ಪುತ್ತೂರು ಮೊಸರು ಕುಡಿಕೆ ಉತ್ಸವ ಧಾರ್ಮಿಕ ಸಭೆಯಲ್ಲಿ ಶರಣ್ ಪಂಪ್‌ವೆಲ್
ಧರ್ಮರಕ್ಷಣೆ ನೀವು ಮಾಡಿ,ನಿಮ್ಮ ರಕ್ಷಣೆ ನಾನು ಮಾಡುತ್ತೇನೆ-ಅರುಣ್‌ಶ್ಯಾಮ್
ಅಂದು,ಇಂದು,ಮುಂದೆ ನನ್ನ ಕುಟುಂಬದ ಜೊತೆ ಹಿಂದು ಸಮಾಜವಿದೆ-ನೂತನ
ನಿಸ್ವಾರ್ಥ ಕಾರ್ಯಪಡೆ ನಮ್ಮದು-ಮುರಳಿಕೃಷ್ಣ ಹಸಂತಡ್ಕ
ಹಿಂದುತ್ವದ ರಕ್ಷಣೆಗೆ ನರೇಂದ್ರ ಮೋದಿ ನಾಯಕತ್ವ ಬೇಕು-ಕಿಶೋರ್ ಬೊಟ್ಯಾಡಿ
ಸ್ವಾರ್ಥ ಬಿಟ್ಟು ಹಿಂದು ಸಮಾಜದ ರಕ್ಷಣೆಯಾಗಲಿ-ಹರೀಶ್ ಪೂಂಜ
ಪುತ್ತೂರು: ಭಾರತದ ಸಂಸ್ಕೃತಿ, ಧರ್ಮ ಶ್ರೀಕೃಷ್ಣನ ಪ್ರೇರಣೆಯಿಂದ ನಡೆಯುತ್ತಿದೆ.ಶ್ರೀ ಕೃಷ್ಣನ ಒಂದೊಂದು ಘಟನೆಗಳು ಕೂಡಾ ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳ ಮಾಡುತ್ತಿರುವ ಕಾರ್ಯಗಳಿಗೆ ಪ್ರೇರಣದಾಯಕವಾಗಿದೆ.ಈ ನಿಟ್ಟಿನಲ್ಲಿ ಹಿಂದು ಸಂಘಟನೆಯ ಕಾರ್ಯ ನಿರಂತರ ನಡೆಯುತ್ತಿದ್ದು, ಮುಂದಿನ ಒಂದು ವರ್ಷದೊಳಗೆ 1 ಲಕ್ಷ ಗ್ರಾಮಗಳಲ್ಲಿ ವಿಶ್ವಹಿಂದು ಪರಿಷತ್ ಸಮಿತಿ ರಚನೆಯಾಗಲಿದೆ ಎಂದು ವಿಶ್ವಹಿಂದೂ ಪರಿಷದ್‌ನ ಕರ್ನಾಟಕ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹೇಳಿದರು.
ವಿಶ್ವಹಿಂದೂ ಪರಿಷದ್‌ನ ಸ್ಥಾಪನಾ ದಿನಾಚರಣೆಯ ಅಂಗವಾಗಿ ವಿಶ್ವಹಿಂದೂ ಪರಿಷದ್ ಪುತ್ತೂರು ಜಿಲ್ಲೆ ಮತ್ತು ಪುತ್ತೂರು ಮೊಸರುಕುಡಿಕೆ ಉತ್ಸವ ಸಮಿತಿಯಿಂದ ಸೆ.9ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ 13ನೇ ವರ್ಷದ ಪುತ್ತೂರು ಮೊಸರುಕುಡಿಕೆ ಉತ್ಸವದ ಧಾಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಶ್ರೀ ಕೃಷ್ಣ ಗೋವರ್ಧನ ಗಿರಿಯನ್ನು ಎತ್ತುವ ಮೂಲಕ ಗೋವಿನ ರಕ್ಷಣೆ, ಮಹಾಭಾರತದಲ್ಲಿ ದ್ರೌಪದಿಯ ಮಾನ ಕಾಪಾಡುವ ಮೂಲಕ ಮಾತೆಯರ ರಕ್ಷಣೆ ಮಾಡಿದ.