ಸಂಪ್ಯ ನವಚೇತನಾ ಯುವಕ ಮಂಡಲದಿಂದ 41ನೇ ವರ್ಷದ ಗಣೇಶೋತ್ಸವ

0

ಪುತ್ತೂರು: ಸಂಪ್ಯ ನವಚೇತನಾ ಯುವಕ ಮಂಡಲದ ವತಿಯಿಂದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎರಡು ದಿನಗಳ ಕಾಲ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಂಭ್ರಮದಿಂದ ನಡೆಯುವ 41ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಕಾರ್ಯಕ್ರಮಗಳಿಗೆ ಸೆ.19ರಂದು ಚಾಲನೆ ದೊರೆತಿದೆ.
ವೇ.ಮೂ ಸಂದೀಪ್ ಕಾರಂತರವರ ನೇತೃತ್ವದಲ್ಲಿ ನಡೆಯುವ ಗಣೇಶೋತ್ಸವದಲ್ಲಿ ಬೆಳಿಗ್ಗೆ ಶ್ರೀಗಣೇಶನ ವಿಗ್ರಹದ ಆಗಮನದ ಬಳಿಕ ಗಣೇಶ ವಿಗ್ರಹ ಪ್ರತಿಷ್ಠೆ, ಗಣಹೋಮ ನಡೆದ ಬಳಿಕ ವಿವಿಧ ಭಜನಾ ಮಂಡಳಿಯವರಿಂದ ಭಜನೆ ನಡೆದ ಬಳಿಕ ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗೆ ವಿವಿಧ ಸ್ಪರ್ಧೆಗಳು ನೆರವೇರಿತು.


ಮಧ್ಯಾಹ್ನ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ದೈವ ನರ್ತಕ ಡಾ.ರವೀಶ್ ಪಡುಮಲೆ ಮಾತನಾಡಿ, ಸನಾತನ ಧರ್ಮವಾಗಿರುವ ಹಿಂದು ಧರ್ಮವನ್ನು ಸರ್ವ ನಾಶ ಮಾಡಬೇಕು ಎಂದು ಹೇಳಿಕೆ ನೀಡಿರುವುದನ್ನು ನಾವೆಲ್ಲ ಖಂಡಿಸಬೇಕು. ತಮಿಳುನಾಡಿನಲ್ಲಿ ಉದಯನಿಧಿ ನೀಡಿರುವ ಹೇಳಿಕೆಯನ್ನು ಉತ್ತರ ಪ್ರದೇಶದಲ್ಲಿ ಮುಸ್ಲಿಂ ಸಮುದಾಯ ವಿರೋಧಿಸಿದ್ದು ಹಿಂದು ಸಮಾಜದ ಶಕ್ತಿಯನ್ನು ತೋರಿಸುತ್ತಿದೆ. ಹಿಂದು ಸಮಾಜಕ್ಕೆ ಮುಸ್ಲಿಂರಿಂದ ಹೊಡೆತಲ್ಲ. ಸಮಾಜದ ಒಳಗಿನವರಿಂದಲೇ ತೊಂದರೆಯಾಗಿದೆ ಎಂದ ಅವರು ನವಚೇತನ ಯುವಕ ಮಂಡಲವು ಸಂಘಟನೆ ಮಾತ್ರವಲ್ಲ. ಹಿಂದು ಸಮಾಜ ಒಗ್ಗೂಡಿಸುವ ಪ್ರಯತ್ನ ನಡೆಯುತ್ತದೆ. ನಮ್ಮ ಸಂಸ್ಕೃತಿ ಉಳಿಸಲು ಸಮಾಜ ಒಂದಾಗಬೇಕು. ಎಂದು ಹೇಳಿದರು.
ರೋಟರಿ ಕ್ಲಬ್ ಸಹಾಯಕ ಗವರ್ನರ್ ಪುರಂದರ ರೈ ಮಿತ್ರಂಪಾಡಿ ಮಾತನಾಡಿ, ಯುವಕ ಮಂಡಲ ನಮ್ಮ ಊರಿನ ಸ್ವತ್ತು. ಯುವಕರ ಉತ್ತಮ ಕೆಲಸಗಳಿಗೆ ಪ್ರೋತ್ಸಾಹ ನೀಡಿ, ಅವರು ದಾರಿ ತಪ್ಪಿದಾದ ಸರಿದಾರಿಗೆ ತರುವ ಕೆಲಸ ಹಿರಿಯರಿಂದ ಆಗಬೇಕು ಎಂದರು.
ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ಆದಿಪೂಜಿತ ಎಂದು ಹೆಸರಿರುವ ಗಣಪತಿ ವಿಶ್ವವ್ಯಾಪಿಯಾಗಿದೆ. ಗಣಪತಿ ಸ್ನೇಹ, ಒಗ್ಗಟ್ಟು, ಪ್ರೀತಿಯ ಸಂಕೇತ. ಭಕ್ತಿಯಿಂದ ಆಚರಿಸಿದರೆ ಇಷ್ಟಾರ್ಥ ಸಿದ್ದಿಯಾಗುತ್ತದೆ ಎಂದರು.
ಸನ್ಮಾನ ಸ್ವೀಕರಿಸಿದ ವಿದ್ಯಾಮಾತ ಅಕಾಡೆಮಿಯ ಭಾಗ್ಯೇಶ್ ರೈ ಮಾತನಾಡಿ, ಮಕ್ಕಳಿಗೆ ಸಂಸ್ಕಾರ ನೀಡುವುದು ಶಿಕ್ಷಣ ಸಂಸ್ಥೆಗಳಲ್ಲ. ಅದು ಪೋಷಕರಿಂದ ಜವಾಬ್ದಾರಿಯಾಗಿದ್ದು ಅವರಿಂದಲೇ ಆಗಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಪ್ರಾರಂಭಗೊಂಡಿರುವ ಗಣೇಶೋತ್ಸವವು ಹಿಂದು ಸಮಾಜವನ್ನು ಒಟ್ಟುಗೂಡಿಸಿ, ಸಂಘಟಿಸುವ ನಿಟ್ಟಿನಲ್ಲಿ ಇಂದಿಗೂ ಪ್ರಸ್ತುತವಾಗಿದೆ. ಎಲ್ಲರ ಭಾಗವಹಿಸುವವಿಕೆಯೊಂದಿಗೆ ಮಾದರಿಯಾಗಿ ನಡೆಯುತ್ತಿದೆ. ಯುವಕ ಮಂಡಲವು ಗಣೇಶೋತ್ಸವಕ್ಕೆ ಸೀಮಿತವಾಗಿರದೆ ದೇವಸ್ಥಾನದ ಎಲ್ಲಾ ಕಾರ್ಯಕ್ರಮಗಳಲ್ಲಿ ಬೆನ್ನೆಲುಬಾಗಿ ಸಹಕರಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮವನ್ನು ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ ದೀಪ ಬೆಳಗಿಸಿ ಉದ್ಘಾಟಿಸಿ, ಶುಭಹಾರೈಸಿದರು. ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಸುಳ್ಯ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯ ಡಾ.ವೇಣುಗೋಪಾಲ, ಪ್ರಗತಿಪರ ಕೃಷಿ ದಯಾನಂದ ಗೌಡ ಕುಂಟ್ಯಾನ ಬಾರಿಕೆ ಹಾಗೂ ಆರ್ಯಾಪು ನೇರಳಕಟ್ಟೆ ಶ್ರೀ ಅಮ್ಮನವರ ದೇವಸ್ಥಾನದ ಸುರೇಶ ಪಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಲಾಂಛನ ಬಿಡುಗಡೆ:
ಸುಮಾರು 41 ವರ್ಷಗಳ ಇತಿಹಾಸವಿರುವ ನವಚೇತನಾ ಯುವಕ ಮಂಡಲದ ನೂತನ ಲಾಂಛನವನ್ನು ಕಾರ್ಯಕ್ರಮದಲ್ಲಿ ದೇವಸ್ಥಾನದ ಆರೋಗ್ಯ ರಕ್ಷಾ ಸಮಿತಿಯ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಬಿಡುಗಡೆಗೊಳಿಸಿದರು.

