ವಿಜ್ರಂಭಿಸಿದ ಫಿಲೋಮಿನಾ ಗಣೇಶೋತ್ಸವದ 41ರ ಸಂಭ್ರಮ

0

ಎಲ್ಲರೂ ಸಾಮರಸ್ಯದಿಂದ ಬಾಳಿದಾಗ ದೇಶ ವಿಶ್ವಗುರು-ಅಶೋಕ್ ರೈ

ಪುತ್ತೂರು: ಜಾತಿ-ಮತ-ಧರ್ಮ ಮರೆತು ಭಾರತದಲ್ಲಿ ಶ್ರೀಗಣೇಶೋತ್ಸವನ್ನು ಶ್ರದ್ಧೆಯಿಂದ, ಭಕ್ತಿಯಿಂದ ಆಚರಿಸಲಾಗುತ್ತಿದೆ. ಇದೇ ರೀತಿ ಎಲ್ಲರೂ ಪರಸ್ಪರ ಸಾಮರಸ್ಯ, ಪ್ರೀತಿಯಿಂದ, ಒಗ್ಗಟ್ಟಿನಿಂದ, ಏಕತೆಯಿಂದ ಬಾಳಿದಾಗ ದೇಶ ವಿಶ್ವಗುರುವಾಗಬಲ್ಲುದು ಶಾಸಕ ಅಶೋಕ್ ಕುಮಾರ್ ರೈರವರು ಹೇಳಿದರು.

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ದರ್ಬೆ ವಿನಾಯಕ ನಗರದಲ್ಲಿ ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಮಿತ್ರರಿಂದ ಪ್ರಾರಂಭಿಸಲ್ಪಟ್ಟ ಶ್ರೀ ಗಣೇಶೋತ್ಸವಕ್ಕೆ ಪ್ರಸ್ತುತ 41ನೇ ವರುಷದ ಸಂಭ್ರಮ. ಇದರ ಪ್ರಯುಕ್ತ ಸಂತ ಫಿಲೋಮಿನಾ ಹಿರಿಯ ವಿದ್ಯಾರ್ಥಿಗಳ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಹಾಗೂ ಸಂತ ಫಿಲೋಮಿನಾ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ಶ್ರೀ ಗಣೇಶೋತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಸೆ.19 ಹಾಗೂ 20 ರಂದು ಎರಡು ದಿನಗಳ ಕಾಲ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಯಲ್ಲಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಫಿಲೋಮಿನಾ ವಿದ್ಯಾಸಂಸ್ಥೆಯು ಕ್ರೈಸ್ತ ವಿದ್ಯಾಸಂಸ್ಥೆಯಾಗಿದ್ದು ಇಲ್ಲಿ ಎಲ್ಲರನ್ನು ಒಗ್ಗಟ್ಟಾಗಿ ಕಾಣಲಾಗುತ್ತದೆ. ಕೇಸರಿ ಶಾಲು ಅನ್ನುವುದು ಯಾವುದೇ ರಾಜಕೀಯ ಪಕ್ಷದ ಬಣ್ಣ ಎಂದೇನಲ್ಲ. ಅದು ಹಿಂದೂ ಧರ್ಮದ ಸಂಕೇತ. ಬಾಲ ಗಂಗಾಧರ್ ತಿಲಕ್‌ರವರು ಸಾರ್ವಜನಿಕವಾಗಿ ಗಣೇಶೋತ್ಸವವನ್ನು ಪೂಜಿಸುತ್ತಿದ್ದುದು ಎಲ್ಲರೂ ಸಹಬಾಳ್ವೆ, ಸಾಮರಸ್ಯದಿಂದ ಬಾಳಬೇಕು ಎನ್ನುವುದಕ್ಕಾಗಿ. ಕಷ್ಟಕಾಲದಲ್ಲಿ ನಮ್ಮ ಹಿರಿಯರನ್ನು ಶ್ರದ್ಧಾಭಕ್ತಿಯಿಂದ ನೋಡಿಕೊಂಡಾಗ ನಾವು ಮಾಡುವ ಆಚರಣೆಗೆ ಅರ್ಥ ಬರುತ್ತದೆ. ಪ್ರತಿಯೊಂದು ಧಾರ್ಮಿಕ ಆಚರಣೆಗಳ ಸಂಸ್ಕೃತಿಯ ವಿಚಾರವನ್ನು ಇಂದಿನ ಯುವ ಪೀಳಿಗೆಯವರು ತಿಳಿದುಕೊಳ್ಳುವಂತಾಗಬೇಕು ಎಂದರು.ಜಿಲ್ಲೆಯಲ್ಲಿರುವ ಬಹುತೇಕ ದೇವಸ್ಥಾನ, ದೈವಸ್ಥಾನ, ಮಸೀದಿ, ಚರ್ಚುಗಳು ಸರಕಾರಿ ಜಾಗದಲ್ಲಿದೆ. ಸರಕಾರ ಜಾಗದಲ್ಲಿರುವ ಆರಾಧನಾ ಸ್ಥಳಗಳನ್ನು ಸಕ್ರಮ ಮಾಡಲು ಅಥವಾ ಮಂದಿರದ ಹೆಸರಿನಲ್ಲಿ ಮಾಡಲು ಇದುವರೆಗೂ ಯಾರೂ ಮುಂದಾಗಿಲ್ಲ. ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ಮಾತನಾಡಿದ್ದೇನೆ ಮುಂದಿನ ದಿನಗಳಲ್ಲಿ ಅದು ಕಾನೂನಾಗಿ ಕಾರ್ಯರೂಪಕ್ಕೆ ಬರುವ ವಿಶ್ವಾಸ ಇದೆ ಎಂದು ಹೇಳಿದರು.