ಅದೇ ರೀತಿ ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳ ಇವತ್ತು ಗೋವುಗಳ ಮತ್ತು ಮಾತೆಯರ ರಕ್ಷಣೆ ಮಾಡುತ್ತಿದೆ.ಜಾತಿಗೆ ಅವಕಾಶ ನೀಡದೆ ಹಿಂದುಗಳನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ವಿಶ್ವಹಿಂದು ಪರಿಷತ್ ಕೆಲಸ ಮಾಡುತ್ತದೆ.ಈಗಾಗಲೇ 78 ಸಾವಿರ ಗ್ರಾಮಗಳಲ್ಲಿ ಗ್ರಾಮ ಸಮಿತಿಗಳಾಗಿವೆ.೪೬ ಸಾವಿರ ಗ್ರಾಮಗಳಲ್ಲಿ ಸಂಘಟನೆಯ ಕೆಲಸ ಮಾಡುತ್ತಿವೆ.ಮುಂದಿನ ಒಂದು ವರ್ಷದೊಳಗೆ 1 ಲಕ್ಷ ಗ್ರಾಮಗಳಲ್ಲಿ ವಿಶ್ವಹಿಂದು ಪರಿಷತ್ ಸಮಿತಿ ರಚನೆ ಆಗಲಿದೆ ಎಂದರು.ಪ್ರವೀಣ್ ನೆಟ್ಟಾರು ಬಲಿದಾನಕ್ಕೆ ನಾವು ವ್ಯರ್ಥಮಾಡಿಲ್ಲ. ಪಿಎಫ್‌ಐಯಂಥ ಸಂಘಟನೆಗಳ ಹುಟ್ಟಡಗಿಸಲಾಗಿದೆ.ಆದರೆ ಇವತ್ತು ಹಿಂದು ಸನಾತನ ಧರ್ಮದ ನಿಂದನೆ ಮಾಡುತ್ತಿರುವ ಕೆಲವು ರಾಜಕೀಯ ದ್ರೋಹಿಗಳು 2047ರ ಹೊತ್ತಿಗೆ ಇಸ್ಲಾಮೀಕರಣ ಮಾಡುವ ಷಡ್ಯಂತ್ರಕ್ಕೆ ಕೈಜೋಡಿಸಿದಂತೆ ಸಂಶಯ ವ್ಯಕ್ತವಾಗಿದೆ.ಈ ನಿಟ್ಟಿನಲ್ಲಿ ಹಿಂದುತ್ವ ಉಳಿಯಬೇಕು. ಹಿಂದುತ್ವ ಉಳಿದರೆ ಭಾರತ. ಭಾರತ ಉಳಿದರೆ ಇಡೀ ಜಗತ್ತು ಉಳಿಯುತ್ತದೆ ಎಂದರು.ಇವತ್ತು ರಾಜಕೀಯವಾಗಿ ಪುತ್ತೂರಿನಲ್ಲಿ ಹತ್ತಾರು ಪ್ರಶ್ನೆ ಕಾಣುತ್ತಿದೆ.ಈ ನಿಟ್ಟಿನಲ್ಲಿ ನಮ್ಮ ಹಿರಿಯರ ಸೇವೆಗೆ ಬೆಲೆ ಕೊಟ್ಟು ನಾವೆಲ್ಲ ಒಂದಾಗಿರಬೇಕು ಎಂದವರು ಹೇಳಿದರು.
