ನಂದಗೋಕುಲವಾದ ಪ್ರಿಯದರ್ಶಿನಿ ವಿದ್ಯಾಸಂಸ್ಥೆ – 6 ನೇ ವರ್ಷದ ಗೋಕುಲಾಷ್ಟಮಿ ಆಚರಣೆ

0

ತೊಟ್ಟಿಲಲ್ಲಿ ತೂಗಲ್ಪಟ್ಟ ಬಾಲಕೃಷ್ಣರು, ರಾಧಾಕೃಷ್ಣರ ಮೆರವಣಿಗೆ, ನಂದ ಯಶೋಧೆಯರ ಆಟೋಟಗಳು, ಕುಣಿತ ಭಜನೆ

ರಾಧಾ-ಕೃಷ್ಣ ಭವ್ಯ ಮೆರವಣಿಗೆ ಬೆಳಿಗ್ಗೆ  ಬಾಲಕೃಷ್ಣ ತೊಟ್ಟಿಲ ಸಂಭ್ರಮ ನಡೆಯಿತು. ವಿದ್ಯಾರ್ಥಿಗಳಿಂದ ಭಜನೆ ನಡೆಯಿತು. ಬೇಬಿ ಸಾನ್ವಿತ್ ಬಾಲಕೃಷ್ಣನಾಗಿ ಆಯ್ಕೆಯಾದರು. ಬಳಿಕ ರೆಂಜ ಶ್ರೀ ಅಯ್ಯಪ್ಪ ಭಜನಾ ಮಂದಿರದ ವಠಾರದಿಂದ ರಾಧಾ-ಕೃಷ್ಣರ ಭವ್ಯ ಮೆರವಣಿಗೆ ನಡೆಯಿತು. ಮಣಿಕಂಠ ಚೆಂಡೆ ಮೇಳ, ಕುಣಿತ ಭಜನೆಯೊಂದಿಗೆ ರಾಧಾ-ಕೃಷ್ಣರಿದ್ದ ಆಕರ್ಷಕ ವಾಹನ ಮೆರವಣಿಗೆಯಲ್ಲಿ ಸಾಗಿಬಂತು. ಸುಮಾರು 200 ರಷ್ಟು ರಾಧಾ-ಕೃಷ್ಣರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು.

ಬೆಟ್ಟಂಪಾಡಿ: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನ ಸಂಸ್ಥೆಯಾದ ಬೆಟ್ಟಂಪಾಡಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ 6 ನೇ ವರ್ಷದ ಗೋಕುಲಾಷ್ಟಮಿ ಆಚರಣೆ ಸೆ. 9 ರಂದು ನಡೆಯಿತು. ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆದ ಕಾರ್ಯಕ್ರಮಗಳಿಂದಾಗಿ, ಪುಟಾಣಿ ಕೃಷ್ಣ ರಾಧೆಯರಿಂದ ಸಂಸ್ಥೆ ನಂದಗೋಕುಲವಾಗಿ ಪರಿಣಮಿಸಿತ್ತು.

ಬೆಳಿಗ್ಗೆ ಬಾಲಕೃಷ್ಣ ತೊಟ್ಟಿಲ ಸಂಭ್ರಮದ ಬಳಿಕ ರೆಂಜ ಶ್ರೀರಾಮನಗರ ಅಯ್ಯಪ್ಪ ಭಜನಾ ಮಂದಿರದ ಬಳಿಯಿಂದ ರಾಧಾ-ಕೃಷ್ಣ ಮೆರವಣಿಗೆ ನಡೆಯಿತು. ಪ್ರಗತಿಪರ ಕೃಷಿಕ ಶಂಕರನಾರಾಯಣ ರಾವ್ ಪಾರ, ಗುರುಸ್ವಾಮಿ ಕೃಷ್ಣಪ್ಪ ಗೌಡ ತೆಂಗಿನಕಾಯಿ ಒಡೆದು ಮೆರವಣಿಗೆಗೆ ಚಾಲನೆ ನೀಡಿದರು. ಬೆಟ್ಟಂಪಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪ್ರ.ಕಾರ್ಯದರ್ಶಿ ಧನಂಜಯ ರೆಂಜ ಉಪಸ್ಥಿತರಿದ್ದರು. ಮೆರವಣಿಗೆ ಬಳಿಕ ಪೋಷಕರಿಗೆ ವಿವಿಧ ಕ್ರೀಡಾಸ್ಪರ್ಧೆಗಳು ನಡೆದವು. 