ಸನ್ಮಾನ:
ಈ ಸಾಲಿನ ಜಿಲ್ಲಾ ಅತ್ಯುತ್ತಮ ಪ್ರಶಸ್ತಿ ಪುರಸ್ಕೃತರಾದ ದೇವಸ್ಥಾನದ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿರುವ ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲಾ ಶಿಕ್ಷಕ ಉದಯ ಕುಮಾರ್ ರೈ ಸಂಪ್ಯ, ರಾಜ್ಯ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ಪುರಸ್ಕೃತರಾದ ವಿದ್ಯಾಮಾತ ಅಕಾಡೆಮಿಯ ನಿರ್ದೇಶಕ ಭಾಗ್ಯೇಶ್ ರೈಯವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಸೀತಾರಾಮ ಪ್ರತಿಭಾ ಪುರಸ್ಕಾರ:
ಕ್ರೀಡೆ, ಶೈಕ್ಷಣಿಕ ಕ್ಷೇತ್ರದ ಸಾಧಕ ವಿದ್ಯಾರ್ಥಿಗಳಿಗೆ ಯುವಕ ಮಂಡಲದಿಂದ ಪ್ರತಿ ವರ್ಷ ನೀಡುವ ಪ್ರತಿಭಾ ಪುರಸ್ಕಾರವನ್ನು ಈ ವರ್ಷದಿಂದ ‘ಸೀತಾರಾಮ ಪ್ರತಿಭಾ ಪುರಸ್ಕಾರ’ ಎಂದು ನಾಮಕರಣ ಮಾಡಿಕೊಂಡು ಯುವಕ ಮಂಡಲ ವ್ಯಾಪ್ತಿಯ ವಿದ್ಯಾರ್ಥಿಗಳಾದ ಶುಭಲಕ್ಷ್ಮೀ, ಅಂಕಿತ್ ಪಿ., ಗಗನ್ ಗೌಡ ಬೈಲಾಡಿ, ಮೇಘಾ ಎಸ್.ಎನ್., ಸುದರ್ಶನ್ ಹೆಬ್ಬಾರ್, ರೇಷ್ಮಾ, ರವರಿಗೆ ನೀಡಿ ಗೌರವಿಸಲಾಯಿತು. ಗಣೇಶೋತ್ಸವದ ಅನ್ನದಾನ ಪ್ರಾಯೋಜಕರಾದ ಐತ್ತಪ್ಪ ರೈ, ಆದರ್ಶ ನಾಯ್ಕ್ ಸಂಪ್ಯ , ಪಾಂಡುರಂಗ ಭಟ್ ಕಲ್ಲರ್ಪೆಯವರನ್ನು ಗೌರವಿಸಲಾಯಿತು.ಮೈಥಿಲಿ ಹಾಗೂ ಶಾಲ್ಮಿಲಿ ಪ್ರಾರ್ಥಿಸಿದರು. ನವಚೇತನಾ ಯುವಕ ಮಂಡಲದ ಅಧ್ಯಕ್ಷ ವಿಜಯ ಬಿ.ಎಸ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಉಮೇಶ್ ಎಸ್.ಕೆ ವರದಿ ವಾಚಿಸಿ, ವಂದಿಸಿದರು. ಯುವಕ ಮಂಡಲದ ನಾಗೇಶ್ ಸಂಪ್ಯ, ಲಕ್ಷ್ಮಣ ಬೈಲಾಡಿ, ರವಿನಾಥ ಗೌಡ ಬೈಲಾಡಿ, ರವಿ ಗೌಡ, ಸುರೇಶ್ ಉದಯಗಿರಿ, ಕುಂಞಣ್ಣ, ಸುರೇಶ್ ಪೂಜಾರಿ, ಸುರೇಶ್ ಬೈಲಾಡಿ, ಜಯಂತ ಶೆಟ್ಟಿ ಕಂಬಳತ್ತಡ್ಡ, ಶೀನಪ್ಪ, ದಿನೇಶ್ ಅತಿಥಿಗಳನ್ನು ಶಾಲು, ಸ್ಮರಣಿಕೆ ನೀಡಿ ಸ್ವಾಗತಿಸಿದರು. ತೇಜಸ್ ಗೌಡ ಪ್ರತಿಭಾ ಪುರಸ್ಕಾರದ ಪಟ್ಟಿ ವಾಚಿಸಿದರು. ಉದಯ ಕುಮಾರ್ ರೈ ಹಾಗೂ ಹರಿಣಿ ಪುತ್ತೂರಾಯ ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.

