ಡಾ.ಶಿವರಾಮ ಕಾರಂತರ ಜನ್ಮದಿನೋತ್ಸವ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಪ್ರಥಮ ಪೂರ್ವಭಾವಿ ಸಭೆ

0

ಬೆಳಗ್ಗೆ ಜನ್ಮದಿನೋತ್ಸವ, ಪ್ರಶಸ್ತಿ ಪ್ರದಾನದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ – ಎಸಿ ಗಿರೀಶ್ ನಂದನ್

ಪ್ರಶಸ್ತಿಗೆ ಹೊಸ ಕ್ಷೇತ್ರವನ್ನೂ ಆಯ್ಕೆ ಮಾಡಲು ಸಲಹೆ

ಪುತ್ತೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ| ಶಿವರಾಮ ಕಾರಂತ ಬಾಲವನ ಹಾಗೂ ಸಹಾಯಕ ಆಯುಕ್ತರ ಕಚೇರಿ ಪುತ್ತೂರು ಉಪವಿಭಾಗದ ವತಿಯಿಂದ ಅ.10 ರಂದು ಪರ್ಲಡ್ಕ ಶಿವರಾಮ ಕಾರಂತ ಬಾಲವನದಲ್ಲಿ ನಡೆಯುವ ಡಾ| ಶಿವರಾಮ ಕಾರಂತರ ಜನ್ಮ ದಿನೋತ್ಸವ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಈ ಬಾರಿ ಬೆಳಗ್ಗಿನ ಅವಧಿಯಲ್ಲೇ ನಡೆಯಲಿದೆ. ಪ್ರಶಸ್ತಿ ಆಯ್ಕೆಗೆ ಸಂಬಂಧಿಸಿ ಸಮಿತಿ ತೀರ್ಮಾಣಕ್ಕೆ ಸಲಹೆ ನೀಡುವಂತೆ ಸಹಾಯಕ ಆಯುಕ್ತ ಗಿರೀಶ್ ನಂದನ್ ಹೇಳಿದರು.


ತಾಲೂಕು ಆಡಳಿತ ಸೌಧದಲ್ಲಿ ಸೆ.20ರಂದು ನಡೆದ ಡಾ.ಶಿವರಾಮ ಕಾರಂತರ ಜನ್ಮದಿನೋತ್ಸವ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಪ್ರಥಮ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಹಿಂದೆ ಪ್ರಶಸ್ತಿ ಪ್ರದಾನ ಸಮಾರಂಭವು ಸಂಜೆ ನಡೆಯುತ್ತಿದ್ದು, ಈ ಬಾರಿ ಕಾರ್ಯಕ್ರಮ ಉದ್ಘಾಟನೆ ಬಳಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೂ ನಡೆಯಲಿದೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ ಎಂದು ಅವರು ಮಾಹಿತಿ ನೀಡಿದರು.