ಧಾರ್ಮಿಕ ಸಭಾ ಕಾರ್ಯಕ್ರಮ:
ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಗೋಕುಲಾಷ್ಟಮಿ ಸಮಿತಿಯ ಅಧ್ಯಕ್ಷ ಡಾ. ಪ್ರಮೋದ್ ಎಂ.ಜಿ. ಸಭಾಧ್ಯಕ್ಷತೆ ವಹಿಸಿ ಮಾತನಾಡಿ ‘ವಿಶಿಷ್ಟ ಪರಂಪರೆಯ ಭಾರತದ ಪ್ರತಿಯೊಂದು ಆಚರಣೆಯೂ ನಮ್ಮಲ್ಲಿ ಬದುಕಿನ ದಾರಿಯನ್ನು ತೋರಿಸುತ್ತದೆ. ಗೋಕುಲಾಷ್ಟಮಿ ಆಚರಣೆಯ ಸಂದೇಶ, ಆದರ್ಶಗಳು ನಮ್ಮ ಜೀವನದಲ್ಲಿ ಪಸರಿಸಲಿ’ ಎಂದು ಹೇಳಿ ಶುಭ ಹಾರೈಸಿದರು.

ಧಾರ್ಮಿಕ ಉಪನ್ಯಾಸ ನೀಡಿದ ವೇ.ಮೂ. ದಿನೇಶ್ ಮರಡಿತ್ತಾಯರು ಮಾತನಾಡಿ ‘ಜ್ಞಾನದ ಅಧಿದೇವತೆ ಶಿವನ ಅನುಗ್ರಹದೊಂದಿಗೆ ಇಲ್ಲಿ ಕಾರ್ಯಕ್ರಮ ಯಶಸ್ವಿಯಾಗುತ್ತಿದೆ. ತಾಯಿಯೇ ದೇವರು. ತಾಯಿಯ ಮನಸ್ಸಿಗೆ ಬೇಸರವಾಗದ ರೀತಿಯ ಮನಸ್ಸು ಮಕ್ಕಳಲ್ಲಿ ಇರಬೇಕಾದರೆ ಸಂಸ್ಕಾರ ಅಗತ್ಯ. ವಿದ್ಯಾಸಂಸ್ಥೆಯಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸುವ ಕಾರ್ಯಕ್ರಮಗಳು ಅತ್ಯವಶ್ಯಕವಾಗಿದೆ’ ಎಂದರು.

ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್‌ ಪುತ್ತೂರು ಸೆಂಟ್ರಲ್‌ನ ನಿರ್ದೇಶಕ ರಾಕೇಶ್‌ ಶೆಟ್ಟಿಯವರು ಮಾತನಾಡಿ ‘ಯಾವುದು ಶಾಶ್ವತವೋ ಅದು ಸನಾತನ. ಈ ಭೂಮಂಡಲವೇ ಸನಾತನ ಎಂಬ ಜ್ಞಾನ ಕೆಲವರಿಗಿಲ್ಲ. ದೇವರ ಬಗೆಗಿನ ಜ್ಞಾನಾರ್ಜನೆ ನಮ್ಮಲ್ಲಿ ಇರದಿದ್ದಲ್ಲಿ ನಮ್ಮ ಸನಾತನವನ್ನು ನಾವೇ ಪ್ರಶ್ನಿಸುವ ಕಾಲಘಟ್ಟಕ್ಕೆ ತಲುಪುತ್ತೇವೆ’ ಎಂದರು.