ಧರ್ಮರಕ್ಷಣೆ ನೀವು ಮಾಡಿ, ನಿಮ್ಮ ರಕ್ಷಣೆ ನಾನು ಮಾಡುತ್ತೇನೆ:
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹೈಕೋರ್ಟ್‌ನ ಹಿರಿಯ ನ್ಯಾಯವಾದಿ ಅರುಣ್‌ಶ್ಯಾಮ್ ಅವರು ಮಾತನಾಡಿ ಜಗತ್ತಿನಲ್ಲಿ ವಿಶ್ವಹಿಂದು ಪರಿಷತ್ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಸಂಘಟನೆ.ಅದು ಕೈಗೆತ್ತಿಕೊಂಡ ಕಾರ್ಯ ಇವತ್ತಿನ ತನಕ ಯಾವುದೂ ಬಾಕಿಯಿಲ್ಲ.ದೇಶದ ನಾನಾ ಜ್ವಲಂತ ಸಮಸ್ಯೆಗಳ ಹೋರಾಟಕ್ಕೆ ಇವತ್ತು ತಾರ್ಕಿಕ ಅಂತ್ಯಕ್ಕೆ ಬಂದಿದೆ.ಹಿಂದೂಗಳ ಮೇಲೆ ಅವಹೇಳನ, ದೂಷಣೆ ಮಾಡಿದಾಗ ಹಿಂದು ಸಮಾಜ ಜಾಗೃತವಾಗಿ ತಕ್ಕ ಉತ್ತರ ನೀಡಲಿದೆ.ಇವತ್ತು ಸಮಾಜವನ್ನು ಒಡೆಯುವ ಪ್ರಯತ್ನ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ನಾವೆಲ್ಲ ಜಾಗೃತರಾಗಿ ಒಗ್ಗಟ್ಟಾಗಿ ಧರ್ಮದ ಕೆಲಸ ಮಾಡಬೇಕು. ನಮ್ಮ ಕಾರ್ಯಕರ್ತರಿಗೆ ತೊಂದರೆ ಆಗದಂತೆ ನಾನು ನೋಡುತ್ತೇನೆ. ನೀವು ಧರ್ಮದ ರಕ್ಷಣೆ ಮಾಡಿ. ನಾನು ಕಾನೂನಿನ ರೀತಿಯಲ್ಲಿ ನಿಮ್ಮನ್ನು ರಕ್ಷಣೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಅಂದು, ಇಂದು ,ಮುಂದೆ ನನ್ನ ಕುಟುಂಬದ ಜೊತೆ ಹಿಂದು ಸಮಾಜವಿದೆ:
ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಅವರು ಮಾತನಾಡಿ ಹಿಂದು ಧರ್ಮದಿಂದ ಸಮಾಜದ ಪರಿವರ್ತನೆ ಸಾಧ್ಯ.ಧರ್ಮ ರಕ್ಷಣೆಗಾಗಿ ಪ್ರತಿಯೊಬ್ಬ ಹಿಂದು ಮುಂದೆ ಬರಬೇಕು.ಯಾಕೆಂದರೆ ಹಗಲು ರಾತ್ರಿಯೆನ್ನದೆ ಜಾತಿ ಭೇದವಿಲ್ಲದೆ ಹಿಂದುತ್ವಕ್ಕಾಗಿ ಹೋರಾಟ ಮಾಡಬೇಕು.ಇದು ನನ್ನ ಅನುಭವದ ವಿಚಾರ. ನನ್ನ ಮತ್ತು ನನ್ನ ಕುಟುಂಬದ ಜೊತೆ ಅಂದು, ಇಂದು ಮತ್ತು ಮುಂದೆಯೂ ಹಿಂದು ಸಮಾಜವಿದೆ.ಇಲ್ಲಿ ಜಾತಿ, ಭೇದವಿಲ್ಲ. ಈ ನಿಟ್ಟಿನಿಲ್ಲಿ ಹಿಂದುತ್ವಕ್ಕಾಗಿ ಪ್ರತಿ ಕ್ಷಣವೂ ನಾನು ಸ್ಪಂದಿಸುತ್ತೇನೆ ಎಂದರು.
ನಿಸ್ವಾರ್ಥ ಕಾರ್ಯಪಡೆ ನಮ್ಮದು:
ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತ ಸಹಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಅವರು ಮಾತನಾಡಿ ಹಿರಿಯರ ನೆನಪಿನಲ್ಲಿ ಪುತ್ತೂರಿನಲ್ಲಿ ಮೊಸರು ಕುಡಿಕೆ ಮಾಡುತ್ತಿದ್ದೇವೆ. ಅನೇಕ ಸವಾಲುಗಳ ಮಧ್ಯೆ ಹಿಂದು ಸಮಾಜವನ್ನು ಸಂಘಟಿಸುವ ಕೆಲಸ ಆಗಿದೆ.ನಮಗೆ ಇಲ್ಲಿ ಹೆಮ್ಮೆಯ ಸಂಗತಿಯೆಂದರೆ ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳದಲ್ಲಿ ನಿಸ್ವಾರ್ಥ ಕಾರ್ಯಕರ್ತರ ಪಡೆಯಿದೆ ಎಂದರು.
