ಸೆ.15:ಮಂಗಳೂರು, ಉಡುಪಿ, ಪುತ್ತೂರಿನಲ್ಲಿ ಏಕಕಾಲದಲ್ಲಿ ಕೊಂಕಣಿ ಸಿನೆಮಾ `ಆಸ್ಮಿತಾಯ್’ ಬಿಡುಗಡೆ

0

ಸೆ.10ರಂದು ಭಾರತ್ ಸಿನೆಮಾಸ್‌ನಲ್ಲಿ ಚಿತ್ರದ ಪ್ರೀಮಿಯರ್ ಶೋ

-ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಹಲವಾರು ವರ್ಷಗಳ ಬಳಿಕ ಕೊಂಕಣಿ ಸಿನಿರಸಿಕರಿಗೆ ಸಿಹಿ ಸುದ್ದಿ ಹೊರಬಿದ್ದಿದೆ. ಕಿವಿಗಿಂಪಾಗಿಸುವ ಹಾಡುಗಳು, ಭಾವನೆಗಳು, ಆಕ್ಷನ್, ಹಾಸ್ಯ ಮತ್ತು ಗಂಭೀರತೆ ಒಳಗೊಂಡ ಸಂಪೂರ್ಣ ಪ್ಯಾಕೇಜ್ ವುಳ್ಳ ಕೊಂಕಣಿ ಸಿನೆಮಾ “ಆಸ್ಮಿತಾಯ್” ಇದೇ ಸೆ.15 ರಂದು ಮಂಗಳೂರು, ಉಡುಪಿ ಹಾಗೂ ಪುತ್ತೂರಿನಲ್ಲಿನ ಭಾರತ್ ಸಿನೆಮಾಸ್ ಥಿಯೇಟರ್‌ಗಳಲ್ಲಿ ಅದ್ದೂರಿಯಾಗಿ ತೆರೆ ಕಾಣಲಿದೆ.


ಹದಿನೈದು ವರ್ಷಗಳ ಸತತ ಪ್ರಯತ್ನ, ಕೊಂಕಣಿ ಐಡೆಂಟಿಟಿಯ ಹುಡುಕಾಟದಲ್ಲಿ(ಇನ್ ಸರ್ಚ್ ಆಫ್ ಕೊಂಕಣಿ ಐಡೆಂಟಿಟಿ) ಎಂಬ ಟ್ಯಾಗ್‌ಲೈನ್‌ನೊಂದಿಗೆ ಈ ಚಿತ್ರವು ಮೂಡಿ ಬಂದಿದ್ದು ಕೊಂಕಣಿ ಭಾಷೆಯ ಬಗ್ಗೆ ಮೆಚ್ಚುಗೆಯನ್ನು ಪುನರುಜ್ಜೀವನಗೊಳಿಸುವ ಉದ್ಧೇಶ ಹೊಂದಿದೆ. ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಸ್ಥೆ ಮಾಂಡ್ ಸೊಭಾಣ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿಯಲ್ಲಿ ಪ್ರಥಮ ಬಾರಿಗೆ ನಿರ್ಮಿಸಲ್ಪಟ್ಟ ಈ ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಗೊಂಡಿದ್ದು ಎಲ್ಲರಿಂದ ಪ್ರಶಂಸೆ ವ್ಯಕ್ತವಾಗಿದೆ.


