ಕುಂಬ್ರ ಸರಣಿ ಕಳ್ಳತನ, ಪೊಲೀಸರಿಂದ ಚುರುಕುಗೊಂಡ ತನಿಖೆ-ಕುಂಬ್ರ ಜಂಕ್ಷನ್ ಸಿಸಿಟಿವಿ ದುರಸ್ತಿಗೊಳಿಸಿದ ಪೊಲೀಸ್ ಇಲಾಖೆ

0

ಪುತ್ತೂರು: ಕುಂಬ್ರದಲ್ಲಿ ವಾರಗಳ ಹಿಂದೆ ನಡೆದ ಸರಣಿ ಕಳ್ಳತನದ ಬಗ್ಗೆ ಪೊಲೀಸರಿಂದ ತನಿಖೆ ಚುರುಕುಗೊಂಡಿದ್ದು ಕಳ್ಳರ ಚಲನವಲನ ಪತ್ತೆ ಹಚ್ಚುವ ಸಲುವಾಗಿ ಕೆಲವು ಕಡೆಗಳಿಂದ ಸಿಸಿಟಿವಿ ಫೂಟೇಜ್ ಕೂಡ ಸಂಗ್ರಹಿಸಿದ್ದಾರೆ, ಇದಲ್ಲದೆ ಕುಂಬ್ರ ಜಂಕ್ಷನ್‌ನಲ್ಲಿ ಪೊಲೀಸ್ ಇಲಾಖೆಯಿಂದ ಅಳವಡಿಸಿದ್ದ ಸಿಸಿಟಿವಿ ಕ್ಯಾಮಾರವನ್ನು ದುರಸ್ತಿ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.


ಕುಂಬ್ರದಲ್ಲಿ ಸೆ.4 ರ ತಡರಾತ್ರಿ ಸರಣಿ ಕಳ್ಳತನ ನಡೆದಿದ್ದು ಮುಖ್ಯವಾಗಿ ಇಲ್ಲಿನ ಸರಕಾರಿ ಕಛೇರಿಗಳಾಗಿರುವ ಗ್ರಾಮ ಪಂಚಾಯತ್, ಗ್ರಾಮ ಆಡಳಿತ ಕಛೇರಿ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲರ, ಉಪಪ್ರಾಂಶುಪಾಲರ ಹಾಗೂ ಮುಖ್ಯಗುರುಗಳ ಕಛೇರಿಗೆ ನುಗ್ಗಿದ ಕಳ್ಳರು ಹಣಕ್ಕಾಗಿ ಜಾಲಾಡಿದ್ದು ಪ್ರಾಂಶುಪಾಲರ ಕಛೇರಿಯಲ್ಲಿದ್ದ 10 ಸಾವಿರ ನಗದನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಸಬ್ ಇನ್ಸ್‌ಪೆಕ್ಟರ್ ಧನಂಜಯ್‌ರವರ ನೇತೃತ್ವದಲ್ಲಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ಕೆಲವು ಕಡೆಗಳಿಂದ ಸಿಸಿಟಿವಿ ಫೂಟೇಜ್ ಅನ್ನು ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.


ಜಂಕ್ಷನ್‌ನ ಸಿಸಿಟಿವಿ ದುರಸ್ತಿ
ಕುಂಬ್ರ ಪೇಟೆಯ ಜಂಕ್ಷನ್‌ನಲ್ಲಿ ಈ ಹಿಂದೆ ಪೊಲೀಸ್ ಇಲಾಖೆಯಿಂದ ಸಿಸಿಟಿವಿ ಕ್ಯಾಮಾರ ಅಳವಡಿಸಲಾಗಿತ್ತು ಆದರೆ ಈ ಸಿಸಿಟಿವಿ ಕ್ಯಾಮಾರ ಹಾಳಾಗಿದ್ದು ಇದನ್ನು ದುರಸ್ತಿ ಮಾಡಿರಲಿಲ್ಲ, ಈ ಸಿಸಿಟಿವಿ ಸರಿಯಾಗಿದ್ದರೆ ಕಳ್ಳರ ಚಲನವಲನಗಳನ್ನು ಪತ್ತೆ ಮಾಡಬಹುದಾಗಿತ್ತು ಎಂದು ಸಾರ್ವಜನಿಕರು ದೂರಿದ್ದರು. ಸಿಸಿಟಿವಿ ಸರಿಪಡಿಸುವಂತೆ ಈ ಹಿಂದೆ ಹಲವು ಬಾರಿ ವರ್ತಕರ ಸಂಘ ಕೂಡ ಪೊಲೀಸ್ ಇಲಾಖೆಯ ಗಮನಕ್ಕೆ ತಂದಿತ್ತು. ಈ ಬಗ್ಗೆ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಸಿಸಿಟಿವಿ ಕ್ಯಾಮಾರಗಳನ್ನು ದುರಸ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here