ನಾವೆಲ್ಲರೂ ಮನುಷ್ಯರು ಎಂಬ ಸತ್ಯ ಅರಿತಾಗ ಹಬ್ಬಗಳಿಗೆ ಅರ್ಥ ಬರುತ್ತದೆ-ವಂ|ಆಂಟನಿ ಪ್ರಕಾಶ್:
ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ಫಿಲೋಮಿನಾ ಗಣೇಶೋತ್ಸವವನ್ನು ಎಲ್ಲಾ ಸಮಾನ ಮನಸ್ಕರು ಸೇರಿಕೊಂಡು ಭಕ್ತಿಭಾವದಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಭಾರತ ದೇಶವು ಅನೇಕ ಭಾಷೆಗಳ, ಬಣ್ಣಗಳ, ವಿನ್ಯಾಸಗಳ, ರೀತಿ-ನೀತಿಗಳನ್ನು ಹೊಂದಿರುವ ದೇಶವಾಗಿದ್ದು ನಾವೆಲ್ಲರೂ ‘ಮನುಷ್ಯರು’ ಎಂಬ ಸತ್ಯವನ್ನು ಅರಿತಾಗ ನಾವು ಮಾಡುವ ಗಣೇಶೋತ್ಸವ, ಈದ್, ಕ್ರಿಸ್ಮಸ್ ಹಬ್ಬಕ್ಕೆ ಅರ್ಥ ಬರುತ್ತದೆ. ಯಾರೇ ಆಗಲಿ ದುಷ್ಕೃತ್ಯಗಳಿಗೆ ಕಿವಿಗೊಡದೆ ನಾವೆಲ್ಲ ಒಂದು ಎಂಬ ಭಾವನೆಯನ್ನು ಸಮಾಜದಲ್ಲಿ ಭಿತ್ತುವಂತಾಗಬೇಕು ಎಂದರು.


ದೈವಭಕ್ತಿ ಮನುಷ್ಯನ ಹೃದಯದಲ್ಲಿ, ಮನಸ್ಸಿನಲ್ಲಿ ನೆಲೆಗೊಳ್ಳಬೇಕು-ವಂ|ಅಶೋಕ್ ರಾಯನ್:
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ಹಬ್ಬಗಳ ಆಚರಣೆಯು ನಮ್ಮಲ್ಲಿನ ಸಹಬಾಳ್ವೆ ಹಾಗೂ ಪ್ರೀತಿಯನ್ನು ದ್ವಿಗುಣಗೊಳಿಸುತ್ತದೆ. ದೈವಭಕ್ತಿ ಎನ್ನುವುದು ಮನುಷ್ಯನ ಹೃದಯದಲ್ಲಿ, ಮನಸ್ಸಿನಲ್ಲಿ ನೆಲೆಗೊಂಡಾಗ ಆತನ ಜೀವನಶೈಲಿಯಲ್ಲಿ ಬದಲಾವಣೆ ಆಗಬಲ್ಲುದು. ಭಕ್ತಿ ಇರುವವರಲ್ಲಿ ದಯೆ, ಕರುಣೆ, ಪ್ರೀತಿ, ಸಹಾಯ ಮಾಡುವ ಗುಣ, ಕ್ಷಮೆ ಮನೆ ಮಾಡುತ್ತದೆ. ಫಿಲೋಮಿನಾ ಕಾಲೇಜಿನಲ್ಲಿ ಕಲಿತು ಹೋದ ಹಿರಿಯ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಕಾಲೇಜಿನ ಮೆಟ್ಟಿಲು ಹತ್ತಲು ಈ ಶ್ರೀಗಣೇಶೋತ್ಸವದ ಆಚರಣೆಯು ಅವಕಾಶ ಮಾಡಿಕೊಡುತ್ತದೆ ಎಂದರು.


ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ:
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳಾದ ಕಲಾ ವಿಭಾಗದಲ್ಲಿ ಸಂಜನಾ ಜೆ.ರಾವ್, ವಾಣಿಜ್ಯ ವಿಭಾಗದಲ್ಲಿ ಸಮೃದ್ಧಿ ರೈ, ವಿಜ್ಞಾನ ವಿಭಾಗದಲ್ಲಿ ಸಂಜನಾ ಕೆ, ಪದವಿ ಪರೀಕ್ಷೆಯಲ್ಲಿ ಫಾತಿಮತ್ ಸಾನಿದಾ(ಬಿಸಿಎ), ಧೀರಜ್ ಎಂ, ಶ್ರೀಶ ಎಂ.ಎಸ್(ಬಿಎಸ್ಸಿ), ಹರ್ಷಿತಾ ಕೆ(ಬಿಬಿಎ), ಶ್ರೀದೇವಿ ಕೆ, ಪ್ರತಿಮಾ ಎ, ನಿಶಾಪ್ರಭಾ ಎನ್, ಸ್ನಾತಕೋತ್ತರ ವಿಭಾಗದಲ್ಲಿ ದೀಪ್ತಿ ವಿ(ಎಂಎಸ್ಸಿ ಕಂಪ್ಯೂಟರ್ ಸೈನ್ಸ್), ಅಂಷ(ಎಂ.ಎಸ್.ಡಬ್ಲ್ಯೂ), ಅಪೂರ್ವ ಪಿ.ವಿ, ವಿನೋಲಿಯಾ ಜಾಸ್ಲಿನ್ ಮಿನೇಜಸ್, ಶ್ಲಘ್ಯ ಆಳ್ವ ಕೆ, ಶ್ರಾವ್ಯ ಎನ್.ಕೆ, ಶ್ರೀಲಕ್ಷ್ಮೀ ಭಟ್, ಬಾಸಿಲ, ಸಿ.ಎಸ್ ಜಯಶ್ರೀ, ಚೈತ್ರಾ ಬಿ, ಹರಿಣಿ ಎಸ್.ಪೈ, ಹರ್ಷಿತಾ ಎಸ್, ಜೋಸ್ನಾ ಸಿ.ಜೆ(ಎಂಕಾಂ), ಎನ್.ಸಿ.ಸಿಯಲ್ಲಿ ಜ್ಯೂನಿಯರ್ ಅಂಡರ್ ಆಫೀಸರ್ ಕೃತಿರವರನ್ನು ಸನ್ಮಾನಿಸಲಾಯಿತು.


