ಜಗತ್ತಿನ ಬದುಕಿಗೆ ಭಾರತ ಬೇಕಾಗಿದೆ -ರಾಧಾಕೃಷ್ಣ ಅಡ್ಯಂತಾಯ

0


ರಾಷ್ಟ್ರಧರ್ಮವನ್ನು ಅಳಿಸಲು ಸಾಧ್ಯವಿಲ್ಲ -ಜೆ.ಕೆ.ವಸಂತ ಗೌಡ
ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು -ಸಿ.ವಿ.ಶಶಿಕಿರಣ್
ಡಾ.ಎಂ.ಕೆ.ಪ್ರಸಾದ್ ಪುತ್ತೂರಿನ ಬಾಲಗಂಗಾಧರ ತಿಲಕ್ -ಸುಜೀಂದ್ರ ಪ್ರಭು


ಪುತ್ತೂರು: ಹಿಂದು ಸಂಸ್ಕೃತಿ ಉಳಿಯಬೇಕಾಗಿರುವುದು ಜಗತ್ತಿನ ಹಿತಕ್ಕಾಗಿ.ಹಾಗಾಗಿ ಜಗತ್ತಿನ ಬದುಕಿಗೆ ಭಾರತ ಬೇಕಾಗಿದೆ ಎಂದು ಹಿಂದು ಜಾಗರಣ ವೇದಿಕೆಯ ಕರ್ನಾಟಕ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ಹೇಳಿದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ ದೇವಳದ ವಠಾರದಲ್ಲಿ ನಡೆಯುತ್ತಿರುವ 57ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಸೆ.೧೯ರಂದು ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.ಈ ದೇಶವನ್ನು ಬ್ರಹ್ಮತೇಜಸ್ಸು, ಮಾತೃಶಕ್ತಿ, ಕ್ಷಾತ್ರ ಪರಂಪರೆ ಶಕ್ತಿ, ಕರ್ಮಯೋಗ ಎಂಬ ನಾಲ್ಕು ಶಕ್ತಿಗಳು ಉಳಿಸಿದ್ದು, ಅದರಲ್ಲಿ ಬ್ರಹ್ಮತೇಜಸ್ಸು ಇವತ್ತು ಕುಂಠಿತವಾಗುತ್ತಿದೆ.ಸಾಮಾಜಿಕ ಬದ್ಧತೆಯನ್ನು ನೆನಪು ಮಾಡುವ ಕಾರ್ಯಗಳ ಮೂಲಕ ಸಮಾಜದ ರಕ್ಷಣೆ ಆಗಬೇಕಾಗಿದೆ. ಭಾರತವನ್ನು ಭಾರತವನ್ನಾಗಿ ಉಳಿಸುವ ಅಗತ್ಯವಿದೆ.ಭಾರತ ಕೇವಲ ಭಾರತೀಯರಿಗೆ ಮಾತ್ರವಲ್ಲ ಜಗತ್ತಿಗೇ ಇವತ್ತು ಭಾರತ ಅನಿವಾರ್ಯ.ಹಿಂದು ಸಂಸ್ಕೃತಿ ಉಳಿಯಬೇಕಾಗಿರುವುದು ಜಗತ್ತಿನ ಹಿತಕ್ಕಾಗಿ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಸೈನಿಕರಾದ ಜೆ.ಕೆ.ವಸಂತ ಗೌಡ ಅವರು ಮಾತನಾಡಿ ನಮಗೆ ಸನಾತನ ಧರ್ಮದಿಂದ ಹುಟ್ಟಿದ ರಾಷ್ಟ್ರ ಧರ್ಮ ಮುಖ್ಯ.ಇದನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ವ್ಯವಸ್ಥಾಪಕ ಸಿ.ವಿ.ಶಶಿಕಿರಣ್ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಸಂಸ್ಕೃತಿ ಆಚಾರ ವಿಚಾರ ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಇಂತಹ ಧಾರ್ಮಿಕ ಕಾರ್ಯಕ್ರಮ ಅಗತ್ಯ ಎಂದರು.ಎಟಿಎಂ ಬಳಕೆ ಮತ್ತು ಫೋನ್ ಕರೆ ಮೂಲಕ ವಂಚನೆ ನಡೆಸುತ್ತಿರುವ ವಿಚಾರಗಳ ಬಗ್ಗೆ ಅವರು ಜಾಗೃತಿ ನೀಡಿದರು.


ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಜೀಂದ್ರ ಪ್ರಭು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯುತ್ತಿರುವ ಗಣೇಶೋತ್ಸವ ಸಂಘಟನೆ ಮತ್ತು ದೇಶ ಪ್ರೇಮದ ವಿಚಾರವಾಗಿ ನಡೆಯುತ್ತಿದೆ.ಹಲವು ಸ್ಪರ್ಧೆಗಳ ಮೂಲಕ ಮಕ್ಕಳಲ್ಲಿ ದೇವರ ನಂಬಿಕೆಯನ್ನು ಜಾಗೃತಿಗೊಳಿಸುತ್ತೇವೆ. ಹಿಂದುತ್ವದ ವಿಚಾರವನ್ನು ಗಟ್ಟಿಗೊಳಿಸುತ್ತೇವೆ.ಈ ನಿಟ್ಟಿನಲ್ಲಿ ಸ್ವಾತಂತ್ರ್ಯದ ಹೋರಾಟಕ್ಕೆ ಬಾಲಗಂಗಾಧರ ತಿಲಕ್ ಹೇಗೆ ಹಿಂದು ಸಮಾಜವನ್ನು ಗಟ್ಟಿ ಮಾಡಿದ್ದರೋ ಅದೇ ರೀತಿ ಪುತ್ತೂರಿನಲ್ಲಿ ಡಾ.ಎಂ.ಕೆ.ಪ್ರಸಾದ್ ಅವರು ಹಿಂದು ಸಂಘಟನೆಯನ್ನು ಜಾಗೃತಿಗೊಳಿಸಿದ್ದಾರೆ ಎಂದರು.
ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಬ್ಳೆ ವರದಿ ವಾಚಿಸಿದರು.ಮುಖ್ಯ ಅತಿಥಿ ಪ್ರಗತಿಪರ ಕೃಷಿಕ ಸುರೇಶ್ ಬಲ್ನಾಡು, ಸಮಿತಿ ಗೌರವಾಧ್ಯಕ್ಷ ಡಾ. ಎಂ.ಕೆ. ಪ್ರಸಾದ್, ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ ನುಳಿಯಾಲು, ಸಹಜ್ ರೈ ಬಳಜ್ಜ, ವಿಶ್ವನಾಥ ಗೌಡ ಬನ್ನೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು ಪುಣ್ಯ ಪ್ರಾರ್ಥಿಸಿದರು.ಹಿಂದು ಜಾಗರಣ ವೇದಿಕೆ ತಾಲೂಕು ಸಂಚಾಲಕ ದಿನೇಶ್ ಪಂಜಿಗ ವಂದಿಸಿದರು.ಸಮಿತಿ ಗೌರವ ಸಲಹೆಗಾರ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮದ ಆರಂಭದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ತುಳು ಅಪ್ಪೆ ಕಲಾವಿದರು ಕುಡ್ಲ ಇವರಿಂದ ಅಮೋಘ ಕುಸಲ್ದ ಎಸಲ್ ಕಾರ್ಯಕ್ರಮ ನಡೆಯಿತು.


ಇಂದು ತುಳು ನಾಟಕ `ಅಲೇ ಬುಡಿಯೆರ್‌ಗೆ:
ಸೆ.20ಕ್ಕೆ ಬೆಳಿಗ್ಗೆ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಧೀಶಕ್ತಿ ಮಹಿಳಾ ಯಕ್ಷಗಾನ ಸಂಘದಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ಗ್ರಾಮಾಂತರ ಜಿಲ್ಲೆಯ ಭೌಧಿಕ್ ಪ್ರಮುಖ್ ವಿನೋದ್ ಅಡ್ಕಸ್ಥಳ ಧಾರ್ಮಿಕ ಭಾಷಣ ಮಾಡಲಿದ್ದಾರೆ.ಸಭಾ ಕಾರ್ಯಕ್ರಮದ ಬಳಿಕ ಅಲೇ ಬುಡಿಯೆರ್‌ಗೆ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.


ಹೊಸ ಸಮಿತಿ ಕಳೆದ ವರ್ಷವೇ ಪ್ರಸ್ತಾಪ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಹೊಸ ಸಮಿತಿ ರಚನೆ ಕಳೆದ ವರ್ಷವೇ ಪ್ರಸ್ತಾಪ ಆಗಿತ್ತು.ಆಗಲೇ ಸಮಿತಿ ರಚನೆಯೂ ಆಗಿತ್ತು. ಆದರೆ ಕೆಲವರು ಸಮಿತಿಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಪ್ಪು ತಿಳುವಳಿಕೆ ನೀಡುವ ಕೆಲಸ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ನಮ್ಮ ಸಮಿತಿ ಕೇವಲ ಗಣೇಶೋತ್ಸವದಲ್ಲಿ ಮಾತ್ರವಲ್ಲ ಗಣೇಶೋತ್ಸವ ಮುಗಿದ ಬಳಿಕವೂ ಸಮಾಜಕ್ಕಾಗಿ ಹಲವು ಸೇವೆ ಈ ಸಮಿತಿಯ ಮೂಲಕ ನಡೆಯುತ್ತದೆ.ಲೋಕಕಲ್ಯಾಣಾರ್ಥವಾಗಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಸೀಯಾಳಾಭಿಷೇಕ, ಕೋವಿಡ್ ಸಂದರ್ಭದಲ್ಲಿ 800ಕ್ಕೂ ಮಿಕ್ಕಿ ಆಹಾರದ ಕಿಟ್ ವಿತರಣೆ.ನಮ್ಮ ಸಮಿತಿಯ ಆಟೋ ರಿಕ್ಷಾ ಚಾಲಕನಿಗೆ ಸಹಾಯ, ಸಿಡಿಮದ್ದಿನಿಂದ ಕೈ ಛಿದ್ರಗೊಂಡ ಮತ್ತು ಮನೆ ದುರಸ್ತಿಗೆ ಹಾಗೂ ಪ್ರಶಾಂತ್ ಪೂಜಾರಿ ಹತ್ಯೆಯ ಸಂದರ್ಭ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಹಿಂದು ಸಮಾಜದ ಸ್ಪೂರ್ತಿಯಾಗಿ ಸೇವೆ ಮಾಡುತ್ತಿದೆ-
ಅಶೋಕ್ ಕುಂಬ್ಳೆ, ಪ್ರಧಾನ ಕಾರ್ಯದರ್ಶಿ ಸಾರ್ವಜನಿಕ
ಶ್ರೀ ಗಣೇಶೋತ್ಸವ ಪುತ್ತೂರು

LEAVE A REPLY

Please enter your comment!
Please enter your name here