ಸೆ.25: ಜಿಲ್ಲೆಗಳಲ್ಲಿ ಏಕಕಾಲಕ್ಕೆ`ಜನತಾ ದರ್ಶನ’ಕ್ಕೆ ಸೂಚನೆ

0

ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಚುನಾಯಿತ ಪ್ರತಿನಿಧಿಗಳನ್ನೊಳಗೊಂಡು ಕಾರ್ಯಕ್ರಮ
ಬೆಂಗಳೂರು:ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸೆ.25ರಂದು ಏಕಕಾಲಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಂಬಂಧಿಸಿದ ಚುನಾಯಿತ ಪ್ರತಿನಿಧಿಗಳನ್ನು ಒಳಗೊಂಡಂತೆ `ಜನತಾ ದರ್ಶನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿಗಳು, ಜಿ.ಪಂ.ಸಿಇಒಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯೆಲ್ ಆದೇಶ ಹೊರಡಿಸಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ಶ್ರೀಸಾಮಾನ್ಯರು ಬೆಂಗಳೂರಿಗೆ ಆಗಮಿಸಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅಹವಾಲುಗಳನ್ನು ಸಲ್ಲಿಸುತ್ತಿರುವುದು ಸಾಮಾನ್ಯ. ಆದರೆ ಇದನ್ನು ತಪ್ಪಿಸಿ ಜಿಲ್ಲಾ ಮಟ್ಟದಲ್ಲೇ ಜನತಾ ದರ್ಶನ ನಡೆಸಲು ಸರಕಾರ ಚಿಂತಿಸಿದ್ದು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಆಯಾ ಜಿಲ್ಲಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಸೆ.25ರಂದು ಜನತಾ ದರ್ಶನ ಕಾರ್ಯಕ್ರಮಕ್ಕೆ ರೂಪುರೇಷೆ ಸಿದ್ಧಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಆಯಾ ಜಿಲ್ಲೆಯ ಜನರಿಗೆ ಜಿಲ್ಲಾಡಳಿತವು ಜನತಾ ದರ್ಶನ ನಡೆಯುವ ಸ್ಥಳ, ಸಮಯ ಇತ್ಯಾದಿಗಳನ್ನು ಮುಂಚಿತವಾಗಿಯೇ ತಿಳಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದು ಆದೇಶದಲ್ಲಿ ಹೇಳಿದ್ದಾರೆ.ಜನತಾ ದರ್ಶನದಂದು ಜಿಲ್ಲಾ ಮಟ್ಟದ ಎಲ್ಲ ಹಾಗೂ ಪ್ರತಿ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳು ಹಾಜರಿದ್ದು, ಸಾರ್ವಜನಿಕರಿಂದ ಸ್ವೀಕೃತವಾದ ಎಲ್ಲಾ ಅರ್ಜಿಗಳು, ಮನವಿಗಳನ್ನು ಈಗಾಗಲೇ ಚಾಲ್ತಿಯಲ್ಲಿರುವ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ ತಂತ್ರಾಂಶದಲ್ಲಿ ದಾಖಲಿಸಬೇಕು ಹಾಗೂ ಅರ್ಜಿಗಳ ವಿಲೇವಾರಿಯನ್ನು ನಿರ್ವಹಿಸಬೇಕು. ಸಂಬಂಧಿಸಿದ ಅರ್ಜಿಗಳನ್ನು ಜಾಗ್ರತೆಯಿಂದ ಹಾಗೂ ಸಹಾನುಭೂತಿಯಿಂದ ಪರಿಶೀಲಿಸಿ ಕಾಲಾವಧಿಯೊಳಗೆ ನಿಯಮಾನುಸಾರ ಪರಿಹಾರೋಪಾಯಗಳನ್ನು ಒದಗಿಸುವ ಕುರಿತು ಅಗತ್ಯ ಕ್ರಮ ವಹಿಸಬೇಕು ಎಂದು ಆದೇಶದಲ್ಲಿ ಡಾ.ರಜನೀಶ್ ಗೋಯೆಲ್ ತಿಳಿಸಿದ್ದಾರೆ.

ತಾಲೂಕು ಮಟ್ಟದಲ್ಲಿ ಡಿಸಿ ಜನತಾದರ್ಶನ
ಪ್ರತಿ ತಿಂಗಳು ಜನತಾ ದರ್ಶನವನ್ನು ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಳ್ಳಬೇಕು.ಜಿಲ್ಲಾಧಿಕಾರಿಗಳು ಪ್ರತಿ 15 ದಿನಗಳಿಗೊಮ್ಮೆ ತಮ್ಮ ಜಿಲ್ಲಾ ವ್ಯಾಪ್ತಿಯ ಒಂದು ತಾಲ್ಲೂಕನ್ನು ಆಯ್ಕೆ ಮಾಡಿಕೊಂಡು ತಾಲೂಕು ಮಟ್ಟದಲ್ಲಿ ಜನತಾದರ್ಶನ ಕಾರ್ಯಕ್ರಮ ನಡೆಸಬೇಕು ಎಂದೂ ಡಾ.ರಜನೀಶ್ ಗೋಯೆಲ್ ಆದೇಶದಲ್ಲಿ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here