ಕ್ರೀಡಾಪಟುಗಳಿಗೆ ಸನ್ಮಾನ:
ಕ್ರೀಡೆಯಲ್ಲಿ ಉತ್ತಮ ಸಾಧನೆಗೈದ ಫಿಲೋಮಿನಾ ಕಾಲೇಜಿನ ಕ್ರೀಡಾಪಟುಗಳಾದ ಅಂತಿಮ ಬಿಎ ವಿಭಾಗದ ನಾಸಿರ್(ಕಬಡ್ಡಿ), ದ್ವಿತೀಯ ಬಿಎ ವಿಭಾಗದ ತ್ರಿಶೂಲ್(ಸ್ವಿಮ್ಮಿಂಗ್), ಪ್ರಥಮ ಬಿಕಾಂನ ದತ್ತಪ್ರಸಾದ್ ಶೆಟ್ಟಿ(ಕ್ರಿಕೆಟ್), ಅಂತಿಮ ಬಿಕಾಂನ ಆರ್ಯನ್(ಕ್ರಿಕೆಟ್), ಪ್ರಥಮ ಬಿಬಿಎಯ ನಿಖಿಲ್ ಕುಮಾರ್ ಬರೆತ್(ಕ್ರಿಕೆಟ್), ಪ್ರಥಮ ಬಿಕಾಂನ ದೀಕ್ಷಿತ್ ಕೆ(ಕ್ರಿಕೆಟ್), ಅಂತಿಮ ಬಿಜಾಂನ ಬ್ಯೂಲ ಡಿ(ವೈಟ್ ಲಿಪ್ಟಿಂಗ್), ಪ್ರಥಮ ಬಿಕಾಂನ ಶಬರೀಶ್(ವೈಟ್ ಲಿಪ್ಟಿಂಗ್), ಅಂತಿಮ ಬಿಕಾಂನ ಹರ್ಷಿತಾ ಎ(ವೈಟ್ ಲಿಪ್ಟಿಂಗ್), ದ್ವಿತೀಯ ಬಿಕಾಂನ ಅಭಿ ರಾಮಚಂದ್ರ(ವೈಟ್ ಲಿಪ್ಟಿಂಗ್)ರವರುಗಳನ್ನು ಗುರುತಿಸಿ ಸನ್ಮಾನಿಸಲಾಯಿತು.


ಮಾಧವ ಪ್ರಭುರವರಿಗೆ ಸನ್ಮಾನ:
ಹಲವಾರು ಬಡ ವಿದ್ಯಾರ್ಥಿಗಳ ಪಾಲಿನ ಆಶಾಕಿರಣವಾಗಿದ್ದು, ತನ್ನಲ್ಲಿಗೆ ಬರುವ ವಿದ್ಯಾರ್ಥಿಗಳಿಗೆ ಬೇಕಾಗುವಂತಹ ಪುಸ್ತಕಗಳನ್ನು ನೀಡುವ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿದ್ದು, ಮಾಧವ ಪ್ರಭುರವರ ಸೇವಾಗುಣಕ್ಕೆ ಕಲರ‍್ಸ್ ಕನ್ನಡದಿಂದ ಪುರಸ್ಕೃತಗೊಂಡಿದ್ದು ಕೂರ್ನಡ್ಕದಲ್ಲಿ ಪ್ರಭು ಸ್ಟೇಷನರಿ ಸಂಸ್ಥೆಯನ್ನು ಹೊಂದಿರುವ ಮಾಧವ ಪ್ರಭುರವರ ಸೇವಾಗುಣವನ್ನು ಪರಿಗಣಿಸಿ ಫಿಲೋಮಿನಾ ಶ್ರೀ ಗಣೇಶೋತ್ಸವ ಸಮಿತಿ ಅವರನ್ನು ಸನ್ಮಾನಿಸಿದರು.


ಅಭಿನಂದನೆ:
ಶ್ರೀ ಗಣೇಶೋತ್ಸವ ಪ್ರಯುಕ್ತ ಹಮ್ಮಿಕೊಂಡ ಫಿಲೋಮಿನಾ ಕಾಲೇಜಿನ ಪುರುಷರ ಹಾಗೂ ಮಹಿಳೆಯರ ಮತ್ತು ಹಿರಿಯ ವಿದ್ಯಾರ್ಥಿಗಳ ಹಗ್ಗ-ಜಗ್ಗಾಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅಭಿನಂದಿಸಲಾಯಿತು.
ಫಿಲೋಮಿನಾ ಕಾಲೇಜಿನ ಪುರುಷರ ವಸತಿನಿಲಯದ ವಾರ್ಡನ್ ವಂ|ರೂಪೇಶ್ ತಾವ್ರೋ, ಸಂತ ಫಿಲೋಮಿನಾ ಹಿರಿಯ ವಿದ್ಯಾರ್ಥಿಗಳ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಮುಕ್ರಂಪಾಡಿ, ವಿದ್ಯಾರ್ಥಿ ಘಟಕದ ಅಧ್ಯಕ್ಷ ವಿಕ್ರಂ ಆಳ್ವ, ಜೊತೆ ಕಾರ್ಯದರ್ಶಿ ರಕ್ಷಾ ಅಂಚನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತನ್ವಿ ಮತ್ತು ಬಳಗ ಪ್ರಾರ್ಥಿಸಿದರು. ಜನನಿ, ಭವಿಷ್ಯರವರು ಸನ್ಮಾನಿತ ವಿದ್ಯಾರ್ಥಿಗಳ ಹೆಸರನ್ನು ಓದಿದರು. ಹಿರಿಯ ವಿದ್ಯಾರ್ಥಿ ಮಂಜುನಾಥ್ ಡಿ ಸ್ವಾಗತಿಸಿ, ವಿದ್ಯಾರ್ಥಿ ಘಟಕದ ಕಾರ್ಯದರ್ಶಿ ಹೃದಯ್ ಎಸ್.ನಾಕ್ ವಂದಿಸಿದರು. ವಿದ್ಯಾರ್ಥಿನಿ ವರ್ಷಾ ಕಾರ್ಯಕ್ರಮ ನಿರೂಪಿಸಿದರು.

