ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

0

ರೂ.198.05 ಕೋಟಿ ವ್ಯವಹಾರ | ರೂ.1 ಕೋಟಿ 10 ಲಕ್ಷ ಲಾಭ | ಶೇ.15 ಡಿವಿಡೆಂಡ್


ಪುತ್ತೂರು: ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘವು 2022-23ನೇ ಸಾಲಿನಲ್ಲಿ ರೂ.198.05 ಕೋಟಿ ವ್ಯವಹಾರ ಮಾಡಿ ರೂ.1 ಕೋಟಿ 10 ಲಕ್ಷ ನಿವ್ವಳ ಲಾಭ ಗಳಿಸಿದೆ. ಶೇ.98.86 ಸಾಲ ಮರುಪಾವತಿಯಾಗಿದೆ. ಅಡಿಟ್ ವರ್ಗೀಕರಣದಲ್ಲಿ ‘ಎ’ ತರಗತಿಯನ್ನು ಪಡೆಯಲಾಗಿದೆ. ಶೇ.15ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ಸಹಕಾರಿ ಸಂಘದ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿ ಘೋಷಿಸಿದರು.

ಚಿತ್ರ: ವಿಷ್ಣು ಬೊಳ್ವಾರು


ಸೆ.11 ರಂದು ಆರ್ಯಾಪು ಗ್ರಾಮದ ಸಂಪ್ಯದಲ್ಲಿರುವ ಸಹಕಾರಿ ಸಂಘದ ಕೇಂದ್ರ ಕಚೇರಿಯ ಸಭಾಭವನದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ಸಹಕಾರಿ ಸಂಘದ ಪ್ರಸಕ್ತ ವರ್ಷಾಂತ್ಯಕ್ಕೆ ರೂ.21.44 ಕೋಟಿ ಠೇವಣಿ ಸಂಗ್ರಹವಿರುತ್ತದೆ, ಸದಸ್ಯರ ಹೊರಬಾಕಿ ಸಾಲ ರೂ.27.05 ಕೋಟಿ ಇರುತ್ತದೆ. 2014ರಲ್ಲಿ ನನ್ನ ಅಧ್ಯಕ್ಷತೆಯ ಆಡಳಿತ ಮಂಡಳಿಯ ಅಧಿಕಾರ ಬಂದ ಬಳಿಕ ಹಂತ ಹಂತವಾಗಿ ಅಭಿವೃದ್ದಿ ಪಥದಲ್ಲಿಕೊಂಡೊಯ್ದು ಅತೀ ಹೆಚ್ಚು ಲಾಭ ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದ ಅವರು ಪ್ರಸಕ್ತ ಸಾಲಿನ ವರ್ಷದಲ್ಲಿ ಭೂಮಿ ಖರೀದಿ ಸಾಲ ಯೋಜನೆಯಲ್ಲಿ 10 ಜನ ಸದಸ್ಯರಿಗೆ ಭೂಮಿ ಖರೀದಿಸಲು ಸಾಲ ನೀಡಲಾಗಿರುತ್ತದೆ. ಸುಮಾರು 738 ರೈತ ಸದಸ್ಯರಿಗೆ ಬೆಳೆ ವಿಮಾ ಯೋಜನೆಯಲ್ಲಿ ಜೋಡಣೆ ಮಾಡಿ ರೂ.36.58 ಲಕ್ಷ ಪ್ರೀಮಿಯಂನ್ನು ಪಾವತಿಸಲಾಗಿರುತ್ತದೆ.


