುರುಳ್ಯ, ಶಾಸಕರು ಸುಳ್ಯ ಕ್ಷೇತ್ರ

ಬೊಬ್ಬೆಕೇರಿಯಲ್ಲಿ ಹೆದ್ದಾರಿ ಕುಸಿತ ತಡೆಗೆ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ದೊಡ್ಡ ಮೊತ್ತದ ಅನುದಾನ ಬಂದಲ್ಲಿ ತಡೆಗೋಡೆ ನಿರ್ಮಿಸಲಾಗುವುದು. ಇನ್ನೊಂದು ಭಾಗದವರು ಜಾಗ ನೀಡಿದಲ್ಲಿ ಹೆದ್ದಾರಿಯನ್ನು ತಿರುವು ಮಾಡಿ ಅಲ್ಲಿಂದ ನಿರ್ಮಿಸಲು ಯೋಜಿಸಲಾಗಿದೆ. -ಪರಮೇಶ್ವರ್, ಲೋಕೋಪಯೋಗಿ ಇಲಾಖೆ ಸುಳ್ಯ

ಅಪಾಯ ಸಂಭವಿಸುವ ಮೊದಲು ಸೂಕ್ತ ಕ್ರಮಕೈಗೊಳ್ಳಬೇಕು, ರಾಜ್ಯ ಹೆದ್ದಾರಿಯ ಬೊಬ್ಬೆಕೇರಿ ಸಮೀಪದಲ್ಲಿ ಹೆದ್ದಾರಿ ಕುಸಿಯುವ ಭೀತಿಯಲ್ಲಿದ್ದು, ಸಂಬಂಧಪಟ್ಟ ಇಲಾಖೆ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ದೊಡ್ಡ ಪ್ರಮಾಣದಲ್ಲಿ ಮಣ್ಣು ಜರಿದು ಮುಖ್ಯ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಯಿದೆ. -ದಿನೇಶ್ ಪೈಕ, ಪುಣ್ಚತ್ತಾರು

LEAVE A REPLY

Please enter your comment!
Please enter your name here