ಬೆಟ್ಟಂಪಾಡಿ ಸಿ.ಎ. ಬ್ಯಾಂಕ್‌ ಸಿಬಂದಿ ಸುವರ್ಣ ಆರ್‌.ಬಿ. ಯವರು ಮಾತನಾಡಿ ‘ಗ್ರಾಮೀಣ ಭಾಗವಾದ ಬೆಟ್ಟಂಪಾಡಿ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿಗೊಂಡಿದೆ. ಈ ವಿದ್ಯಾಸಂಸ್ಥೆಯೂ ಉನ್ನತೋನ್ನತ ಅಭಿವೃದ್ಧಿಯಾಗಲಿ’ ಎಂದು ಶುಭ ಹಾರೈಸಿದರು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಂಗನಾಥ ರೈ ಗುತ್ತು ರವರು ಮಾತನಾಡಿ ಗೋಕುಲಾಷ್ಟಮಿ ಆಚರಣೆ ಯಶಸ್ವಿಯಾಗುವಲ್ಲಿ ಶ್ರಮಿಸಿದ ಶಿಕ್ಷಕರು, ಸಹಕರಿಸಿದ ಪೋಷಕರಿಗೆ ಕೃತಜ್ಞತೆ ಸಲ್ಲಿಸಿದರು.

ಕಮಲ್‌ ಕನ್‌ಸ್ಟ್ರಕ್ಷನ್‌ನ ಕಮಲ್‌ ಕುಲಾಲ್‌ ಆನಾಜೆ, ಪುತ್ತೂರು ಈಶಾನ್ಯ ಬಿಲ್ಡರ್ಸ್‌ನ ಶಂಕರ ಭಟ್‌, ಪ್ರಗತಿಪರ ಕೃಷಿ ನರೇಂದ್ರ ಕುಮಾರ್‌ ಆಜಡ್ಕ,  ಶಾಲಾ  ಸಂಚಾಲಕ ಡಾ. ಸತೀಶ್ ಕುಮಾರ್ ರಾವ್, ಗೋಕುಲಾಷ್ಟಮಿ ಸಮಿತಿಯ ಉಪಾಧ್ಯಕ್ಷರಾದ ಶಿವಕುಮಾರ್ ಬಲ್ಲಾಳ್ ಮತ್ತು ವಿಜಯಲಕ್ಷ್ಮಿ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಹುಮಾನ ವಿತರಣೆ:
ಮೆರವಣಿಗೆಯಲ್ಲಿ ಪಾಲ್ಗೊಂಡ ಎಲ್ಲಾ ರಾಧಾ ಕೃಷ್ಣರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕಿಯರಾದ ಮೋಹಿನಿ, ಗೌತಮಿ, ಶರ್ಮಿಳಾ, ಹೇಮಂತ್ ಬಹುಮಾನಿತರ ಪಟ್ಟಿ ವಾಚಿಸಿದರು. 

ಮುಖ್ಯಗುರು ರಾಜೇಶ್ ಎನ್. ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಸಂಸ್ಥೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡುತ್ತಿರುವ ಉದ್ದೇಶವನ್ನು ವಿವರಿಸಿ, ಕಳೆದ 5 ವರ್ಷಗಳಲ್ಲಿ ಆಚರಣೆ ನಡೆದು ಬಂದ ರೀತಿಯ ಬಗ್ಗೆ ಮಾತನಾಡಿದರು. ವಿದ್ಯಾರ್ಥಿನಿ ಅನನ್ಯ ಪ್ರಾರ್ಥಿಸಿದರು. ಶಿಕ್ಷಕಿ ಕೃಷ್ಣವೇಣಿ ವಂದಿಸಿದರು. ಶಿಕ್ಷಕಿಯರಾದ ಪವಿತ್ರ, ಪ್ರವೀಣ ಕುಮಾರಿ, ರಕ್ಷಿತಾ, ಭವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಶಿವಕುಮಾರ್ ಬಲ್ಲಾಳ್, ಜಗನ್ನಾಥ ರೈ ಕೊಳಂಬೆತ್ತಿಮಾರ್, ಸಂತೋಷ್ ಬೇರಿಕೆ, ಮೋಹನ್ ಕುಮಾರ್, ಪ್ರಕಾಶ್ ರೈ ಬೈಲಾಡಿ, ಉಮೇಶ್ ಮಿತ್ತಡ್ಕ  ಅತಿಥಿಗಳಿಗೆ ಶಾಲು ಸ್ಮರಣಿಕೆ ನೀಡಿ ಗೌರವಿಸಿದರು. ಶಿಕ್ಷಕ ಹಾಗೂ ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ವಿವಿಧ ರೀತಿಯಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here