ಪ್ರೇಮದ ಮೂಲಕ, ಕೊಂಕಣಿ ಅಸ್ಮಿತೆಯ ಹುಡುಕಾಟದ ಬಗೆಗಿನ `ಆಸ್ಮಿತಾಯ್’ ಚಿತ್ರದ ಕಥೆಯನ್ನು ಬರಹಗಾರ ಹಾಗೂ ಹಾಡುಗಾರ ಎರಿಕ್ ಓಜಾರಿಯೊರವರು ಬರೆದಿದ್ದಾರೆ. ಜೋಯೆಲ್ ಪಿರೇರಾರವರು ಚಿತ್ರಕಥೆ ಹೆಣೆದಿರುವುದರೊಂದಿಗೆ ಸಹ ನಿರ್ದೇಶಕರಾಗಿ ಸೇವೆ ನೀಡಿದ್ದಾರೆ. ಸಂಗೀತದ ಹೊಣೆಯನ್ನು ಸಂಗೀತ ಲೋಕದ ಘಟಾನುಘಟಿಗಳಾದ ಎರಿಕ್ ಓಜಾರಿಯೊ, ಜೋಯೆಲ್ ಪಿರೇರಾ, ಆಲ್ವಿನ್ ಫೆರ್ನಾಂಡೀಸ್, ಕಾಜಾಟೆನ್ ಡಾಯಸ್‌ರವರು ಹೊತ್ತಿದ್ದು ಅದ್ಭುತವಾಗಿ ಸಂಯೋಜಿಸಿದ್ದಾರೆ. ಜೋಯೆಲ್ ಪಿಂಟೋರವರ ಸಂಕಲನ, ಕ್ಯಾಮರಾಮ್ಯಾನ್ ಆಗಿ ಬಾಲರಾಜ್ ಗೌಡರವರು ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ನವೀನ್ ಲೋಬೊ, ಮೇಕಿಂಗ್‌ನಲ್ಲಿ ರಾಹುಲ್ ಪಿಂಟೋ, ಕಲಾ ನಿರ್ದೇಶಕರಾಗಿ ಜೋಸೆಫ್ ಮೊಂತೇರೊ, ಡಬ್ಬಿಂಗ್ ಇಂಜಿನಿಯರ್ ಶೆಣೈ ವಿ.ಜೋಸೆಫ್, ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕಾರ್ತಿಕ್ ರೈರವರು ದುಡಿದಿದ್ದು ವಿಲಾಸ್ ರತ್ನಾಕರ್‌ರವರ ನಿರ್ದೇಶನದಲ್ಲಿ ಚಿತ್ರವು ಉತ್ತಮವಾಗಿ ಮೂಡಿ ಬಂದಿರುತ್ತದೆ. ಮುಂದಿನ ದಿನಗಳಲ್ಲಿ ಗೋವಾ, ಬೆಂಗಳೂರು, ಮುಂಬೈ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ಚಿತ್ರ ತೆರೆಕಾಣಲಿದೆ.
ಚಿತ್ರದಲ್ಲಿ ಐಟಿ ಕಂಪೆನಿಯಲ್ಲಿ ವೃತ್ತಿ ನಿರ್ವಹಿಸುತ್ತಿರುವ ಅಶ್ವಿನ್ ಡಿ’ಕೋಸ್ಟ ಹಾಗೂ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಅಂತಿಮ ಬಿಎ ಓದುತ್ತಿರುವ ವೆನ್ಸಿಟಾ ಡಾಯಸ್‌ರವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂದೀಪ್ ಮಲಾನಿ, ಡೆನ್ನಿಸ್ ಮೊಂತೇರೊ, ಸ್ವ್ಯಾನಿ ಆಲ್ವಾರಿಸ್, ಕೊಂಕಣಿ ನಟ ಪ್ರಿನ್ಸ್ ಜೇಕಬ್, ಎರಿಕ್ ಒಜಾರಿಯೋ, ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಪಿಆರ್‌ಒ ರಾಯ್ ಕ್ಯಾಸ್ಟಲಿನೋ, ನೆಲ್ಲು ಪೆರ್ಮನ್ನೂರ್ ಸಹಿತ ಹಲವರು ಕಲಾವಿದರು ಚಿತ್ರಕ್ಕೆ ಬಣ್ಣ ಹಚ್ಚಿಕೊಂಡಿದ್ದಾರೆ.


ಪುತ್ತೂರಿನಲ್ಲಿ ಭರ್ಜರಿ ಪ್ರಚಾರ:
ಚಿತ್ರದ ಬಿಡುಗಡೆಗೆ ಮುನ್ನ ಚಿತ್ರದ ಕುರಿತು ಮಾಂಡ್ ಸೊಭಾಣ್ ಸಂಸ್ಥೆಯು ಮಂಗಳೂರು, ಉಡುಪಿಗಳಲ್ಲಿ ಪ್ರಚಾರವನ್ನು ಈಗಾಗಲೇ ಕೈಗೆತ್ತಿಕೊಂಡಿದ್ದಾರೆ. ಪುತ್ತೂರಿನಲ್ಲಿ ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರ ಮಾರ್ಗದರ್ಶನದಲ್ಲಿ ಚರ್ಚ್ ವ್ಯಾಪ್ತಿಯ ಡೊನ್ ಬೊಸ್ಕೊ ಕ್ಲಬ್, ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ ಹಾಗೂ ಭಾರತೀಯ ಕಥೋಲಿಕ್ ಯುವ ಸಂಚಲನ(ಐಸಿವೈಎಂ)ದ ಸದಸ್ಯರು, ಮಾಂಡ್ ಸೊಭಾಣ್ ಸಂಸ್ಥೆಯ ಕಾರ್ಯದರ್ಶಿ ಕಿಶೋರ್ ಫೆರ್ನಾಂಡೀಸ್, ಕೋಶಾಧಿಕಾರಿ ಎಲ್ರೋನ್ ರೊಡ್ರಿಗಸ್ ಹಾಗೂ ಮಾಂಡ್ ಸೊಭಾಣ್ ಸಂಸ್ಥೆಯ ಸದಸ್ಯರು ಚಿತ್ರದ ಕುರಿತು ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.