ಭ್ರಷ್ಟಾಚಾರದಲ್ಲಿ ತೊಡಗಿಸಿಕೊಳ್ಳಬೇಡಿ…
ನನಗೆ ಮತ ಹಾಕಿದವರಿಗೆ, ಹಾಕದವರಿಗೂ ನಾನು ಶಾಸಕನಾಗಿದ್ದು ಎಲ್ಲರ ಕೆಲಸವನ್ನು ನಾನು ಮಾಡಬೇಕಾಗಿದೆ. ನನ್ನ ಚಿಂತನೆ ಏನೀದ್ರೂ ಅದು ಪುತ್ತೂರಿನ ಸಮಗ್ರ ಅಭಿವೃದ್ಧಿ. ಪುತ್ತೂರಿನ ಸಮಗ್ರ ಅಭಿವೃದ್ಧಿಗೆ ನಾನು ಸದಾ ದುಡಿಯುತ್ತೇನೆ. ಇದಕ್ಕಾಗಿ ನಿಮ್ಮೆಲ್ಲರ ಆಶೀರ್ವಾದ ನನಗೆ ಬೇಕಾಗಿದೆ. ಆದರೆ ಭ್ರಷ್ಟಾಚಾರಕ್ಕೆ ನಾನು ಎಂದಿಗೂ ಎಡೆ ಮಾಡಿಕೊಡುವುದಿಲ್ಲ. ಆದ್ದರಿಂದ ಯಾರೇ ಆಗಲಿ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಳ್ಳಬಾರದು ಎನ್ನುವುದು ನನ್ನ ಅಭಿಮತವಾಗಿದೆ.
-ಅಶೋಕ್ ಕುಮಾರ್ ರೈ, ಶಾಸಕರು, ಪುತ್ತೂರು

ವಿಗ್ರಹ ಪ್ರತಿಷ್ಠಾಪನೆ..
ಬೆಳಿಗ್ಗೆ ಪರ್ಲಡ್ಕದಿಂದ ಶ್ರೀ ಗಣೇಶನ ವಿಗ್ರಹವನ್ನು ತಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೀಪ ಬೆಳಗಿಸಿ ಬಳಿಕ ಮುಖ್ಯರಸ್ತೆಯಾಗಿ ದರ್ಬೆ ವಿನಾಯಕ ನಗರದ ವಿನಾಯಕ ಮಂಟಪದಲ್ಲಿ ಶ್ರೀ ಗಣೇಶನ ವಿಗ್ರಹವನ್ನು ಪ್ರತಿಷ್ಟಾಪನೆಗೊಳಿಸಲಾಯಿತು. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಪ್ರೀತಂ ಪುತ್ತೂರಾಯರವರ ನೇತೃತ್ವದಲ್ಲಿ ಗಣಹೋಮ, ಮಹಾಪೂಜೆ, ಪ್ರಸಾದ ವಿತರಣೆಯೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರಗಿದವು.

ರಂಜಿಸಿದ ಕಾಮಿಡಿ ಕಿಲಾಡಿಗಳು..
ರಾತ್ರಿ ಸಭಾ ಕಾರ್ಯಕ್ರಮದ ಬಳಿಕ ಬೆಂಗಳೂರಿನ ಪ್ರತಿಷ್ಠಿತ ಚಾನೆಲ್ ಶೋ ಒಂದರ ಪ್ರಥಮ ಪ್ರಶಸ್ತಿ ಪಡೆದ ತಂಡದವರಿಂದ ಹಾಸ್ಯಮಯ ಕಾಮಿಡಿ ಕಿಲಾಡಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರನ್ನು ಮನರಂಜಿಸಿತು.

LEAVE A REPLY

Please enter your comment!
Please enter your name here