ಪುತ್ತೂರು: ನೆಲ್ಯಾಡಿಯ ಶಾರದಾ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿದ್ದ ಉಪ್ಪಿನಂಗಡಿ ಕಥೋಲಿಕ್ ವಿವಿಧೋದ್ಧೇಶ ಸಹಕಾರಿ ಸಂಘ ಇದರ ನೆಲ್ಯಾಡಿ ಶಾಖೆಯು ನೆಲ್ಯಾಡಿ ಕೌಕ್ರಾಡಿ ಗ್ರಾಮದ ಡಿಯೋನ್ ಸ್ಕ್ವೇರ್ ನ ಒಂದನೇ ಮಹಡಿಗೆ ಸ್ಥಳಾಂತರಗೊಂಡು ಸೆ.9 ರಂದು ಶುಭಾರಂಭಗೊಂಡಿತು.
ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಪ್ರಧಾನ ಧರ್ಮಗುರು ವಂ|ಅಬೆಲ್ ಲೋಬೊರವರು ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಸಹಕಾರಿ ಸಂಘದ ಬೆಳವಣಿಗೆಯಲ್ಲಿ ಪ್ರತಿಯೊಬ್ಬರೂ ಸಹಕರಿಸುವಂತಾಗಬೇಕು. ಯಾವುದೇ ಸಹಕಾರಿ ಸಂಘ ಬೆಳವಣಿಗೆ ಹೊಂದಬೇಕಾದರೆ ಅಲ್ಲಿ ಗುಣಮಟ್ಟದ, ಪ್ರಾಮಾಣಿಕತೆಯ ವ್ಯವಹಾರ ಅಗತ್ಯ ಎಂದರು.
ನೆಲ್ಯಾಡಿ ಬಾಲಯೇಸುವಿನ ದೇವಾಲಯದ ಧರ್ಮಗುರು ವಂ|ವಿನ್ಸೆಂಟ್ ಡಿ’ಸೋಜರವರು ಸ್ಥಳಾಂತರಗೊಂಡ ಶಾಖೆಗೆ ಪವಿತ್ರ ಜಲ ಸಂಪ್ರೋಕ್ಷಿಸಿ, ಆಶೀರ್ವಚಿಸಿ ಮಾತನಾಡಿ, ಉಪ್ಪಿನಂಗಡಿ ಕಥೋಲಿಕ್ ವಿವಿಧೋದ್ಧೇಶ ಸಹಕಾರಿ ಸಂಘವು ಉತ್ತಮ ಅಭಿವೃದ್ಧಿ ಹೊಂದಿ ಅನೇಕ ಶಾಖೆಗಳನ್ನು ಹೊಂದುವಂತಾಗಲಿ ಎಂದರು. ಈ ಸಂದರ್ಭದಲ್ಲಿ ಉಪ್ಪಿನಂಗಡಿ ಕಥೋಲಿಕ್ ವಿವಿಧೋದ್ಧೇಶ ಸಹಕಾರಿ ಸಂಘದ ನಿರ್ದೇಶಕರಾದ ಮಾರ್ಸೆಲ್ ವೇಗಸ್, ರೊನಾಲ್ಡ್ ಪಿಂಟೋ, ಜೋನ್ ಕೆನ್ಯೂಟ್ ಮಸ್ಕರೇನ್ಹಸ್, ಜೊಸ್ಸಿ ಸ್ಟೀವನ್ ಮೊಂತೇರೊ, ಬ್ಯಾಪ್ಟಿಸ್ಟ್ ಪಾಯಿಸ್, ಶಾಲೆಟ್ ವಾಸ್, ಮೆರ್ಸಿನ್ ಡಿ’ಸೋಜ ಈ ಸಂದರ್ಭದಲ್ಲಿ ಸಹಕಾರಿ ಸಂಸ್ಥೆಯ ಉಪ್ಪಿನಂಗಡಿ ಹಾಗೂ ನೆಲ್ಯಾಡಿ ಶಾಖೆಯ ಸಿಬ್ಬಂದಿಗಳು ಸಹಿತ ಹಲವರು ಉಪಸ್ಥಿತರಿದ್ದರು.
ಸಹಕಾರಿ ಸಂಘದ ಅಧ್ಯಕ್ಷ ಜೋಸೆಫ್ ವಿ.ಎಂ ಸ್ವಾಗತಿಸಿ, ಉಪಾಧ್ಯಕ್ಷ ಜಾರ್ಜ್ ಫೆರ್ನಾಂಡೀಸ್ ವಂದಿಸಿದರು. ಶಾಖೆಯ ಅಕೌಂಟೆಂಟ್ ಸಪ್ನ ರೋಜ್ ಮಿನೇಜಸ್ ಕಾರ್ಯಕ್ರಮ ನಿರ್ವಹಿಸಿದರು. ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಲ್ಯಾನ್ಸಿ ಡಿ’ಸೋಜ, ಅಕೌಂಟೆಂಟ್ ಜೋಯ್ಸನ್ ಗ್ರೀಶನ್ ಬ್ರ್ಯಾಗ್ಸ್, ಶಾಖಾ ಉಸ್ತುವಾರಿ ಪ್ರೆಸಿಲ್ಲ ಡಿ’ಸೋಜ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.