ಸತತ 5ನೇ ಬಾರಿ ಪ್ರಶಸ್ತಿ:
ಉತ್ತಮ ಸಾಧನೆಗಾಗಿ ನಮ್ಮ ಸಹಕಾರಿ ಸಂಘಕ್ಕೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಸತತ 5ನೇ ಬಾರಿ ಪ್ರಶಸ್ತಿ ಲಭಿಸಿರುತ್ತದೆ. ಈ ಎಲ್ಲಾ ಸಾಧನೆಗಳ ಹಿಂದೆ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಮತ್ತು ಸಿಬ್ಬಂದಿಗಳ ಶ್ರಮ ಇರುತ್ತದೆ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರುಗಳು ನೀಡಿರುವ ಸಹಕಾರ, ಸಹಕಾರಿ ಸಂಘದ ಸದಸ್ಯರ ಬೆಂಬಲದಿಂದಾಗಿ ನಮ್ಮ ಸಹಕಾರಿ ಸಂಘವು ಈ ಹಂತಕ್ಕೆ ಅಭಿವೃದ್ದಿ ಹೊಂದಲು ಮೂಲ ಕಾರಣವಾಗಿರುತ್ತದೆ ಎಂದು ಹೇಳಿದ ಆಲಿಯವರು, ನಮ್ಮ ಸಹಕಾರಿ ಸಂಘದ ಸರ್ವತೋಮುಖ ಅಭಿವೃದ್ಧಿಗಾಗಿ ತನು-ಮನ-ಧನಗಳಿಂದ ಸಂಪೂರ್ಣ ಸಹಕಾರ ನೀಡಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಡಾ|ಎಂ.ಎನ್. ರಾಜೇಂದ್ರಕುಮಾರ್‌ರವರಿಗೆ ನಾನು ಈ ಸಂದರ್ಭದಲ್ಲಿ ಕೃತಜ್ಙತೆಯನ್ನು ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.


216 ಜನರಿಗೆ ದೀರ್ಘಾವಧಿ ಸಾಲ:
ಮುಂದುವರೆದು ಮಾತನಾಡಿದ ಸಹಕಾರಿ ಸಂಘದ ಅಧ್ಯಕ್ಷ ಆಲಿರವರು, ಹಿಂದೆ ಸಹಕಾರಿ ಸಂಘದಲ್ಲಿ ಕೇವಲ ರೂ.1 ಕೋಟಿ 67 ಲಕ್ಷ ರೂಪಾಯಿ ಮಾತ್ರ ಠೇವಣಿ ಸಂಗ್ರಹವಿತ್ತು. 2014ರಲ್ಲಿ ನನ್ನ ನೇತೃತ್ವದ ಆಡಳಿತ ಅಧಿಕಾರಕ್ಕೆ ಬಂದ ಬಳಿಕ ರೂ.20 ಕೋಟಿಯಷ್ಟು ಠೇವಣಿ ಸಂಗ್ರಹಿಸಿ ಇದೀಗ 24.49 ಕೋಟಿ ಠೇವಣಿ ಸಂಗ್ರಹವಿರುತ್ತದೆ. ಈ ಹಿಂದೆ ಕೇವಲ 10 ಲಕ್ಷ ಲಾಭ ಗಳಿಸಿದ್ದ ಸಹಕಾರಿ ಸಂಘವನ್ನು ಅಭಿವೃದ್ಧಿ ಪಥಕ್ಕೆ ಕೊಂಡೊಯ್ದು ಇದೀಗ ರೂ.1 ಕೋಟಿ 10 ಲಕ್ಷದಷ್ಟು ಲಾಭ ಗಳಿಸುವಲ್ಲಿ ನಾವು ಯಶಸ್ವಿಯಾಗಿರುತ್ತೇವೆ. ಈ ಹಿಂದೆ 121 ಜನರಿಗೆ ಮಾತ್ರ ಶೂನ್ಯ ಬಡ್ಡಿ ದರದ(ಎಂ.ಕೆ.ಸಿ.ಸಿ.) ಸಾಲವಿದ್ದು ನನ್ನ ಆಡಳಿತದಲ್ಲಿ 738 ಸದಸ್ಯರಿಗೆ ಶೂನ್ಯ ಬಡ್ಡಿದರದ ಸಾಲ ನೀಡಲಾಗಿರುತ್ತದೆ. ಈ ಹಿಂದೆ 20ಜನರಿಗೆ ಶೇ.3 ಬಡ್ಡಿದರದಲ್ಲಿ ದೀರ್ಘಾವಧಿ ಸಾಲವನ್ನು ನೀಡಲಾಗಿದ್ದು, ನನ್ನ ಆಡಳಿತ ಅವಧಿಯಲ್ಲಿ 216 ಜನರಿಗೆ ದೀರ್ಘಾವಧಿ ಸಾಲ ನೀಡಲಾಗಿರುತ್ತದೆ. ಪಕ್ಷ ಮತ್ತು ಜಾತಿ ಭೇದ ನೋಡದೆ ಎಲ್ಲರಿಗೂ ಸಾಲ ನೀಡುವಲ್ಲಿ ನಮ್ಮ ಆಡಳಿತ ಮಂಡಳಿಯು ಕ್ರಮ ವಹಿಸಿರುತ್ತದೆ.