ಸಾಹಿತ್ಯ, ಚಿತ್ರಕಲೆ, ಸಂಗೀತ, ರಂಗಭೂಮಿ, ಯಕ್ಷಗಾನ, ಪತ್ರಿಕೋದ್ಯಮ, ಪರಿಸರ, ವಿಜ್ಞಾನ, ಕ್ರೀಡೆಗೆ ಸಂಬಂಧಿಸಿ ಪ್ರಶಸ್ತಿ ಸನ್ಮಾನ ಕಾರ್ಯಕ್ರಮ ನಡೆದಿದೆ. ಮುಂದೆ ಪ್ರಶಸ್ತಿಗೆ ಆಯ್ಕೆ ಕುರಿತು ಸಮಿತಿ ತೀರ್ಮಾನಕ್ಕೆ ಸಲಹೆ ಇದ್ದರೆ ತಿಳಿಸುವಂತೆ ಸಭೆಗೆ ತಿಳಿಸಿದರು. ಈ ಹಿಂದೆ ಸಾಹಿತ್ಯ, ರಂಗಭೂಮಿ, ವಿಜ್ಞಾನ, ಪರಿಸರ, ಕಲಾ ವಿಭಾಗಕ್ಕೆ ಸಂಬಂಧಿಸಿ ಪ್ರಶಸ್ತಿ ನೀಡಲಾಗುತ್ತಿತ್ತು ಎಂದು ಡಾ. ವರದರಾಜ ಚಂದ್ರಗಿರಿ ಅವರು ಮಾಹಿತಿ ನೀಡಿದರು. ಈ ನಡುವೆ ಸಭೆಯಲ್ಲಿ ಪ್ರಶಸ್ತಿಗೆ ಹೊಸ ಕ್ಷೇತ್ರವನ್ನೂ ಆಯ್ಕೆ ಮಾಡುವ ಕುರಿತು ಚರ್ಚಿಸಲಾಯಿತು. ಪತ್ರಿಕೋದ್ಯಮ ಮತ್ತು ಮುದ್ರಣ ವಿಭಾಗಕ್ಕೆ ಸಂಬಂಧಿಸಿಯೂ ಆಯ್ಕೆ ಮಾಡಬಹುದು ಎಂದು ವಿವಿಧ ಸಲಹೆ ಸೂಚನೆಗಳು ಬಂತು. ಕಾರ್ಯಕ್ರಮದಲ್ಲಿ ಡಾ. ಕಾರಂತ ಸಂಸ್ಮರಣಾ ಉಪನ್ಯಾಸ ನೀಡಲು ಸಾಹಿತಿ ಡಾ.ವಸಂತಕುಮಾರ್ ತಾಳ್ತಜೆ ಅವರನ್ನು ಆಯ್ಕೆ ಮಾಡುವಂತೆ ಸೂಚಿಸಲಾಯಿತು. ಡಾ. ಎಚ್.ಜಿ.ಶ್ರೀಧರ್ ಅವರು ಮಾತನಾಡಿ, ಡಾ.ಶಿವರಾಮ ಕಾರಂತರ ಸಹವರ್ತಿಯಾಗಿದ್ದ ಪಡಾರು ಮಹಾಬಲ ಭಟ್ ಅವರನ್ನು ಈ ಕಾರ್ಯಕ್ರಮದಲ್ಲಿ ಗುರುತಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.

ಡಾ. ಅಮೃತ ಮಲ್ಲ ಮಾತನಾಡಿ, ಈ ಬಾರಿ ಕಾರಂತರು ಕೆಲಸ ಮಾಡಿದ ಪತ್ರಿಕೋದ್ಯಮ ಅಥವಾ ಮುದ್ರಣ ಮಾದ್ಯಮದ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಬೇಕು ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ರಾಜೇಶ್, ಕರ್ನಾಟಕ ಸಂಘದ ಅಧ್ಯಕ್ಷ ಬಿ.ಪುರಂದರ ಭಟ್, ಹಿರಿಯ ಸಾಹಿತಿ ಪ್ರೊ. ವಿ.ಬಿ.ಅರ್ತಿಕಜೆ, ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಮಾಧವ ಭಟ್, ಪ್ರಾಧ್ಯಾಪಕರು ಹಾಗೂ ಸಾಹಿತಿಗಳಾದ ಡಾ| ವರದರಾಜ್ ಚಂದ್ರಗಿರಿ, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಡಾ| ಎಚ್. ಜಿ. ಶ್ರೀಧರ್, ಡಾ| ರಾಜೇಶ್ ಬೆಜ್ಜಂಗಳ, ನ್ಯಾಯವಾದಿ ಬೆಟ್ಟ ಈಶ್ವರ ಭಟ್, ಅಮೃತ ಮಲ್ಲ, ನಗರಸಭೆ ನಿಕಟಪೂರ್ವ ಉಪಾದ್ಯಕ್ಷೆ ವಿದ್ಯಾ ಆರ್ ಗೌರಿ, ಸಿ.ಆರ್.ಪಿ ಶಶಿಕಲಾ, ಬಿ.ಆರ್.ಪಿ ರತ್ನ ಕುಮಾರಿ, ಸಿಡಿಪಿಒ ಶ್ರೀಲತಾ ಉಪಸ್ಥಿತರಿದ್ದರು. ಬಾಲವನ ಕಾರ್ಯಕ್ರಮ ಸಂಯೋಜಕ ಜಗನ್ನಾಥ ಅರಿಯಡ್ಕ ಸ್ವಾಗತಿಸಿ, ಸಂಯೋಜಕ ರಮೇಶ್ ಉಳಯ ವಂದಿಸಿದರು. ಬಾಲವನದ ಅಶೋಕ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here