ಪ್ರೀಮಿಯರ್ ಶೋ ಟಿಕೆಟ್‌ಗೆ ಸಂಪರ್ಕಿಸಿ..
ಸೆ.೧೫ ರಂದು ಆಸ್ಮಿತಾಯ್ ಸಿನೆಮಾ ಬಿಡುಗಡೆಗೊಳ್ಳುತ್ತಿದ್ದು, ಇದರ ಪ್ರೀಮಿಯರ್ ಶೋ ಅನ್ನು ಸೆ.10 ರಂದು ಸಂಜೆ 4 ಗಂಟೆಗೆ ಪುತ್ತೂರಿನ ಭಾರತ್ ಸಿನೆಮಾಸ್ ಮಲ್ಟಿಫ್ಲೆಕ್ಸ್‌ನಲ್ಲಿ ಪ್ರದರ್ಶನಗೊಳ್ಳಲಿದೆ. ಪ್ರೀಮಿಯರ್ ಶೋ ಸಂದರ್ಭ ಸಿನೆಮಾ ಕೌಂಟರಿನಲ್ಲಿ ಟಿಕೆಟ್ ವಿತರಣೆ ಇಲ್ಲದ್ದರಿಂದ ಸಿನಿರಸಿಕರು ಟಿಕೆಟ್ ಕಾಯ್ದಿರಿಸಿಕೊಳ್ಳಲು ದೈಹಿಕ ಶಿಕ್ಷಣ ಶಿಕ್ಷಕ ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್(8660431338), ಎಪಿಎಂಸಿ ರಸ್ತೆ ಡಾಯಸ್ ಕಾಂಪ್ಲೆಕ್ಸ್‌ನಲ್ಲಿನ ಪ್ರವೀಣ್ ಪ್ರಿಂಟರ್‍ಸ್ ಮಾಲಕ ಪ್ರವೀಣ್ ಮೊಂತೇರೊ(9980006496), ರೋಯ್ಸ್ ಪಿಂಟೊ(9743081381)ರವರ ನಂಬರಿಗೆ ಸಂಪರ್ಕಿಸಬಹುದಾಗಿದೆ. ಚಿತ್ರ ಬಿಡುಗಡೆ ಬಳಿಕ ಎಂದಿನಂತೆ ಚಿತ್ರಮಂದಿರದಲ್ಲಿಯೇ ಟಿಕೆಟ್ ಸಿಗಲಿದ್ದು ಸಿನಿರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಚಿತ್ರ ವೀಕ್ಷಿಸಿ, ಚಿತ್ರತಂಡವನ್ನು ಪ್ರೋತ್ಸಾಹಿಸುವಂತೆ ಚಿತ್ರತಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಷಪ್‌ರವರಿಂದ ಪ್ರಶಂಸೆ..
ಚಿತ್ರದಲ್ಲಿನ ಕಥೆ, ನಿರೂಪಣೆ, ಸಾಹಿತ್ಯ, ಕಲಾವಿದರ ಅಭಿನಯ ಹೀಗೆ ಎಲ್ಲವೂ ವೈವಿಧ್ಯತೆಯಿಂದ, ಗುಣಮಟ್ಟದಿಂದ ಕೂಡಿದ್ದು, ಉತ್ತಮ ಸಂದೇಶವನ್ನು ಹೊಂದಿದೆ. ಕೊಂಕಣಿ ಭಾಷಿಗರು ಹಾಗೂ ಸಿನಿರಸಿಕರು ಈ ಚಿತ್ರವನ್ನು ವೀಕ್ಷಿಸಿ ಚಿತ್ರತಂಡಕ್ಕೆ ಶುಭ ಹಾರೈಸಬೇಕಾಗಿದೆ ಮಾತ್ರವಲ್ಲ ಮುಂದಿನ ದಿನಗಳಲ್ಲಿ ಮತ್ತಷ್ಟು ಕೊಂಕಣಿ ಸಿನೆಮಾಗಳು ಬರಲಿ, ಕೊಂಕಣಿ ಭಾಷೆಯ ಅಸ್ಮಿತೆಯನ್ನು ಪ್ರಚುರಪಡಿಸುವಂತಾಗಲಿ ಎಂದು ಮಂಗಳೂರು ಬಿಷಪ್ ಅತಿ.ವಂ|ಡಾ|ಪೀಟರ್ ಪಾವ್ಲ್ ಸಲ್ದಾನ್ಹಾ ಹಾಗೂ ಉಡುಪಿ ಅತಿ.ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊರವರು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here