ಶಾಸಕರಿಗೆ ಸನ್ಮಾನ:
ಮಹಾಸಭೆಯಲ್ಲಿ ನೂತನ ಶಾಸಕರಾದ ಅಶೋಕ್ ಕುಮಾರ್ ರೈಯವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಸನ್ಮಾನದ ಬಗ್ಗೆ ಮಾತನಾಡಿದ ಸಹಕಾರಿ ಸಂಘದ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿಯವರು, ಅಶೋಕ್ ಕುಮಾರ್ ರೈಯವರು ಶಾಸಕರಾಗಿ ಕೇವಲ 3 ತಿಂಗಳಲ್ಲಿ ಪುತ್ತೂರಿನ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳ ಮಂಜೂರಾತಿಗೆ ಪ್ರಯತ್ನಿಸಿರುತ್ತಾರೆ. ಬೆಳೆ ವಿಮೆ ಯೋಜನೆಯಲ್ಲಿ ನಮ್ಮ ಪ್ರಮುಖ ಬೆಳೆಯಾದ ಅಡಿಕೆ ಮತ್ತು ಕಾಳು ಮೆಣಸನ್ನು ಕೈ ಬಿಟ್ಟಾಗ ಅಡಿಕೆ ಬೆಳೆಯುವ ಭಾಗದ ಯಾವನೇ ಒಬ್ಬ ಶಾಸಕ ಈ ಕುರಿತು ಚಕಾರವೆತ್ತಿರಲಿಲ್ಲ. ಆದರೆ ಇದರ ಬಗ್ಗೆ ಧ್ವನಿ ಎತ್ತಿ ಸತತವಾಗಿ ಪ್ರಯತ್ನಪಟ್ಟು ವಿಮಾ ಯೋಜನೆಯಲ್ಲಿ ಅಡಿಕೆ ಮತ್ತು ಕಾಳು ಮೆಣಸನ್ನು ಸೇರಿಸುವಲ್ಲಿ ಯಶಸ್ವಿಯಾಗಿರುವ ಒಬ್ಬರೇ ಒಬ್ಬ ಶಾಸಕರೆಂದರೆ ಅದು ಅಶೋಕ್ ರೈಯವರು ಎಂದು ಹೇಳಲು ನಮಗೆ ಹೆಮ್ಮೆ ಅನಿಸುತ್ತದೆ. ಅದೂ ಅಲ್ಲದೆ ನೆನೆಗುದಿಗೆ ಬಿದ್ದಿದ್ದ ಕೊಲ ಪಶು ವೈದ್ಯಕೀಯ ಕಾಲೇಜಿನ ಕಟ್ಟಡ ನಿರ್ಮಾಣ ಹಾಗೂ ಮೂಲ ಸೌಕರ್ಯ ಒದಗಿಸಲು ನೂರಾರು ಕೋಟಿ ಮಂಜೂರು ಮಾಡಿರುವುದು, ಮಂಗಳೂರಿನಲ್ಲಿರುವ ಕೆ.ಎಂ.ಎಫ್‌ನ್ನು ಪುತ್ತೂರಿಗೆ ತರಲು ಪ್ರಯತ್ನ, ಕೊಲದ ಜಾನುವಾರು ಸಂರಕ್ಷಣಾ ಕೇಂದ್ರದಲ್ಲಿ ‘ಎನಿಮಲ್ ಹಬ್’ ನಿರ್ಮಿಸುವುದು, ಪಶುಗಳ ಆರೋಗ್ಯ ರಕ್ಷಣೆಗಾಗಿ ಸರಕಾರದ ವತಿಯಿಂದ 20 ಜನ ಪಶು ಸಖಿಗಳನ್ನು ನೇಮಕಗೊಳಿಸಿರುವುದು ಮುಂತಾದ ಕೃಷಿಗೆ ಪೂರಕವಾದ ಹಲವಾರು ಯೋಜನೆಗಳನ್ನು ಮಂಜೂರು ಮಾಡಿರುವ ಹಾಗೂ ನಮ್ಮ ಜಿಲ್ಲೆಯ ಹೆಮ್ಮೆಯ ಕ್ರೀಡೆಯಾದ ಕಂಬಳವನ್ನು ಬೆಂಗಳೂರಿನಲ್ಲಿ ನಡೆಸಿ, ಕಂಬಳದ ಮಹತ್ವವನ್ನು ರಾಜ್ಯದ ಜನತೆಗೆ ತಿಳಿಸುವಂತಹ ಕೆಲಸ ಮಾಡುತ್ತಿರುವ ಶಾಸಕರಾದ ಅಶೋಕ್ ಕುಮಾರ್ ರೈಯವರಿಗೆ ನಮ್ಮ ಸಹಕಾರಿ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸುವುದು ನಮ್ಮ ಆದ್ಯ ಕರ್ತವ್ಯವೆಂದು ತಿಳಿದು ಈ ಮಹಾಸಭೆಯಲ್ಲಿ ಸನ್ಮಾನಿಸುವ ಕಾರ್ಯಕ್ರಮವನ್ನು ಹಾಕಿಕೊಂಡಿರುತ್ತೇವೆ ಎಂದರು.
ಸಂಘದ ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ಶ್ರೀಮತಿ ಜಯಂತಿ ಭಾಸ್ಕರ್‌ರವರು ಸಂಘದ ಮಹಾಸಭೆಯ ಆಮಂತ್ರಣ ಪತ್ರ ಮತ್ತು ಹಿಂದಿನ ಸಾಲಿನ ವಾರ್ಷಿಕ ಮಹಾಸಭೆಯ 2022-23ನೇ ಸಾಲಿನ ವಾರ್ಷಿಕ ವರದಿ, ಆಯವ್ಯಯ ಪಟ್ಟಿ, ಅಂದಾಜು ಬಜೆಟ್, ಮೊದಾಲಾದವುಗಳನ್ನು ಮಂಡಿಸಿದರು. ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಸತೀಶ್ ನಾಕ್ ಪರ್ಲಡ್ಕ, ಸುರೇಂದ್ರ ರೈ ಬಳ್ಳಮಜಲು, ಗಣೇಶ್ ರೈ ಬಳ್ಳಮಜಲು, ಗಣೇಶ್ ರೈ ತೊಟ್ಲಮೂಲೆ, ಶೀನಪ್ಪ ಮರಿಕೆ, ಇಸ್ಮಾಯಿಲ್ ಮಲಾರು, ಶ್ರೀಮತಿ ಮೀನಾಕ್ಷಿ ನೀರ್ಕಜೆ, ತಿಮ್ಮಪ್ಪ ಜಂಗಮುಗೇರು, ಸಂಶುದ್ದೀನ್ ನೀರ್ಕಜೆ, ಇಬ್ರಾಹಿಂ ಇಡಬೆಟ್ಟು, ದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕಿನ ಮೇಲ್ವಿಚಾರಕ ಶರತ್ ಡಿ., ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯರಾದ ಪವಿತ್ರ ರೈ, ಪೂರ್ಣಿಮ ರೈ ಉಪಸ್ಥಿತರಿದ್ದರು.