ರಾತ್ರಿ ನಾಟಕ:
ಸಂಜೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ನಂತರ ಅಮ್ಮ ಕಲಾವಿದೆರ್ ಕುಡ್ಲ ಇವರಿಂದ ‘ಅಲೇ ಬುಡಿಯೆರ್‌ಗೆ’ ತುಳು ಹಾಸ್ಯಮಯ ನಾಟಕ ನಡೆದ ಬಳಿಕ ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.

ಸೆ.20 ವೈಭವದ ಶೋಭಾಯಾತ್ರೆ
ಗಣೇಶೋತ್ಸವದಲ್ಲಿ ಸೆ.20ರಂದು ಬೆಳಿಗ್ಗೆ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ, ಧೀ:ಶಕ್ತಿ ಮಹಿಳಾ ಯಕ್ಷಬಳಗ ತೆಂಕಿಲ ಇವರಿಂದ ಜಾಂಬವತಿ ಕಲ್ಯಾಣ ಎಂಬ ಯಕ್ಷಗಾನ ತಾಳಮದ್ದಳೆ, ಮಧ್ಯಾಹ್ನ ಮಹಾಪೂಹೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆದು ಅಪರಾಹ್ನ ಶ್ರೀ ದೇವರ ವೈಭವದ ಶೋಭಾಯಾತ್ರೆ ನಡೆಯಲಿದ್ದು ಶೊಭಾಯತ್ರೆಯು ದೇವಸ್ಥಾನದಿಂದ ಹೊರಟು ಮುಕ್ರಂಪಾಡಿ, ಮೊಟ್ಟೆತ್ತಡ್ಕಕ್ಕೆ ತೆರಳಿ ನಂತರ ಸಂಪ್ಯಕ್ಕೆ ಹಿಂತಿರುಗಿ ಸಂಪ್ಯ ಕೆರೆಯಲ್ಲಿ ಗಣೇಶನ ವಿಗ್ರಹ ಜಲಸ್ಥಂಬನದೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ನವಚೇತನ ಯುವಕ ಮಂಡಲದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here