ಹಿಂದುತ್ವದ ರಕ್ಷಣೆಗೆ ನರೇಂದ್ರ ಮೋದಿ ನಾಯಕತ್ವ ಬೇಕು:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮೆಸ್ಕಾಂ ಮಾಜಿ ನಿರ್ದೇಶಕ, ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಬೊಟ್ಯಾಡಿ ಅವರು ಮಾತನಾಡಿ ಶ್ರೀಕೃಷ್ಣನ ವಿಚಾರವನ್ನು ಸರಿಯಾಗಿ ಅಧ್ಯಯನ ಮಾಡದೆ ಮಾತನಾಡಬಾರದು.ಸಮಾಜದಲ್ಲಿ ಜಾತಿ,ಭೇದವನ್ನು ತೊಲಗಿಸಿದಾಗ ಒಗ್ಗಟ್ಟಿನಿಂದ ಬದುಕಲು ಸಾಧ್ಯವಿದೆ.ಈ ನಿಟ್ಟಿನಲ್ಲಿ ಶ್ರೀಕೃಷ್ಣನ ಕಥೆಗಳು ನಮಗೆ ಮಾರ್ಗದರ್ಶನ.ಇವತ್ತು ಅಂತಹ ಶ್ರೀಕೃಷ್ಣನ ನಾಯಕತ್ವ ನಮಗೆ ನರೇಂದ್ರ ಮೋದಿಯವರ ರೂಪದಲ್ಲಿ ದೊರೆತಿದೆ.ಪುರಾತನ ಕಾಲದಲ್ಲಿದ್ದ ರಾಕ್ಷಸರಂತೆ ಈಗಲೂ ಇದ್ದಾರೆ. ನರೇಂದ್ರ ಮೋದಿಯವರು ಶ್ರೀಕೃಷ್ಣನ ರೂಪದಲ್ಲಿ ಅವರನ್ನು ಸಂಹಾರ ಮಾಡಲಿದ್ದಾರೆ ಎಂದರು.
ಸ್ವಾರ್ಥ ಬಿಟ್ಟು ಹಿಂದು ಸಮಾಜದ ರಕ್ಷಣೆಯಾಗಲಿ:
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಮಾತನಾಡಿ ಇವತ್ತು ಧರ್ಮದ ರಕ್ಷಣೆಗಾಗಿ ಹಿಂದು ಸಮಾಜ ಒಟ್ಟಾಗಬೇಕಾಗಿದೆ.ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಆಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪೂರ್ಣ ಹಂತಕ್ಕೆ ಬಂದಿದೆ.ಮುಂದೆ ಕಾಶಿಗೆ ಹೋದ ಹಾಗೆ ಪ್ರತಿಯೊಬ್ಬ ಹಿಂದು ಅಯೋಧ್ಯೆಯ ಶ್ರೀರಾಮ ಮಂದಿರದ ದರ್ಶನವನ್ನು ಮಾಡುವಂತಹ ಕಾಲ ಬರಲಿದೆ.ಆ ಮೂಲಕ ನಮ್ಮ ಅಖಂಡ ಭಾರತದ ಕಲ್ಪನೆ ಸಾಕಾರಗೊಳ್ಳಲಿದೆ ಎಂದರು.
