ಉಪ್ಪಿನಂಗಡಿ: ಇಲ್ಲಿನ ದುರ್ಗಾಗಿರಿಯಲ್ಲಿರುವ ಹಿಂದೂ ರುದ್ರ ಭೂಮಿ ಹರಿಶ್ಚಂದ್ರಘಾಟ್ ಸ್ಮಶಾನದ ಅಭಿವೃದ್ಧಿಗೆಂದು ಸರಕಾರ ಒದಗಿಸಿದ 16.66 ಲಕ್ಷ ರೂ. ಅನುದಾನದ ಬಳಕೆಯಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂದು ಆಪಾದಿಸಿ ಲೋಕಾಯುಕ್ತಕ್ಕೆ ಸಲ್ಲಿಕೆಯಾದ ದೂರಿಗೆ ಸಂಬಂಧಿಸಿ ಸಂಬಂಧಿತ ಇಲಾಖಾಧಿಕಾರಿಗಳ ಸಮಕ್ಷಮದಲ್ಲಿ ಲೋಕಾಯುಕ್ತ ಅಧಿಕಾರಿಗಳು ಗುರುವಾರದಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಸ್ಮಶಾನದ ಅಭಿವೃದ್ಧಿ ಕಾರ್ಯಗಳಿಗಾಗಿ ಸ್ಮಶಾನ ಅಭಿವೃದ್ಧಿ ಸಮಿತಿಯು ಸಲ್ಲಿಸಿದ ಮನವಿಗೆ ಸ್ಪಂದಿಸಿ ಸರಕಾರವು 16.66 ಲಕ್ಷ ರೂ ಅನುದಾನವನ್ನು ಬಿಡುಗಡೆ ಮಾಡಿದ್ದು, ಸದ್ರಿ ಕಾಮಗಾರಿಯನ್ನು ಯಾವುದೇ ಟೆಂಡರ್ ಕರೆಯದೆ ಕೆಐಆರ್ಡಿಎಲ್ ಮೂಲಕ ನಡೆಸಲಾಗಿತ್ತು. ನಿರ್ಮಾಣ ಮಾಡಲಾದ ಶೌಚಾಲಯವು ಬಳಕೆಗೆ ಅಸಾಧ್ಯ ಎನ್ನುವಂತೆ ನಿರ್ಮಿಸಲಾಗಿದ್ದು, ಈ ಎಲ್ಲಾ ಲೋಪಗಳ ಬಗ್ಗೆ ಸ್ಮಶಾನ ಸಮಿತಿಯು ಅಂದಿನ ಸ್ಥಳೀಯ ಶಾಸಕರಿಗೆ ದೂರು ಸಲ್ಲಿಸಿ, ಪ್ರಯೋಜನವೆನಿಸದಿದ್ದಾಗ ಸಮಾಜ ಕಲ್ಯಾಣಾಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೆ, ಅಂತಿಮವಾಗಿ ರಾಜ್ಯದ ಅಂದಿನ ಮುಖ್ಯಮಂತ್ರಿಗಳಿಗೂ ಲಿಖಿತ ದೂರು ಸಲ್ಲಿಸಿತ್ತು. ಎಲ್ಲೆಡೆಯಿಂದಲೂ ದೂರಿಗೆ ನಿರ್ಲಕ್ಷ್ಯ ನೀತಿಯೇ ವ್ಯಕ್ತವಾದಾಗ ಅಂತಿಮವಾಗಿ ಸಮಿತಿಯಲ್ಲಿದ್ದ ಸ್ಥಳೀಯ ಪತ್ರಕರ್ತರೊಬ್ಬರು 2021 ರ ಅಕ್ಟೋಬರ್ 11 ರಂದು ಅಂದಿನ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಿದರು. ಬಳಿಕದ ದಿನಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳ ರದ್ದುಗೊಂಡು ಎಲ್ಲಾ ಪ್ರಕರಣಗಳು ಲೋಕಾಯುಕ್ತಕ್ಕೆ ವರ್ಗಾವಣೆ ಗೊಂಡಾಗ ಈ ಪ್ರಕರಣವೂ ಲೋಕಾಯುಕ್ತಕ್ಕೆ ವರ್ಗಾಯಿಸಲ್ಪಟ್ಟಿತ್ತು. ಈ ಹಿಂದೆ ಈ ಬಗ್ಗೆ ಸ್ಥಳಕ್ಕೆ ಪರಿಶೀಲನಾರ್ಥ ಭೇಟಿ ನೀಡಿದ ಬೆಂಗಳೂರಿನ ಇಲಾಖಾಧಿಕಾರಿಗಳು ಸ್ಮಶಾನದಲ್ಲಿ ನಿರ್ಮಾಣವಾದ ಶೌಚಾಲಯ ಮತ್ತು ಸ್ನಾನ ಗೃಹವು ಅನುಮೋದಿತ ಕಾಮಗಾರಿಯಲ್ಲಿ ಸೇರಿಲ್ಲವೆಂದೂ, ಅದು ಹೆಚ್ಚುವರಿ ಕಾಮಗಾರಿಯಾಗಿದ್ದು, ಅದಕ್ಕೆ ಇನ್ನಷ್ಠೆ ಬಿಲ್ ಮಂಜೂರಾತಿಯಾಗಬೇಕಾಗಿದೆ ಎಂದೂ ದೂರುದಾರರಿಗೆ ತಿಳಿಸಿದ್ದರು.
ಈ ಎಲ್ಲಾ ಬೆಳವಣಿಗೆಗಳ ಬಳಿಕ ಮೌನವಾಗಿದ್ದ ಪ್ರಕರಣದಲ್ಲಿ ಮತ್ತೆ ಚೇತರಿಕೆ ಕಾಣಿಸಿಕೊಂಡಿದ್ದು, ಗುರುವಾರದಂದು ಲೋಕಾಯುಕ್ತ ಅಧಿಕಾರಿಗಳು ಕಾಮಗಾರಿಗೆ ಸಂಬಂಧಿಸಿ ಬಿಲ್ ಮಂಜೂರಾತಿಗೆ ಸ್ಪಂದಿಸಿದ ವಿವಿಧ ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ಸ್ಮಶಾನದಲ್ಲಿನ ಕಾಮಗಾರಿಗಳ ಪರಿಶೀಲನೆ ನಡೆಸಿದ್ದಾರೆ.