ಶ್ರೀಮತಿ ವನಿತಾ ಮರಿಕೆ ಪ್ರಾರ್ಥಿಸಿದರು, ನಿರ್ದೇಶಕಿ ಶ್ರೀಮತಿ ಚಂದ್ರಕಲಾ ಓಟೆತ್ತಿಮಾರು ಸ್ವಾಗತಿಸಿ, ಉಪಾಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು ವಂದಿಸಿದರು. ಸಂಘದ ಸಿಬ್ಬಂದಿ ಉಮೇಶ್ ಯಸ್.ಕೆ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಅಜಿತ್ ಕುಮಾರ್ ರೈ, ಶ್ರೀಮತಿ ಸುಭಾಷಿನಿ ವಿ ರೈ, ವಿನಯ್ ಕುಮಾರ್ ರೈ, ರಾಜೇಶ್ ಕುಮಾರ್ ಬಿ. ಪ್ರಶಾಂತಿ, ಅರ್ಜುನ್ ಭಾಸ್ಕರ್ ಕಲಾಪಕ್ಕೆ ಸಹಕರಿಸಿದರು.


ಸಹಕಾರಿ ಸಂಘಗಳು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆಯುತ್ತೇನೆ-ಅಶೋಕ್ ರೈ
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈಯವರು, ಬೆಳೆ ವಿಮೆ ಯೋಜನೆಯಲ್ಲಿ ನಮ್ಮ ಪ್ರಮುಖ ಬೆಳೆಯಾದ ಅಡಿಕೆ ಮತ್ತು ಕಾಳು ಮೆಣಸನ್ನು ಕೈ ಬಿಟ್ಟ ಸಂದರ್ಭದಲ್ಲಿ ಹಲವಾರು ಕೃಷಿಕರು ರಾತ್ರಿ ಹಗಲು ನನಗೆ ಫೋನ್ ಮಾಡಿ ಒತ್ತಡ ಹಾಕಿರುತ್ತಾರೆ. ಈ ವಿಮಾ ಯೋಜನೆಯ ಒಳ ಹೊಕ್ಕು ನೋಡಿದಾಗ ಈ ಯೋಜನೆಯಲ್ಲಿ ಲಕ್ಷಾಂತರ ರೂಪಾಯಿ ವಿಮೆ ಪರಿಹಾರ ಸಿಕ್ತಾ ಇರುವುದು ನನ್ನ ಗಮನಕ್ಕೆ ಬಂದಿದೆ. ನಾನು ಸರಕಾರದ ಸಚಿವರಿಂದ ಹಿಡಿದು ಮುಖ್ಯಮಂತ್ರಿಗಳವರೆಗೆ ಒತ್ತಡ ಹಾಕಿ ಅಡಿಕೆ ಮತ್ತು ಕಾಳು ಮೆಣಸನ್ನು ವಿಮಾ ಯೋಜನೆಯಲ್ಲಿ ಸೇರಿಸಲು ಯಶಸ್ವಿಯಾಗಿರುತ್ತೇನೆ. ಯೋಜನೆ ಮಂಜೂರಾದ ಬಳಿಕ ಈ ವಿಚಾರದ ಬಗ್ಗೆ ಒಮ್ಮೆಯೂ ಯಾರೂ ಪೋನ್ ಮಾಡಿರುವುದಿಲ್ಲ. ಆದರೆ ನನ್ನ ಕೆಲಸವನ್ನು, ನಾನು ಪಟ್ಟ ಶ್ರಮವನ್ನು ನೆನಪಿಸಿ ನನ್ನನ್ನು ಅಭಿನಂದಿಸುವ ಕೆಲಸವನ್ನು ಮಾಡಿದ್ದರೆ ಅದು ಮಹಮ್ಮದ್ ಆಲಿಯವರ ನೇತೃತ್ವದ ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘ ಮಾತ್ರ ಎಂಬುದನ್ನು ಹೇಳಲು ಸಂತೋಷಪಡುತ್ತೇನೆ. ಇವತ್ತು ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘವು ಬಹಳಷ್ಟು ಅಭಿವೃದ್ಧಿ ಹೊಂದಿ ರೈತ ಸದಸ್ಯರಿಗೆ ಸಾಕಷ್ಟು ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಈ ಜಿಲ್ಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಿಂತ ಹೆಚ್ಚಾಗಿ ಇಂತಹ ಸಹಕಾರಿ ಸಂಘಗಳು ಜನಪರವಾದಂತಹ ಕೆಲಸ ಮಾಡುವಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದ ಅಶೋಕ್‌ಕುಮಾರ್ ರೈಯವರು ಸಹಕಾರಿ ಸಂಘಗಳು ಅನುಭವಿಸುತ್ತಿರುವ ಹಲವಾರು ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆಯುತ್ತೇನೆ ಎಂದು ಭರವಸೆ ನೀಡಿದರು.


ಅಧ್ಯಕ್ಷರ ಯೋಜನೆಗಳ ಘೋಷಣೆ..
ಸಹಕಾರಿ ಸಂಘದ ಅಧ್ಯಕ್ಷರಾದ ಎಚ್.ಮಹಮದ್ ಆಲಿರವರು ಸಂಘದ ಸದಸ್ಯರ ಮನೆ, ಆಸ್ತಿ, ಜಮೀನು ಇತ್ಯಾದಿಗಳು ಪ್ರಕೃತಿ ವಿಕೋಪಕ್ಕೆ ಒಳಪಟ್ಟರೆ ಅಂತಹ ಸದಸ್ಯರಿಗೆ ಸಂಘದ ವತಿಯಿಂದ ಸಹಾಯಧನ ಒದಗಿಸಲಾಗುವುದು ಎಂದು ಹೊಸ ಯೋಜನೆಗಳನ್ನು ಸಭೆಯಲ್ಲಿ ಘೋಷಿಸಿದರು.

LEAVE A REPLY

Please enter your comment!
Please enter your name here