ಸಾಧಕರಿಗೆ ಸನ್ಮಾನ:
ಸರಕಾರಿ ಆಸ್ಪತ್ರೆಯಲ್ಲಿ ಉತ್ತಮ ವೈದ್ಯಕೀಯ ಸೇವೆ ನೀಡುತ್ತಿರುವ ಡಾ.ಅಜೇಯ್ ಮತ್ತು ಕಬಡ್ಡಿ ತರಬೇತುದಾರ ಬಲ್ನಾಡಿನ ದೀಪಕ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿಶ್ವಹಿಂದು ಪರಿಷದ್ ಪುತ್ತೂರು ಜಿಲ್ಲೆ ಕಾರ್ಯದರ್ಶಿ ನವೀನ್ ನೆರಿಯ ಪ್ರಾಸ್ತಾವಿಕವಾಗಿ ಮಾತನಾಡಿದರು.ವಿಶ್ವಹಿಂದು ಪರಿಷತ್ ಜಿಲ್ಲಾ ಅಧ್ಯಕ್ಷ ಡಾ.ಕೃಷ್ಣಪ್ರಸನ್ನ, ವಿಶ್ವಹಿಂದು ಪರಿಷತ್ ನಗರ ಪ್ರಖಂಡ ಅಧ್ಯಕ್ಷ ಜನಾರ್ದನ ಬೆಟ್ಟ, ಮೊಸರು ಕುಡಿಕೆ ಉತ್ಸವ ಸಮಿತಿ ಕಾರ್ಯದರ್ಶಿ ರೂಪೇಶ್ ಬಲ್ನಾಡು, ಬಜರಂಗದಳ ಮಂಗಳೂರು ವಿಭಾಗದ ಸಹ ಸಂಯೋಜಕ ಪುನೀತ್ ಅತ್ತಾವರ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಮೊಸರು ಕುಡಿಕೆ ಉತ್ಸವ ಸಮಿತಿ ಸಂಚಾಲಕ ಶ್ಯಾಮ್ ಸುದರ್ಶನ್ ಹೊಸಮೂಲೆ ಸ್ವಾಗತಿಸಿದರು.ವಿಶ್ವಹಿಂದು ಪರಿಷತ್ ಪುತ್ತೂರು ಗ್ರಾಮಾಂತರ ಪ್ರಖಂಡ ಕಾರ್ಯದರ್ಶಿ ರವಿಕುಮಾರ್ ಕೈತ್ತಡ್ಕ ವಂದಿಸಿದರು.ಜಯಂತ್ ಕುಂಜೂರುಪಂಜ, ಪ್ರಜ್ವಲ್ ಸಂಪ್ಯ, ಜಗದೀಶ್ ಬನ್ನೂರು,
ಶ್ರೀಧರ್ ತೆಂಕಿಲ, ಕಿರಣ್ ರಾಮಕುಂಜ, ಜಿತೇಶ್ ಬಲ್ನಾಡು,ಸುಕೀರ್ತಿ, ಸಂದೀಪ್, ಶೈಲೇಶ್, ನಾಗೇಶ್, ಪ್ರವೀಣ್, ಶೇಷಪ್ಪ ಬೆಳ್ಳಿಪ್ಪಾಡಿ ಅತಿಥಿಗಳನ್ನು ಗೌರವಿಸಿದರು.ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಮತ್ತು ವಿಶಾಖ್ ರೈ ಕಾರ್ಯಕ್ರಮ ನಿರೂಪಿಸಿದರು.
ಅ.7ಕ್ಕೆ ಪುತ್ತೂರಿಗೆ ಶೌರ್ಯ ರಥ ಹಿಂದೂ ಸಮಾವೇಶ
ವಿಶ್ವಹಿಂದು ಪರಿಷತ್ ವತಿಯಿಂದ ರಾಷ್ಟ್ರೀಯ ರಕ್ಷಣೆಯ ಶೌರ್ಯಪಥ ಕಾರ್ಯಕ್ರಮದ ಅಂಗವಾಗಿ ದೇಶಾದ್ಯಂತ ಶೌರ್ಯ ರಥ ಸಂಚಲನ ನಡೆಯಲಿದೆ.ಕರ್ನಾಟಕ ರಾಜ್ಯದಲ್ಲೂ ರಥ ಆರಂಭಗೊಂಡಿದೆ.ಪುತ್ತೂರಿಗೆ ಅ.೭ಕ್ಕೆ ಶೌರ್ಯ ರಥ ಆಗಮಿಸಲಿದೆ.ಈ ಸಂದರ್ಭ ಪುತ್ತೂರಿನಲ್ಲಿ ಬೃಹತ್ ಹಿಂದೂ ಸಮಾವೇಶ ನಡೆಯಲಿದೆ-
ಶರಣ್ ಪಂಪ್‌ವೆಲ್,, ವಿಹಿಂಪ ಪ್ರಾಂತ ಸಹಕಾರ್ಯದರ್ಶಿ