ಪುತ್ತೂರು: ನೇತ್ರಾವತಿ ಸ್ತ್ರೀ ಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು 2022-23ನೇ ಸಾಲಿನಲ್ಲಿ ರೂ.5,93,590.20 ನಿವ್ವಳ ಲಾಭ ಗಳಿಸಿ, ಸದಸ್ಯರಿಗೆ ಶೇ.3 ಡಿವಿಡೆಂಡ್ ವಿತರಿಸಲಾಗುವುದು ಎಂದು ಅಧ್ಯಕ್ಷೆ ಮೀನಾಕ್ಷಿ ಮಂಜುನಾಥ ವಾರ್ಷಿಕ ಮಹಾಸಭೆಯಲ್ಲಿ ತಿಳಿಸಿದರು.
ಮಹಾಸಭೆಯು ಸೆ.16ರಂದು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು ವರದಿ ವರ್ಷದಲ್ಲಿ ಸದಸ್ಯರಿಂದ ರೂ.8,30,500 ಹಾಗೂ ಸರಕಾರದಿಂದ ರೂ.11,28,500 ಪಾಲು ಬಂಡವಾಳ ಹೊಂದಿದೆ. ಸರಕಾರದ ಪಾಲು ಬಂಡವಾಳವನ್ನು ಬಡತನ ರೇಖೆಯಲ್ಲಿರುವ, ವಿಧವೆಯರು, ವಿಕಲಚೇತನರು, ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹೆಸರಿನಲ್ಲಿ ಹೂಡಲಾಗಿದೆ. ಲೆಕ್ಕ ಪರಿಶೋಧನೆಯಲ್ಲ ಸಂಘವು ಬಿ ಶ್ರೇಣಿಯನ್ನು ಪಡೆದುಕೊಂಡಿದೆ. ಸಂಘವು ರೂ.5,93,590.20 ನಿವ್ವಳ ಲಾಭ ಪಡೆದುಕೊಂಡಿರುತ್ತದೆ. ಸಂಘವು ಸದಸ್ಯರಾಗಿರುವ ಸ್ತ್ರೀಶಕ್ತಿ ಸದಸ್ಯರಿಗೆ ಎರಡು ವರ್ಷಗಳ ಅವಧಿಗೆ ಹಾಗೂ ಮೂರು ವರ್ಷಗಳ ಅವಧಿಗೆ ವೈಯಕ್ತಿಕ ಸಾಲವನ್ನು ನೀಡುತ್ತಿದೆ. ಸ್ತ್ರೀ ಶಕ್ತಿ ಗುಂಪುಗಳಿಗೆ ರೂ.10,00,000 ತನಕ ಸಾಲ ನೀಡುತ್ತಿದೆ. ಸದಸ್ಯರ ಅನುಕೂಲಕ್ಕೆ ತಕ್ಕಂತೆ ಚಿನ್ನಾಭರಣಗಳ ಈಡಿನ ಮೇಲೆ ಶೇ.13ರ ಬಡ್ಡಿ ದರದಲ್ಲಿ ತ್ವರಿತ ಗತಿಯಲ್ಲಿ ಸಾಲ ನೀಡುತ್ತಿದೆ. ವರದಿ ವರ್ಷದಲ್ಲಿ ಸಂಘವು ರೂ.50,76,279 ಸದಸ್ಯರಿಗೆ ವಿವಿಧ ರೂಪದಲ್ಲಿ ಸಾಲ ವಿತರಿಸಿದೆ. ರೂ.63,02,514 ಠೇವಣಿಯನ್ನು ಹೊಂದಿದೆ. ಸದಸ್ಯರು ಸಂಘದಲ್ಲಿ ಠೇವಣಿಯಿಟ್ಟು ಸಹಕರಿಸಬೇಕು. ಸಾಲ ಪಡೆದ ಸದಸ್ಯರು ಕ್ಲಪ್ತ ಸಮಯದಲ್ಲಿ ಮರುಪಾವತಿಸಿ ಸಂಘದ ಅಭಿವೃದ್ಧಿಗೆ ಸಹಕರಿಸುವಂತೆ ಅವರು ಮನವಿ ಮಾಡಿದರು.
ಸಂಘದ ಪದನಿಮಿತ್ತ ನಿರ್ದೇಶಕಿಯಾಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ಮಾತನಾಡಿ, ಸಂಘದ ಧ್ಯೇಯೋದ್ಧೇಶಗಳು, ಪ್ರಯೋಜನಗಳು ಹಾಗೂ ಸರಕಾರದಿಂದ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಸನ್ಮಾನ:
ಬಡಗನ್ನೂರು ಗ್ರಾ.ಪಂ ಅಧ್ಯಕ್ಷರಾಗಿ ಆಯ್ಕೆಯಾದ ಸ್ತ್ರೀಶಕ್ತಿ ಗುಂಪಿನ ಸದಸ್ಯೆ ಪುಷ್ಪಲತಾ ಎಂ., ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಸಂಘದ ನಿರ್ದೇಶಕಿ ಸುಶೀಲ ಪಿ.ಯವರನ್ನು ಸನ್ಮಾನಿಸಲಾಯಿತು. ಸಂಘದಲ್ಲಿ ರೂ.೨೫,೦೦೦ಕ್ಕೂ ಮೇಲ್ಪಟ್ಟು ಠೇವಣಿಯಿರಿಸಿದ ಸ್ತ್ರೀಶಕ್ತಿ ಗುಂಪುಗಳಿಗೆ ಪ್ರೋತ್ಸಾಹಹ ಬಹುಮಾನ ನೀಡಿ ಗೌರವಿಸಲಾಯಿತು.
ನಿರ್ದೇಶಕರಾದ ಅಮಿತಾ ಹರೀಶ್, ಚಂದ್ರಮ್ಮ, ಜಯಂತಿ ಆರ್ ಗೌಡ, ಜಯಲಕ್ಷ್ಮೀ ಸುರೇಶ್, ಜೊಹೊರಾ ನಿಸಾರ್, ಕೆ.ಟಿ ವಲ್ಸಮ್ಮ, ಸುಲೋಚನಾ ಹಾಗೂ ಸುಶೀಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿರ್ದೇಶಕಿ ಶಕುಂತಳಾ ಎ. ಪ್ರಾರ್ಥಿಸಿದರು. ಅಧ್ಯಕ್ಷೆ ಮೀನಾಕ್ಷಿ ಮಂಜುನಾಥ ಸ್ವಾಗತಿಸಿದರು. ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಂ. ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಿದರು. ಉಪಾಧ್ಯಕ್ಷೆ ಧನ್ಯ ಮೋಹನ್ ವಂದಿಸಿದರು. ಅಕೌಂಟೆಂಟ್ ಅಶ್ವಿನಿ ಸಾಮಾನಿ ಸಹಕರಿಸಿದರು.